Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೃಷ್ಣ ಉದ್ಧವರ ಸಂವಾದವೇ ಉದ್ಧವಗೀತಾ

ಕೃಷ್ಣ ಉದ್ಧವರ ಸಂವಾದವೇ ಉದ್ಧವಗೀತಾ



ಶ್ರೀ ಕೃಷ್ಣನನ್ನು ಭಗವಂತನೆಂದು ಅರಿತುಕೊಂಡಿದ್ದ ಜ್ಞಾನಿ ಉದ್ಧವ. ಯಾದವಕುಲದ ಪರಿಸಮಾಪ್ತಿಯ ಬಗೆಗೆ ತಿಳಿದು ಅವನಿಗೆ ದುಃಖವಾಗಿತ್ತು.“ನೀನು ದ್ವಾರಕೆಗೆ ಯಾಕೆ ಮರಳುವುದಿಲ್ಲ? ನಿನ್ನ ಕುಲದವರನ್ನು ಯಾಕೆ ಸರ್ವನಾಶದಿಂದ ಕಾಪಾಡುವುದಿಲ್ಲ?” ಎಂದು ಭಗವಂತ ಶ್ರೀ ಕೃಷ್ಣನ್ನು ಉದ್ಧವ ಪ್ರಶ್ನಿಸಿದ್ದ.

ಆಗ ಶ್ರೀಕೃಷ್ಣ ಉದ್ಧವನಿಗೆ ಹೀಗೆ ನುಡಿಯುತ್ತಾನೆ. “ಯಾದವರು ಅಧಿಕಾರ, ಶೌರ್ಯ ಮತ್ತು ಅದೃಷ್ಟದ ಅಹಂಕಾರದಿಂದ ಮತ್ತರಾಗಿದ್ದಾರೆ. ಇವರು ಜಗತ್ತನ್ನೇ ಗೆಲ್ಲುವ ಆಕಾಂಕ್ಷೆ ಹೊಂದಿದ್ದಾರೆ. ಸಮುದ್ರ ತನ್ನ ತೀರಗಳ ಮಿತಿಯಲ್ಲಿರುವಂತೆ ಯದುಕುಲ ನನ್ನಿಂದಾಗಿ ಮಿತಿಯಲ್ಲಿದ್ದೆ. ನಾನು ತೆರಳಿದ ಬಳಿಕ ಇವರು ಮದಮತ್ತರಾಗಿ ಲೋಕದ ವಿನಾಶಕ್ಕೆ ಕಾರಣರಾಗುತ್ತಾರೆ. ಹೀಗಾಗಿ ನಾನು ಇಹಲೋಕ ತ್ಯಾಗ ಮಾಡುವ ಮೊದಲು ಯದುವಂಶವನ್ನು ನಾಶಮಾಡುವುದು ಅಗತ್ಯವಾಗಿದೆ” ಎಂದು ಶ್ರೀಕೃಷ್ಣ ಉದ್ಧವನಿಗೆ ಹೇಳಿ ಅವನಿಗೆ ವೇದಾಂತ ದರ್ಶನ ಮಾಡಿದ್ದ. ಶ್ರೀಕೃಷ್ಣ ಉದ್ಧವನಿಗೆ ಬೋಧಿಸಿದ ಗೀತೆಗೆ ಉದ್ಧವ ಗೀತೆ ಎಂದು ಹೆಸರು. 

