Header Ads Widget

Responsive Advertisement

ಮನುಷ್ಯನಿಗೂ, ಮಣ್ಣಿಗೂ, ಗೋವಿಗೂ ಅವಿನಾಭಾವ ಸಂಬಂಧ ಇದೆ

ಮನುಷ್ಯನಿಗೂ, ಮಣ್ಣಿಗೂ, ಗೋವಿಗೂ ಅವಿನಾಭಾವ ಸಂಬಂಧ ಇದೆ



ಕೃಷಿ ಭಾರತೀಯ ಜನಜೀವನದ ಅವಿಭಾಜ್ಯ ಅಂಗ. "ಕೃಷಿತೋ ನಾಸ್ತಿ ದುರ್ಭಿಕ್ಷಂ" ಎಂಬ ಸಂಸ್ಕೃತ ಘೋಷವಿದೆ. ಆದರೆ ಇಂದು ಕೃಷಿಯ ಸ್ಥಿತಿ ಅಧೋಗತಿಯಾಗಿದೆ. ಇದಕ್ಕೆ ಗೋವು ಆಧಾರಿತ ಕೃಷಿ ಪದ್ಧತಿಯನ್ನು ನಿರ್ಲಕ್ಷಿಸಿದ್ದು ಕಾರಣ. ಈ ಹಿನ್ನೆಲೆಯಲ್ಲಿ ಕೃಷಿಗೆ ಮತ್ತೆ ಪುನಶ್ಚೇತನ ನೀಡಬೇಕಾದರೆ, ಕೃಷಿಕರಲ್ಲಿ ಸ್ಫೂರ್ತಿ ತುಂಬಬೇಕಾದರೆ, ಭಾರತೀಯ ಗೋ ತಳಿಗಳ ಬಗ್ಗೆ ಸಂಶೋಧನೆ ಇನ್ನಷ್ಟು ಹೆಚ್ಚಬೇಕು. ಗೋವಿನ ಮಹತ್ವವನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಕಾರ್ಯ ನಡೆಯಬೇಕು.

ಗುಣಮಟ್ಟದ ಕೃಷಿ ಉತ್ಪನ್ನಗಳಿಗೆ ಸಾವಯವ ಗೊಬ್ಬರಗಳು ಅನಿವಾರ್ಯವಾಗಿದೆ. ವಿಶ್ವದ ಗೋ ತಳಿಗಳಲ್ಲಿ ಶೇಕಡ 12%ರಷ್ಟು ಭಾರತದಲ್ಲಿದ್ದು, ಇವುಗಳ ಉತ್ಪನ್ನಗಳು ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಾವಯವ ಕೃಷಿ ಅನ್ನೋದಕ್ಕೆ ಪರ್ಯಾಯ ಪದ ಅಂದರೆ ಗೋ ಆಧಾರಿತ ಕೃಷಿ. ಗೋವಿನಿಂದಲೇ ಸಾವಯವ ಕೃಷಿ. ಹೈನುಗಾರಿಕೆ ಎಂಬುದು ಕೃಷಿಯಲ್ಲಿನ ಉಪಕಸುಬಲ್ಲ. 

ಮಣ್ಣಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ. ಗೋಮಯ-ಗೋಮೂತ್ರ ಮಣ್ಣು ಸೇರಿದಾಗ ಭೂಮಿ ಸಮೃದ್ಧವಾಗುತ್ತದೆ ಎನ್ನುವುದನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಕೃಷಿಗೆ ಮೂಲಭೂತವಾಗಿ ಇದೇ ಬಂಡವಾಳ. ಪಂಚಗವ್ಯದ ಮಹತ್ವವನ್ನು ಅರಿತರೆ ಇಡೀ ಆರ್ಥಿಕತೆ ಅಭಿವೃದ್ಧಿಯಾಗಲು ಸಾಧ್ಯ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಗಣಿ ಅತ್ಯಗತ್ಯ. 1 ಗ್ರಾಂ. ಸಗಣಿಯಲ್ಲಿ 300 ರಿಂದ 500 ಕೋಟಿ ಉಪಯುಕ್ತ ಜೀವಾಣುಗಳಿವೆ ಎಂದು ವೈಜ್ಞಾನಿಕವಾಗಿ ಧೃಡಪಟ್ಟ ಅಂಶ. ಸಗಣಿಯಲ್ಲಿ ಸಸ್ಯ ಪೋಷಕಾಂಶಗಳಾದ ರಂಜಕ ಹಾಗೂ ಪೊಟಾಶ್‌ಗಳನ್ನು ಸಸ್ಯಗಳಿಗೆ ಒದಗಿಸುವ ಕಾರ್ಯ ನಡೆಯುತ್ತದೆ. ಹೀಗಾಗಿ ಭೂಮಿ ಫಲವತ್ತಾಗುತ್ತದೆ.

