Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಷ್ಟ್ರಾಯ ಸ್ವಾಹ | ರಾಷ್ಟ್ರಾಯ ಇದಂ ನ ಮಮ|

ರಾಷ್ಟ್ರಾಯ ಸ್ವಾಹ | ರಾಷ್ಟ್ರಾಯ ಇದಂ ನ ಮಮ|

ಜೂನ್‌ - 5. ರಾಷ್ಟ್ರ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಗುರೂಜಿ ಎಂದು ಪ್ರಖ್ಯಾತರಾದ ಮಹಾನ್ ಚೇತನ “ಮಾಧವರಾವ್ ಸದಾಶಿವರಾವ್ ಗೋಲ್‌ವಲ್ಕರ್‌ರವರ ಪುಣ್ಯ ಸ್ಮರಣೆ ಇಂದು. ವಿಶೇಷ ಲೇಖನ 



“ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ, ಸಾವು ನಿಶ್ಚಿತ” ಇದು ಎಲ್ಲರಿಗೂ ತಿಳಿದ ವಿಷಯವೆ. ಕೆಲವರು ಬದುಕಿರುವಾಗಲೇ ಸತ್ತಂತಿರುತ್ತಾರೆ, ಇನ್ನು ಕೆಲವರು ನಮ್ಮನಗಲಿದರೂ ಬದುಕಿರುತ್ತಾರೆ. ಅಂತಹವರ ಗುಂಪಿಗೆ ಸೇರಿದವರು ಗುರೂಜಿ ಎಂದೇ ಜನಮಾನಸದಲ್ಲಿ ಪ್ರಖ್ಯಾತರಾದ ಆರ್.ಎಸ್.ಎಸ್‌ನ ದ್ವಿತೀಯ ಸರಸಂಘಚಾಲಕರಾದ ಎಂ.ಎಸ್.ಗೋಲವಲ್ಕರ್ ಇವರು ಹುಟ್ಟಿದೆ ದೇಶಸೇವೆಗಾಗಿ. ಇವರ ತಂದೆ-ತಾಯಿಗೆ ಹುಟ್ಟಿದ ಒಂಬತ್ತು ಜನ ಮಕ್ಕಳಲ್ಲಿ ಅಮೃತ ಮತ್ತು ಗುರೂಜಿಯವನ್ನು ಹೊರತು ಪಡಿಸಿ ಉಳಿದ ಎಲ್ಲರೂ ಶೈವಾವಸ್ಥೆಯಲ್ಲಿಯೇ ತೀರಿಕೊಂಡಿರುತ್ತಾರೆ. ಅಮೃತ ಎನ್ನುವ ಮಗ ಕೂಡಾ ಸ್ವಲ್ಪ ಸಮಯವಿದ್ದು ಅದೂ ತೀರಿಹೋಗುತ್ತದೆ, ಇದರಿಂದ ರೋಧಿಸುತ್ತಿದ್ದ ತಂದೆ ತಾಯಿಯರಿಗೆ ಮಾಧವರಾವ್ ಹೇಳುತ್ತಾನೆ “ಅಮ್ಮ ಅಳಬೇಡ ನಾನು ಸಾಯುವುದಿಲ್ಲ.” ಅಷ್ಟು ಚಿಕ್ಕ ವಯಸ್ಸಿನಲ್ಲಯೇ ತನ್ನ ತಾಯಿಗೆ ಧೈರ್ಯ ತುಂಬಿದ ಮಗುವೇ ಮಾಧವರಾವ್ ಸದಾಶಿವರಾವ್ ಗೋಲ್‌ವಲ್ಕರ್.

