Header Ads Widget

ಸರ್ಚ್ ಕೂರ್ಗ್ ಮೀಡಿಯ

ರಕ್ತದಾನಿಗಳು ಜೀವ ಉಳಿಸುವ ರಕ್ಷಕರು (ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆ‌ ನಿಮಿತ್ತ ವಿಶೇಷ ಲೇಖನ)

ರಕ್ತದಾನಿಗಳು ಜೀವ ಉಳಿಸುವ ರಕ್ಷಕರು

(ಜೂನ್ 14  ವಿಶ್ವ ರಕ್ತದಾನಿಗಳ ದಿನಾಚರಣೆ‌ ನಿಮಿತ್ತ ವಿಶೇಷ ಲೇಖನ)



ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು, ಸ್ವಯಂ ಪ್ರೇರಿತನಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೊಡುವುದಕ್ಕೆ ರಕ್ತದಾನ ಎನ್ನುವರು. ಕೇವಲ ಮಾನವ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತ ನೀಡಲು ಸಾಧ್ಯ. ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರ ಚಿಕಿತ್ಸೆಗಳ ಸಂದರ್ಭಗಳಲ್ಲಿ ಅಲ್ಲದೇ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಮಹಿಳೆಯರು, ಥ್ಯಾಲಸೀಮಿಯಾ ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ನಮ್ಮ ರಾಜ್ಯದಲ್ಲಿ ಒಂದು ದಿನಕ್ಕೆ ಹಲವಾರು ಯುನಿಟ್‍ಗಳಷ್ಟು ರಕ್ತದ ಬೇಡಿಕೆ ಇದೆ. ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. 35 ದಿನಗಳ ನಂತರ, ಅದು ಉಪಯೋಗಕ್ಕೆ ಬರುವುದಿಲ್ಲ. 

ರಕ್ತದಾನ ಮಾಡುವುದರಿಂದ ಹೃದಯಘಾತದ ಸಂಭವ ಕಡಿಮೆಯಾಗುವುದು, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುವುದು, ಇತರರು ಜೀವ ಉಳಿಸಿದಂತಾಗುವುದು, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಉತ್ತೇಜಿಸುತ್ತದೆ, ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುತ್ತದೆ, ರಕ್ತದಾನ ಮಾಡುವುದರಿಂದ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ. ಬದಲಾಗಿ ಇದರಿಂದ ದೇಹಕ್ಕೆ ಅನುಕೂಲ ಪರಿಣಾಮಗಳಾಗುತ್ತವೆ. ರಕ್ತದಾನ ಮಾಡಿದರೆ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಅಂಗಗಳು ಸಕ್ರಿಯವಾಗುತ್ತವೆ, ಇದು ಹೆಚ್ಚಿನ ಆರೋಗ್ಯ ತರುತ್ತದೆ. ಕೆಲವರಲ್ಲಿ ಕೆಂಪು ರಕ್ತ ಕಣಗಳು ಅತಿಯಾಗಿ ಸಮಸ್ಯೆ ಎದುರಾಗುತ್ತದೆ. ಅವರಿಗಂತೂ ರಕ್ತದಾನ ಮತ್ತಷ್ಟು ಉಪಯುಕ್ತ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಂದು ಸಾರಿ ರಕ್ತದಾನ ಮಾಡುವದರಿಂದ 4 ಜನರ ಜೀವ ಉಳಿಸಬಹುದಾಗಿದೆ.. ರಕ್ತದ ಭಾಗಗಳಾದ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಪ್ಲಾಸ್ಮಾ ಮತ್ತು ಕ್ರಾಯೂ(ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟಲೆಟಗಳನ್ನು ಬೇರ್ಪಡಿಸಿ ಉಳಿಯುವ ಕಣಗಳೆಂದರೆ ಕ್ರಾಯೂ. ಇದು ರಕ್ತಸ್ರಾವವನ್ನು ತಡೆಗಟ್ಟುವದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ) ಕಣಗಳನ್ನು ಬೇರ್ಪಡಿಸಿ, ರೋಗಿಗಳ ಅವಶ್ಯಕತೆಯ ಅನುಸಾರವಾಗಿ ರಕ್ತದ ಪರಿಕರಗಳನ್ನು ಬಳಸಲಾಗುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿ ರಕ್ತದಾನ ಮಾಡುವದರಿಂದ 4 ಜೀವಗಳನ್ನು ಉಳಿಸಬಹುದು.

ಹೆಣ್ಣು ಗಂಡೆಂಬ ಭೇದವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು, ರಕ್ತದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿರಬೇಕು, ಗಂಡಸರು 3 ತಿಂಗಳಿಗೆ ಒಮ್ಮೆ, ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕನಿಷ್ಠ 12.5 ಗ್ರಾಂ ಗಿಂತ ಹೆಚ್ಚಿರಬೇಕು.

