Ad Code

Responsive Advertisement

ಕೊಡಗು ಜಿಲ್ಲೆಯಲ್ಲಿ ಕನ್ನಡಕ್ಕಾಗಿ ದುಡಿದವರಲ್ಲಿ ಇವರು ಕೂಡ ಪ್ರಮುಖರು

ಕೊಡಗು ಜಿಲ್ಲೆಯಲ್ಲಿ ಕನ್ನಡಕ್ಕಾಗಿ ದುಡಿದವರಲ್ಲಿ ಇವರು ಕೂಡ ಪ್ರಮುಖರು.

( ದಿವಂಗತ. ಡಿ.ಜೆ. ಪದ್ಮನಾಭ )

ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ|| ಆರ್ ಗುಂಡೂರಾವ್‌ರವರ ಹಸ್ತದಿಂದ ವಿರಾಜಪೇಟೆ ತಾಲ್ಲೂಕಿನ "ಕರ್ನಾಟಕ ಸಂಘದ ಕಟ್ಟಡ" ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದ ಡಿ.ಜೆ.ಪದ್ಮನಾಭರವರ ಮುಖದಲ್ಲಿ ಅದುವರೆಗೆ ತಾವು ಪಟ್ಟ ಕಷ್ಟಗಳೆಲ್ಲ ಕರಗಿ ನೀರಾಗಿ ಕಿರುನಗೆಯೊಂದು ಮೂಡಿಬಂತು. ಹಲವು ಸಂಘ ಸಂಸ್ಥೆಗಳ ನೆರವಿನೊಂದಿಗೆ ಯುವಶಕ್ತಿಯಂತಿದ್ದ ಪದ್ಮನಾಭ ಮತ್ತು ಗೆಳೆಯರ ಗುಂಪು 1962 ರಲ್ಲಿ ಕರ್ನಾಟಕ ಸಂಘ ಸ್ಥಾಪಿಸುವ ಜೊತೆಗೆ ಸಂಘಕ್ಕೆ ಸ್ವಂತ ಕಟ್ಟಡವನ್ನು ಹೊಂದಬೇಕೆಂಬ ಮಹದಾಸೆಯೊಂದಿಗೆ ರಂಗಕ್ಕಿಳಿದು ದಿನಾಂಕ 15/2/1972ರಂದು  ದಿ|| ಮಾಲೂರು ಸೊಣ್ಣಪ್ಪ ದಿ|| ಬೀchi ಯವರು, ಭಾರತದ ಪ್ರಪ್ರಥಮ ದಂಡನಾಯಕರಾಗಿದ್ದ ಕೊಡಗಿನ ಕಲಿ ದಿ|| ಫೀಲ್ಡ್ ಮಾರ್ಷಲ್ ಕೆ.ಯಂ ಕಾರ್ಯಪ್ಪನವರು ಹಾಗೂ ಇನ್ನೂ ಅನೇಕ ಹಿರಿಯ ಕಿರಿಯರನ್ನು ಸಾಕ್ಷಿಯಾಗಿರಿಸಿ ಉದ್ಘಾಟಿಸಿದರು. ಕೇವಲ ಕಟ್ಟಡವಾದರೆ ಸಾಲದೆಂದು ಅದೇ ಕಟ್ಟಡದಲ್ಲಿ ಪುಸ್ತಕ ಭಂಡಾರ, ವಾಚನಾಲಯ, ವಯಸ್ಕರ ಶಿಕ್ಷಣ ಶಾಲೆ, ಕನ್ನಡ ಬಾರದ ಇತರ ಭಾಷಿಕರಿಗೆ ಕನ್ನಡ ಕಲಿಸುವ ತರಗತಿಗಳು, ಸಂಗೀತ ನೃತ್ಯ ತರಬೇತಿ ತರಗತಿಗಳು, ಕರ್ನಾಟಕ ಯುವಕ ಸಂಘ ಮತ್ತು ಕಿಶೋರಿ ಸಂಘ ಇತ್ಯಾದಿಗಳನ್ನು ಸ್ಥಾಪಿಸಿದರು. 