ಚಿಕ್ಕ ವಯಸಿನಲ್ಲಿಯೇ ಇವರಿಗೆ ಪುಸ್ತಕಗಳೆಂದರೆ ಅಪಾರ ಮೋಹ. ರಾಶಿಗಟ್ಟಲೇ ಪುಸ್ತಕಗಳನ್ನು ತಂದು ಓದಿ ಜ್ಞಾನ ಸಂಪಾದಿಸಿಕೊಂಡಿದ್ದರು. ಅದರಲ್ಲೂ ಸ್ವಾಮಿ ವಿವೇಕಾನಂದರು ರಾಮಕೃಷ್ಣಪರಮಹಂಸ ಪುಸ್ತಕಗಳೆಂದರೆ ಅಚ್ಚುಮೆಚ್ಚು. ತಂದೆ ತಾಯಿಗೆ ತಮ್ಮ ಮಗ ಡಾಕ್ಟರ್ ಆಗಬೇಕೆಂಬ ಆಸೆಯಿಂದ ಇಂಟರ್‌ಮೀಡಿಯೆಟ್ ಪಾಸಾದ ನಂತರ ಬಿ.ಎಸ್.ಸಿ ಓದಲು ಕಾಶಿಯ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಸೇರಿಸಿದರು. ಎಲ್ಲವನ್ನು ಕಲಿಯಬೇಕು ಸಕಲವನ್ನು ತಿಳಿಯಬೆಕೆಂಬ ಹಂಬಲದಿಂದ ಕಾಶಿಗೆ ಬಂದರೂ ಪುಸ್ತಕಗಳ ಮೇಲಿನ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಮುಗಿಬಿದ್ದು ವೇದಾಂತ, ಪುರಾಣ, ಸಂಸ್ಕೃತ, ವ್ಯಾಕರಣ, ಸಮಾಜಶಾಸ್ತç, ಅರ್ಥಶಾಸ್ತ್ರ, ಇತಿಹಾಸ, ಧರ್ಮ, ಸಂಸ್ಕೃತಿ, ವಿಜ್ಞಾನ, ಕಲೆಯ ಜೊತೆ ಜೊತೆಯಲ್ಲಿಯೇ ವ್ಯಾಯಾಮ, ಈಜು, ಯೋಗಾಭ್ಯಾಸ, ಕೊಳಲು, ಸಿತಾರದಂತಹ ವಿದ್ಯೆಗಳಲ್ಲಿಯೂ ಪಾರಂಗತರಾಗಿದ್ದರು. ಮೂರು ವರ್ಷದ ಬಿ.ಎಸ್.ಸಿ ಯ ನಂತರ ಕಾಶಿಯನ್ನು ಬಿಟ್ಟು ಬರಲಾಗದೆ ಮತ್ತೆರೆಡು ವರ್ಷ ಎಂ.ಎಸ್.ಸಿ.ಯ ನೆಪ ಮಾಡಿ ಅಲ್ಲಿಯೇ ಉಳಿದರು. ಅಲ್ಲಿನ ರಾಮಕೃಷ್ಣ ಮಠದ ಸಂಪರ್ಕದಲ್ಲಿ ತೊಡಗಿಸಿಕೊಂಡು ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದರು. ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತವಿದ್ದರೂ, ಸಂಸಾರದ ಗಡಿ ದಾಟಿ ಸನ್ಯಾಸ ಸ್ವೀಕರಿಸಿ ಹಿಮಾಲಯದಲ್ಲಿ ಏಕಾಂತನಾಗಿ ಕುಳಿತು ತಪಸ್ಸು ಮಾಡಿ ಪರಮಸುಖದ ಪರಮಾನಂದವನ್ನು ಪಡೆಯಬೇಂಬ ಹಂಬಲ ಉಂಟಾಗುತ್ತಿತು. ಆ ಕಾಲಘಟ್ಟದಲ್ಲಿ ದೇಶದ ವರ್ತಮಾನದಲ್ಲಾಗುತ್ತಿರುವ ಸ್ಥಿತಿ ಕಂಡಾಗ ಮನಸ್ಸು ಮುದುಡಿಹೋಗುತ್ತಿತ್ತು. “ನಾನು ಹಿಮಾಲಯಕ್ಕೆ ಹೋಗದಿದ್ದರೇನು ಮುಂದೆ ಹಿಮಾಲಯವೆ ನನ್ನ ಬಳಿಗೆ ಬರುತ್ತದೆ” ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು.

