ಅದ್ವೈತ ತತ್ವ ಸಿದ್ಧಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ
(ಮೇ 17 ಇಂದು ಲೋಕಗುರು ಶಂಕರಾಚಾರ್ಯರ ಜಯಂತಿ ಈ ಕುರಿತು ವಿಶೇಷ ಲೇಖನ)
ಸನಾತನ ಧರ್ಮದಲ್ಲಿನ ಅನೇಕ ತಪ್ಪು ಆಚರಣೆಗಳನ್ನು ಸರಿಪಡಿಸಿ, ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು. ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ ಕೇಂದ್ರಗಳಾಗಿ ಜಗತ್ತಿಗೇ ಮಾರ್ಗದರ್ಶನ ಮಾಡುವುದರ ಜತೆ ಜತೆಯಲ್ಲಿ ಅಪಾರವಾದ ಜ್ಞಾನ ಸಂಪತ್ತನ್ನು, ವಿದ್ಯಾ ಸಂಪತ್ತನ್ನು, ತತ್ತ್ವ ಜ್ಞಾನವನ್ನು ಧಾರೆ ಎರೆಯುವ ಕೇಂದ್ರಗಳಾಗಿ ರೂಪುಗೊಂಡಿವೆ. ಶಂಕರರ ಹೆಸರು ತತ್ವಜ್ಞಾನಕ್ಕೆ ಅನ್ವರ್ಥವಾಗಿ ಉಳಿದುಕೊಂಡಿದೆ.
ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದವರು ಶ್ರೀ ಶಂಕರಾಚಾರ್ಯರು.
ಆದಿ ಶಂಕರಾಚಾರ್ಯರು ಸುಮಾರು 1200 ವರ್ಷಗಳ ಹಿಂದೆ ಇಂದಿನ ಕೇರಳದ ಕೊಚ್ಚಿನ್ ನಗರದಿಂದ ಸುಮಾರು ಐದಾರು ಕಿ.ಮೀ ದೂರವಿರುವ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಕುಟುಂಬ ಬ್ರಾಹ್ಮಣ ಮನೆತನಕ್ಕೆ ಸೇರಿದ್ದಾಗಿತ್ತು.
ಶಂಕರಾಚಾರ್ಯರು ತಮ್ಮ ಗುರುವಾಗಿ ಗೋವಿಂದ ಭಗವತ್ಪಾದರನ್ನು ಆರಿಸಿಕೊಂಡರು. ಅಲ್ಲದೇ ಹಿಂದೂ ಧರ್ಮದ ಮೀಮಾಂಸೆಯ ವಿದ್ವಾಂಸರಾದ ಕುಮಾರಿಕಾ ಹಾಗೂ ಪ್ರಭಾಕರರನ್ನೂ ಇವರು ಭೇಟಿಯಾದರು. ಅಲ್ಲದೇ ಶಾಸ್ತ್ರಾರ್ಥ ಸಂದರ್ಭದಲ್ಲಿ ಬೌದ್ದರನ್ನೂ ಇವರು ಭೇಟಿಯಾದರು. ಶಾಸ್ತ್ರಾರ್ಥ ಎಂದರೆ ಬೌದ್ದ ವಿದ್ವಾಂಸರು ಹಾಗೂ ಜನಸಾಮಾನ್ಯರ ನಡುವೆ ನಡೆಯುವ ಸಭೆಯಾಗಿದ್ದು ಹಲವಾರು ಚರ್ಚೆಗಳು ನಡೆಯುತ್ತವೆ. ಈ ಸಭೆಗಳಲ್ಲಿ ಬೌದ್ಧ ಹಾಗೂ ಹಿಂದೂ ಧರ್ಮಗಳ ನಡುವಣ ವ್ಯತ್ಯಾಸಗಳನ್ನು ಆಳವಾಗಿ ಅಭ್ಯಸಿಸಿದ ಬಳಿಕ ಹಿಂದೂಧರ್ಮದ ಮೀಮಾಂಸೆಯ ವಿದ್ಯಾಶಾಲೆಯಲ್ಲಿ ಕಲಿಸುತ್ತಿರುವ ವಿಷಯಗಳ ಬಗ್ಗೆ ಹಲವಾರು ಟೀಕೆಗಳನ್ನು ಪ್ರಕಟಿಸಿದರು. ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಸಾವಿಲ್ಲ ಎಂದು ತಿಳಿಸಲಾಗಿದ್ದರೆ ಬೌದ್ಧಧರ್ಮದಲ್ಲಿ ಆತ್ಮದ ಇರುವಿಕೆಯನ್ನೇ ಅಲ್ಲಗಳೆಯಲಾಗುವುದನ್ನು ಇವರು ಪ್ರತಿಪಾದಿಸಿದರು. ಬಳಿಕ ಶಂಕರಾಚಾರ್ಯರು ನಾಲ್ಕು ಮಠಗಳ ಆಶ್ರಯದಲ್ಲಿ ಹಿಂದೂ ಧರ್ಮದ ಹತ್ತು ಪಂಗಡಗಳನ್ನು ಸ್ಥಾಪಿಸಿದರು. ಈ ನಾಲ್ಕು ಮಠಗಳೆಂದರೆ ಭಾರತದಲ್ಲಿ ಪ್ರಸಿದ್ದವಾಗಿರುವ ದ್ವಾರಕಾ, ಪುರಿ ಜಗನ್ನಾಥ , ಬದರೀನಾಥ ಹಾಗೂ ಶೃಂಗೇರಿ ಆಗಿವೆ.
