Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ಕೊರೋನಾ ಮರೆಯಲು ಭಾವಗೀತಾ ಸಪ್ತಾಹ"ಕ್ಕೆ ಚಾಲನೆ

ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ಕೊರೋನಾ ಮರೆಯಲು ಭಾವಗೀತಾ ಸಪ್ತಾಹ"ಕ್ಕೆ ಚಾಲನೆ 

( ಗೂಗಲ್ ಮೀಟ್ ಮೂಲಕ ಭಾವಗೀತೆ ಗಾಯನ )

ಭಾವಗೀತೆಗಳು ಮನಸ್ಸಿನ ಭಾವನೆಗಳನ್ನು ತಟ್ಟಿ ಶೋಧಿಸುತ್ತವೆ : ಡಾ ಕವಿತಾ ರೈ 

ಮಡಿಕೇರಿ ಜೂ 13 : ಕೊಡಗು ಜಿಲ್ಲಾ ‌ಲೇಖಕರ ಮತ್ತು ಕಲಾವಿದರ ಬಳಗದಿಂದ  ವತಿಯಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣ‌ಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್  ಮೂಲಕ ಒಂದು ವಾರ ಕಾಲ ಏರ್ಪಡಿಸಿರುವ "ಕೊರೋನಾ ಮರೆಯಲು ಭಾವಗೀತಾ ಸಪ್ತಾಹ"ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಭಾನುವಾರ ( ಜೂ.13 ರಂದು) ಸಂಜೆ ಚಾಲನೆ ನೀಡಲಾಯಿತು.

ಭಾವಗೀತೆಯ ಕುರಿತು ಜಿಲ್ಲೆಯ ಹಿರಿಯ ಸಾಹಿತಿಯೂ ಆದ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಕವಿತಾ ರೈ ಮಾತನಾಡಿ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಲೇಖಕರ ಬಳಗವು ಜಿಲ್ಲೆಯ ಗಾಯಕರಿಗೆ ನಿರಂತರವಾಗಿ ಭಾವಗೀತೆ , ಜಾನಪದ ಗೀತೆ ಗಾಯನ ಸೇರಿದಂತೆ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕೊರೊನಾದಿಂದ ಮುಕ್ತರಾಗಲು ಇದು ಮಾನಸಿಕವಾಗಿ ಮನೋಸ್ಥೈರ್ಯ ಒದಗಿಸುತ್ತಿದೆ. ಬಳಗದ ಇಂತಹ ಗಾಯನ ಸ್ಪಂದನ ಕಾರ್ಯಕ್ರಮವು ಶ್ಲಾಘನೀಯವಾದುದು ಎಂದರು.

ನಮ್ಮ ಮನಸ್ಸಿನ ಭಾವನೆಗಳು ಮೂರ್ತರೂಪ ತಾಳಿ ರಾಗ, ಲಯಬದ್ಧವಾಗಿ ಹೊರಹೊಮ್ಮಿದಾಗ ಭಾವಗೀತೆಯಾಗಿ ಸೃಷ್ಟಿಯಾಗುತ್ತದೆ ಎಂದರು. ಇಂದು ನಾವು ಆಧುನಿಕ ಜಗತ್ತಿನಲ್ಲಿ  ಮೈಕ್ರೋ ಮತ್ತು ನ್ಯಾನೋ ತಂತ್ರಜ್ಞಾನಕ್ಕೆ ಒಳಗಾಗುತ್ತಿದ್ದರೂ ನಮ್ಮ ಜೀವನದ ಜಂಜಾಟ ಮತ್ತು ಬದುಕು ಕುರಿತಂತೆ ಭಾವಗೀತೆಗಳ ವ್ಯಕ್ತಪಡಿಸುವ ಭಾವನೆಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ ಎಂದರು.

