Header Ads Widget

Responsive Advertisement

ಈ ಪುರುಷಾರ್ಥಕ್ಕೆ ಕೊಡಗಿನಲ್ಲಿ ಲಾಕ್ ಡೌನ್ ಅಗತ್ಯವಿದೆಯಾ..?!!

ಈ ಪುರುಷಾರ್ಥಕ್ಕೆ ಕೊಡಗಿನಲ್ಲಿ ಲಾಕ್ ಡೌನ್ ಅಗತ್ಯವಿದೆಯಾ..?!!

ಶಾಸಕರು, ಸಚಿವರು ಹಾಗೂ ಅಧಿಕಾರಿಗಳ ಹೇಳಿಕೆಗಳು ಕೇವಲ ಮಾಧ್ಯಮಗಳಿಗೆ ಮಾತ್ರ ಸೀಮಿತವೇ.!!


( ಸಾಂದರ್ಭಿಕ ಚಿತ್ರ )

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಂದ್ ಮಾಡಲಾಗಿದೆ, ಸದ್ಯದ ಮಟ್ಟಿಗೆ ಪ್ರವಾಸೋದ್ಯಮಕ್ಕೆ ಯಾವುದೇ ಅವಕಾಶವಿಲ್ಲ, ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದೆ, ಯಾವುದೇ ಪ್ರವಾಸಿಗರು ಒಳಗೆ ಬರುವಂತಿಲ್ಲ, ಕೊಡಗಿನಲ್ಲಿ ಪಾಸಿಟಿವಿಟಿ ದರ ಅಧಿಕವಾಗುತ್ತಿದೆ, ಇತರ ಜಿಲ್ಲೆಗಳನ್ನು ಹೋಲಿಸಿದರೆ ಜಿಲ್ಲೆ ಅಪಾಯದ ಸ್ಥಿತಿಯಲ್ಲಿದೆ.

ಈ ಮೇಲಿನ ಹೇಳಿಕೆಯನ್ನು ಶಾಸಕರು, ಸಚಿವರಿಂದ ಹಿಡಿದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದೆ ಹೇಳಿದ್ದು. ಇದೆಲ್ಲಾ ನೋಡಿದ್ದಾಗ ನಾಳೆಯಿಂದ ಯಾವುದೇ ನರಪಿಳ್ಳೆಯು ಕೊಡಗಿನ ಗಡಿದಾಟಿ ಒಳಗೆ ಬರುವುದಿಲ್ಲ ಎಂದು ನಾವೆಲ್ಲರೂ ಅಂದುಕೊಂಡಿದ್ದರೆ ಅದು ನಮ್ಮ ತಪ್ಪು ಕಲ್ಪನೆ‌. ಗಡಿ ತಪಾಸಣೆ ಇರುವುದು ಹೊರ ಜಿಲ್ಲೆಯಲ್ಲಿರುವ ಕೊಡಗಿನವರು ಬರುವಾಗ ಹೊರತು ಹೊರಜಿಲ್ಲೆಯ ಪ್ರವಾಸಿಗರು ಕೊಡಗಿಗೆ ಬರುವಾಗ ಅಲ್ಲಾ ಎನ್ನುವುದು ಅನೇಕರ ಮಾತು, ಇದು ವಾಸ್ತವ ಕೂಡ. 