ಜಗತ್ತಿನ ಅಂಧಕಾರವನ್ನು ತೊಡೆದು ಜ್ಞಾನದ ಬೆಳಕನ್ನು ಚೆಲ್ಲಿದ ದೇವತಾ ಸ್ವರೂಪಿಯಾದ ಶಂಕಾರಾಚಾರ್ಯರು ಇಂದಿಗೂ ಆರಾಧಿಸಲ್ಪಡುತ್ತಿರುವುದು ಇದೇ ಕಾರಣಕ್ಕಾಗಿ. ಮಹಾನ್ ದೈವಭಕ್ತರಾಗಿದ್ದ ಅವರು ಎಲ್ಲ ದೇವರುಗಳೂ ಒಂದೇ ಮಾನವಕುಲವೆಲ್ಲ ಒಂದೇ ಎನ್ನುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಜನತೆಗೆ ಸಾರಿ ಹೇಳಿದ್ದರು. ಯಾವ ಪಂಥವನ್ನೂ ಹುಟ್ಟುಹಾಕದೆ ಎಲ್ಲ ಜಾತಿ ವರ್ಗಗಳನ್ನು ಸಮನಾಗಿ ಕಾಣಿರಿ. ಭಗವಂತನ ನಾಮಸ್ಮರಣೆಯಲ್ಲಿ ಜಾತಿ, ಭೇದಗಳು ಕೂಡದು. ಎಲ್ಲರಿಗೂ ಭಗವಂತನ ಪ್ರಾರ್ಥಿಸುವ ಪ್ರೀತಿಸುವ ಹಕ್ಕಿದೆ ಎಂಬ ಮಂತ್ರವನ್ನು ಜಗತ್ತಿಗೆ ಸಾರಿದ್ದಾರೆ.
ಮನುಷ್ಯನಿಗೆ ಎದುರಾಗುವ ಎಲ್ಲ ಪ್ರಶ್ನೆಗಳು ಮೂರು ವಿವರಗಳ ಚೌಕಟ್ಟಿನಲ್ಲಿಯೇ ಇರುತ್ತವೆ; ಅವೇ ಜಗತ್ತು-ಜೀವ ಮತ್ತು ಈಶ್ವರ. ಇವನ್ನು ಆಳವಾಗಿ ಚಿಂತನೆ ನಡೆಸಿ, ಅದಕ್ಕೆ ಗಟ್ಟಿಯಾದ ತಾತ್ತ್ವಿಕ ನೆಲೆಯನ್ನು ಒದಗಿಸಿದವರಲ್ಲಿ ಶಂಕರರು ಪ್ರಮುಖರು. ಉಪನಿಷತ್ತುಗಳಲ್ಲಿಯೇ ಈ ವಿವರಗಳು ಸ್ಪಷ್ಟವಾಗಿ ನಿರೂಪಿತವಾಗಿವೆ ಎನ್ನುವುದು ಶಂಕರರ ನಿಲುವು. ಹೀಗಾಗಿಯೇ ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು ‘ಔಪನಿಷದ ದರ್ಶನ’ ಎಂದು ಕರೆದರು. ಆದರೆ ಜಗತ್ತು ಅದನ್ನು ‘ಅದ್ವೈತದರ್ಶನ’ ಎಂದು ಸ್ವೀಕರಿಸಿತು. ಅದ್ವೈತ ಎಂದರೆ ಎರಡನೆಯದ್ದು ಇಲ್ಲ; ಇಡಿಯ ಸೃಷ್ಟಿಗೆ ಮೂಲವೂ, ಮಾತ್ರವಲ್ಲ, ಸೃಷ್ಟಿಯಲ್ಲಿರುವುದೆಲ್ಲವೂ ಒಂದೇ ಚೈತನ್ಯ ಎನ್ನುವುದು ಈ ದರ್ಶನದ ಸರಳ ನಿರೂಪಣೆ. ಈ ಏಕತತ್ತ್ವವೇ ಆತ್ಮ ಅಥವಾ ಬ್ರಹ್ಮ. ಶಂಕರರ ಸಿದ್ಧಾಂತದ ಪ್ರಕಾರ ಜಗತ್ತಿನಲ್ಲಿರುವುದೆಲ್ಲವೂ ಒಂದೇ ತತ್ತ್ವ; ಆದ್ದರಿಂದ ಜಗತ್ತಿನಲ್ಲಿ ಜಾತಿ-ಮತ-ದೇಶ-ಭಾಷೆ ಮುಂತಾದವುಗಳಿಂದ ಭೇದ ಏರ್ಪಡುವುದು ವಿವೇಕವಲ್ಲ. ಹೀಗಾಗಿ ಅವರ ಸಿದ್ಧಾಂತವನ್ನು ‘ವಿಶ್ವಧರ್ಮ’ ಎಂದು ಕರೆಯುವುದೇ ಉಚಿತವಾಗುತ್ತದೆ.