ಎಂ.ಎಸ್.ಸಿ ನಂತರ ತಮ್ಮ ಊರಾದ ನಾಗಪುರಕ್ಕೆ  ಆಗಮಿಸಿ, ಅಲ್ಲಿನ ರಾಮಕೃಷ್ಣ ಆಶ್ರಮಕೆ ಭೇಟಿ ನೀಡುತ್ತಿದ್ದರು. ಅಲ್ಲಿ ಸ್ವಾಮಿ ವಿವೇಕಾಂದರ ವಾಣಿಯು ಅವರ ಕಿವಿ, ಹೃದಯ, ಮೆದುಳುಗಳಿಗೆ ಅಪ್ಪಳಿಸುತ್ತಿತು. ೧೯೩೦ರಲ್ಲಿ ಕಾಶಿಯ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತçದ ಪ್ರಾಧ್ಯಾಪಕರಾಗಿ ನೇಮಕಗೊಂಡ ನಂತರ ಅಲ್ಲಿನ ವಿಧ್ಯಾರ್ಥಿಗಳಿಗೆ ಇತರ ವಿಷಯಗಳಾದ ಇಂಗ್ಲಿಷ್, ಗಣಿತ, ಅರ್ಥಶಾಸ್ತçಗಳಂತಹ ವಿಷಯನ್ನೂ ಹೇಳಿಕೊಡುತ್ತಿದ್ದರು. ಇದರಿಂದ ವಿಧ್ಯಾರ್ಥಿಗಳಿಗೆ ಅವರು ಪ್ರೀತಿಯ ಗುರೂಜಿಯೇ ಆಗಿಬಿಟ್ಟರು ಮುಂದೆ ಅವರನ್ನು ಗುರೂಜಿಯಾಗಿಯೇ ಕಂಡರೂ ಕೂಡ. ಮೂರು ವರ್ಷದ ನಂತರ ಗುರೂಜಿಯವರು ನಾಗಪುರಕ್ಕೆ ಹಿಂತಿರುಗಿ ವಕೀಲಿ ವೃತಿ ಕಲಿಯಲು ಆರಂಭಿಸಿದರು. 

ನಾಗಪುರದಲ್ಲಿ ಡಾ.ಹೆಡಗೇವಾರರ ಪರಿಚಯವಾಗಿ ಸಂಘದ ಕಡೆ ಒಲವು ಬೆಳೆಯತೊಡಗಿತು. ಡಾ.ಹೆಡಗೇವಾರರಿಗೂ ಗುರೂಜಿಯಲ್ಲಿರುವ ಅತ್ಯುತ್ಸಾಹ, ದೇಶದ ಬಗ್ಗೆ ಅವರಲ್ಲಿರುವ ಅಭಿಮಾನವನ್ನು ಕಂಡು ಅವರಿಗೆ ಸಂಘದ ಕೆಲವು ಕೆಲಸಗಳನ್ನು ವಹಿಸುತ್ತಿದ್ದರು. ಆ ಕೆಲಸಗಳನ್ನು ಗುರೂಜಿ ಬೇಗನೆ ಮುಗಿಸುತ್ತಿದ್ದರು. ಇದರಿಂದ ಸಂತೋಷಗೊಂಡ ಡಾ.ಹೆಡಗೇವಾರರು ಹೆಚ್ಚು ಹೆಚ್ಚು ಕೆಲಸಗಳನ್ನು ಕೊಡುತ್ತಿದ್ದರು. ಆ ಕೆಲಸ ಕಾರ್ಯಗಳನ್ನು ಬೇಗನೆ ಮಾಡಿ ಮುಗಿಸುತ್ತಿದ್ದ ಗುರೂಜಿಯನ್ನು ಬೊಂಬಾಯಿಗೆ ಸಂಘದ ಪ್ರಚಾರಕರಾಗಿ ಕಳುಹಿಸಿದರು. 

