{ಜುಲೈ 26, 22ನೇ ವರ್ಷದ ಕಾರ್ಗಿಲ್ ವಿಜಯ ದಿವಸ ವಿಶೇಷ ಲೇಖನ}
"ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!"
ಅವರ ಕನಸುಗಳಲ್ಲಿ ನಾಳಿನ ನೆಮ್ಮದಿಯ ಬದುಕಿಲ್ಲ….
ಅವರ ಮನಸುಗಳಲ್ಲಿ ಬದುಕಿ ಬರುವ ಸುಳಿವಿಲ್ಲ….
ಕಾರ್ಗಿಲ್ ವಿಜಯೋತ್ಸವಕ್ಕೆ 22 ವರ್ಷಗಳು. ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಲೇಹ್ ಹೆದ್ದಾರಿವರೆಗೆ ಆಕ್ರಮಿಸಿಕೊಂಡಿದ್ದ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಈ ಹೋರಾಟವು ಪಾಕಿಸ್ತಾನದ ವಿರುದ್ಧ ನಾಲ್ಕನೇ ನೇರ, ಸಶಸ್ತ್ರ ಸಂಘರ್ಷವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು. ಸೇನೆಯ ಅಧಿಕಾರಿಗಳು ಸೇರಿದಂತೆ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಜುಲೈ 26ರಂದು ’ಆಪರೇಷನ್ ವಿಜಯ್’ ಯಶಸ್ವಿ ಎಂದು ಘೋಷಿಸಿತು. ಅಂದಿನಿಂದ "ಕಾರ್ಗಿಲ್ ವಿಜಯೋತ್ಸವ" ದಿನ ಆಚರಿಸಲಾಗುತ್ತಿದೆ.
22 ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲ ರಕ್ಷಿಸಿದ್ದಾರೆ. ಅಂಥ ವೀರ ಯೋಧರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಜುಲೈ 26ನ್ನು ಕಾರ್ಗಿಲ್ ದಿವಸವನ್ನಾಗಿ ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ ದಿವಸದ ದಿನ ಪ್ರತಿಯೊಬ್ಬ ಭಾರತೀಯರು ಸೇನಾ ಪಡೆಯ ಧೈರ್ಯ ಮತ್ತು ಸಾಹಸಗಳನ್ನು ಸ್ಮರಿಸುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು ಮತ್ತು ಅವರ ಕುಟುಂಬದವರಿಗೆ ಋಣ ನಮ್ಮೆಲ್ಲರ ಮೇಲಿದೆ. ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಮತ್ತು ಭಾರತೀಯರ ರಕ್ಷಣೆಗೆ ಕಟಿಬದ್ಧರಾದ ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆ.
"ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!" ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲುಗಳಿವು! ಕಾರ್ಗಿಲ್ ವಿಜಯ ದಿವಸ ಎಂಬುದು ಭಾರತೀಯ ಸೇನಾ ಇತಿಹಾಸದ ಪರ್ವಕಾಲ. ನಮಗಾಗಿ, ನಮ್ಮ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ರಾತ್ರಿ-ಹಗಲೆನ್ನದೆ ಶತ್ರು ರಾಷ್ಟ್ರದ ವೈರಿಗಳೊಂದಿಗೆ ಸೆಣೆಸಾಡುತ್ತಾನೆ, ಮಳೆ-ಚಳಿ ಎನ್ನದೆ ಗಡಿ ಕಾಯುತ್ತಾನೆ, ಹೊಟ್ಟೆಗೆ ಸರಿಯಾಗಿ ಆಹಾರವೇ ಸಿಕ್ಕದಿದ್ದರೂ ದೇಶಕ್ಕಾಗಿ ಹಪಹಪಿಸುತ್ತಾನೆ! ಕೊನೆಗೊಂದು ದಿನ ಮಡಿಯುತ್ತಾನೆ! ಎಂಥ ವಿಚಿತ್ರ? ಇಂಥವರ ಋಣ ತೀರಿಸುವುದಕ್ಕೆ ಯಾರಿಂದ ಸಾಧ್ಯ? ಎಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಯುದ್ಧ ಗೆದ್ದ ನಮ್ಮವರ ಶೌರ್ಯಕ್ಕೆ ಒಂದು ಸಲಾಂ
ಕಾರ್ಗಿಲ್ ಯುದ್ಧದ ಬಗ್ಗೆ ಒಂದಿಷ್ಟು ಮಾಹಿತಿ:
1999 - ಮೇ 3: ಕಾರ್ಗಿಲ್‌ನೊಳಗೆ ಪಾಕಿಸ್ತಾನ ಸೇನೆ ನುಗ್ಗಿದ್ದನ್ನು ಪತ್ತೆ ಹಚ್ಚಿದ ಕುರಿಗಾಹಿಗಳು
ಮೇ 5: ಭಾರತೀಯ ಸೇನೆ ರವಾನೆ- ಭಾರತದ ಐವರು ಯೋಧರನ್ನು ಸೆರೆ ಹಿಡಿದ ಪಾಕ್ ಚಿತ್ರಹಿಂಸೆ ನೀಡಿ ಕೊಂದು ಹಾಕಿತು.