ಶಂಕರಾಚಾರ್ಯರು ಎತ್ತಿಹಿಡಿದ ತತ್ತ್ವವನ್ನು ‘ಅದ್ವೈತದರ್ಶನ’ ಎಂದು ಕರೆಯುವುದು ವಾಡಿಕೆ. ಅದ್ವೈತ ಎಂದರೇನು? ಇದರ ವ್ಯಾಪ್ತಿ ತುಂಬ ವಿಸ್ವಾರವಾದದ್ದು. ’ಅದ್ವೈತ ಎಂಬ ಪದವೇ ಗಮನಾರ್ಹವಾದದ್ದು. ಅದು ಏಕತೆ ಎಂಬುದಕ್ಕಿಂತ ಹೆಚ್ಚಾಗಿ, ಅ–ದ್ವೈತ – ಎರಡನೆಯದಿಲ್ಲದಿರುವಿಕೆ, ಕೇವಲ ಏಕತೆಯಲ್ಲ. ಮನುಷ್ಯ ಮತ್ತು ಜಗತ್ತು, ನೋಡುವವನು ಮತ್ತು ನೋಡಲ್ಪಟ್ಟದ್ದು, ತೋರಿಕೆಯಿಂದ ತಿಳಿದುಬರುವುದು ಮತ್ತು ಕಾಣಬಾರದ ಸತ್ತ್ವ – ಈ ಪ್ರತ್ಯೇಕತೆ ಅಥವಾ ಇರ್ತನ ಮೇಲುನೋಟಕ್ಕೆ ಮಾತ್ರ ಕಾಣಬರತಕ್ಕದ್ದು. ನಮ್ಮ ಕಣ್ಣಿಗೆ ಕಾಣಬರುವುದು ಮತ್ತು ಕಾಣದೇ ಇರುವುದು, ಅವು ಎಲ್ಲವೂ ಒಂದೇ, ಎರಡಲ್ಲ. ಯಾವುದು ಇದೆಯೋ ಅದೇ ನಿಜವಾದದ್ದು. ಎಂದರೆ ಜೀವವೆಲ್ಲ ಒಂದೇ, ಎರಡಲ್ಲ, ಹಲವೂ ಅಲ್ಲ.
ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇಂದು ಶಂಕರ ಜಯಂತಿ. ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ, ಶಂಕರರಿಲ್ಲದಿದ್ದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು "ಹಿಂದೂ" ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಇಂದಿಗೆ ವೇದಾಂತ ತತ್ವ ಎಂದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ವೇದಾಂತ ತತ್ವ ಎಂದರೇನು ಎಂಬುದೇ ಅರ್ಥವಾಗದೇ ಇದ್ದಿದ್ದರೆ ಇತ್ತೀಚಿನ ಶತಮಾನಗಳಲ್ಲಿ ನಾವು ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು, ವಿವೇಕಾನಂದರಂತಹವರನ್ನೂ ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ, ಭಾರತದ ಸನಾತನ ಧರ್ಮ ಜೀವಂತವಾಗಿದ್ದರೆ ಅದಕ್ಕೆ ಶಂಕರರ ಕೊಡುಗೆ ಅಪಾರ. ಹಾಗಾಗಿಯೇ ಸಾವಿರ ಅಲ್ಲ ಇನ್ನಷ್ಟು ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ. ಎಂದಿಗೂ ಜೀವಂತ.
ಲೇಖಕರು: ಕಾನತ್ತಿಲ್ ರಾಣಿಅರುಣ್
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network