1978 ರಲ್ಲಿ ಕರ್ನಾಟಕ ಕೊಡವ ಭಾಷಾಬಿವೃದ್ಧಿ ಪ್ರಥಮ ಕೊಡವ ಭಾಷಾ ಸಮ್ಮೇಳನವನ್ನು ವಿರಾಜಪೇಟೆಯಲ್ಲಿ ಸಂಘಟಿಸುವ ಮುನ್ನ 1970ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಪದ್ಮನಾಭರವರು ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸುಮಾರು 22 ವರ್ಷ ಎಂದರೆ 1970ರಿಂದ 1992ರವರೆಗೆ ಸೇವೆ ಸಲ್ಲಿಸಿದ್ದಾರೆ.

1970 ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿರಾಜಪೇಟೆಯಲ್ಲಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮುಂದುವರೆದು 1976 ರಲ್ಲಿ ಕೊಡಗು ಜಿಲ್ಲಾ ಜಾನಪದ ಮೇಳ ಹಾಗೂ 1980 ರಲ್ಲಿ ಕರ್ನಾಟಕ ಏಕೀಕರಣ ರಂಗ ರಜತ ಮಹೋತ್ಸವ ಸಮಾರಂಭ ಏರ್ಪಡಿಸಿದ್ದ ಇವರು 1981 ರ ನವೆಂಬರ್ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಡಿಕೇರಿಯಲ್ಲಿ ಅಖಿಲ ಭಾರತ 54ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಶ್ರಮಿಸಿದ್ದಾರೆ. 1985 ರಲ್ಲಿ ವಿರಾಜಪೇಟೆಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವ 1986 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವದ ಅಂಗವಾಗಿ ಕೊಡಗು ಜಿಲ್ಲೆಯ70 ಆಯ್ದ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಾರಣರಾದರು. 

ಕೊಡಗು ಜಿಲ್ಲೆಯ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ, ವೀರರಾಜೇಂದ್ರ ಒಡೆಯರ ಸ್ಮಾರಕ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ,1976 ರಿಂದ 78 ರವರೆಗೆ ವಿರಾಜಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ1966 ರಿಂದ 78 ರವರೆಗೆ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಗೌರವ ಸುದ್ಧಿಗಾರರಾಗಿ 1990 ರಿಂದ 1995 ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಕನ್ನಡ ಅನುಷ್ಠಾನ ಸಮಿತಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಅತಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ

25/11/1939  ರಂದು ವಿರಾಜಪೇಟೆ ಪಟ್ಟಣದ ದಖ್ಖನಿ ಮೊಹಲ್ಲದ ಎನ್ ಜವರಯ್ಯ ಮತ್ತು ಶ್ರೀಮತಿ ಕೆಂಪಮ್ಮನವರ ಹಿರಿಯ ಪುತ್ರನಾಗಿ ಜನಿಸಿದ ಇವರು ವಿರಾಜಪೇಟೆಯ ಸೆಂಟ್ ಆನ್ಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ನಂತರ ಮೈಸೂರಿನ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೆಲಕಾಲ ವಿದ್ಯಾರ್ಜನೆ ಕೈಗೊಂಡ ಬಳಿಕ ಕಾರಣಾಂತರದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಾರ್ವಜನಿಕ ಸೇವೆಗೆ ತುಡಿಯುತಿದ್ದ ಮನಸ್ಸಿಗೆ ಭಾಷೆಯ ಬಂಧನವನ್ನಾಗಿಸದೆ ಸಕಲ ಭಾಷಿಕರೊಂದಿಗೆ ಒಂದಾಗಿ ಕನ್ನಡ ಕಟ್ಟುವ ಕೆಲಸದ ಜೊತೆಗೆ ಪ್ರಾಂತೀಯ ಭಾಷೆಯಾಗಿದ್ದ ಕೊಡವ ಭಾಷೆಯ ಏಳಿಗೆಗೂ ಕೂಡ ತಮ್ಮ ಸೇವೆಯನ್ನು ಸಲ್ಲಿಸಿ ಕಾವೇರಿ ಮಾತೆಯ ಋಣವನ್ನು ತೀರಿಸಿದ್ದಾರೆ. 

