Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಕ್ಷಯ ತೃತೀಯ; ಈ ದಿನದಂದು ನಾವು ನೀಡುವ ದಾನ ನಮ್ಮನ್ನು ಮತ್ತಷ್ಟು ದಾನ ನೀಡಲು ಶಕ್ತರನ್ನಾಗಿಸುತ್ತದೆ.

ಅಕ್ಷಯ ತೃತೀಯ; ಈ ದಿನದಂದು ನಾವು ನೀಡುವ ದಾನ ನಮ್ಮನ್ನು ಮತ್ತಷ್ಟು ದಾನ ನೀಡಲು ಶಕ್ತರನ್ನಾಗಿಸುತ್ತದೆ.


ಒಮ್ಮೆ ಶಂಕಾರಾಚಾರ್ಯರು ಭಿಕ್ಷಾಟನೆಗಾಗಿ ಬಡವರ ಮನೆಯ ಬಾಗಿಲಿಗೆ ಹೋಗಿ ಭಿಕ್ಷೆ ಬೇಡಿದಾಗ, ಅವರ ಮನೆಯವರು ತೀರ ಬಡವರಾಗಿದ್ದರಿಂದ ತಿನ್ನಲು ಏನು ಇರುವುದಿಲ್ಲ, ಮನೆಯಲ್ಲಿ ಹುಡುಕಿದಾಗ ಒಂದು ಒಣಗಿದ ನಲ್ಲಿಕಾಯಿ ಸಿಗುತ್ತದೆ. ಅದನ್ನೇ ಆ ಮನೆಯವರು ಶಂಕರಾಚಾರ್ಯರಿಗೆ ಕೊಡುತ್ತಾರೆ. ಅವರ ಮನೆಯವರ ಬಡತನವನ್ನು ಕಂಡಂತಹ ಶಂಕರಾಚಾರ್ಯರು ಮಹಾಲಕ್ಷೀಯನ್ನು ಕುರಿತು ಕನಕಾಧಾರ ಸ್ತೋತ್ರವನ್ನು ಪಠಿಸುತ್ತಾರೆ. ಇದರಿಂದ ಅವರ ಮನೆಯಲ್ಲಿ ಬಂಗಾರ, ಬೆಳ್ಳಿ ಅಕ್ಷಯವಾಗಿ ತುಂಬಿ ತುಳುಕಾಡುತ್ತದೆ ಎಂಬ ಪ್ರತೀತಿ.

ಸಾಮಾನ್ಯವಾಗಿ ವೈಶಾಖ ಮಾಸ ಶುಕ್ಲ ಪಕ್ಷದ ತೃತೀಯ ದಂದು ಬರುವ ದಿನವೇ ಅಕ್ಷಯಾ ತೃತೀಯಾ ದಿನವೆಂದು ಕರೆಯುತ್ತಾರೆ. ಈ ದಿನದಂದು ಬಂಗಾರ ಅಥವಾ ಬೆಳ್ಳಿಯನ್ನು ಖರೀದಿ ಮಾಡಿದರೆ ವರ್ಷ ಪೂರ್ತಿ ಅವರ ಮನೆಗೆ ಬಂಗಾರದ ಆಭರಣಗಳು ಅಥವಾ ಬೆಳ್ಳಿ ಅಕ್ಷಯಾ ವಾಗುತ್ತಿರುತ್ತದೆ ಎಂಬ ವಾಡಿಕೆ. ಸಾಮಾನ್ಯವಾಗಿ ಅಕ್ಷಯಾ ತೃತೀಯಾ ಎಂದರೆ ಬರೀ ಬಂಗಾರ ಅಥವಾ ಬೆಳ್ಳಿಯನ್ನು ಮಾತ್ರವಲ್ಲದೇ ಕೆಲವರು ಅಕ್ಕಿ, ಉಪ್ಪು, ಸಕ್ಕರೆ, ಹಾಲನ್ನು ಕೂಡ ಖರೀದಿ ಮಾಡುತ್ತಾರೆ. ಇದರಿಂದ ಈ ದಿನಸಿ ಪದಾರ್ಥಗಳ ಕೊರತೆ ಅವರ ಮನೆಯಲ್ಲಿ ಉಂಟಾಗುವುದಿಲ್ಲ ಎಂಬ ನಂಬಿಕೆ.

