ಸಂಗೀತ ಸುಧೆಯೊಳು ಕಣಕಣದ ಸ್ಪಂದನವಿದೆ
(ಜೂನ್ 21 ರಂದು ವಿಶ್ವ ಸಂಗೀತ ದಿನ ಈ ನಿಮಿತ ವಿಶೇಷ ಲೇಖನ)
ಅನಾದಿ ಕಾಲದಿಂದಲೂ, ಸಂಗೀತ ಹಾಗೂ ನಾದ, ಇಡೀ ವಿಶ್ವದ ಎಲ್ಲ ಸಂಸ್ಕೃತಿಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಜನ ಹಾಡು ಹೇಳುತ್ತಾರೆ; ವಾದ್ಯ ನುಡಿಸುತ್ತಾರೆ. ಇದು ಮಕ್ಕಳು ಹುಟ್ಟುವಾಗ ಇರಲಿ, ಹಬ್ಬ ಹರಿದಿನವಿರಲಿ, ಕ್ರೀಡಾ ಚಟುವಟಿಕೆಗಳಿರಲಿ ಅಥವಾ ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ. ಸಂಗೀತವನ್ನು ಆರೋಗ್ಯಕ್ಕಾಗಿ ಹಾಗೂ ಚಿಕಿತ್ಸೆಗಾಗಿ ಧೀರ್ಘ ಕಾಲದಿಂದಲೂ ಬಳಸಲಾಗುತ್ತಿದೆ.
ಮಾನವನ ಸ್ವಭಾವಗಳ ಮೇಲೆ ಸಂಗೀತವು ಪ್ರಭಾವ ಬೀರುತ್ತದೆಂದು ದೃಢಪಟ್ಟಿದೆ. ಅನೇಕ ರೋಗಗಳು ಸಂಗೀತದಿಂದ ಗುಣವಾಗುತ್ತದೆ ಎಂಬುದು ಅನೇಕರ ಅನುಭವ. ಸಂಗೀತಾಭ್ಯಾಸವು ಒಬ್ಬ ವ್ಯಕ್ತಿಯನ್ನು ಒಳ್ಳೆಯ ಪೌರನನ್ನಾಗಿ ಬೆಳಸಲು ಸಹಾಯ ಮಾಡುತ್ತದೆ. ಸಂಗೀತದ ಮಾಧುರ್ಯವು ಮಾನವನಲ್ಲಿರುವ ಸಂಕುಚಿತ ಸ್ವಭಾವವನ್ನು ಹೋಗಲಾಡಿಸಿ ಹೃದಯ ವೈಶಾಲ್ಯವನ್ನುಂಟು ಮಾಡುತ್ತದೆ.
ವಿಶ್ವದ ಪ್ರತೀ ಜನಾಂಗಕ್ಕೂ ತನ್ನದೇ ಆದ ರೀತಿಯ ಸಂಗೀತವಿದೆ. ಭಾಷೆಯ ಹುಟ್ಟೇ ನಾದದಿಂದ ಅಂದರೆ ಸಂಗೀತದಿಂದ ಪ್ರಾರಂಭಗೊಂಡದ್ದು. ಅದನ್ನು ಗದ್ದಲಗೊಳಿಸುತ್ತಿರುವುದು ನಾವೇ ಎಂದು ಬೇರೆ ಹೇಳಬೇಕಿಲ್ಲ. ಯಾಕೆಂದರೆ ನಮ್ಮ ಮನಸ್ಸಿನ ಆಲೋಚನೆಗಳನ್ನು ಹೊರತು ಬೇರೆಯದಾದ ಚಿಂತನೆಗಳನ್ನೆಲ್ಲವನ್ನೂ ವಿರೋಧಿಸುವ ಅಸಹನಾತ್ಮಕ ಮನೋಭಾವ ನಮ್ಮನ್ನಾವರಿಸಿರುತ್ತದೆ.