ಇವರು ಸ್ವತಃ ಸಾಹಿತಿಗಳಲ್ಲದಿದ್ದರೂ ಇವರನ್ನು ಅರಿಯದ ಮತ್ತು ಇವರು ಅರಿಯದ ಸಾಹಿತಿಗಳು ಅಂದಿನ ಕಾಲದಲ್ಲಿ ಇದ್ದಿರಲಾರರು ಅಷ್ಟೇ ಅಲ್ಲ ಇವರ ಕುರಿತು 1998 ರಲ್ಲಿ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಕೊಡಗು ಜಾನಪದ ಪರಿಷತ್ತು ವಿರಾಜಪೇಟೆ ಹೊರಡಿಸಿರುವ ಡಾ|| ಡಿ.ಬಿ. ರಾಮಚಂದ್ರಾಚಾರ್ ಸಂಪಾದಕರಾಗಿರುವ "ಕನ್ನಡಕ್ಕಾಗಿ ಕೈ ಎತ್ತು" ಎಂಬ ಪುಟ್ಟ ಕೃತಿಯಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ವಿ ವಿ ಗಿರಿಯವರಿಂದ ಹಿಡಿದು ನಾನಾ ಹಿರಿಯ ಕಿರಿಯ ಸಾಹಿತಿಗಳು ಪತ್ರಕರ್ತರು ಲೇಖಕರು ಇವರ ಸಾಧನೆಗಳ ಕುರಿತು ಬರೆದಿದ್ದಾರೆ. 

ಬೆಂಗಳೂರಿನ "ನೇತಾಜಿ ಸೇವಾಶ್ರಮ ಟ್ರಸ್ಟ್" ನ ಎಸ್ ಲಕ್ಕಣ್ಣರವರು ದಾನಿಗಳು ಸಂಪಾದಕರು ಆಗಿ"ಕೊಡಗಿನ ಪದ್ಮನಾಭ" ಎಂಬ ನೆನಪಿನ ಕಾಣಿಕೆ ಗ್ರಂಥದಲ್ಲಿಯೂ ಸಹ ಅವರ ಅನೇಕ ಸಹವರ್ತಿಗಳು ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಲುಪಿಸಿದ್ದಾರೆ. 1998 ರಲ್ಲಿ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕುವ ಮುನ್ನ ಹಲವಾರು ಸಂಘ ಸಂಸ್ಥೆಗಳು ಕರ್ನಾಟಕ ರಾಜ್ಯದ ಮೂಲೆಮೂಲೆಗಳಲ್ಲಿಯೂ ಸನ್ಮಾನಿಸಿ ಗೌರವಿಸಿದ್ದವು. 