ಇಡೀ ವಿಶ್ವವು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಫಾದನೆ ಹೆಚ್ಚಿಸುವ ಬಗ್ಗೆ ಸಂಶೋಧನೆಗಳು ನಡೆಸುತ್ತಿವೆ. ಆದರೆ ಗುಣಮಟ್ಟದ ಆಹಾರ ಉತ್ಪಾದನೆಗೆ ಗೋ ಆಧರಿತ ಕೃಷಿ ವ್ಯವಸ್ಥೆ ಅನಿವಾರ್ಯ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಕೃಷಿ ಆಧಾರಿತ ಭಾರತದಲ್ಲಿ ಗೋವುಗಳಿಗೆ ಹಾಗೂ ಗೋವಿನ ಉತ್ವನ್ನಗಳಿಗೂ ಅತ್ಯಂತ ಮಹತ್ವವಿದೆ. ಇಲ್ಲಿನ ಸಂಸ್ಕೃತಿ ಹಾಗೂ ಧಾರ್ಮಿಕ ಇತಿಹಾಸದ ಜತೆಯಲ್ಲಿ ಭಾವನಾತ್ಮಕ ಸಂಬಂಧಗಳನ್ನು ಇರಿಸಿಕೊಂಡಿರುವ ಗೋವುಗಳನ್ನು ರಕ್ಷಿಸುವ ಅನಿವಾರ್ಯತೆ ಇದೆ.

"ಗೋವು ನೀಡುವ ಪ್ರತಿ ಉತ್ಪನ್ನವೂ ಪವಿತ್ರ. ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಹೀಗೆ ಪ್ರತಿಯೊಂದರಲ್ಲೂ ಮಹತ್ವದ ಗುಣಗಳಿವೆ. ಗೋವಿನಿಂದ ಪ್ರತಿಯೊಬ್ಬರೂ ಬಹಳಷ್ಟು ಪ್ರಯೋಜನ ಪಡೆಯುತ್ತಿದ್ದೇವೆ. ದೇಸಿ ಹಾಲಿಗೆ ಪರ್ಯಾಯ ಇಲ್ಲ. ಪಂಚಗವ್ಯ ಅತ್ಯಂತ ಪವಿತ್ರ ಮಾತ್ರವಲ್ಲದೇ ಔಷಧೀಯ ಮತ್ತು ಪೌಷ್ಟಿಕ ಗುಣವನ್ನೂ ಹೊಂದಿದೆ. ಇದು ನರ ಹಾಗೂ ನ್ಯಾನೊ ಕಣದ ಹಂತದಲ್ಲೂ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಇದು ಬಹಳಷ್ಟು ವಿಜ್ಞಾನಿಗಳಿಗೇ ಗೊತ್ತಿಲ್ಲ. ನಾಲ್ಕು ವರ್ಷಕ್ಕಿಂತ ಕಡಿಮೆ ಮಕ್ಕಳಿಗಂತೂ ದೇಸಿ ಹಸುವಿನ ಹಾಲು ಬಿಟ್ಟು ಬೇರೇನನ್ನೂ ನೀಡಬೇಕಿಲ್ಲ" ಎಂಬುದು ಹಿರಿಯ ಗೋವಿಜ್ಞಾನಿ ಕರ್ನಾಲ್‌ನ ಡಾ. ಸದಾನ ಅವರ ಮಾತು.

ಭಾರತೀಯ ಗೋ ತಳಿಗಳಿಗೆ ಹವಾಮಾನ ಬದಲಾವಣೆ ಪರಿಣಾಮವನ್ನು ಎದುರಿಸುವ ಶಕ್ತಿ ಇದ್ದು, ಇದು ವಿಶ್ವದ ವಿಜ್ಞಾನಿಗಳು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಕಾರಣವಾಗಿದೆ ಎಂದು ಬೆಂಗಳೂರಿನ ವಿಜ್ಞಾನಿ ಡಾ.ಕೆ.ಪಿ.ರಮೇಶ್‌ರವರ ಅಭಿಪ್ರಾಯ.

