Header Ads Widget

Responsive Advertisement

ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ ಅಸ್ತಿತ್ವಕ್ಕೆ; ಗೋಣಿಕೊಪ್ಪಲು ಹೊಳೆ-ತೋಡು ಅತಿಕ್ರಮ ತೆರವು ಹೋರಾಟ

ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ಗೋಣಿಕೊಪ್ಪಲು ಹೊಳೆ-ತೋಡು ಅತಿಕ್ರಮ ತೆರವು ಹೋರಾಟ


ಗೋಣಿಕೊಪ್ಪಲು,ಜೂ.13: ಇಲ್ಲಿನ ಕೀರೆಹೊಳೆ, ಕೈಕೇರಿ ತೋಡು, ಕೈತೋಡು ಇತ್ಯಾದಿಗಳು ಪ್ರಭಾವಿ ವ್ಯಕ್ತಿಗಳಿಂದ ಅತಿಕೃಮಣಗೊಂಡು ಜಲಮೂಲಗಳ ನೈಜ ಸ್ಥಾನ ಕಿರಿದಾಗುತ್ತಿದ್ದು, ಮುಂದೆ ಲಕ್ಷ್ಮಣ ತೀರ್ಥ ನದಿ ಮೂಲಕ ಕಾವೇರಿ ನದಿಯನ್ನು ಸೇರುತ್ತಿರುವ ಹಿನ್ನೆಲೆ ಹಾಗೂ ಕಳೆದ ಮೂರು ವರ್ಷಗಳ ಮಳೆಗಾಲದಲ್ಲಿ ಗೋಣಿಕೊಪ್ಪಲು ನಗರದಲ್ಲಿಯೂ ಪ್ರವಾಹ ಪರಿಸ್ಥಿತಿ ಉಲ್ಭಣಗೊಂಡಿದ್ದು ಸಾರ್ವಜನಿಕರು ತೊಂದರೆಗೊಳಗಾಗಿದ್ದ ಹಿನ್ನೆಲೆ ಇಂದು ಗೋಣಿಕೊಪ್ಪಲಿನಲ್ಲಿ ವೀರಾಜಪೇಟೆ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ‘ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ’ಎಂದು ನೂತನ ಹೋರಾಟ ಸಮಿತಿಗೆ ನಾಮಕರಣ ಮಾಡಲಾಗಿದೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಸಂಸ್ಥೆ ಮುಖ್ಯಸ್ಥ ಟಿ.ಎಲ್.ಶ್ರೀನಿವಾಸ್, ಲಾಕ್ ಡೌನ್ ಮುಗಿದ ನಂತರ ಸುಮಾರು ೨೫ ಜನ ಸಮಾನ ಮನಸ್ಕರನ್ನು ಆಮಂತ್ರಿಸಿ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗುವದು ಎಂದು ಮಾಹಿತಿ ನೀಡಿದರು.

 ಮಾಜಿ ಗ್ರಾ.ಪಂ.ಸದಸ್ಯ ಕೊಲ್ಲೀರ ಗೋಪಿ ಚಿಣ್ಣಪ್ಪ ಮಾತನಾಡಿ, ಗೋಣಿಕೊಪ್ಪಲು ನಗರದ ತೋಡುಗಳು, ಹೊಳೆಗಳು ೧೯೯೦ರ ನಂತರ ಒತ್ತುವರಿಗೊಂಡಿವೆ. ರಾಜಕೀಯ ರಹಿತವಾಗಿ ನೂತನ ವೇದಿಕೆ ಹೋರಾಟದ ರೂಪು ರೇಷೆ ಹಾಕಿಕೊಳ್ಳಬೇಕಾಗಿದೆ. ಕೆಲವೇ ಕೆಲವು ಒತ್ತುವರಿದಾರರು, ಭೂ ಗಳ್ಳರಿಂದ ಇಂದು ಗೋಣಿಕೊಪ್ಪಲಿನ ಜಲಮೂಲಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಅತಿಕೃಮಣ ತೆರವಿಗೆ ಹೋರಾಟ ಮಾಡಬೇಕಾಗಿದೆ. ಇಲ್ಲಿನ ಬಡಾವಣೆಗಳು ಕಾನೂನು ರೀತಿಯಲ್ಲಿ ನಿರ್ಮಾಣಗೊಂಡಿಲ್ಲ. ಡೆವಲಪರ್‌ಗಳು ನಿರ್ಧಿಷ್ಟ ಜಾಗವನ್ನು ಉದ್ಯಾನವನ, ಅಂಗನವಾಡಿ ಇತ್ಯಾದಿ ಮೂಲಭೂತ ಸೌಕರ್ಯಕ್ಕೆ ಸ್ಥಳೀಯ ಸಂಸ್ಥೆಗೆ ಬಿಟ್ಟುಕೊಡಬೇಕಿದ್ದರೂ ಇಲ್ಲಿ ಪ್ರಭಾವ ಬೀರಿ ಭೂ ಪರಿವರ್ತನೆಯಲ್ಲಿಯೂ ಕಾನೂನು ಉಲ್ಲಂಘಿಸಲಾಗಿದೆ.ಕೆಲವೇ ಕೆಲವು ವ್ಯಕ್ತಿಗಳು ಕೀರೆಹೊಳೆ,ತೋಡು, ಕೈತೋಡು ಇತ್ಯಾದಿ ಜಾಗವನ್ನು ಅತಿಕೃಮಣ ಮಾಡಿಕೊಂಡು ಕಾವೇರಿಗೆ ಸೇರುವ ಜಲಮೂಲಕ್ಕೆ ಅಡ್ಡಿ ಉಂಟುಮಾಡಿದ್ದಾರೆ.ಕಳೆದ ಮಳೆಗಾಲದಲ್ಲಿ ವಾಹನಗಳು ಓಡಾಡಬೇಕಾದ ಜಾಗದಲ್ಲಿ ದೋಣಿಗಳು ನಗರದಲ್ಲಿ ಓಡಾಡಿದೆ.  ‘ಬಫರ್‌ಝೋನ್’ ಜಾಗ ಅತಿಕೃಮಣಗೊಂಡಲ್ಲಿ ತೆರವು ಕಾರ್ಯ ಅನಿವಾರ್ಯ ಎಂದು ಹೇಳಿದರು.