ವಿಶ್ವ ಸಂಗೀತ ದಿನಾಚರಣೆಯನ್ನು ಜೂನ್ 21ರಂದೇ ಈ ದಿನ ಆಚರಿಸುವುದು ಏಕೆ ಎಂಬುದು ಕುತೂಹಲಕರ. ಉತ್ತರಾರ್ಧ ಗೋಳದಲ್ಲಿ ಜೂನ್ 21 ವರ್ಷದ ಅತಿ ದೀರ್ಘ ಹಗಲು. ಅಂದು ಸೂರ್ಯನ ಬೆಳಕು ಬಹುಹೊತ್ತಿನವರೆಗೆ ಭೂಮಿಯನ್ನು ತಲುಪುತ್ತಿರುತ್ತದೆ. 1976ರಲ್ಲಿ ಅಮೆರಿಕದ ಸಂಗೀತಗಾರ ನ್ಯಾಷನಲ್ ಫ್ರೆಂಚ್ ರೇಡಿಯೋದ ಉದ್ಯೋಗಿ ಜೊಯೆಲ್ ಕೊಹೆನ್ ಈ ದಿನ ಅಹೋರಾತ್ರಿ ಸಂಗೀತ ಉತ್ಸವ ಆಚರಿಸುವ ಪ್ರಸ್ತಾಪ ಮುಂದಿಟ್ಟಿದ್ದ. 1981ರಲ್ಲಿ ಫ್ರಾನ್ಸ್‌ನ ಸಂಗೀತ ಮತ್ತು ನೃತ್ಯ ನಿರ್ದೇಶಕ ಮಾರಿಸ್ ಫ್ಲುರೆಟ್ ಅವರು ಕೊಹೆನ್‌ನ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು. 1982ರಲ್ಲಿ ಮೊದಲ ಬಾರಿ ಫ್ರಾನ್ಸ್‌ನಲ್ಲಿ ವಿಶ್ವ ಸಂಗೀತ ದಿನ ಆಚರಿಸಲಾಯಿತು.
ಈಗ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರಿಟನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಚೀನಾ, ಲೆಬನಾನ್, ಮಲೇಷ್ಯಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲೂ ವಿಶ್ವ ಸಂಗೀತ ದಿನ ಆಚರಿಸಲಾಗುತ್ತದೆ. 2007ರಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಈ ದಿನ ಆಚರಿಸಲಾಯಿತು.
ಪಾಶ್ಚಿಮಾತ್ಯ ದೇಶಗಳಲ್ಲಿ ಇದೊಂದು ದಿನ ಉದಯೋನ್ಮುಖ ಸಂಗೀತಗಾರರು ಮತ್ತು ಹಿರಿಯ ಕಲಾವಿದರು ಬೀದಿಯಲ್ಲೂ ಕಾರ್ಯಕ್ರಮ ನೀಡುತ್ತಾರೆ. ಹಲವು ಸಂಗೀತ ಕಛೇರಿಗಳನ್ನು ಉಚಿತವಾಗಿ ಏರ್ಪಡಿಸಲಾಗುತ್ತದೆ. ಸಂಗೀತ ಸ್ಪರ್ಧೆ, ರಸಪ್ರಶ್ನೆ, ಸಂಗೀತ ವಾದ್ಯಗಳ ಪ್ರದರ್ಶನ, ಮಾರಾಟ ನಡೆಯುತ್ತದೆ. ಆ ದಿನ ಎಷ್ಟೇ ಜೋರಾಗಿ ಹಾಡಿದರೂ, ವಾದ್ಯ ನುಡಿಸಿದರೂ ಶಾಂತಿ ಭಂಗವಾಯಿತು ಎಂದು ನೆರೆಮನೆಯವರು ಪೊಲೀಸರಿಗೆ ದೂರು ನೀಡುವಂತಿಲ್ಲ.
