Header Ads Widget

Responsive Advertisement

ಕೊರೋನಾ ಎರಡನೇ ಅಲೆಯೊಂದಿಗೆ ಮುಂಗಾರು ಸನ್ನಿಹಿತ; ಕೃಷಿ ಚಟುವಟಿಕೆಗೆ ಸಿದ್ಧವಾಗುತ್ತಿದೆ ಕೊಡಗು

ಕೊರೋನಾ ಎರಡನೇ ಅಲೆಯೊಂದಿಗೆ ಮುಂಗಾರು ಸನ್ನಿಹಿತ; ಕೃಷಿ ಚಟುವಟಿಕೆಗೆ ಸಿದ್ಧವಾಗುತ್ತಿದೆ ಕೊಡಗು


ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವುದರೊಂದಿಗೆ ಮಳೆಗಾಲ ಆರಂಭಗೊಳ್ಳುವುದಕ್ಕೆ ಇನ್ನೂ ಎರಡು ವಾರವಷ್ಟೇ ಬಾಕಿಯಿದೆ. ಈ ಬಾರಿಯ ಮುಂಗಾರು ಜೂನ್‌ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ. ಜೂನ್ 15ರ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಭೂಮಿ ಕೃಷಿ ಚಟುವಟಿಕೆಗೆ ಸಿದ್ಧವಾಗುತ್ತದೆ. ವಾಡಿಕೆಯಷ್ಟು ಮಳೆ ಈ ಬಾರಿ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಜಿಲ್ಲೆಯ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಗುಡ್ಡಗಳು ಕುಸಿತದ ಅಪಾಯ ಎದುರಿಸುತ್ತಿವೆ. ಏಕೆಂದರೆ, ಕಳೆದ ವರ್ಷ ಮಳೆಯಿಂದ ಭೂಕುಸಿತ ಅಪಾಯವಿರುವ ಕಡೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಬೇಸಗೆಯಲ್ಲಿ ಅದನ್ನು ಸರಿಪಡಿಸುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಕೊರೋನಾ ಎರಡನೇ ಅಲೆಯೊಂದಿಗೆ ಈಗ ಮತ್ತೆ ಮಳೆಗಾಲ ಸನ್ನಿಹಿತವಾಗಿದ್ದು, ಕುಸಿತದ ಅಪಾಯದ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ ನಿಧಾನಗತಿಯಲ್ಲಿದೆ. ಹೀಗಿರುವಾಗ, ಮುಂಗಾರು ಮಳೆ ಆರ್ಭಟಿಸಿದರೆ, ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದೆ.

ಮುಂಗಾರು ಆರಂಭವಾಗಲು ಕೆಲವು ದಿನಗಳು ಮಾತ್ರ ಬಾಕಿ ಇದೆ. ಲಾಕ್ ಡೌನ್ ನಡುವೆಯೇ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೊರೋನಾ ಎರಡನೇ ಅಲೆಯ ಆರ್ಭಟ ಹೀಗೆ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದೆಯೆಂಬ ಆತಂಕ ಅನ್ನದಾತರಲ್ಲಿ ಕೇಳಿ ಬರುತ್ತಿರುವುದು ಈ ವರ್ಷ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ.

ಜೊತೆಗೆ ಲಾಕ್‌ಡೌನ್ ಮುಂದುವರಿದರೆ ರೈತರಿಗೆ ಸಿಗಬೇಕಾದ ರಸ ಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಸರ್ಕಾರಕ್ಕೆ ಪೂರೈಸುವ ದೊಡ್ಡ ಸವಾಲಿನ ಕೆಲಸ ಆಗಲಿದೆಯೆಂದು ರೈತ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಕೊರೋನಾ ಲಾಕ್‌ಡೌನ್ ಮತ್ತಿತರ ಕಾರಣಗಳಿಗೆ ಗ್ರಾಮೀಣ ಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದಿದ್ದು ನಿರೀಕ್ಷೆಗೂ ಮೀರಿ ಕೃಷಿ ಚಟುವಟಿಕೆಗಳು ಹೆಚ್ಚಾಗಬೇಕು.