ಪ್ರತಿನಿತ್ಯ ನೂರಾರು ವಾಹನಗಳು ಗಡಿ ದಾಟಿ ಒಳಗೆ ಬರುತ್ತಿದೆ ಅಷ್ಟೇ ಪ್ರಮಾಣದಲ್ಲಿ ಹೊರಗೆ ಹೋಗುತ್ತಿದೆ. ಕೊಡಗಿನ ಲಾಕ್ ಡೌನ್ ವಿಷಯ ಒಂದು ರೀತಿಯಲ್ಲಿ ಹೇಳಬೇಕಾದರೆ ಯಾರು ಕಾಣುತ್ತಿಲ್ಲವೆಂದು ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ ತಲೆಯನ್ನು ಮಾತ್ರ ಅಂಗಡಿಯೊಳಗೆ ಹಾಕಿ, ಸಂಪೂರ್ಣ ದೇಹವನ್ನು ಹೊರಗೆ ಕಾಣುವಂತೆ ತಲೆಮರೆಸಿಕೊಂಡ ಅಪರಾಧಿಯಂತೆ ಎಂದರೆ ತಪ್ಪಲ್ಲ. ಪರಿಸ್ಥಿತಿ ಹೀಗೆ ಮುಂದುವರಿದ್ದರೆ ಕೊರೋನ ಪಾಸಿಟಿವಿಟಿ ದರ ಇಡೀ ದೇಶದಲ್ಲಿ ಕಡಿಮೆಯಾದರು ಕೊಡಗಿನಲ್ಲಿ ಕಡಿಮೆಯಾಗುವುದಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕುಶಾಲನಗರ ಭಾಗ ಒಂದಷ್ಟು ಬಿಗಿಯಾಗಿರುವಂತೆ ಕಂಡರು ಆ ಭಾಗದಲ್ಲಿಯೂ ಪ್ರವಾಸಿಗರು ಆಗಮಿಸುತ್ತಿದ್ದಾರೆಂಬ ದೂರು ಕೇಳಿಬರುತ್ತಿದೆ. ಇನ್ನು ಆನೆ ಚೌಕೂರ್ ಗಡಿಯಲ್ಲಿ ಎಗ್ಗಿಲ್ಲದೆ ವಾಹನಗಳು ಒಳಗೆ ಹೊರಗೆ ಓಡಾಡುತ್ತಿದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರೆ ತಪ್ಪಲ್ಲ. ಕಳೆದ ಮೂರ್ನಾಲ್ಕು ದಿವಸಗಳ ಹಿಂದೆ ನಾನೇ ಬೇರೆ ಕಾರಿನಲ್ಲಿ ಗೇಟ್ ಮೂಲಕ ಹೊರಗೆ ಹೋಗಿ ಬಂದರು ಯಾರು ಕೇಳಲಿಲ್ಲ. ಇದೀಗ ಮತ್ತೆ ಒಂದಷ್ಟು ಬಿಗಿಯಾಗಿರಬಹುದು ಎಂಬ ಆಲೋಚನೆಯಲ್ಲಿ ನಿನ್ನೆ ಬೆಳಿಗ್ಗೆ ಆನೆಚೌಕೂರು ಗಡಿಗಾಗಿ ಹೊರ ಹೋದ ನನ್ನ ಸ್ನೇಹಿತರೊಬ್ಬರ ವಾಹನ (ಕೊಡಗಿನ ನಂಬರ್ ಪ್ಲೇಟ್ ಅಲ್ಲಾ) ಸಂಜೆಯೊಳಗೆ ಬರಬೇಕಾದರೂ ಅವರನ್ನು ಒಂದೇ ಒಂದು ನರಪಿಳ್ಳೆ ಕೂಡ ಕೇಳಲಿಲ್ಲ ಎನ್ನುವುದು ವಾಸ್ತವ. ಗಡಿ ಎನ್ನುವುದು ಒಂದು ರೀತಿಯಲ್ಲಿ ಅಪ್ಪ ಅಮ್ಮ ಇಲ್ಲದ ಅನಾಥ ಮಗುವಿನಂತೆ ಎಂದರೆ ತಪ್ಪಲ್ಲ. ಇದು ಕೇವಲ ಆನೇ ಚೌಕೂರು ಗಡಿ ಮಾತ್ರವಲ್ಲ, ಇದೇ ವ್ಯವಸ್ಥೆ ಕುಟ್ಟಾ ಕೇರಳ ಗಡಿಭಾಗದಲ್ಲಿ ಕೂಡ ಕಂಡುಬರುತ್ತಿದ್ದು ಹಲವಾರು ಕೇರಳ ವಾಹನಗಳು ಗಡಿಯನ್ನು ದಾಟಿ ಒಳಬರುತ್ತಿದೆ. 

ಕೊಡಗಿನ ಬಹುತೇಕ ಎಲ್ಲಾ ಗಡಿಭಾಗಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಮತ್ತು ಮಧ್ಯಾಹ್ನ ಯಾವುದೇ ತಪಾಸಣೆ ಇರುವುದಿಲ್ಲ ಎನ್ನುವುದು ಹಲವಾರು ನಾಗರಿಕರ ದೂರು. ಜಿಲ್ಲೆಯೊಳಗೆ ಹೆಚ್ಚಾಗಿ ಕಂಡುಬರುತ್ತಿರುವ ಹೊರಜಿಲ್ಲೆಯ ಹಲವಾರು ವಾಹನಗಳನ್ನು  ನೋಡಿದ್ದಾಗ ಇದು ವಾಸ್ತವ ಕೂಡ ಅನಿಸದೆ ಇರಲಾರದು. ಜಿಲ್ಲೆಯ ಗಡಿಯೊಳಗೆ ಜನರನ್ನು ಕತ್ತಲೆಯಲ್ಲಿಟ್ಟು ಗಡಿಯಾಚೆಯಿಂದ ಒಳಗೆ ಬರಲು ಅವಕಾಶ ಮಾಡಿಕೊಡಲಾಗಿದೆ ಎನ್ನುವುದು ಹಲವಾರು ಮಂದಿಯ ಆರೋಪವಾದರೂ ಸತ್ಯ.