ಕೃಷ್ಣನು ತನ್ನ ಮುಂಬರುವ ನಿರ್ಗಮನದ ನಂತರ ಸಮಾಧಾನಿಸುವ ಸಲುವಾಗಿ ಉದ್ಧವನಿಗೆ ತಾನು ಪ್ರಪಂಚ ಬಿಡುವ ಸ್ವಲ್ಪ ಮೊದಲು ಉದ್ದವ ಗೀತೆಯನ್ನು ಹೇಳಿದನು. ಅದು ಉದ್ಧವನು ಯಾದವ ಸಮುದಾಯ ಸನ್ನಿಹಿತವಾದ ನಾಶವನ್ನು ನೋಡಿದ ನಂತರ ಅವನ ಕಂಗೆಟ್ಟ ಸ್ಥಿತಿಯಿಂದ ಶುರುವಾಗುತ್ತದೆ. ಇದು ಅವಧೂಥ ಅಥವಾ ಪರಮಹಂಸರ ಬಗ್ಗೆ ತಿಳಿಸುವ ಕಾರಣ ಹಂಸಗೀತೆ ಎಂದೂ ಹೆಸರಿದೆ. ಶ್ರೀಕೃಷ್ಣ ಪ್ರಭಾಸ ಎಂಬ ಕಡಲಿನ ಬಳಿ ರಥದಿಂದ ಇಳಿದ ಬಳಿಕ ಶ್ರೀಕೃಷ್ಣ ಆದೇಶದಂತೆ ಉದ್ಧವ ಬದರಿಕಾಶ್ರಮಕ್ಕೆ ತೆರಳಿ ತಪಸ್ಸಿಗೆ ಕುಳಿತಿದ್ದ.

ಭಾಗವತ ಪುರಾಣದ ಪ್ರಕಾರ ಶ್ರೀ ಕೃಷ್ಣ ದ್ವಾರಕೆಯನ್ನು ಬಿಟ್ಟು ಹೊರಟಾಗ ತನ್ನ ರಾಣಿಯರಿಗೂ ತಿಳಿಸಿರಲಿಲ್ಲ. ತನ್ನ ಪ್ರಾಣಮಿತ್ರ ಅರ್ಜನನಿಗೂ ಈ ಬಗ್ಗೆ ಹೇಳಿರಲಿಲ್ಲ. ಭಗವಂತನ ಮಹಾನಿರ್ವಾಣ ಯಾತ್ರೆಯಲ್ಲಿ ಆಪ್ತ ಗೆಳೆಯ ಮತ್ತು ಸಲಹೆಗಾರ ಹಾಗೂ ಹತ್ತಿರದ ಬಂಧು (ವಾಸುದೇವನ ಸೋದರ ದೇವಭಾಗನ ಮಗ) ಉದ್ಧವ ಮಾತ್ರ ಜೊತೆಗೆ ಹೋಗಿದ್ದ.

ಉದ್ಧವನು ಭಾಗವತ ಪುರಾಣದಲ್ಲಿ ಗಮನಾರ್ಹ ಪಾತ್ರ ವಹಿಸುತ್ತಾನೆ. ಕೃಷ್ಣನೇ ಸ್ವತಃ ಉದ್ಧವನಿಗೆ ನೇರವಾಗಿ ಯೋಗ ಮತ್ತು ಭಕ್ತಿಯ ಪ್ರಕ್ರಿಯೆಗಳನ್ನು ಕಲಿಸಿಕೊಡುತ್ತಾನೆ. ಈ ಚರ್ಚೆಗಳ ತತ್ವವನ್ನು ಹಲವುವೇಳೆ ಉದ್ಧವ ಗೀತೆ ಎಂದು ಸೂಚಿಸಲಾಗುತ್ತದೆ. ಇದು ಕೃಷ್ಣನು ಅರ್ಜುನನಿಗೆ ಬೋಧಿಸುವ ಭಗವದ್ಗೀತೆಯನ್ನು ಹೋಲುತ್ತದೆ. ಉದ್ಧವನ ದೈಹಿಕ ನೋಟ ಕೃಷ್ಣನನ್ನು ಎಷ್ಟು ಹೋಲುತ್ತಿತ್ತೆಂದರೆ ಕೆಲವು ಸಂದರ್ಭಗಳಲ್ಲಿ ಅವನನ್ನು ಕೃಷ್ಣನೆಂದು ತಪ್ಪಾಗಿ ತಿಳಿಯಲಾಗುತ್ತದೆ.