ವಕೀಲಿ ವೃತಿಯಲ್ಲಿ ಗುರೂಜಿ ಜಾಣನಾಗಿದ್ದರೂ, ಸುಳ್ಳುಸಾಕ್ಷಿಯ ಒದಗಿಸುವ ಕೆಲಸ ಸಾಧ್ಯವಾಗುತ್ತಿರಲಿಲ್ಲ. ಬುದ್ಧಿವಂತಿಕೆಯಿಂದ ನ್ಯಾಯಯುತವಾಗಿ ‘ಗೆಲ್ಲುವ’ ಅಪೀಲುಗಳನ್ನು ಮಾತ್ರ ವಹಿಸಿಕೊಳ್ಳತ್ತಿದ್ದರಂತೆ. ಅಷ್ಟರಾಗಲೇ ಮಗನಿಗೆ ಮದುವೆ ಮಾಡಿಸಬೇಕೆಂದು ತಂದೆ-ತಾಯಿ ಮಾತನಾಡಿಕೊಳ್ಳುತ್ತಿದ್ದಂತೆಯೇ ಮನೆಯಿಂದ ಒಂದು ದಿನ ನಾಪತ್ತೆಯಾಗಿಬಿಡುತ್ತಾರೆ. ಬಂಗಾಳದ ಮುರ್ಶೀದಾಬಾದ್ ಜಿಲ್ಲೆಯ ಸಾರಗಾಭಿಯಲ್ಲಿ ಸ್ವಾಮಿ ವಿವೇಕಾನಂದರ ಜೊತೆಗಾರರಾದ   ಸ್ವಾಮಿ ಅಖಂಡಾನಂದರಿಂದ ಗುರುವಿನ ಶಿಷ್ಯರಾಗಿ “ದೀಕ್ಷೆ” ಪಡೆದರು. ಅತ್ಯಂತ ಮೇಧಾವಿ, ಉಚ್ಛಶಿಕ್ಷಣ ಪಡೆದ, ಸುಸಂಸ್ಕೃತ ಶಿಷ್ಯನ ಮೇಲೆ ಗುರುವಿಗೆ ಅತ್ಯಂತ ಪ್ರೀತಿ, ಮಮತೆ. ಅವರಿಗೆ ತನ್ನ ಆಧ್ಯಾತ್ಮಿಕ ಸತ್ವವನ್ನು ಧಾರೆಯೆರೆದರು. ಜೊತೆಗೆ ಮಾಧವ ಸನ್ಯಾಸಿಯಾಗುವುದಿಲ್ಲ, ‘ಅವನಿಗೆ ಬೇರೆ ಕೆಲಸ ಕಾದಿದೆ’ ಎನ್ನುತ್ತಾ ಭಾರತ ಮಾತೆಯ ಸೇವೆಗೆ ಅಣಿಗೊಳಿಸುತ್ತಿದ್ದರು. ೧೯೩೭ರಲ್ಲಿ ಸ್ವಾಮಿ ಅಖಂಡಾನಂದರು ತೀರಿಕೊಂಡಾಗ ಗುರೂಜಿ ಪುನಃ ನಾಗಪುರಕ್ಕೆ ಆಗಮಿಸಿ ಡಾಕ್ಟರ್ ಹೆಡಗೇವಾರರೊಂದಿಗೆ ಸಂಘದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ೧೯೪೦ ಜೂನ್ ೩೧ರಂದು ಡಾಕ್ಟರ್‌ಜಿ ಸಂಘದ ಕಾರ್ಯವನ್ನು ಗುರೂಜಿಯವರಿಗೆ ವಹಿಸಿ ಇಹಲೋಕದಿಂದ ನಿರ್ಗಮಿಸಿದರು. ಡಾಕ್ಟರ್ ಹೆಡಗೇವಾರರ ವೈಕುಂಠ ಸಮಾರಂಭದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ೨ನೆಯ ಸರಸಂಘಚಾಲಕರಾಗಿ ಅಧಿಕಾರ ವಹಿಸಿಕೊಂಡರು.