ಇನ್ನು ಹಲವಾರು ಏಜೆಂಟರು ತೋಟದ ಕಾರ್ಮಿಕರನ್ನು ದೂರದ ಅಸಾಂ ಗೋವ್ವಾಟಿ ಭಾಗಗಳಿಂದ ಕೂಡ ಟೆಂಪೊ ಟ್ರಾವೆಲ್ಸ್ ಮೂಲಕ ಕರೆಸಿಕೊಳ್ಳುತ್ತಿದ್ದು ಮಧ್ಯರಾತ್ರಿಯಲ್ಲಿ ಕೂಡ ಜಿಲ್ಲೆಯೊಳಗೆ ಇವರನ್ನು ನುಸುಳಿಸಲು ನೋಡುತ್ತಿದ್ದಾರೆ. ನಿನ್ನೆ ಕೂಡ ಕುಶಾಲನಗರ ಭಾಗದಲ್ಲಿ ಒಂದು ಟೆಂಪೋ ಟ್ರಾವೆಲ್ಸ್ ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದು, ಅತ್ತಾ ವಾಪಾಸು ಹೋಗಲಾಗದೆ ಇತ್ತ ಕೆಲಸವಿಲ್ಲದೆ ವಯಸ್ಕರು ಮಕ್ಕಳೊಂದಿಗೆ ಅತಂತ್ರ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ಹೊರ ರಾಜ್ಯದಿಂದ ಕರೆಸಿಕೊಳ್ಳುವವರು ಕೂಡ ಯೋಚಿಸಬೇಕಿದೆ‌. ಹಾಗೇ ಹಣದಾಸೆಗೆ ಸೋಂಕಿತರನ್ನು ಕೂಡ ಗಡಿಯೊಳಗೆ ನುಸುಳಿಸಲು ನೋಡುತ್ತಿರುವ ಏಜೆಂಟರನ್ನು ಪತ್ತೆ ಹಚ್ಚಿ ಕೇಸು ದಾಖಲಿಸಬೇಕಿದೆ. ಇನ್ನು ಕೆ.ಎ-12 ಎಂಬ ಗಾಡಿ ಕಂಡರೆ ಅದನ್ನು ಪರಿಶೀಲಿಸದೆ ಒಳಗೆ ಬಿಡುತ್ತಿದ್ದು, ಕೆಲವು ಏಜೆಂಟರು ಇದನ್ನೆ ಬಂಡವಾಳ ಮಾಡಿಕೊಂಡು ಹೊರ ರಾಜ್ಯದ ಕಾರ್ಮಿಕರನ್ನು ಯಾವುದೇ ಮುಂಜಾಗ್ರತಾ ಕೊರೋನ ತಪಾಸಣೆ ಇಲ್ಲದೆ ಒಳಗೆ ಕರೆಸಿಕೊಳ್ಳುತ್ತಿದ್ದಾರೆ.

ಗಡಿ ತಪಾಸಣೆ ಎನ್ನುವುದು ಕೇವಲ ನೆಪ ಮಾತ್ರವಾಗಿದ್ದು ಪ್ರವಾಸಿಗರು ಜಿಲ್ಲೆಗೆ ಯಾವುದೇ ಭಯವಿಲ್ಲದೆ ಬರುತ್ತಿದ್ದಾರೆ. ಅದೇ ಜಿಲ್ಲೆಯಲ್ಲಿ ಆಸ್ತಿ ಪಾಸ್ತಿ ಮನೆ ಹೊಂದಿರುವ ಅನೇಕ ಮೂಲ ನಿವಾಸಿಗಳು ಬೆಂಗಳೂರು ಮೈಸೂರುವಿನಲ್ಲಿ ವಾಸವಿದ್ದು ಅವರು ತಮ್ಮ ತೋಟದ ಕೆಲಸ ಮಾಡಿಸಲು ಜಿಲ್ಲೆಗೆ ಬರಲು ಅಥವಾ ತಮ್ಮವರನ್ನು ನೋಡಲು ಬರಲು ಭಯಪಡುತ್ತಿದ್ದಾರೆ ಹಾಗೂ ತಮ್ಮವರಿಗೆ ತೊಂದರೆಯಾಗುತ್ತೆ ಸಹಿಸಿಕೊಳ್ಳೋಣ ಎಂದು ಸುಮ್ಮನಿದ್ದಾರೆ. ಮೊನ್ನೆ ನನ್ನ ಪತ್ರಿಕಾ ಸ್ನೇಹಿತರೊಬ್ಬರು ಪುಟ್ಟದೊಂದು ಕವನ ಮಾದರಿಯಲ್ಲಿ ಬರಹವೊಂದನ್ನು ಕಳುಹಿಸಿದ್ದರು.