ಇಂಥಾ ಸಮಯದಲ್ಲಿ ಉದ್ಧವ ಕೃಷ್ಣನ ಬಳಿ ಬಂದು, ಕೊನೆಯ ದಿನಗಳಲ್ಲಾದರೂ ಮನಸ್ಸಿಗೆ ಶಾಂತಿ ಬೇಕೆನಿಸಿದೆ. ಏನಾದರೂ ಸೂಚಿಸು ಎಂದು ಕೇಳುತ್ತಾನೆ. ಅದಕ್ಕೆ ಕೃಷ್ಣನು ಉದ್ಧವನಿಗೆ ತೀರ್ಥಯಾತ್ರೆಗೆ ಹೋಗುವಂತೆ ಸೂಚಿಸಿ, ಕೆಲವು ನಿರ್ದೇಶನಗಳನ್ನು ನೀಡುತ್ತಾನೆ.

“ಭೂಮಿಯಿಂದ ಸರ್ವಸಂಗ ಪರಿತ್ಯಾಗವನ್ನೂ, ನೀತಿಯುಕ್ತ ಬದುಕಿಗಾಗಿ ಭೂಮಿಯಿಂದ ಕ್ಷಮಾಗುಣವನ್ನೂ, ವಾಯುವಿನಿಂದ ನಿರ್ಲಿಪ್ತತೆಯನ್ನೂ, ಜಲದಿಂದ ಪವಿತ್ರತೆಯನ್ನೂ, ಆಕಾಶದಿಂದ ನಿರ್ದೋಷತ್ವವನ್ನೂ, ಅಗ್ನಿಯಿಂದ ಶುಚಿತ್ವವನ್ನೂ, ಚಂದ್ರನಿಂದ ನಿರ್ವಿಕಾರ ಬುದ್ಧಿಯನ್ನೂ, ಸೂರ್ಯನಿಂದ ಸ್ವಾರ್ಥತ್ಯಾಗವನ್ನೂ, ಪಾರಿವಾಳದಿಂದ ಅತಿಸ್ನೇಹ ವರ್ಜನೆಯನ್ನೂ, ಹೆಬ್ಬಾವಿನಿಂದ ಸಿಕ್ಕಿದ್ದರಲ್ಲೇ ತೃಪ್ತಿಪಡುವುದನ್ನೂ, ಸಮುದ್ರದಿಂದ ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸುವುದನ್ನೂ, ಜೇನುನೊಣದಿಂದ ಸದಾ ಸಂಚರಿಸುತ್ತಿರಬೇಕೆಂಬುದನ್ನೂ, ಆನೆಯಿಂದ ಮೋಸವಾಗಬಾರದೆಂಬುದನ್ನೂ, ಜಿಂಕೆಯಿಂದ ಚಂಚಲಚಿತ್ತನಾಗಬಾರದೆಂಬುದನ್ನೂ, ಮೀನಿನಿಂದ ನಾಲಗೆ ರುಚಿಗೆ ಮರುಳಾಗಬಾರದೆಂಬುದನ್ನೂ, ಪಕ್ಷಿಯಿಂದ ಸಂಗ್ರಹಬುದ್ಧಿ ಕೂಡದೆಂಬುದನ್ನೂ, ಮಗುವಿನಿಂದ ಮಾನಾಪಮಾನದ ಅಭಿಮಾನ ತೊರೆಯಬೇಕೆಂಬುದನ್ನೂ, ಬಿಲ್ಲುಗಾರನಿಂದ ಏಕಾಗ್ರತೆಯನ್ನೂ, ಹಾವಿನಿಂದ ಮೌನವನ್ನೂ, ದುಂಬಿಯಿಂದ ಧ್ಯಾನಿಸಿದ್ದನ್ನು ದೊರಕಿಸಿಕೊಳ್ಳುವ ನಂಬಿಕೆಯನ್ನೂ  ಅರಿತುಕೋ. ಇವು ಪ್ರಕೃತಿಯಲ್ಲಿ ದೊರೆಯುವ ಮಾರ್ಗದರ್ಶಕರು ಎಂದು ಶ್ರೀಕೃಷ್ಣ ಉದ್ಧವನಿಗೆ ಹೇಳುತ್ತಾನೆ. ಅನಂತರ ಉದ್ಧವನ ಕೋರಿಕೆಯಂತೆ ಅವನಿಗೆ ಭಾಗವತವನ್ನು ಉಪದೇಶಿಸಿ, ತೀರ್ಥಯಾತ್ರೆಗೆ ಅವನನ್ನು ಬೀಳ್ಕೊಡುತ್ತಾನೆ.

