Header Ads Widget

Responsive Advertisement

ಕೊಡಗು: ಭತ್ತ ಸಸಿಮಡಿ ಕಾರ್ಯಕ್ಕೆ ಕೃಷಿಕರ ಸಕಲ ಸಿದ್ಧತೆ

ಭತ್ತ ಸಸಿಮಡಿ ಕಾರ್ಯಕ್ಕೆ ಕೃಷಿಕರ ಸಕಲ ಸಿದ್ಧತೆ  

ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಾಂಗಾಮಿಗೆ ಅಗತ್ಯವಾಗಿ ಬೇಕಿರುವ ಯುರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಮತ್ತು ಎಸ್‍ಎಸ್‍ಪಿ ಸೇರಿ ಒಟ್ಟು 19,985 ಟನ್ ರಸಗೊಬ್ಬರ ದಾಸ್ತಾನು ಇದೆ; ಕೃಷಿ ಇಲಾಖೆಯ ಉಪ ನಿರ್ದೇಶಕರು


ಮಡಿಕೇರಿ ಜೂ.14: ಜಿಲ್ಲೆಯಲ್ಲಿ ‘ಮುಂಗಾರು’ ಆರಂಭವಾಗಿದ್ದು, ಕಳೆದ ಮೂರು ದಿನಗಳಿಂದ ಬಿಡುವಿಲ್ಲದೆ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿದ್ದು, ಸದ್ಯದಲ್ಲಿಯೇ ಭತ್ತ ಒಟ್ಟಲು ಪಾತಿ(ಸಸಿಮಡಿ) ಮಾಡುವ ಕಾರ್ಯಕ್ಕೆ ಕೃಷಿಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.   

ಜಿಲ್ಲೆಯಲ್ಲಿ ಈ ಬಾರಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಇದ್ದು, ಉತ್ತಮ ಮಳೆ ಮುಂದುವರಿದಲ್ಲಿ ಶೀಘ್ರ ಭತ್ತ ಸಸಿಮಡಿ ಕಾರ್ಯ ಪ್ರಾರಂಭವಾಗಲಿದೆ. ಭತ್ತ ಬಿತ್ತನೆ ಬೀಜವನ್ನು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲ್ಲಿ ದಾಸ್ತಾನು ಮಾಡಲಾಗಿದ್ದು 1 ಕೆ.ಜಿ.ಗೆ 8 ರೂ.ಗಳ ಸಹಾಯಧನದಡಿ ಪಡೆಯಬಹುದಾಗಿದೆ.     

ರೈತರು ಸಸಿಮಡಿ ಮಾಡುವ ಸಂದರ್ಭದಲ್ಲಿ ಬಿತ್ತನೆಗೆ ಮೊದಲು ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಉಪಯೋಗಿಸುವುದು ಸೂಕ್ತವಾಗಿದೆ. ಪ್ರತಿ ಕೆ.ಜಿ.ಭತ್ತ ಬಿತ್ತನೆ ಬೀಜಕ್ಕೆ 4 ಗ್ರಾಂ. ಬೇವಿಸ್ಟಿನ್(ಕಾರ್ಬನ್‍ಡೈಜಿಂ) ಶಿಲೀಂದ್ರನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವುದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ನಂತರ ಮೊಳಕೆಗೆ ಇಡುವ ಮೊದಲು ಬೀಜೋಪಚಾರ ಮಾಡುವುದು ಒಳಿತಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬನಾ ಎಂ.ಷೇಕ್ ಅವರು ಮಾಹಿತಿ ನೀಡಿದ್ದಾರೆ. 

ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತೀ ಒಂದು ಕೆ.ಜಿ.ಬಿತ್ತನೆ ಬೀಜಕ್ಕೆ 4 ಗ್ರಾಂ.ನಂತೆ ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು ಮೊಳಕೆ ಬಂದ ನಂತರ ಸಸಿಮಡಿಯಲ್ಲಿ ಬಿತ್ತನೆ ಮಾಡುವುದು. ಹೀಗೆ ಮಾಡುವುದರಿಂದ ಬೀಜದಿಂದ ಬರುವ ಬೆಂಕಿ ರೋಗವನ್ನು ತಡೆಯಬಹುದಾಗಿದೆ. 

ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರ, ಬಿ.ಆರ್.2655, ತನು ತಳಿ ಭತ್ತಗಳನ್ನು ಜೂನ್ 15 ರಿಂದ 25 ರ ಒಳಗೆ ಬಿತ್ತನೆ ಮಾಡುವುದು. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್ 4 ನೇ ವಾರದಲ್ಲಿ ಬಿತ್ತನೆ ಮಾಡುವುದು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದಲ್ಲಿ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ.  

ಜಿಲ್ಲೆಯ ಎರಡನೇ ಪ್ರಮುಖ ಬೆಳೆಯಾದ ಮುಸುಕಿನ ಜೋಳ 4 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ ಈಗಾಗಲೇ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿದ್ದು, ಉಳಿದಂತೆ ಬಿತ್ತನೆ ಕಾರ್ಯ ಮುಂದುವರೆದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಪ್ರತಿ ಕೆ.ಜಿ.ಗೆ 20 ರೂ.ಗಳ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.     

ಜಿಲ್ಲೆಯಲ್ಲಿ ಮುಸುಕಿನ ಜೋಳ ಸಂಬಂಧಿಸಿದಂತೆ ಗಂಗಾ ಕಾವೇರಿ 3164, ಸಿಪಿ 818, ಕಾವೇರಿ 25ಕೆ55 ತಳಿ ಮುಸುಕಿನ ಜೋಳವನ್ನು ಬಿತ್ತನೆ ಮಾಡಲಾಗುತ್ತದೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು ಅವರು ಮಾಹಿತಿ ನೀಡಿದ್ದಾರೆ.  

ಕಳೆದ ಬಾರಿ 30,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿತ್ತು. ಇದರಲ್ಲಿ 23,737  ಹೆಕ್ಟೇರ್ ಪ್ರದೇಶದಲ್ಲಿ, ಹಾಗೆಯೇ ಮುಸುಕಿನ ಜೋಳ ಬಿತ್ತನೆ ಪ್ರದೇಶದ ವಿಸ್ತೀರ್ಣ ಕಳೆದ ಬಾರಿ 4 ಸಾವಿರ ಹೆಕ್ಟೇರ್ ಪ್ರದೇಶ ಗುರಿಯಲ್ಲಿ 3050 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿತ್ತು ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.  

ಹಾಗೆಯೇ ಜಿಲ್ಲೆಯಲ್ಲಿ ಮುಂಗಾರು ಹಾಂಗಾಮಿಗೆ ಅಗತ್ಯವಾಗಿ ಬೇಕಿರುವ ಯುರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಮತ್ತು ಎಸ್‍ಎಸ್‍ಪಿ ಸೇರಿ ಒಟ್ಟು 19,985 ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,