ಪ್ರತಿನಿತ್ಯ ಸಂಗೀತವನ್ನು ಕೇಳುವುದರಿಂದ ಮನಸಿನ ಮೇಲಾಗುವ ಒತ್ತಡ ಕಡಿಮೆಯಾಗುತ್ತದೆ. ಲಯಬದ್ಧವಾದ ಸಂಗೀತವನ್ನು ಕೇಳುವುದರಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಒತ್ತಡದ ಹಾರ್ಮೋನ್ಗಳು ಕಡಿಮೆಯಾಗುತ್ತದೆ. ಒಂಟಿಯಾಗಿರುವಾಗ ಅಥವಾ ಏಕಾಂತ ಬೇಕೆನಿಸಿದಾಗ ಹೆಚ್ಚು ಗದ್ದಲವಿಲ್ಲದ ವಾದ್ಯಗಳ ಸಂಗೀತವನ್ನು ಕೇಳಬೇಕು.
ಜಗತ್ತಿನ 350 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ರಾತ್ರಿ ಮಲಗುವ ಮುನ್ನ ವೀಣೆ, ಗಿಟಾರ್ ವಾದನವನ್ನು ಕೇಳಿಕೊಂಡು ಮಲಗಿ. ಅಥವಾ ಶಾಸ್ತ್ರೀಯ ಸಂಗೀತವನ್ನು ಕೇಳಿಕೊಂಡು ಮಲಗುವುದರಿಂದಲೂ ಮನಸು ನಿರಾಳವಾಗುತ್ತದೆ. ಸಂಗೀತದ ಕೆಲವು ರಾಗಗಳಿಂದ ಕೆಲವು ರೋಗದ ಪರಿಣಾಮವೂ ಕಡಿಮೆಯಾಗಲಿದೆ ಎಂದು ಖುದ್ದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.
ಭಾರತವಂತೂ ಸಂಗೀತದ ತವರೂರಿನಂತೆ. ಹಲವಾರು ಸಂಗೀತದ ಶೈಲಿಗಳನ್ನು ಹೊಂದಿದೆ. ಹಿಂದೂಸ್ತಾನಿ, ಕರ್ನಾಟಕಿ ಶಾಸ್ತ್ರೀಯ ಶೈಲಿಯೇ ಅಲ್ಲದೆ, ಭಾಂಗ್ರಾ, ಭಜನೆ, ಭಕ್ತಿಗೀತೆ, ಗಝಲ್, ಕವ್ವಾಲಿ, ಇಂಡಿ-ಪಾಪ್, ಜನಪದ, ಸಿನೆಮಾ ಹಾಡುಗಳು, ಸುಗಮ ಸಂಗೀತ, ರಿಮಿಕ್ಸ್, ಫ್ಯೂಶನ್ ಮುಂತಾದ ವೈವಿಧ್ಯಮಯ ಶೈಲಿಗಳೂ ಇವೆ. ಹಾಗೆಯೇ ಪಾಶ್ಚಿಮಾತ್ಯ ಪ್ರಾಕಾರಗಳಾದ ಮೆಟಲ್, ರಾಕ್, ಹಿಪ್ ಹಾಪ್, ಆಲ್ಟರ್ ನೇಟಿವ್, ಏಕ್ಸ್ಪೆರಿಮೆಂಟಲ್, ಕಂಟ್ರಿ, ಡಿಸ್ಕೋ, ಫೂಂತಕ್, ಕ್ಲಾಸಿಕಲ್, ಪ್ರೋಗ್ರೆಸ್ಸಿವ್, ಟ್ರಾನ್ಸ್, ಟೆಕ್ನೋ, ರೆಗ್ಗೆ ಮುಂತಾದ ಸಂಗೀತಗಳೂ ಇವೆ.
ವಿವಿಧ ರೀತಿಯ ವೈವಿದ್ಯಮಯ ಭಾಷೆಗಳಿರುವ ನಮ್ಮ ಭಾರತ ದೇಶದಲ್ಲಿ ಉತ್ತರದ ಸಂಗೀತ ದಕ್ಷಿಣದಲ್ಲೂ, ದಕ್ಷಿಣದ ಸಂಗೀತ ಉತ್ತರದಲ್ಲೂ ಹರಿದಿದೆ. ಅದರಲ್ಲೂ ಜನಸಾಮಾನ್ಯನಿಗೆ ಆಕರ್ಷಣೆಯಾದ ಸಿನಿಮಾ ಸಂಗೀತವು ಭಾಷೆಗಳ ಎಲ್ಲಾ ಪರಿಧಿಗಳನ್ನೂ ಮೀರಿ ಜನಮನವನ್ನು ಬೆಸೆದು ದೇಶವೆಂಬ ಭಾವವನ್ನು ಒಂದು ಅವ್ಯಕ್ತ ರೀತಿಯಲ್ಲಿ ಬೆಸೆದಿರುವುದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.