ಮೇ 9: ಪಾಕಿಸ್ತಾನದಿಂದ ಶೆಲ್ ದಾಳಿ, ಕಾರ್ಗಿಲ್‌ನಲ್ಲಿದ್ದ ಸೇನಾ ಶಸ್ತ್ರಾಗಾರಕ್ಕೆ ಹಾನಿ
ಮೇ 10: ಡ್ರಾಸ್, ಕಾಕ್ಸಾರ್ ಮತ್ತು ಮುಷ್ಕೊಹ್‌ನಲ್ಲಿ ಪಾಕಿಗಳು ಒಳನುಗ್ಗಿದ್ದನ್ನು ಮೊದಲಿಗೆ ಪತ್ತೆ ಹಚ್ಚಲಾಯಿತು.
ಮೇ 26: ಒಳನುಗ್ಗಿದವರ ಮೇಲೆ ವಾಯುಪಡೆಯಿಂದ ದಾಳಿ ಆರಂಭ
ಮೇ 27: ಮಿಗ್ 21 ಮತ್ತು ಮಿಗ್ 27 ಯುದ್ಧ ವಿಮಾನಗಳನ್ನು ಕಳೆದುಕೊಂಡ ಭಾರತೀಯ ಸೇನೆ
ಮೇ 28: ಐಎಎಫ್ ಎಂಐ-17 ಲಘುಯುದ್ಧ ವಿಮಾನ ಹೊಡೆದುರುಳಿಸಿದ ಪಾಕಿಸ್ತಾನ ಸೇನೆ, ನಾಲ್ವರು ಸಿಬ್ಬಂದಿ ಸಾವು
ಜೂನ್ 1:ರಾಷ್ಟ್ರೀಯ ಹೆದ್ದಾರಿ ಎನ್‌ಎಚ್1ಎ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ
ಜೂನ್ 5: ಸೆರೆಯಾದ ಮೂವರು ಪಾಕ್ ಯೋಧರಿಂದ ಮಾಹಿತಿ ಪಡೆದು, ವರದಿ ಬಿಡುಗಡೆ ಮಾಡಿದ ಭಾರತ.