  ನಂತರದ ದಿನಗಳಲ್ಲಿ ಗುರೂಜಿ ದೇಶದ ಉದ್ಧಗಲಕ್ಕೂ ಸಂಚರಿಸಿ ರ‍್ಯಾಲಿ, ಬೈಠಕ್, ಚರ್ಚೆ, ಸಭೆ-ಸಮಾರಂಭ, ಸಂಪರ್ಕ, ಶಿಬಿರ, ಪ್ರಶಿಕ್ಷಣಗಳಲ್ಲಿ ಭಾಗವಹಿಸಿ ಸಹಸ್ರಾರು ಯುವಕರಲ್ಲಿ ದೇಶಭಕ್ತಿ ಕಾರ್ಯ ಶಕ್ತಿಯನ್ನು ತುಂಬಿಸಿ ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿದರು. ಈ ಸಮಯದಲ್ಲಿ ಎದುರಾದ ಅಡ್ಡಿ ಆತಂಕಗಳು ಒಂದೇ ಎರಡೆ, ಜಿಲ್ಲಾಮಟ್ಟದಲ್ಲಿ ಶಾಖೆಗಳನ್ನು ಪರಿಚಯಿಸುವುದು, ಸಂಘದ ಸಂವಿಧಾನ, ಚುನಾವಣೆಗಳ ತಯಾರಿ, ಗೋರಕ್ಷಣಾ ಅಭಿಯಾನ, ವಿಧ್ಯಾರ್ಥಿಗಳ ಸಂಘಟನೆ, ಮೂಲನಿವಾಸಿಗಳು ವನವಾಸಿಗಳ ಯೋಗಕ್ಷೇಮ, ವಿಶ್ವಮಟ್ಟದಲ್ಲಿ ಸಂಘವನ್ನು ಪರಚಯಿಸುವುದು, ದೇಶದ ವಿಭಜನೆಯ ದುಷ್ಪರಿಣಾಮಗಳು , ದೇಶದ ಏಕೀಕರಣ ಇತ್ಯಾದಿ ಪುರುಸೊತ್ತಿಲ್ಲದ ಕೆಲಸ ಕಾರ್ಯಗಳು ಒಂದೆಡೆಯಾದರೆ, ಸಂಘವನ್ನು ಕಾಂಗ್ರೆಸ್ಸಿನೊಂದಿಗೆ ವಿಲೀನಗೊಲಿಸಬೇಕೆಂಬ ಕಾಂಗ್ರೇಸ್ಸಿಗರ ಕೋರಿಕೆಯನ್ನು ಕಡೆಂಗಣಿಸಿದರ ಫಲವಾಗಿಯೂ, ಸಂಘದ ಬೆಳವಣಿಗೆಯನ್ನು ಸಹಿಸದೆ ಬ್ರಿಟೀಷರು ಮತ್ತು ಕಾಂಗ್ರೆಸಿಗರು ಒಂದಲ್ಲಾ ಒಂದು ರೀತಿಯ ಕಿರುಕುಳಗಳನ್ನು ನೀಡುತ್ತಿದ್ದರು. ಅಷ್ಟರಾಗಲೆ ಗಾಂಧೀಜಿಯನ್ನು ಹತ್ಯೆಗೈದ ಅಪವಾದವನ್ನು ಸಂಘದ ಮೇಲೆ ಹೊರಿಸಿ ಸಂಘದ ಮೇಲೆ ನಿಷೇದ ಹೇರಿದರು. ಹತ್ಯೆಯ ಆರೋಪದಲ್ಲಿ  ಗುರೂಜಿ  ಮತ್ತು ಸ್ವಯಂಸೇವಕರನ್ನು ಬಂಧಿಸಲಾಯಿತು. ಅದಾಗಲೆ ನಾಗರಿಕರು ಎಚ್ಚೆತ್ತುಕೊಂಡು ಗುರೂಜಿ ಮತ್ತು ಸೇವಕರನ್ನು ಬಿಡುಗಡೆಗೊಳಿಸಬೇಕೆಂದು ಅವರ ಮೇಲೆ ಹೇರಿದ ನಿಷೇಧವನ್ನು ಹಿಂಪಡೆಯಬೇಕೆಂದು ಅಲ್ಲಲಿ ಜಾತ, ಮೆರವಣಿಗೆಯನ್ನು ಪ್ರಾರಂಭಿಸಿದರು. ಆಗ ಕೆಲವು ಅಗ್ರಗಣ್ಯ ವ್ಯಕ್ತಿಗಳು ಸರ್ಕಾರದೊಂದಿಗೆ ಸಂಧಾನಕ್ಕೆ ಮುಂದಾದರು. ಜೈಲಿನಲ್ಲಿ ಗುರೂಜಿಗೆ ಸಾಮಾನ್ಯ ಸೌಲಭ್ಯಗಳು ದೊರೆಯದೆ ಆರೋಗ್ಯ ಹದಗೆಟ್ಟು ಕುಸಿದು ಹೋದರೂ, ಸರ್ಕಾರದೆದುರೂ ತಲೆಬಾಗಲಿಲ್ಲಿ “ಸತ್ಯವು ಎಂದೆಂದಿಗೂ ಜಯಿಸುವುದು” ಎಂಬ ಧೃಡ ವಿಶ್ವಾಸದಿಂದ ಮುನ್ನಡೆದರು ಒಂದೂವರೆ ವರ್ಷದ ನಂತರ ಸರ್ಕಾರ ಸಂಘದ ಮೇಲಿನ ನಿಷೇದ ತೆಗೆದು ಹಾಕಿದರೂ ಕಾಂಗ್ರೇಸಿಗರೊಳಗೆ ಸಂಘದ ಮೇಲಿನ ಪೂರ್ವಗ್ರಹ ಪೀಡಿತ ಅಸಡ್ಡೆ ಇಂದಿಗೂ ಕಾಣುತ್ತಿದೆ. 