ಸಗಣಿಯಿಂದ ಗೊಬ್ಬರ ಅನಿಲ ಸ್ಥಾವರಗಳ ಮೂಲಕ ಅಡುಗೆ ಅನಿಲವನ್ನು ಪಡೆಯಬಹುದು. ಇಲ್ಲಿ ಉತ್ಪತ್ತಿಯಾಗುವ ಮೀಥೇನ್ ಅನಿಲವನ್ನು ಸಿಲೆಂಡರ್‌ಗಳಲ್ಲಿ ತುಂಬಿಸಿ ವಾಹನಗಳಿಗೆ, ಸ್ಟೌಗಳಿಗೆ ಉಪಯೋಗಿಸಬಹುದು. ಕ್ಯಾಲಿಫೋರ್ನಿಯಾದಲ್ಲಿನ ಇನ್‌ಲ್ಯಾಂಡ್ ಎನರ್ಜಿ ಕಾರ್ಪೋರೇಷನ್ ಎಂಬ ಸಂಸ್ಥೆ ಸಗಣಿಯಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ಲಾಭದಾಯಕವಾಗಿ ಉದ್ಯಮವನ್ನು ನಡೆಸುತ್ತಿದೆ.

ಭಾರತೀಯ ಪುರಾಣಗಳಲ್ಲಿ ಗೋಪೂಜೆಯು ಮನುಷ್ಯನ ಭೌತಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ದೋಷಗಳನ್ನು ಪರಿಹಾರ ಮಾಡುವ ಒಂದು ಸಾಧನ ಎಂದು ವರ್ಣಿತವಾಗಿದೆ. ದ್ವಾಪರ ಯುಗದಲ್ಲಿ ದ್ವಾರಕಾ ನಗರದಲ್ಲಿ ಶ್ರೀ ಕೃಷ್ಣನು ಗೊಲ್ಲರ ಜೊತೆಗೂಡಿ ಗೋವುಗಳ ಪೂಜೆ ಮಾಡಿದ ಉಲ್ಲೇಖ ಸಿಗುತ್ತದೆ. ಗೋವನ್ನು ಕಾಮಧೇನು, ಅದರ ಕರುವನ್ನು ನಂದಿನಿ ಎಂದು ಪೂಜಿಸುವ ಕ್ರಮ ಪುರಾಣಗಳಲ್ಲಿ ಇದೆ. ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ಭಾರತದ ಪ್ರತೀ ಮನೆಯಲ್ಲಿ ದೇಸೀ ಗೋವುಗಳು ಇದ್ದವು ಮತ್ತು ಪ್ರತೀ ಊರಿಗೊಂದು ಗೋಶಾಲೆ ಇದ್ದಿತು ಎಂಬ ಉಲ್ಲೇಖಗಳು ದೊರೆಯುತ್ತವೆ. ಗೋಮಯ, ಗೋಮೂತ್ರ ಇವುಗಳಲ್ಲಿ ಶಕ್ತಿಶಾಲಿಯಾದ ಕ್ರಿಮಿನಾಶಕ ಮತ್ತು ರೋಗನಿರೋಧಕ ಶಕ್ತಿ ಇದೆ ಎನ್ನುವುದು ವೈಜ್ಞಾನಿಕವಾಗಿ ಸಾಧಿಸಲ್ಪಟ್ಟಿದೆ.

ದನಗಳ ಹಾಲಿನಲ್ಲಿ ನಾಲ್ಕು ಸಾಗರಗಳ ಶಕ್ತಿ ಅಡಗಿದೆ ಎಂದು ಉಲ್ಲೇಖ ಸಿಗುತ್ತದೆ. ನಾಲ್ಕು ಬ್ರಹ್ಮಾಂಡಗಳು ದನದ ದೇಹದಲ್ಲಿ ಸ್ಥಾನ ಪಡೆದಿವೆ. ಮೂವತ್ತಮೂರು ಕೋಟಿ ದೇವತೆಗಳು ದನದ ರೋಮದಲ್ಲಿ ವಾಸಿಸುತ್ತಾರೆ. ದನದ ಹಣೆಯಲ್ಲಿ ಈಶ್ವರನ ವಾಸಸ್ಥಾನ ಇದೆ. ಆದ್ದರಿಂದ ದನದ ಹಣೆಯ ಭಾಗದಲ್ಲಿ ಶುದ್ಧ ನೀರು ಸುರಿದರೆ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಬಲವಾಗಿ ಬೆಳೆದಿದೆ. ಸುಬ್ರಮಣ್ಯ ದೇವರು ದನದ ಮೂಗಿನ ಭಾಗದಲ್ಲಿ ವಾಸ ಮಾಡುತ್ತಾರೆ. ಎರಡು ಕಿವಿಯ ಭಾಗದಲ್ಲಿ ಅಶ್ವಿನಿ ದೇವತೆಗಳ ವಾಸ ಸ್ಥಾನವಿದೆ. ಕಿವಿಯ ಪೂಜೆ ಮಾಡುವುದರಿಂದ ದೀರ್ಘಾಯುಷ್ಯ ಪ್ರಾಪ್ತಿ ಆಗುತ್ತದೆ. ನಾಲಿಗೆಯ ಪೂಜೆಯಿಂದ ಮಕ್ಕಳು ಆಗದವರಿಗೆ ಮಕ್ಕಳ ಭಾಗ್ಯ ದೊರೆಯುತ್ತದೆ ಎನ್ನುವುದು ಭಾರತೀಯರ ನಂಬಿಕೆ. ದನದ ನಾಲ್ಕು ಕೆಚ್ಚಲುಗಳಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳ ಶಕ್ತಿ ಇದೆ. 