ಮಧ್ಯಪಾನ ಹಾಗೂ ಮಾದಕದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು, ಮಹಿಳೆಯರು, ತಿಂಗಳ ಮುಟ್ಟಿನ ಸಮಯದಲ್ಲಿ, ರಕ್ತದಾನ ಮಾಡಬಾರದು, ಗರ್ಭಪಾತವಾದ 8 ತಿಂಗಳು ರಕ್ತದಾನ ಮಾಡಬಾರದು, ಯಾವುದೇ ವ್ಯಕ್ತಿ ಕಾಯಿಲೆ ವಿರುದ್ದ ಲಸಿಕೆ ಪಡೆದಿದ್ದರೆ ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು, ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 12 ತಿಂಗಳು ರಕ್ತದಾನ ಮಾಡಬಾರದು, ತೀವ್ರ ರಕ್ತದ ಒತ್ತಡ ಇರುವವರು ರಕ್ತದಾನ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತದೆ. ಇದಲ್ಲದೆ, ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೇನರ್‌ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್‌ಗಳನ್ನು ಸಂಶೋಧಿಸಿದರು. ಈ ಹಿನ್ನೆಲೆಯಲ್ಲೂ ಅವರ ಜನ್ಮದಿನವಾದ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಅಕ್ಟೋಬರ್‌ 1 ರಂದು ಪ್ರತಿ ವರ್ಷ ರಾಷ್ಟ್ರೀಯ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ.

ನಾವು ಜೀವಂತವಿರುವಾಗ ಪದೆ ಪದೆ ನಮ್ಮ ದೇಹದಿಂದ ಕೊಡಬಹುದಾದ ಏಕೈಕ ದಾನವೆಂದರೆ ಅದು ರಕ್ತ ದಾನ. ವಿಜ್ಞಾನದಲ್ಲಿ ನಾವು ಎಷ್ಟೆ ಮುಂದುವರೆದರು ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾದ್ಯವಾಗುತ್ತಿಲ್ಲಾ. ಇದು ಮಾನವನಿಂದ ಮಾನವನಿಗೆ ಮಾತ್ರ ಕೂಡಬಹುದಾಗಿದೆ. ಜನರಿಗೆ ರಕ್ತ ದಾನ ಮಾಡುವದರ ಬಗ್ಗೆ ತಪ್ಪು ಕಲ್ಪನೆಗಳಿವೆ. ರಕ್ತ ದಾನದಿಂದ ನಮ್ಮ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ, ನಮ್ಮ ಶಕ್ತಿ ಕುಂದುತ್ತದೆ, ಹೀಗೆ ಅನೇಕ ಗೊಂದಲಗಳನ್ನು ತಮ್ಮ ಮನದಲ್ಲಿ ತುಂಬಿಕೊಂಡಿರುತ್ತಾರೆ. ಅದನ್ನೆಲ್ಲಾ ಹೋಗಲಾಡಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರಕ್ತ ಭಂಡಾರಗಳು ಮತ್ತು ಸಂಘ ಸಂಸ್ಥೆಗಳು ಜನರಿಗೆ ಅರಿವು ಮೂಡಿಸುತ್ತಲೇ ಇವೆ. ಆದರು ಜನರಲ್ಲಿ ರಕ್ತದಾನವೆಂದರೆ ಭಯ ಇನ್ನೂ ಇದೆ. ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವ ಬಗ್ಗೆ ಜನರಲ್ಲಿ ಉತ್ತೇಜನ ತುಂಬಬೇಕಾಗಿದೆ.

ರಕ್ತದಾನ ಕೇವಲ ಒಂದು ಜೀವವನ್ನು ಉಳಿಸುವುದಿಲ್ಲ. ಬದಲಾಗಿ ಆದು ಈ ಜಗತ್ತಿನಲ್ಲಿ ಮಾನವೀಯತೆಯು ಇರುವನ್ನು ನೆನಪಿಸುತ್ತದೆ. ನಮ್ಮಿಂದ ರಕ್ತದಾನ ಮಾಡುವುದಕ್ಕೆ ಸಾಧ್ಯವಿದೆ ಎಂದಾದರೆ ನಾವದನ್ನು ಮಾಡಬೇಕಾಗಿದೆ. ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸಬಹುದು. ಇದರಿಂದಾಗಿ ಹಲವಾರು ಜನರು ಸಾವಿನಿಂದ ಪಾರಾಗಬಹುದಾಗಿದೆ. ರಕ್ತದಾನಿಗಳು ಮತ್ತೊಬ್ಬರ ಪ್ರಾಣ ಉಳಿಸುವ ಜೀವರಕ್ಷಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ತದಾನಿಗಳಿಗೆ ವಿಶ್ವ ರಕ್ತದಾನಿಗಳ ದಿನಾಚರಣೆಯ ಹೃದಯ ಪೂರ್ವಕ ಧನ್ಯವಾದಗಳನ್ನು ಅರ್ಪಿಸಬೇಕಿದೆ. 


ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                                   (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,