ದೇಶದ ಬಗೆಗಿನ ಅನಾಧರಣೆ ಐಕ್ಯತೆಗೆ, ಸಮಗ್ರತೆಗೆ ಧರ್ಮಸಂಸ್ಕೃತಿಗೆ ಮಹಿಳೆಯರಿಗೆ ಶ್ರದ್ಧಾಕ್ಷೇತ್ರಗಳಿಗೆ ದಕ್ಕೆ ಉಂಟಾಗುವುದನ್ನು ಗುರೂಜಿ ಎಂದೆಂದಿಗೂ ಸಹಿಸುತ್ತಿರಲಿಲ್ಲ. ನೊಡಲು ತುಂಬಾ ಸಣ್ಣಗೆ ತೆಳ್ಳಗೆ ಪ್ರಸನ್ನ ಗಾಂಭೀರ್ಯವದನರಾದ, ಯುವಕರ ಸ್ಪೂರ್ತಿಯ ಸೆಲೆಯಾಗಿದ್ದ, ನಡೆದಾಡುವ ಕರ್ಮಯೋಗಿ, ಹೊಳೆಯುನ ಕಣ್ಣುಗಳನ್ನು ಹೊಂದಿರುವ, ಸನ್ಯಾಸಿಯಲ್ಲಿನ ಕ್ಷತ್ರಿಯ ಛಲ, ಆತ್ಮದಲ್ಲಿ ನೂರು ಸಿಂಹಗಳ ಬಲಹೊಂದಿದ್ದ ಗುರೂಜಿ,  ೧೯೦೬ರ ಫೆಬ್ರವರಿ ೧೯ರಂದು ಲಕ್ಷ್ಮಿಬಾಯಿ ಮತ್ತು ಸದಾಶಿವ ಗೋಲ್‌ವಲ್ಕ್ರ್‌ರ ಮಗನಾಗಿ ನಾಗಪುರದ ರತ್ನಗಿರಿ ಜಿಲ್ಲೆಯ ಮರಾಠಿ ಕುಟುಂಬ ವೊಂದರಲ್ಲಿ ಜನಿಸಿದರು. ೧೯೬೨ ಅಂದಿನ ಪ್ರಧಾನಂತ್ರಿಯಾಗಿದ್ದ ನೆಹರು ಚೀನಾ ಜೊತೆಯಲ್ಲಿ ಹಿಂದು ಚೀನಾ ಭಾಯಿ ಭಾಯಿ ಎನ್ನುತ್ತ್ತಿರುವಾಗ ಭಾರತದ ಗಡಿಯೊಳಗೆ ತನ್ನ ಸೈನಿಕರನ್ನು ನುಗ್ಗಿಸಿಯೇ ಬಿಟ್ಟ್ಟಿತು, ಇಂತಹ ಸನ್ನಿವೇಶವನ್ನ ಎದುರು ನೋಡದ ನೆಹರುರವರಿಗೆ ದಿಕ್ಕೆ ತೋಚದಂತಾಗಿರುವಾಗ ಗುರೂಜಿ ತನ್ನ ಸ್ವಯಂ ಸೇವಕರಿಗೆ ದೇಶ ರಕ್ಷಣೆಗಾಗಿ ಸರಕಾರದೊಡನೆ ಕೈ ಜೋಡಿಸುವಂತೆ ಕರೆ ನೀಡಿದರು. ಗುರೂಜಿಯವರ ಕರೆಗೆ ಓಗೊಟ್ಟು ಸಾವಿರಾರು ಸ್ವಯಂ ಸೇವಕರು ರಾಷ್ಟçದ ಆಂತರಿಕ ಭದ್ರತೆಯ ಕಾರ್ಯಕ್ಕೆ ಕೈಜೋಡಿಸಿದರು. 

