Header Ads Widget

Responsive Advertisement

ಮಾಧ್ಯಮಗಳನ್ನು ಹೀಗಳೆಯುವ ಬದಲು ಅದನ್ನು ನಿಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಿ

ಮಾಧ್ಯಮಗಳನ್ನು ಹೀಗಳೆಯುವ ಬದಲು ಅದನ್ನು ನಿಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಿ



ಈ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೋದ್ಯಮ ಸೇವಾ ಮನೋಭಾವದಿಂದಲೇ ಬೆಳೆಯಿತು. ಪತ್ರಕರ್ತರು ಯಾರದೇ ನಿಯಂತ್ರಣದಲ್ಲಿರಬಾರದು, ಸ್ವತಂತ್ರವಾಗಿ ಯೋಚನೆ, ಚಿಂತನೆ ಹೊಂದಿರುವವರಾಗಿ ಬೆಳೆಯಬೇಕೆಂಬ ನಿರೀಕ್ಷೆ ಯಾವುದೇ ಪ್ರಜಾಪ್ರಭುತ್ವ ಸಮುದಾಯದಲ್ಲಿರಲೇಬೇಕು.

ಮಾಧ್ಯಮಗಳ ಮೂಲ ಆಶಯವು ಸತ್ಯದ ಸಂಶೋಧನೆ ಮೂಲಕ ಜನರ ಮುಂದಿಡುವುದಾಗಿದೆ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಬೇಕು ಎಂಬುದನ್ನು ಅನುಸರಿಸಬೇಕು. ತಾನು ಕಂಡದ್ದೇ ಸತ್ಯ ಎನ್ನುತ್ತಿರದೇ ತಪ್ಪಾದಾಗ ಒಪ್ಪಿಕೊಳ್ಳಬೇಕು. ಇಂಥ ವಿಶ್ವಾಸಾರ್ಹತೆ ಪತ್ರಿಕೆಯನ್ನು ಬೆಳೆಸುತ್ತದೆ. ಒಳ್ಳೆಯ ಸಂಗತಿಗಳು ಸಿಕ್ಕಾಗಲೂ ಅದನ್ನು ಜನರಿಗೆ ತಿಳಿಸುವಂತಾಗಬೇಕು.

ಅರಚಾಟ ಕಿರುಚಾಟಗಳ ನಡುವೆ, ಆರೋಪ ಪ್ರತ್ಯಾರೋಪಗಳ ನಡುವೆ, ಹುಸಿ ಪ್ರತಿಷ್ಠೆಗಳ ನಡುವೆ ವಿದ್ಯುನ್ಮಾನ ಮಾಧ್ಯಮಗಳು ಸೊರಗಿವೆ. ಸಾರ್ವಜನಿಕ ಲಜ್ಜೆ ಎಂಬುದೇ ಇವಕ್ಕೆ ಇಲ್ಲ. ಈ ಭೂಮಿ ಮೇಲೆ ಕಾಗೆಗಳು, ಹಲ್ಲಿಗಳು, ಬೆಕ್ಕುಗಳು ಸ್ವತಂತ್ರವಾಗಿ ಬದುಕುವುದಕ್ಕೆ ಆಸ್ಪದವೇ ಕೊಡದ ಹಾಗೆ ನಮ್ಮ ಮಾಧ್ಯಮಗಳು ಅವುಗಳ ಬೆನ್ನು ಹತ್ತಿದಂತೆ ಕಾಣುತ್ತದೆ. ಮಾಧ್ಯಮಗಳು ವರ್ಣ ರಂಜಿತ ಸುದ್ದಿ ಕೊಡುವುದರಿಂದ ವಿಶ್ವಾಸಾರ್ಹತೆಯ ಸವಾಲು ಎದುರಾಗುತ್ತಿದೆ. ತಾನು ಕಂಡದ್ದೇ ಸತ್ಯ ಎಂಬ ಹಟಕ್ಕೆ ಬಿದ್ದು ವಿಶ್ವಾಸಕ್ಕೆ ಧಕ್ಕೆಯುಂಟುಮಾಡಿಕೊಳ್ಳುತ್ತಿದೆ.