#ಯಾರಿಗಾಗಿ ಈ ಲಾಕ್_ಡೌನ್

ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಗೆ ಈ ಲಾಕ್ ಡೌನ್

ಕೂಲಿ ಕಾರ್ಮಿಕರಿಗೆ ಈ ಲಾಕ್ ಡೌನ್ 

ಸಂಕಷ್ಟಕ್ಕೆ ಒಳಗಾದ ಕುಟುಂಬಕ್ಕೆ ಈ ಲಾಕ್ ಡೌನ್.

#ಯಾರಿಗಾಗಿ ಈ ಲಾಕ್_ಡೌನ್‌

ಪ್ರವಾಸಕ್ಕೆ ಬರುವವರಿಗೆ ಇಲ್ಲ ಈ ಲಾಕ್ ಡೌನ್.

ಶ್ರೀಮಂತರಿಗೆ ಓಡಾಟ ನಡೆಸುವವರಿಗೆ ಇಲ್ಲ ಈ ಲಾಕ್ ಡೌನ್.

ರಾಜಕೀಯ ವ್ಯಕ್ತಿಗಳಿಗೆ ಇಲ್ಲ ಈ ಲಾಕ್ ಡೌನ್

#ಯಾರಿಗಾಗಿ ಈ ಲಾಕ್_ಡೌನ್.

ಇದು ವಾಸ್ತವ ಕೂಡ ಅನಿಸದೆ ಇರಲಾರದು. ಇಂತಹ ಲಾಕ್ ಡೌನ್ ಜಿಲ್ಲೆಗೆ ಅಗತ್ಯವಿದೆಯಾ.? ಇದನ್ನು ಸಂಬಂಧಪಟ್ಟವರು ಚಿಂತಿಸಬೇಕಿದೆ. ಇದೀಗ ಮೊನ್ನೆ ಶಾಸಕರು ಹಾಗೂ ಸಚಿವರು ಹೇಳಿಕೆ ನೀಡಿ ಎಚ್ಚರಿಸಿದ ಮೇಲೆ ಜಿಲ್ಲೆಯೊಳಗೆ ಒಂದಿಷ್ಟು ಬಿಗಿಯಾಗಿದ್ದು ಪ್ರವಾಸ ಬಂದವರು ಹೋಂಸ್ಟೇ ರೇಸಾರ್ಟ್'ಗಳಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಿದ್ದಾರೆ. ಆದರೆ ಕೊಡಗಿನಲ್ಲಿ ಮದುವೆಗೆಂದು ಬಂದವರಿಗೆ ಕೊಡಗಿನ ಲಾಡ್ಜ್'ಗಳಲ್ಲಿ ರೂಂಗಳು ಸಿಗುತ್ತಿವೆ. ಹಾಗೇ ಮದುವೆ ನೆಪದಲ್ಲಿ ಬಂದವರು ಕೊಡಗಿನ ಲಾಡ್ಜ್'ಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಂದರೆ ಇವರಿಗೆ ಲಾಡ್ಜ್'ನಲ್ಲಿ ರೂಂ ಹೇಗೆ ಸಿಕ್ಕಿದೆ. ಹಾಗಾದರೆ ಗಡಿ ತಪಾಸಣೆ ಹೇಗಿದೆ ಎಂದು ಊಹಿಸಲು ಅಸಾಧ್ಯವೇನಿಲ್ಲ. ಇಂತಹ ಗಡಿ ತಪಾಸಣೆ ಅಗತ್ಯವಿದೆಯಾ ಅಥವಾ ಇಂತಹ ಲಾಕ್ ಡೌನ್ ಕೊಡಗಿಗೆ ಅಗತ್ಯವಿದೆಯಾ ಎಂದು ಜಿಲ್ಲಾಡಳಿತದಿಂದ ಹಿಡಿದು ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳು ಚಿಂತಿಸಬೇಕಿದೆ. ಶಾಸಕರು ಹಾಗೂ ಸಚಿವರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಬೇಕಿದೆ. ಹಾಗೇ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಒತ್ತಾಯವಾದರೂ ಕೊನೆಯದಾಗಿ ಒಂದು ಮಾತು ಹೇಳಬೇಕಾದರೆ ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿದ್ದ ಡಿಸಿ ಹಾಗೂ ಎಸ್ಪಿ ಈ ಸಮಯದಲ್ಲಿ ಇರಬೇಕಿತ್ತು.


✍️....ಚಮ್ಮಟೀರ ಪ್ರವೀಣ್ ಉತ್ತಪ್ಪ

                   ( ಪತ್ರಕರ್ತರು )

ಮೊ: 9880967573

( ಚಮ್ಮಟೀರ ಪ್ರವೀಣ್ ಉತ್ತಪ್ಪ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,