ಇದೇ ಸಂದರ್ಭ ಕೆ.ಬಿ.ಗಿರೀಶ್‌ಗಣಪತಿ ಅವರು,ಈಗಾಗಲೇ ವೀರಾಜಪೇಟೆ ತಹಶೀಲ್ಧಾರ್ ಯೋಗಾನಂದ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಪರಿಸ್ಥಿತಿಯ ಗಂಭೀರತೆ ಕುರಿತು ಮನವರಿಕೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಇದೀಗ ಉತ್ತಮ ಅಧಿಕಾರಿಗಳು ಕರ್ತವ್ಯದಲ್ಲಿದ್ದು,ಸರ್ವೆ ಕಾರ್ಯ ಹಾಗೂ ಮಾರ್ಕಿಂಗ್ ಕಾರ್ಯಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಬೆಂಬಲ ನೀಡುವದು ಅಗತ್ಯವಾಗಿದೆ ಎಂದು ಹೇಳಿದರು.

ಸಮಾಜ ಸೇವಕಿ ಪಡಿಕ್ಕಲ್ ಕುಸುಮಾವತಿ ಚಂದ್ರಶೇಖರ್ ಅವರು ಮಾತನಾಡಿ, ಕಳೆದ ಮೂರು ತಿಂಗಳಿನಿಂದಲೂ ಕೈತೋಡು ಇತ್ಯಾದಿ ಒತ್ತುವರಿ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಗೆ ತಾವು ದೂರು ನೀಡಿದ ನಂತರ ಮಳೆಗಾಲದ ಮುನ್ನವೇ ಸರ್ವೆ ಕಾರ್ಯನಡೆಸಲು ತಹಶೀಲ್ಧಾರ್ ಯೋಗಾನಂದ ಅವರಿಗೆ ಆದೇಶ ನೀಡಲಾಗಿದೆ. ಇದೀಗ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಮಾರ್ಕಿಂಗ್ ಕಾರ್ಯ ಬಾಕಿ ಇದೆ. ಮಾರ್ಕಿಂಗ್ ನಂತರ ಅಕ್ರಮ ಒತ್ತುವರಿದಾರರು ತೋಡು, ಹೊಳೆಯ ಜಾಗವನ್ನು ತೆರವು ಮಾಡಿಕೊಡಬೇಕಾಗುತ್ತದೆ. ಇಲ್ಲವೆ ನಮ್ಮ ವೇದಿಕೆಯಿಂದ ಹೋರಾಟ ತೀವೃಗೊಳಿಸಲಾಗುವದು ಎಂದು ಹೇಳಿದರು.

ಗೋಣಿಕೊಪ್ಪಲು ನಿವಾಸಿ ಜೆ.ಸೋಮಣ್ಣ ಅವರು ಮಾತನಾಡಿ, ಸಾಮಾಜಿಕ ಕಳಕಳಿ ಇದ್ದವರಿಗೆ ಹೋರಾಟ ಮಾಡಲು ಸಾಧ್ಯ. ಒತ್ತುವರಿ ಆದ ಜಾಗಗಳು ಸರ್ಕಾರಿ ಹಾಗೂ ಸಾರ್ವಜನಿಕ ಸ್ವತ್ತುಗಳಾಗಿವೆ. ಇಂತಹಾ ಪ್ರಾಕೃತಿಕ ಸಂಪನ್ಮೂಲ ಎಲ್ಲರದ್ದು. ಅತಿಕೃಮಣ ಸಲ್ಲದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿಯೂ ಅಕ್ರಮ ಒತ್ತುವರಿ ತೆರವಿಗೆ ಸೂಕ್ತ ನಿರ್ಣಯ ಆಗಬೇಕಾಗಿದೆ. ಪ್ರಭಾವಿಗಳ ಪ್ರಭಾವಕ್ಕೆ ಸರ್ಕಾರಿ ಅಧಿಕಾರಿಗಳು ಒಳಗಾಗದಂತೆ ವೇದಿಕೆ ಮೂಲಕ ಅಗತ್ಯ ಬೆಂಬಲ ನೀಡಬೇಕಾಗಿದೆ ಎಂದು ಹೇಳಿದರು. ಪ್ರಗತಿ ಪರ ನಾಗರಿಕ ವೇದಿಕೆ ಮೂಲಕ ಹೊಳೆ-ತೋಡು ಒತ್ತುವರಿ ತೆರವಿಗೆ ಬೆಂಬಲ ನೀಡಲಾಗುವದು ಎಂದು ಎನ್.ಕೆ.ನಾರಾಯಣ ಸ್ವಾಮಿ ಹೇಳಿದರು. ಪಿ.ಪೂವಯ್ಯ, ಹೆಚ್.ಎನ್.ಮಂಜುಳಾ, ರಾಜಕುಮಾರ್ ಉಪಸ್ಥಿತರಿದ್ದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,