ಸಂಗೀತದ ಮೂಲಕವೇ ಎಲ್ಲ ಶ್ರೇಷ್ಠ ಕಾವ್ಯಗಳೂ ಕೂಡಾ ಜನಸಮೂಹವನ್ನು ನೇರ ಅಧ್ಯಯನಕ್ಕಿಂತ ಹೆಚ್ಚು ತಲುಪಿದೆ ಎಂಬುದು ಕೂಡಾ ಸಾರ್ವಕಾಲಿಕ ಸತ್ಯ. ವಿಶ್ವದೆಲ್ಲೆಡೆ ಎಲ್ಲ ರೀತಿಯ ಸಂಗೀತದ ನದಿಗಳೂ ಕೂಡ ತಮ್ಮ ಜಾಗತಿಕ ಮೇರೆಗಳನ್ನು ಮೀರಿ ತಮ್ಮ ಮನಸ್ಸುಗಳನ್ನು ಇನ್ನಿತರ ಸಂಗೀತಗಳಿಗೆ ಕೂಡಾ ತೆರೆದಿಡುತ್ತಿವೆ ಎಂಬುದು ಕೂಡಾ ಅಷ್ಟೇ ಸತ್ಯ.
ಸಂಗೀತ ನಮ್ಮ ಮನಸ್ಥಿತಿ ಮತ್ತು ಭಾವನೆಯ ಮೇಲೆ ಗಾಢ ಪ್ರಭಾವ ಬೀರಬಲ್ಲದು. ನಮ್ಮ ಸಂತೋಷ, ಬೇಸರ, ಹಠ, ಭಯ, ನೋವು ಎಲ್ಲದರ ಜೊತೆಗೂ ಒಂದೊಂದು ರಾಗ ಕನೆಕ್ಟ್ ಆಗುತ್ತದೆ. ಹಾಗಾಗಿ, ಅಂತಹ ಸಮಯದಲ್ಲಿ ನಾವು ಕೇಳುವ ಸಂಗೀತಕ್ಕೆ ಅನುಗುಣವಾಗಿ ನಮ್ಮ ಮನಸ್ಥಿತಿಯೂ ಸ್ವಲ್ಪಮಟ್ಟಿಗೆ ಬದಲಾಗುತ್ತದೆ. ಅಲ್ಲದೆ, ಮನಸನ್ನು ಏಕಾಗ್ರತೆಯತ್ತ ವಾಲಿಸಲು ಸಂಗೀತ ಬಹಳ ಸಹಾಯ ಮಾಡಬಲ್ಲದು. ಇಷ್ಟೇ ಅಲ್ಲ, ಸಂಗೀತದಿಂದ ಕೆಲವು ಖಾಯಿಲೆಗಳನ್ನೂ ವಾಸಿ ಮಾಡಬಹುದು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನ. ವಿಶ್ವ ಯೋಗದಿನದಂತೆ ಜೂನ್ 21ರಂದೇ ಸಂಗೀತ ದಿನವನ್ನು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಸಂಗೀತವನ್ನು ದೇವರ ಭಾಷೆ ಎಂದು ಕರೆಯಲಾಗುತ್ತದೆ. ಎಲ್ಲಾ ವಯೋಮಾನದವರನ್ನು ಬಂಧಿಸಿಡುವ ಶಕ್ತಿ ಸಂಗೀತಕ್ಕೆ ಇದೆ. ಸಂಗೀತ ಸುಧೆಯೊಳು ಕಣಕಣದ ಸ್ಪಂದನವಿದೆ.
ಲೇಖಕರು: ✍️.... ಕಾನತ್ತಿಲ್ ರಾಣಿಅರುಣ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network