ಜೂನ್ 6: ಕಾರ್ಗಿಲ್‌ನಲ್ಲಿ ಬೃಹತ್ ಮಟ್ಟದಲ್ಲಿ ದಾಳಿ ಆರಂಭಿಸಿದ ಭಾರತೀಯ ಸೇನೆ
ಜೂನ್ 9: ಬಟಾಲಿಕ್ ಸೆಕ್ಟರ್‌ನ ಎರಡು ಪ್ರಮುಖ ಸ್ಥಳಗಳನ್ನು ಮರುವಶಪಡಿಸಿಕೊಂಡ ಭಾರತ
ಜೂನ್ 11: ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ಲೆಫ್ಟಿನೆಂಇಟ್ ಜನರಲ್ ಆಜಿಜ್ ಖಾನ್ ನಡುವಿನ ಸಂದೇಶವಾಹಕ ಸಂಭಾಷಣೆಯನ್ನು ಬಿಡುಗಡೆ ಮಾಡಿ, ಇದರಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇರುವುದನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟ ಭಾರತ
ಜೂನ್ 13: ಡ್ರಾಸ್‌ನಲ್ಲಿನ ಟೊಲೊಂಲಿಂಗ್‌ನ ಮೇಲೆ ನಿಯಂತ್ರಣ ಸಾಧಿಸಿದ ಭಾರತೀಯ ಸೇನೆ
ಜೂನ್ 15: ಪಾಕ್‌ನ ಅಂದಿನ ಪ್ರಧಾನಿ ಷರೀಫ್‌ಗೆ ದೂರವಾಣಿ ಕರೆ ಮಾಡಿದ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್, ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್ ಕರೆಯಿಸುವಂತೆ ಸೂಚಿಸಿದರು.
ಜೂನ್ 29: ಟೈಗರ್‌ಹಿಲ್ ಹತ್ತಿರದ ಪ್ರಮುಖ ಪೋಸ್ಟ್‌ಗಳಾದ ಪಾಯಿಂಟ್ 5060 ಮತ್ತು ಪಾಯಿಂಟ್ 5100ಗಳನ್ನು ವಾಪಸ್ ಪಡೆದ ಸೇನೆ
ಜುಲೈ 2: ಕಾರ್ಗಿಲ್‌ನಲ್ಲಿ ಮೂರು ದಿಕ್ಕುಗಳಿಂದ ನಿರ್ಣಾಯಕ ದಾಳಿ ಆರಂಭಿಸಿದ ಭಾರತ
ಜುಲೈ 4: ಹನ್ನೊಂದು ಗಂಟೆಗಳ ಘನಘೋರ ಕಾಳಗದ ಬಳಿಕ ಟೈಗರ್ ಹಿಲ್ ವಾಪಸ್ ಪಡೆದ ಭಾರತೀಯ ಸೇನೆ
ಜುಲೈ 5: ಡ್ರಾಸ್ ಮೇಲೆ ಸಂಪೂರ್ಣ ನಿಯಂತ್ರಣ. ಕ್ಲಿಂಟನ್ ಜತೆಗಿನ ಭೇಟಿ ಬಳಿಕ ಕಾರ್ಗಿಲ್‌ನಿಂದ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ಷರೀಫ್ ಅವರಿಂದ ಘೋಷಣೆ
ಜುಲೈ 7: ಬಟಾಲಿಕ್‌ನಲ್ಲಿ ಜುಬಾರ್ ಹೈಟ್ಸ್ ಅನ್ನು ವಾಪಸ್ ಪಡೆದ ಭಾರತ
ಜುಲೈ 11: ಬಟಾಲಿಕ್‌ನಿಂದ ಹೊರ ಬರಲು ಆರಂಭಿಸಿದ ಪಾಕಿಸ್ತಾನದ ಸೇನೆ
ಜುಲೈ 14: ಆಪರೇಷನ್ ವಿಜಯ್ ಯಶಸ್ವಿಯಾಯಿತು ಎಂದು ಘೋಷಿಸಿದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಪಾಕಿಸ್ತಾನ ಜತೆಗಿನ ಮಾತುಕತೆಗೆ ಷರತ್ತು ವಿಧಿಸಿದ ಭಾರತ.
ಜುಲೈ 26: ಅಧಿಕೃತವಾಗಿ ಕಾರ್ಗಿಲ್ ಸಂಘರ್ಷ ಮುಕ್ತಾಯಿತು. ಪಾಕಿಸ್ತಾನ ದಾಳಿಕೊರರಿಂದ ಸಂಪೂರ್ಣವಾಗಿ ಕಾರ್ಗಿಲ್ ಮುಕ್ತಾಯವಾಯಿತು.
ಲೇಖಕರು: ✍️.... ವಿವೇಕ್ ನರೇನ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network