Header Ads Widget

ಸರ್ಚ್ ಕೂರ್ಗ್ ಮೀಡಿಯ

ಹಣದಾಯಿ ವೈದ್ಯನನ್ನು ಸೇವೆಯಿಂದಲೇ ವಜಾಗೊಳಿಸಿ- ಬಾನಂಡ.ಎನ್. ಪ್ರತ್ಯು ಆಗ್ರಹ

ಹಣದಾಯಿ ವೈದ್ಯನನ್ನು ಸೇವೆಯಿಂದಲೇ ವಜಾಗೊಳಿಸಿ- ಬಾನಂಡ.ಎನ್. ಪ್ರತ್ಯು ಆಗ್ರಹ

ಕೋವಿಡ್ ಆಸ್ಪತ್ರೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಆಗ್ರಹ


(ಬಾನಂಡ.ಎನ್. ಪ್ರತ್ಯು)

ಪೊನ್ನಂಪೇಟೆ, ಮೇ.24: ಕೋವಿಡ್ ಸೋಂಕಿತ ರೋಗಿಯ ಕಡೆಯವರಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದು ಅಮಾನತುಗೊಂಡಿರುವ ಭ್ರಷ್ಟ ವೈದ್ಯಾಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಜಿ. ಪಂ.ಸದಸ್ಯರಾದ, ಕಾಂಗ್ರೆಸ್ ಪ್ರಮುಖ ಬಿ.ಎನ್. ಪ್ರತ್ಯು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋವಿಡ್ ಭಯದಿಂದಾಗಿ ತತ್ತರಿಸಿ ಹೋಗಿರುವ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾನವೀಯತೆ ಮರೆತು ಕೇವಲ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದ ವೈದ್ಯಾಧಿಕಾರಿ ಡಾ. ಶಿವಶಂಕರ್ ಅವರಿಗೆ ಕೇವಲ ಅಮಾನತು ಸೂಕ್ತ ಶಿಕ್ಷೆಯಲ್ಲ.  ರಾಜಾರೋಷವಾಗಿ ಹಣ ಪಡೆಯುತ್ತಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇರುವುದರಿಂದ ಅವರನ್ನು ಕೂಡಲೇ ಸೇವೆಯಿಂದಲೇ ವಜಾಗೊಳಿಸಬೇಕು. ಇದು ಇತರ ಭ್ರಷ್ಟ ವೈದ್ಯಾಧಿಕಾರಿಗಳಿಗೂ ಎಚ್ಚರಿಕೆಯ ಪಾಠವಾಗುತ್ತದೆ ಎಂದು ಅವರು ಹೇಳಿದರಲ್ಲದೆ, ಸೋಂಕು ಬಾಧಿಸಿ ನಂತರ ಅವರ ಆರೋಗ್ಯ ಸುಧಾರಣೆಯಾಗಿ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ ಕೆಲವು ರೋಗಿಗಳ ಸಾವಿಗೆ ಡಾ. ಶಿವಶಂಕರ್ ಅವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ವಿಭಾಗದಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಶಿವಶಂಕರ್, ಹಿಂದಿನಿಂದಲೂ ಕರ್ತವ್ಯಲೋಪ ಎಸಗುತ್ತಲೇ ಬಂದಿದ್ದಾರೆ. ವೈದ್ಯ ಸೇವೆಯನ್ನು ಮರೆತು ಭ್ರಷ್ಟಾಚಾರವನ್ನೇ  ಮೈಗೂಡಿಸಿಕೊಂಡಿದ್ದ ಇವರು ಚಿಕಿತ್ಸೆ ಅರಸಿ ಬರುತ್ತಿದ್ದ ಕ್ಷಯ ರೋಗಿಗಳಿಗೆ ಯಾವುದೇ ರೀತಿಯ ಸೇವೆ ಒದಗಿಸುತ್ತಿರಲಿಲ್ಲ. ಅವರಿಗೆ ನೀಡಲಾಗಿದ್ದ ಸರಕಾರಿ ವಾಹನಗಳನ್ನು ದುರ್ಬಳಕೆ ಮಾಡಿಕೊಂಡು ಕೇವಲ ಮೋಜು ಮಸ್ತಿನಿಂದಲೇ ಕಾಲ ಕಳೆಯುತ್ತಿದ್ದ ಶಿವಶಂಕರ್ ತಮ್ಮ ಕಚೇರಿಯ ಹಾಜರಾತಿ ಪುಸ್ತಕಕ್ಕೂ ಸಹಿ ಹಾಕುತ್ತಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡಾ. ಶಿವಶಂಕರ್ ಅವರ ಕರ್ತವ್ಯ ಲೋಪದ ಬಗ್ಗೆ ಕಳೆದ ಎರಡು ವರ್ಷದ ಹಿಂದೆಯೇ ಜಿ. ಪಂ. ಸಾಮಾನ್ಯ ಸಭೆಯಲ್ಲಿ ತಾನು ಈ ಕುರಿತು ವಿಷಯ ಪ್ರಸ್ತಾಪಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆ ತನಿಖೆಯನ್ನು ಕೈಗೊಂಡಿತು.  