ಯಾದವರ ನಡುವೆಯೇ ಉದ್ಧವನಂಥ ಸೂಕ್ಷ್ಮಜ್ಞರಿದ್ದರು. ಉದ್ಧವನಿಗೆ ಕೃಷ್ಣನ ವ್ಯಕ್ತಿತ್ವದ ಸೆಳೆತವಿತ್ತು. ಆ ಪ್ರೀತಿಯಂದಲೇ ಕೃಷ್ಣನನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಯುಗವೇ ತನಗಾಗಿ ಆಯ್ಕೆ ಮಾಡಿದ ವ್ಯಕ್ತಿಯಂತೆ-ಯುಗಪುರುಷನಂತೆ- ಕೃಷ್ಣ, ಉದ್ಧವನಿಗೆ ಕಂಡು ಬರುತ್ತಿದ್ದ. ಆದರೆ, ಯಾದವರ ಇಂದಿನ ಪರಿಸ್ಥಿತಿ ಉದ್ಧವನಲ್ಲಿ ಕಳವಳವನ್ನುಂಟು ಮಾಡುತ್ತಿತ್ತು. ಕೃಷ್ಣನಂಥವನು ಹುಟ್ಟಿ ಬಂದ ಕುಲ ! ಯಾಕೆ ಹೀಗಾಗಿದೆ ? ಏನು ಯುಗವೇ ಕೊನೆಗೊಳ್ಳುವುದೇ ? ಉದ್ಧವ ಕೃಷ್ಣನನ್ನು ಸಂಧಿಸಿದ. ತನ್ನ ಬಗೆಯನ್ನು ತೋಡಿಕೊಂಡ. ಕೃಷ್ಣ ಉದ್ಧವರ ಸಂವಾದವೇ ಉದ್ಧವಗೀತಾ. ಅದಕ್ಕೆ ಅವಧೂತ ಗೀತಾ ; ಭಿಕ್ಷುಗೀತಾ ಎಂದೂ ಹೇಳುವುದುಂಟು. ಅವಧೂತನಿಗೆ ನಿಸರ್ಗವೇ ಗುರು. ಅವಧೂತನೆಂದರೆ ನೈಸರ್ಗಿಕ ಮನುಷ್ಯ. ನಿಸರ್ಗಕ್ಕೆ ದ್ವಂದ್ವಗಳಿಲ್ಲ. ನೀನು ಸಹಜವಾಗಿದ್ದರೆ, ನಿಸರ್ಗ ತನ್ನೆಲ್ಲ ಅರಿವನ್ನೂ ನಿನಗೆ ಭಿಕ್ಷೆಯಂತೆ ಎತ್ತಿಕೊಡಲು ಸಿದ್ಧವಾಗಿಯೇ ಇದೆ. ಮಣ್ಣು ಮತ್ತು ಪ್ರಜ್ಞೆ ಎರಡೂ ಬೇರೆ ಬೇರೆಯಲ್ಲ. ಒಂದೇ ಚಿದಂಶದ ಎರಡು ಮುಖಗಳಿವು. ಉದ್ಧವನೊಡನೆ ಕೃಷ್ಣನಾಡಿದ ಮಾತುಗಳಲ್ಲಿ ಇತ್ಯಾದಿ ಸೂಕ್ಷ್ಮ ವಿಚಾರಗಳ ಅನುರಣವಿದೆ.


ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                                   (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,