ಕೆಲವು ಪತ್ರಿಕೆಗಳು ಕೂಡಾ ಎಗ್ಗಿಲ್ಲದಂತೆ ಹಿಂಸೆಯನ್ನು ವೈಭವೀಕರಿಸುವ ಜಾಯಮಾನವನ್ನು ಬೆಳೆಸಿದ ಪರಿಯನ್ನು ಕಂಡರೆ ಇದನ್ನೋದುವ ಜನರ ಮನಸಿನ ಮೇಲೆ ಅದೆಂತಹ ಕ್ರೌರ್ಯಭಾವ ಮೂಡೀತು ಅನ್ನುವುದನ್ನು ಊಹಿಸುವುದೂ ಅಸಾಧ್ಯ. ವಿಶ್ವಾಸಾರ್ಹತೆ ಇಲ್ಲವಾದರೆ ಪತ್ರಿಕೆಗಳು ಇದ್ದೂ ಸತ್ತಂತೆ. ಉಳಿದೆಲ್ಲ ಮಾಧ್ಯಮಗಳಿಗಿಂತ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಮುದ್ರಣ ಮಾಧ್ಯಮದಲ್ಲಿ  ಓದುಗರು ಹೊಂದಿದ್ದಾರೆ. ಇದು ಅಕ್ಷರಶಃ ಸತ್ಯ.

ಇಂದಿನ ಮಾಧ್ಯಮಗಳಿಗೆ ಬಂಡವಾಳಶಾಹಿಗಳು ಹೊಸ ಸಿದ್ಧಾಂತವೊಂದನ್ನು ಕಲಿಸಿದ್ದಾರೆ. ಅದೆಂದರೆ ಹೇಗಾದರೂ ಮಾಡಿ ದುಡ್ಡು ಮಾಡು! ಅದಕ್ಕಾಗಿ ಬೇಕಾದರೆ, ಜನರ ನಡುವೆ ಜಗಳ ಹಚ್ಚು, ಕೋಮುವಾದ ಹೆಚ್ಚಿಸು, ಆಳುವವರನ್ನು ಕೀರ್ತಿಸು, ಜ್ಯೋತಿಷಿಗಳನ್ನು ಕೂರಿಸಿ ಮೂಢ ನಂಬಿಕೆಗಳನ್ನು ಪಸರಿಸು, ಜನಗಳನ್ನು ಮೋಸ ಮಾಡಲು ಬೇಕಾದಂತ ಸುಳ್ಳುಗಳನ್ನೋ ಪರಿಭಾಷೆಗಳನ್ನೋ ಸೃಷ್ಟಿಸು, ಏನಾದರೂ ಮಾಡು. ಆದರೆ ಹಾಕಿದ ಹಣ ಹಿಂದಿರುಗುವಂತೆ ಮಾಡು ಅಷ್ಟೆ.

ಬಂಡವಾಳಶಾಹಿಗಳ ಹೊಸ ಸಿದ್ಧಾಂತದಂತೆ ಸುದ್ದಿಯೂ ಸರಕೇ. ಭಾವನೆಗಳೂ ಸರಕೇ. ಕಣ್ಣೀರು, ಹಸಿವು, ಅವಮಾನ, ಸಂಸಾರದ ಗುಟ್ಟು-ಎಲ್ಲವೂ ಸರಕುಗಳೇ. ಈ ‘ಸರಕು ಸಾಗಣೆ’ಯ ಕಸುಬಿನಲ್ಲಿ ಹುಮ್ಮಸ್ಸಿನಿಂದ ಮುಂದಾದ ಸುದ್ದಿ ಚಾನಲ್‌ಗಳು ತಮ್ಮ ಅಬ್ಬರದಲ್ಲಿ ಪತ್ರಿಕೋದ್ಯಮದ ವ್ಯಾಖ್ಯಾನವನ್ನೇ ಬದಲಿಸಿಬಿಟ್ಟವು. ಯಾವುದು ಸುದ್ದಿ ಎಂಬ ತಿಳಿವಳಿಕೆಯನ್ನೇ ಬುಡಮೇಲು ಮಾಡಿದವು. 