ಭಾರತೀಯ ಹಬ್ಬಗಳ ಸಾಲಿನಲ್ಲಿ ಅಕ್ಷಯ ತದಿಗೆಗೆ ಶ್ರೇಷ್ಠ ಸ್ಥಾನವಿದೆ. ಅದು ಮಂಗಲ ಮುಹೂರ್ತ. ಜೀವನದ ಉತ್ಕರ್ಷದ ಬಗ್ಗೆ ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾಸುದಿನ, ಅಕ್ಷರಾಭ್ಯಾಸ, ಮದುವೆ, ಮುಂಜಿ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ನಂಬಿಕೆ. ಅಂತೆಯೇ ದಾನಕ್ಕೂ ಪ್ರಶಸ್ತವೆನಿಸಿರುವ ಈ ಶುಭ ದಿನದ ಆಚರಣೆಯೂ, ಸಾಮಾಜಿಕ-ಆರ್ಥಿಕ ಹಿನ್ನೆಲೆ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹಾಗೆಯೇ ಖರೀದಿ-ಹೂಡಿಕೆಗಳ ಸಂಪ್ರದಾಯವಾಗಿದೆ.

‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣ ಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ. ಇದೇ ರೀತಿಯಲ್ಲಿ ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪಾದನೆಯನ್ನು ನೀಡುತ್ತದೆ ಎಂಬ ನಂಬಿಕೆಯು ಇದೆ.

ಅಕ್ಷಯ ಎಂಬುದು ಅಮರ. ವೃದ್ಧಿಸುವುದು, ನಾಶವಾಗುವುದು ಎಂಬ ಅರ್ಥ ಒಳಗೊಂಡಿರುವುದರಿಂದ ನಾವು ಮಾಡುವ ಪ್ರತಿಯೊಂದು ಕಾರ್ಯಗಳು ಅಕ್ಷಯವಾಗುತ್ತವೆ ಎಂಬ ಪ್ರತೀತಿ ಇದೆ. ವರ್ಷದಲ್ಲಿ ಒಮ್ಮೆ ಮಾತ್ರ ಬರುವ ಅಕ್ಷಯ ತೃತೀಯಕ್ಕೆ ಖಗೋಳ ವಿಜ್ಞಾನದಲ್ಲಿ ಮಹತ್ವವಿದೆ. ಅಂದು ಸೂರ್ಯ-ಚಂದ್ರರು ಹೆಚ್ಚು ಪ್ರಕಾಶಮಾನರಾಗಿರುತ್ತಾರೆ. ಅಕ್ಷಯ ತೃತೀಯದಂದು ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತ ಸ್ಥಾನ-ಉಚ್ಚರಾಶಿಯಲ್ಲಿ (ಸೂರ್ಯ - ಮೇಷರಾಶಿಯಲ್ಲಿ ಮತ್ತು ಚಂದ್ರ-ವೃಶಭಾರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು ಮನಸ್ಸು ಮತ್ತು ಬುಧ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು.

ಮಾನವ ಧರ್ಮದ ಮೂಲ ತತ್ವಗಳಾದ ಹಂಚಿ ತಿನ್ನುವ ಗುಣ ಹಾಗೂ ದಾನ-ಧರ್ಮದಿಂದ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬಂತೆ ಅಕ್ಷಯ ತದಿಗೆಯಂದು ಮಾಡುವ ದಾನ-ಧರ್ಮ ಕೂಡ ಪುಣ್ಯ ಗಳಿಸುವುದಕ್ಕಾಗಿಯೇ. ಆದರೆ, ಅದು ಸಂಪತ್ತು ಗಳಿಕೆಗೆ ಮಾತ್ರ ಎಂಬ ತಪ್ಪು ಕಲ್ಪನೆ ಬೆಳೆದು ಬಂದಿದೆ. ಮಂಗಳಕರವಾದ ಈ ದಿನದಂದು ನಾವು ನೀಡುವ ದಾನ ನಮ್ಮನ್ನು ಮತ್ತಷ್ಟು ದಾನ ನೀಡಲು ಶಕ್ತರನ್ನಾಗಿಸುತ್ತದೆ. ಅವಶ್ಯಕತೆ ಇದ್ದವರಿಗೆ ದಾನ ನೀಡುವುದು, ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ. ಆ ದಿನದಂದು ನೂತನ ಕೆಲಸ-ಕಾರ್ಯಗಳು, ಉದ್ದಿಮೆ, ವ್ಯಾಪಾರ ಆರಂಭಿಸುವವರೆಗೂ ಇದು ಉತ್ತಮ ದಿನವೆಂದೇ ಭಾವಿಸಲಾಗುತ್ತದೆ. 


ಲೇಖಕರು: ಕಾನತ್ತಿಲ್‌ ರಾಣಿಅರುಣ್


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network