ಅಮ್ಮನ ಹಾಲಿಗೆ ಸಮಾನವಾದುದು ಇದ್ದರೆ ದೇಶೀ ಗೋವಿನ ಹಾಲು ಮಾತ್ರ. ಹುಟ್ಟಿದ ಮಗು ತಾಯಿಯ ಹಾಲು ಕುಡಿದು ಬೆಳೆಯುವ ಸಹಜ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ತಾಯಿಯ ಹಾಲು ಸಾಲದಿದ್ದರೆ ಅಥವಾ ಮಗುವಿನ ಒಂದು ಹಂತದ ಬೆಳವಣಿಗೆಯ ನಂತರ ಪೂರಕ ಆಹಾರದ ಅಗತ್ಯ ಬಂದಾಗ ತಾಯಿಯ ಹಾಲಿಗೆ ಸಮನಾದ ಆಹಾರವೊಂದರ ಅಗತ್ಯ ಮಗುವಿಗಿದೆ. ಆ ಆಹಾರ ಪೋಷಕಾಂಶಗಳಿಂದ ಕೂಡಿದ್ದು ಮಗುವಿನ ಶಾರೀರಿಕ ಹಾಗೂ ಭೌದ್ಧಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಎಳೆಯ ಮಗುವಿಗೆ ಜೀರ್ಣವಾಗುವಂತಿರಬೇಕು. ನಮ್ಮ ಹಿರಿಯರು ಯುಗಗಳ ಹಿಂದೆಯೇ ಈ ವಿಚಾರಗಳನ್ನು ಅರಿತು ಮಕ್ಕಳಿಗೆ ಕೊಟ್ಟ ಆಹಾರ ಅದುವೇ ಗೋವಿನ ಹಾಲು.

ಮನುಷ್ಯನಿಗೂ, ಮಣ್ಣಿಗೂ, ಗೋವಿಗೂ ಅವಿನಾಭಾವ ಸಂಬಂಧ ಇದೆ. ಆರೋಗ್ಯಪೂರ್ಣ ಜೀವನಕ್ಕಾಗಿ ಹಾಲು ಬೇಕು. ಹಾಲು ಬೇಕೆಂದಾದರೆ ಗೋವು ಬೇಕು. ದನದ ಹಾಲಿನಲ್ಲಿ ಅತ್ಯಧಿಕ ರೋಗ ನಿರೋಧಕ ಶಕ್ತಿ ಇದೆ ಮತ್ತು ತಾಯಿಯ ಹಾಲಿನ ನಂತರದ ಅತಿ ಪೌಷ್ಟಿಕ ಆಹಾರ ಎಂದು ಕೂಡ ವಿಜ್ಞಾನಿಗಳು ಹೇಳುತ್ತಾರೆ. ಭಾರತ ಕೃಷಿ ಆಧಾರಿತ ದೇಶವಾದ ಕಾರಣ ದನ, ಎತ್ತು ಇಲ್ಲದೆ ಕೃಷಿ ಕೆಲಸಗಳು ಪೂರ್ತಿ ಆಗುವುದಿಲ್ಲ. ಆದ್ದರಿಂದ ಗೋವುಗಳ ಪೂಜೆ ಅರ್ಥಪೂರ್ಣ ಮತ್ತು ನಮ್ಮ ಕೃತಜ್ಞತೆಯ ಸಂಕೇತವೇ ಆಗಿದೆ. 


ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                                   (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,