ಸ್ವತಃ ಸಾಹಿತಿ ಅಲ್ಲದಿದ್ದರೂ ನಾಡಿನ ಎಲ್ಲ ಸಾಹಿತಿಗಳ ಒಡನಾಟ ಹೊಂದಿದ್ದು ಸ್ವತಃ ಕೃತಿಯನ್ನು ರಚಿಸದೇ ಇದ್ದರೂ ಇವರನ್ನು ಕುರಿತ ಕೃತಿ ರಚನೆಯಾಗಿದೆ. ಕವಿ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಹಿರಿಯರು ಇಂದು ನಮ್ಮ ಮನದಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಶಾಂತ ಪದ್ಮನಾಭ, ಮಗಳು ಜಯಂತಿ ಡಿ.ಪಿ ಇವರೊಂದಿಗೆ ವಿರಾಜಪೇಟೆಯಲ್ಲಿ ನೆಲೆಸಿರುವ ಮಗ ರಾಜೇಶ್ ಡಿ .ಪಿ. ಈಗ ಪಟ್ಟಣ ಪಂಚಾಯಿತಿ ಸದಸ್ಯರಾಗಿದ್ದಾರೆ. ಇಂತಹ ಹಿರಿಯರಿಂದ ನಿರ್ಮಾಣಗೊಂಡಿರುವ ಕರ್ನಾಟಕ ಸಂಘದ ಕಟ್ಟಡವನ್ನು ನಿರ್ನಾಮ ಮಾಡಿ ಕನ್ನಡದ ಯಾವುದೇ ಕಾರ್ಯಕ್ರಮಗಳಿಗೂ ಉಪಯೋಗಕ್ಕೆ ಬಾರದ ವಾಣಿಜ್ಯ ಮಳಿಗೆಗಳಾಗಿ ಪರಿವರ್ತಿಸಿರುವುದು ನಿಜಕ್ಕೂ ಕೊಡಗಿನ ಜನರ ದೌರ್ಭಾಗ್ಯವೆನಿಸಿದೆ. 

ಅಂದು ಕರ್ನಾಟಕ ಸಂಘ ಕಟ್ಟಡ ನಿರ್ಮಾಣದ ಉದ್ದೇಶ ಕನ್ನಡ ಹಾಗೂ ಕೊಡವ ಭಾಷೆಯ ಸಾಹಿತ್ಯಕ ಮತ್ತು ಸಾಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯ ಅಗತ್ಯತೆ ಹಾಗೂ ಯುವಕ ಸಂಘ, ಕಿಶೋರಿ ಸಂಘ, ಕನ್ನಡ ಹಾಗೂ ಕೊಡವ ಭಾಷೆಯೊಂದಿಗೆ ಕನ್ನಡ ಮತ್ತು ಕೊಡವ ಸಂಸ್ಕೃತಿಯ ಪ್ರತೀಕವಾದ ಸಾಹಿತ್ಯ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳಿಗೆ ಇಂಬು ನೀಡುವ ಉದ್ದೇಶವಾಗಿತ್ತು. ಅಂತಹ ಮಹಾನ್ ಉದ್ದೇಶವನ್ನು ನಿರ್ಲಕ್ಷಿಸಿ ನಿರ್ಮಿಸಿರುವ ಈಗಿನ ಕಟ್ಟಡದಲ್ಲಿ ಕನ್ನಡ ಅಥವಾ ಕೊಡವ ಭಾಷೆಯ ಕಾರ್ಯಕ್ರಮಗಳಿಗಾಗಿ ಕನ್ನಡ ಮತ್ತು ಕೊಡವ ಭಾಷೆಯ ಬೆಳವಣಿಗೆಗಾಗಿ ಒಂದಷ್ಟು ಸ್ಥಳವನ್ನು ಮೀಸಲಾಗಿರಿಸಿದರೆ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಕನ್ನಡ ಮತ್ತು ಕೊಡವ ಭಾಷೆಯನ್ನು ಪ್ರೀತಿಸಿ "ಕರ್ನಾಟಕ ಸಂಘ" ಕಟ್ಟಡವನ್ನು ನಿರ್ಮಿಸಲು ಶತಪ್ರಯತ್ನ ಪಟ್ಟು ಛಲಬಿಡದೆ ಸಾಧಿಸಿದ ದಿವಂಗತ ಡಿ.ಜೆ. ಪದ್ಮನಾಭರವರ ಆತ್ಮಕ್ಕೆ ಶಾಂತಿ ದೊರೆಯಬಹುದೇ.

✍️....ಲೇಖಕರು: ವೈಲೇಶ್ ಪಿ. ಎಸ್. ಕೊಡಗು.


( ವೈಲೇಶ್ ಪಿ. ಎಸ್. )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,