ಲಾಕ್ ಡೌನ್ ಸಂದರ್ಭದಲ್ಲಿ ಬ್ಯಾಂಕುಗಳಿಂದ ಸಾಲಗಾರರಿಗೆ ಒತ್ತಡ
ಪರಿಸ್ಥಿತಿ ಮನಗಂಡು ವಿನಾಯಿತಿ ಕಲ್ಪಿಸಲು ಹೆಚ್. ಎ. ಹಂಸ ಆಗ್ರಹ
ಸಣ್ಣ ಬೆಳಗಾರರು ಮತ್ತು ಸಾಮಾನ್ಯ ರೈತರು ಬ್ಯಾಂಕಿನಿಂದ ಪಡೆದ ಕೃಷಿ ಸಾಲವನ್ನು ಮರುಪಾವತಿಸಲು ಇದೀಗ ವಿವಿಧ ಬ್ಯಾಂಕುಗಳಿಂದ ಒತ್ತಡ ಬರುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿಯೂ ಜನರ ಭಾವನೆಗಳನ್ನು ಬ್ಯಾಂಕುಗಳು ಅರ್ಥೈಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ(ಡಿ. ಸಿ. ಸಿ.) ಉಪಾಧ್ಯಕ್ಷರಾದ ಎಚ್.ಎ. ಹಂಸ ಅವರು, ಜನತೆ ಆರ್ಥಿಕವಾಗಿ ತತ್ತರಿಸಿರುವ ಈ ಲಾಕ್ ಡೌನ್ ಸಂದರ್ಭದಲ್ಲಿ ಸಾಲ ಮರುಪಾವತಿಸಲು ಬ್ಯಾಂಕುಗಳು ಸಾಲಗಾರರಿಗೆ ಹೆಚ್ಚುವರಿ ಸಮಯಾವಕಾಶದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಇಡೀ ಜನ ಜೀವನವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ಸರಕಾರ ಇದೀಗ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದೆ. ಕೊಡಗಿನಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಜನತೆಯಲ್ಲಿ ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ವಾಣಿಜ್ಯ ಮತ್ತು ಸಹಕಾರ ಬ್ಯಾಂಕುಗಳಿಂದ ಜನರು ವಿವಿಧ ಯೋಜನೆಗಳ ಮೂಲಕ ಪಡೆದ ಕೃಷಿ ಸಾಲವನ್ನು ಮರುಪಾವತಿಗೆ ಮತ್ತು ಸಾಲವನ್ನು ನವೀಕರಿಸುವಂತೆ ಬ್ಯಾಂಕಿನಿಂದ ನಿರಂತರವಾಗಿ ಒತ್ತಡ ಹಾಕಲಾಗುತ್ತಿದೆ. ಜೀವ ಉಳಿಸಿಕೊಳ್ಳಲು ಸಾಹಸ ಪಡುತ್ತಿರುವ ಈ ಸಂದರ್ಭದಲ್ಲಿ ಬ್ಯಾಂಕುಗಳ ಈ ನಡೆ ತೀವ್ರ ಖಂಡನೀಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ಕೊಡಗಿನ ಪ್ರತಿಯೊಬ್ಬ ಸಾಲಗಾರರು ಬದ್ಧರಾಗಿರುತ್ತಾರೆ. ಬ್ಯಾಂಕಿಗೆ ಮೋಸ ಮಾಡುವ ಯಾವ ಉದ್ದೇಶವೂ ಬೆಳೆಗಾರರಿಗೆ ಇರುವುದಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಸುವುದು ಕಷ್ಟದ ಕೆಲಸವಾಗಿದೆ ಎಂದು ತಿಳಿಸಿದ ಹಂಸ ಅವರು, ರೈತರು ಪಡೆದ ಸಾಲವನ್ನು ನವೀಕರಣ ಗೊಳಿಸಲು ಕಡ್ಡಾಯವಾಗಿ ಇಬ್ಬರು ಜಮೀನುದಾರರನ್ನು ಕರೆದುಕೊಂಡು ಬ್ಯಾಂಕಿಗೆ ಬರಲೇಬೇಕು ಎಂದು ಬ್ಯಾಂಕಿನವರು ಒತ್ತಡ ಹಾಕುವುದು ಲಾಕ್ ಡೌನ್ ಸಂದರ್ಭದಲ್ಲಿ ಎಷ್ಟು ಸರಿ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಲಾಕ್ ಡೌನ್ ಮುಗಿಯುವವರೆಗೆ ಸಾಲ ವಸೂಲಾತಿ ಗಳಿಗೆ ಬ್ಯಾಂಕುಗಳು ಮುಂದಾಗಬಾರದು. ಮೊದಲೇ ಆರ್ಥಿಕವಾಗಿ ಕಂಗೆಟ್ಟಿರುವ ರೈತರ ಮೇಲೆ ಯಾವುದೇ ಒತ್ತಡ ಹೇರಬಾರದು. ಲಾಕ್ ಡೌನ್ ಮುಗಿದು ಜನಜೀವನ ಸಹಜ ಸ್ಥಿತಿಗೆ ಬರುವವರಿಗೆ ಬ್ಯಾಂಕಿನಿಂದ ಪಡೆದ ಸಾಲ ಮರುಪಾವತಿಸಲು ಹೆಚ್ಚುವರಿ ಸಮಯಾವಕಾಶ ನೀಡಬೇಕು. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಸಾಲಗಾರರಿಗೆ ಯಾವುದೇ ಕಿರುಕುಳ ನೀಡದಂತೆ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹಂಸ ಅವರು ಆಗ್ರಹಿಸಿದ್ದಾರೆ.
ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಇದೀಗ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಪೈಕಿ ಸೋಂಕು ದೃಢ ಪಡುವ ಹಲವು ಬಡ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಮನೆ ಸೀಲ್ ಡೌನ್ ಆಗುತ್ತದೆ. ಇದರಿಂದಾಗಿ ಅಗತ್ಯ ಆಹಾರ ವಸ್ತುಗಳನ್ನು ಖರೀದಿಸಲು ಮನೆಯವರಿಗೆ ಯಾರಿಗೂ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಸಂಕಷ್ಟ ಎದುರಿಸುವ ಬಡಕುಟುಂಬದ ಮನೆಯವರ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವವರೆಗೆ ಅವರಿಗೆ ಬೇಕಾಗಿರುವ ಅಗತ್ಯ ಆಹಾರ ವಸ್ತುಗಳನ್ನು ಜಿಲ್ಲಾಡಳಿತದ ವತಿಯಿಂದಲೇ ಸರಬರಾಜು ಮಾಡುವ ಕೆಲಸ ತ್ವರಿತಗತಿಯಲ್ಲಿ ಆಗಬೇಕು ಎಂದು ಹಂಸ ಅವರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network