ಒಂದು ಕಾಲದ ದೊಗಳೆ ಅಂಗಿ ಮತ್ತು ಜೋಳಿಗೆ ಹಾಕಿಕೊಂಡು, ಲಾಭವೋ ನಷ್ಟವೋ ಯೋಚಿಸದೆ, ನಾಡುನುಡಿಗೆ ಸೇವೆ ಸಲ್ಲಿಸುತ್ತಿದ್ದ ಪತ್ರಕರ್ತರು ಹಾಗೂ ಪತ್ರಿಕೆಗಳ ಜಾಗದಲ್ಲಿ ಕಾರ್ಪೋರೇಟ್ ಸಂಸ್ಕೃತಿಯ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಬಡವರ ಬಗ್ಗೆ ಮಾತಾಡುವ ನಿರೂಪಕರು ಕಾಣಿಸಿಕೊಂಡಿದ್ದಾರೆ. ‘‘ಪತ್ರಿಕೆಯೆಂದರೆ ಶಾಶ್ವತ ವಿರೋಧಪಕ್ಷ’’. ಕಣ್ಗಾವಲಿನ ಕರ್ತವ್ಯ ನಿರ್ವಹಿಸುವುದು ಮಾಧ್ಯಮಗಳ ಹೊಣೆಯಾಗಿತ್ತು. ಮಾಧ್ಯಮಗಳು ಮೈಯೆಲ್ಲ ಕಣ್ಣಾಗಿ, ಮಲಗಿದ್ದ ಜನರನ್ನು ಎಚ್ಚರಿಸಬೇಕಿತ್ತು. ಆದರೆ ಪ್ರಜಾತಂತ್ರದ ಮಾರ್ಗದಲ್ಲಿ, ವೈಜ್ಞಾನಿಕ ಮನೋಧರ್ಮದಲ್ಲಿ ವಿಕಾಸವಾಗಬೇಕೆಂದು ಕನಸುತ್ತಿರುವ ಈ ಸ್ವತಂತ್ರ ನಾಡನ್ನು ಶಾಸ್ತ್ರ, ಸಂಪ್ರದಾಯಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ನಿರಂತರ ಭಯ, ಆತಂಕಗಳ ಸ್ಥಿತಿಗಳಿಗೆ ತಳ್ಳುತ್ತಿರುವುದು ದುರದೃಷ್ಟಕರ.

ಶತಮಾನಗಳಿಂದ ಬೆಳೆದು ಬಂದಿದ್ದ ಸತ್ಯಪಕ್ಷಪಾತಿಯಾದ, ಜನಪರವಾದ ಪತ್ರಿಕೋದ್ಯವನ್ನು “ಜನರಿಗೋಸ್ಕರ” ಎಂಬ ಹೆಸರಿನಲ್ಲಿ ಪತ್ರಿಕೋದ್ಯಮದ ಮೇಲೆ ಲವಲೇಶವೂ ಪ್ರೀತಿ ಇಲ್ಲದವರು ಹಿಡಿತಕ್ಕೆ ತೆಗೆದುಕೊಳ್ಳತೊಡಗಿದ್ದಾರೆ. ಅದುವೇ ಪತ್ರಿಕೋದ್ಯಮಕ್ಕೆ ತಗಲಿದ ಶಾಪ. ದೊಡ್ಡವರಿಗೆ ಜನರ ಸುದ್ದಿ ಮುಟ್ಟಿಸಿ ಸುಧಾರಿಸಬೇಕಿತ್ತು. ಆದರೆ ದೊಡ್ಡವರ ಸುದ್ದಿಗಳನ್ನು ಜನಸಾಮಾನ್ಯರಿಗೆ ತುಂಬಾ ಮುಖ್ಯವೆಂಬಂತೆ ತೋರಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಲಾಗುತ್ತಿದೆ. ವಿವಾದಾತ್ಮಕ ಹೇಳಿಕೆಗಳು ಎಲ್ಲ ವಿಭಾಗಗಳಲ್ಲೂ ಸುದ್ದಿಯಾಗುತ್ತದೆ. ವಿಚಾರಾತ್ಮಕ ವಿಷಯಗಳಿಗೆ ಬೆಲೆ ಇಲ್ಲದಂತಾಗಿದೆ.

ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ಪತ್ರಿಕೆಗಳು ಎಷ್ಟಿವೆ? ಅದೇ ಸಂದರ್ಭದಲ್ಲಿ ಸ್ವಾರ್ಥ ಸಾಧನೆ ಧನದಾಸೆಯಿಂದ ಕೆಲಸ ಮಾಡುವ ಪತ್ರಿಕೆಗಳು ಇವೆ ಎಂಬುದನ್ನು ನಾವು ಮರೆಯಬಾರದು. ಗ್ರಾಮೀಣ ಬಡವರಲ್ಲಿ, ದಲಿತರಲ್ಲಿ, ಉಪೇಕ್ಷಿತ ವರ್ಗದವರಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ. ಸಮೂಹ ಸಂಪರ್ಕ ಮಾಧ್ಯಮಗಳೂ ಅವರಿಗೆ ಅಲಭ್ಯ. ಇರುವ ಭೂಮಿ ಕಡಿಮೆ. ಬಂಡವಾಳ ಇಲ್ಲ. ಕೈಗಾರಿಕಾ ಅಭಿವೃದ್ಧಿಯ ಫಲವಾಗಿ ಗುಡಿ ಕೈಗಾರಿಕೆಗಳೂ ಅವಸಾನಗೊಂಡಿವೆ. ರೈತರು ಅದರಲ್ಲೂ ಮುಖ್ಯವಾಗಿ ಬಹುಸಂಖ್ಯೆ ಸಣ್ಣ ಮತ್ತು ಅತಿ ಸಣ್ಣ ರೈತರು ಮಹಿಳೆಯರು, ದಲಿತರು, ಮತ್ತು ಸಾಮಾಜಿಕ ತುಳಿತಕ್ಕೆ ಒಳಗಾದ ಇನ್ನಿತರ ಜನವರ್ಗ ಇತ್ಯಾದಿ ಜನರೇ ಗ್ರಾಮೀಣ ಅಭಿವೃದ್ಧಿ ಯೋಜನೆಯ ಕೇಂದ್ರ ಬಿಂದುವಿನಲ್ಲಿ ಇರುವುದು.

ಸಂಪತ್ತಿನ ಅಸಮಾನ ಹಂಚಿಕೆ ಬಗ್ಗೆ, ನಗರ ನಿವಾಸಿಗಳು ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸುತ್ತಿರುವ ಬಗ್ಗೆ ಪತ್ರಿಕೆಗಳು ಮೌನವಾಗಿವೆ. ಮಾಧ್ಯಮಗಳು ಗ್ರಾಮೀಣ ಭಾರತದಿಂದ ದೂರವಾಗುತ್ತಿವೆ. ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು, ರೈತರನ್ನು ಕಾಡುತ್ತಿರುವ ತಲ್ಲಣಗಳು, ನೀರಿಗಾಗಿನ ಸಂಕಟ ಸುದ್ದಿಯಾಗುತ್ತಿಲ್ಲ. ಮಾಧ್ಯಮಗಳು ಗ್ರಾಮೀಣ ಬದುಕಿನ ಸುದ್ದಿ ಪ್ರಕಟಿಸುತ್ತಿಲ್ಲ, ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಗೊಣಗುವ ಬದಲು ನೀವೇ ಲೇಖನಿ ಹಿಡಿದು ಪತ್ರಿಕೆಗಳಿಗೆ ಬರೆಯಿರಿ. ವಾಚಕರವಾಣಿಯ ಮೂಲಕ ನೀವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಿರಿ. ಸಂಪಾದಕರಿಗೆ ಅಥವಾ ಪತ್ರಿಕೆಗಳಿಗೆ ಸುದ್ದಿಯ ಸುಳಿವು ನೀಡಿ. ನಾವು ಮಾಧ್ಯಮಗಳನ್ನು ಬಳಸುವ ರೀತಿಯಿಂದ ಅಥವಾ ಸ್ವೀಕರಿಸುವುದಕ್ಕನುಗುಣವಾಗಿ, ಅದೇ ಮಾಧ್ಯಮಗಳು ಎಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲವೋ ಅಷ್ಟೇ ಪ್ರತಿಕೂಲವಾಗಿಯೂ ವರ್ತಿಸಬಲ್ಲವು. ಒಟ್ಟಿನಲ್ಲಿ ಮಾಧ್ಯಮಗಳನ್ನು ಹೀಗಳೆಯುವ ಬದಲು ಅದನ್ನು ನಿಮ್ಮ ಅಭ್ಯುದಯಕ್ಕೆ ಬಳಸಿಕೊಳ್ಳಿ. 


✍️.... ಅರುಣ್‌ ಕೂರ್ಗ್‌ 

            (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,