ಆದರೆ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಕೃಪೆ ಡಾ. ಶಿವಶಂಕರ್ ಮೇಲೆ ಇದ್ದಿದ್ದರಿಂದ ತನಿಖೆ ಪೂರ್ಣ ಪ್ರಮಾಣದಲ್ಲಿ ನಡೆಯದೆ ವರದಿ ಸಲ್ಲಿಕೆಯಾಗಲಿಲ್ಲ ಎಂದು ಹೇಳಿರುವ ಪ್ರತ್ಯು ಅವರು, ಮನುಷ್ಯತ್ವ ವಿರೋಧಿ ವೈದ್ಯಾಧಿಕಾರಿ ಡಾ. ಶಿವಶಂಕರ್ ಅವರಿಂದ ಮುಂದೆಯೂ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ಆದ್ದರಿಂದ ಇವರನ್ನು ವಜಾಗೊಳಿಸುವುದೇ ಸೂಕ್ತ ಶಿಕ್ಷೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆ  ಬಗ್ಗೆ ಇದೀಗ ಸಾಕಷ್ಟು ಅಪಸ್ವರಗಳು ಕೇಳಿ ಬರುತ್ತಿದೆ. ಮಾನವೀಯತೆ ಮತ್ತು ಕರ್ತವ್ಯನಿಷ್ಠೆ ಹೊಂದಿರುವ ಹಲವು ವೈದ್ಯರು ಮತ್ತು ಸಿಬ್ಬಂದಿಗಳು ಅಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅಲ್ಲಿರುವ ಕೆಲವು ಭ್ರಷ್ಟರಿಂದ ಅಲ್ಲಿನ ಇಡೀ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗುತ್ತಿದೆ. ಅಮಾಯಕ ರೋಗಿಗಳ ಬೆಲೆಬಾಳುವ ವಸ್ತುಗಳು ಆಸ್ಪತ್ರೆಯಿಂದಲೇ ಕಳವಾಗುತ್ತಿರುವುದು ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ. ಬಡಜನತೆ ಕೋವಿಡ್ ಮಹಾಮಾರಿಯಿಂದಾಗಿ ಎಲ್ಲವನ್ನು ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಕೆಲವು ಕರುಣೆ ರಹಿತ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಅಮಾನವೀಯ ನಡೆಯನ್ನು ಮುಂದೆ ಪ್ರಕೃತಿ ಕೂಡ ಕ್ಷಮಿಸುವುದಿಲ್ಲ ಎಂದು ಬಿ. ಎನ್. ಪ್ರತ್ಯು ಎಚ್ಚರಿಸಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಿದೆ. ಸಚಿವರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ಆಸ್ಪತ್ರೆಯ ವ್ಯವಸ್ಥೆ ಕ್ಷಣಿಕವಾಗಿ ಸರಿಯಾಗಬಾರದು. ಬಡ ಮತ್ತು ಸಾಮಾನ್ಯ ಜನರಿಗೆ ಯಾವುದೇ ಆತಂಕವಿಲ್ಲದೆ ಅಲ್ಲಿನ ಸೇವೆ ಸದಾ ದೊರೆಯುವಂತಾಗಬೇಕು. ನ್ಯೂನ್ಯತೆಗಳ ಕೊರತೆಯಿಂದ ರೋಗಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು.  ರೋಗಿಗಳು ನಿರಾಂತಕವಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ವಾತಾವರಣ ಅಲ್ಲಿ ಪುನರ್ನಿರ್ಮಾಣವಾಗಬೇಕು ಎಂದು ಹೇಳಿಕೆಯಲ್ಲಿ ಪ್ರತ್ಯು ಅವರು ಆಗ್ರಹಿಸಿದ್ದಾರೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,

https://play.google.com/store/apps/details?id=com.searchcoorg.user.searchcoorg&hl=en_IN&gl=US


Search Coorg Media

Coorg's Largest Online Media Network