ಭಾರತೀಯ ರೈತರ ಜೀವನಾಡಿ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಜೂನ್ 1ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವ್ ಅವರು, ಈ ವರ್ಷ ನೈಋತ್ಯ ಮಾನ್ಸೂನ್ ಮಾರುತ ಜೂನ್ 1 ಕ್ಕೆ ಕೇರಳ ಪ್ರವೇಶಿಸಲಿದೆ. ಈ ಕುರಿತು ಮೇ. 15 ರಂದು ಹವಾಮಾನ ಇಲಾಖೆ ಅಧಿಕೃತ ಮಾನ್ಸೂನ್ ಮುನ್ಸೂಚನೆ ನೀಡಲಿದೆ. ಜೊತೆಗೆ ಸರಾಸರಿ ಮಳೆಯ ಕುರಿತು ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.  ದೇಶದಲ್ಲಿ ಶೇ. 75 ರಷ್ಟು ಮಳೆಯಾಗುವ ನೈಋತ್ಯ ಮಾನ್ಸೂನ್, ಈ ಸಾಮಾನ್ಯ ಮಳೆ ಆಗಲಿದೆ ಎಂದು ಹಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿತ್ತು. ಭಾರತೀಯ ಕೃಷಿ ಚಟುವಟಿಕೆ ಮುಂಗಾರು ಮಳೆ ಮೇಲೆ ನಿಂತಿದೆ.

ಮಾನವನ ನಾಗರಿಕತೆಯೊಂದಿಗೆ ಕೃಷಿಯೂ ಬೆಳೆದು ಬಂದಿದೆ. ಗೊತ್ತಾದ ಜಾಗದಲ್ಲಿ ಆಹಾರ ಅಥವಾ ವಾಣಿಜ್ಯ ಬೆಳೆ ಬೆಳೆಯುವ ಉದ್ದೇಶದಿಂದಲೇ ಮಣ್ಣನ್ನು ಹಸನು ಮಾಡಿ, ಬೀಜ ಬಿತ್ತಿ, ನೀರು ಗೊಬ್ಬರ ಒದಗಿಸಿ, ರೋಗ-ರುಜಿನ, ಕೀಟಬಾಧೆ ತಗುಲದಂತೆ ಎಚ್ಚರಿಕೆ ವಹಿಸಿ ಫಸಲು ಪಡೆಯುವುದು ಮುಖ್ಯವಾಗಿ ಕೃಷಿ ಎನಿಸಿಕೊಳ್ಳುತ್ತಿದೆ. ಕೃಷಿಗೆ ಸುಮಾರು ೧೦ ಸಾವಿರ ವರ್ಷಗಳ ಇತಿಹಾಸವಿದೆ. ಮಾನವ ತನಗೆ ಬೇಕಾದ ಆಹಾರವನ್ನು ತಾನೇ ಬೆಳೆದುಕೊಳ್ಳಲಾರಂಭಿಸಿದ ದಿನದಿಂದ ಈ ಕೃಷಿ ಆರಂಭವಾಗಿದೆ. ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರ ಪ್ರಕಾರ ಕೃಷಿಯಿಂದಾಗಿಯೇ ನಾಗರಿಕತೆ ಸೃಷ್ಟಿಯಾಗಿದೆ. ಈಗ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಬೆಳೆಗಳನ್ನು ಬೆಳೆದು, ಸಂಸ್ಕರಿಸಿ, ಮಾರಾಟಮಾಡುವುದನ್ನು ಉದ್ಯಮವೆಂಬಂತೆ ಪರಿಗಣಿಸಲಾಗುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಕೃಷಿ ಬಹುಸಂಖ್ಯಾತರ ಜೀವನ ಪದ್ಧತಿಯಾಗಿದೆ. 

ಲೇಖಕರು: ಅರುಣ್ ಕೂರ್ಗ್


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network