ಆರಂಭದಲ್ಲಿ ಕವಿಗಳು ತಮ್ಮ ಭಾವನೆಗಳನ್ನು ಶೋಕಗೀತೆಯಾಗಿ ರಚಿಸಿ ನಂತರದಲ್ಲಿ ಭಾವಗೀತೆಗಳು ಕ್ರಮೇಣ  ತನ್ನ ವ್ಯಾಪ್ತಿಯು ಎಲ್ಲಾ ಸ್ತರಗಳಲ್ಲಿ ವಿಸ್ತಾರವಾಗಿ ಬೆಳೆದ ಬಗ್ಗೆ ಡಾ ಕವಿತಾ ರೈ ವಿವರಿಸಿದರು. ನಮ್ಮ ಕಾವ್ಯ ರಚನಾಕಾರರು ಭಾವಗೀತೆಗಳ ರಚನೆ ಮೂಲಕ ನಮ್ಮ ಸಮಾಜ, ನಿಸರ್ಗ ಹಾಗೂ ಬದುಕಿನ ಕುರಿತು ಮನಸ್ಸಿನ ಭಾವನೆಗಳನ್ನು ತಟ್ಟಿ ಶೋಧಿಸುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ನಿಸಾರ್ ಅಹ್ಮದ್ ಮೊದಲಾದ ಕವಿಗಳು ನಮ್ಮ ಸಮಾಜದ ವ್ಯವಸ್ಥೆ ಹಾಗೂ ಬದುಕಿನ ಕುರಿತು ರಚಿಸಿರುವ ಭಾವಗೀತೆಗಳು ಸಮಾಜಕ್ಕೆ ಪೂರಕವಾಗಿದೆ ಎಂದರು.

ಭಾವಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲೆಯ ಹಿರಿಯ ಗಾಯಕ, ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಕೊರೊನಾ ಸಂಕಷ್ಟದ ಇಂತಹ ಸನ್ನಿವೇಶದಲ್ಲಿ ಲೇಖಕರ ಬಳಗವು ಜನರ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಗೂಗಲ್ ಮೀಟ್ ಮೂಲಕ  ಭಾವಗೀತೆ ಗಾಯನ ಕಾರ್ಯಕ್ರಮ ಸಂಘಟಿಸಿರುವುದು ಉತ್ತಮವಾದ ಕಾರ್ಯ. ಜನರ ಭಾವನೆಗಳಿಂದ ರೂಪುಗೊಂಡ ಭಾವಗೀತೆಯು ಮನಸ್ಸಿಗೆ ಮುದ ನೀಡುತ್ತದೆ ಎಂದರು. ಕುವೆಂಪು ರಚಿತ "ಆನಂದಮಯ ಈ ಜಗ ಹೃದಯ" ಎಂಬ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಜಿ.ಚಿದ್ವಿಲಾಸ್ ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕರ ಬಳಗದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕೊರೊನಾದ ಭೀಕರ ಸೋಂಕಿನ ಸಂದಿಗ್ದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕರೋನಾ ಮರೆಯುವ ಮೂಲಕ ಕರೋನಾ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಆರಂಭಿಸಿರುವ ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಅಭೂತಪೂರ್ವವಾಗಿ 130 ಮಂದಿ ಗಾಯಕರು ನೋಂದಾಯಿಸಿಕೊಂಡಿದ್ದು, ಒಂದು ವಾರ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ 18 ಮಂದಿ ಗಾಯಕರು ಭಾವಗೀತೆ ಹಾಡುತ್ತಿದ್ದಾರೆ ಎಂದರು.

ಬಳಗದ  ಸಲಹೆಗಾರ ಟಿ.ಪಿ.ರಮೇಶ್, ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫ್ರಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ.ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ,ಬಿ.ಎನ್.ಮನುಶೆಣೈ, ಲಿಖಾಯತ್ ಆಲಿ, ಲೋಕನಾಥ್ ಅಮೆಚೂರ್, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಗಾಯಕರಾದ ಡಾ ಜೆ.ಸೋಮಣ್ಣ, ಕೆ.ಎ.ಶ್ವೇತ ಇತರರು ಇದ್ದರು. ಬಳಗದ ಕಾರ್ಯದರ್ಶಿ ವಿಲ್ಫರ್ಡ ಕ್ರಾಸ್ತಾ  ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಪುದಿನೆರವನ ರೇವತಿ ಕಾರ್ಯಕ್ರಮ ನಿರ್ವಹಿಸಿದರು.

ಮೊದಲ ದಿನ 17 ಮಂದಿ ಗಾಯಕರು ಸುಶ್ರಾವ್ಯವಾಗಿ ಭಾವಗೀತೆ ಹಾಡುವ ಮೂಲಕ ಮೆಚ್ಚುಗೆ ಪಡೆದರು. ತಾ.13 ರಂದು ಆರಂಭಗೊಂಡ ಈ ಗಾಯನ ಕಾರ್ಯಕ್ರಮವು ತಾ.19 ರ ವರೆಗೆ ಒಂದು ವಾರ ಕಾಲ ನಡೆಯಲಿದೆ.


ಸುದ್ದಿ-ಚಿತ್ರ: ✍️.... ಟಿ.ಜಿ.ಪ್ರೇಮಕುಮಾರ್ 


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,