ಹಿಂದೂಗಳನ್ನು ಒಗ್ಗಟಾಗಿರುವಂತೆ ಮಾಡಲು ಗುರೂಜಿ ೧೯೬೯ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಮ್ಮೇಳನವನ್ನು ಉಡುಪಿಯಲ್ಲಿ ನಡೆಸಿದರು. ಈ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಗುರೂಜಿ ನಮ್ಮಲ್ಲಿರುವ ಸಾಮಾಜಿಕ, ಧಾರ್ಮಿಕ, ಜೀವನದಲ್ಲಿ ಉಚ್ಚ-ನೀಚ, ಸ್ಪ್ರಶ್ಯ ಅಸ್ಪ್ರಶ್ಯಯಂತಹ ಅಸಮಾನತೆಯನ್ನು ಬಿಟ್ಟು, ಜಾತಿ, ಮತ, ಕುಲ, ಸಂಪ್ರದಾಯ, ಭೇದವನ್ನು ಬಿಟ್ಟು ಎಲ್ಲರೂ ಭಾರತಾಂಬೆಯ ಮಕ್ಕಳೆಂದೂ ಸಮಾನತೆಯಿಂದ ಬಾಳಬೇಕೆಂದೂ ಕರೆ ನೀಡಿದರು. 

೧೯೬೩ ಮದರಾಸಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದಲ್ಲಿ ಮಾತನಾಡಿ ಹಿಂದುಗಳಲ್ಲಿ ‘ಒಗ್ಗಟ್ಟಿಲ್ಲವೆಂದು’ ಸ್ವಾಮಿ ವಿವೇಕಾನಂದರು ಕೊಟ್ಟ ಎಚ್ಚರಿಕೆಯನ್ನು ನೆನಪಿಗೆ ತಂದುಕೊಟ್ಟರು. 

೨೦ನೇ ಶತಮಾನದ ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಿಣಿಕ, ರಾಜಕೀಯ ಕ್ಷೇತ್ರದಲ್ಲಿ ಧ್ರುವತಾರೆಯಂತೆ ಬೆಳಗಿ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ (ಆತ್ಮದ ಉದ್ಧಾರವೇ ಜೀವನದ ಪರಮ ಗುರಿ) ಎಂಬ ಶ್ಲೋಕಕ್ಕೆ ಅನ್ವರ್ಥದಂತೆಯೇ ಭಾರತಕ್ಕಾಗಿ, ಭಾರತದ ಅಖಂಡತೆಗಾಗಿ, ಭಾರತೀಯರಿಗಾಗಿ ತಮ್ಮನ್ನೇ ಅರ್ಪಿಸಿಕೊಂಡು ೧೯೭೩ರ ಜೂನ್ ೫ರಂದು ತನ್ನ ದೇಶಸೇವೆಯ ಕರ್ತವ್ಯದಿಂದ ಬಳಲಿ ತಾಯಿ ಭಾರತಾಂಬೆಯ ಮಡಿಲಲ್ಲಿ ವಿಶ್ರಾಂತಿ ಪಡೆದರು.


ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                                   (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,