ಪೂರ್ಣತೆಯೇ ಗುರು: ಗುರುಪೂರ್ಣಿಮೆ ನಿಮಿತ್ತ ವಿಶೇಷ ಲೇಖನ
ಪ್ರತಿವರ್ಷ ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಬರುವ ಆಷಾಢ ಮಾಸದ ಪೂರ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಆಚರಿಸಲಾಗುತ್ತಿದೆ. ಆ ದಿನ ವೇದವ್ಯಾಸರು ಅವತರಿಸಿದ ದಿನ ಎಂದು ಪ್ರತೀತಿ. ವೇದವು ಮೊದಲು ಒಂದೇ ಆಗಿತ್ತು. ಅದನ್ನು 4 ಭಾಗಗಳಾಗಿ ವಿಂಗಡಿಸಿದವರು ವೇದವ್ಯಾಸರು. ವ್ಯಾಸ ಎಂದರೆ ವಿಂಗಡಿಸುವ ಎಂಬ ಅರ್ಥವಿದೆ. ವೇದವನ್ನು ವಿಂಗಡಿಸಿದ್ದರಿಂದ ವೇದವ್ಯಾಸರಾದರು. ಇದೇ ಶನಿವಾರ ಜುಲೈ24, 2021ರಂದು ಗುರು ಪೂರ್ಣಿಮಾ ದಿವಸವಾಗಿದೆ.
ಯಾವುದೇ ವಿದ್ಯೆಯನ್ನು ಕಲಿಯಬೇಕಾದರೆ ಗುರುವಿನ ಪಾತ್ರ ಹಿರಿದು. "ಗು" ಎಂದರೆ ಅಜ್ಷಾನ "ರು" ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಅಜ್ಞಾನವನ್ನು ಹೋಗಲಾಡಿಸುವರೋ ಅವರೇ ನಮ್ಮ ಗುರು. ಮಂತ್ರ, ಪೂಜೆ, ದೇವರ ವಿಷಯವಾಗಿ ತಿಳಿಸುವವರು ಶಿಕ್ಷಾ ಗುರುವಾದರೆ, ಪರಮಾತ್ಮನ ಸಾಕ್ಷಾತ್ಕಾರ ಮಾಡಿಸುವವರು ಆಧ್ಯಾತ್ಮಿಕ ಗುರುಗಳು. ‘ಗುರುಪೂರ್ಣಿಮೆ’ ಯಂದು ಗುರುಗಳಿಗೆಲ್ಲರಿಗೂ ಗೌರವಿಸಿ ನಮಸ್ಕರಿಸುವ ಸಂಪ್ರದಾಯವಿದೆ. ಎಲ್ಲಾ ಕಾರ್ಯಗಳಿಗೆ ಮೊದಲು ಗುರುಪೂಜೆ ಮಾಡಿಯೇ ತೀರಬೇಕು. ವೇದ ಮಂತ್ರಗಳನ್ನು ಹೇಳುವಾಗ ಮೊದಲು ಶ್ರೀ ಗುರುಭ್ಯೋನಮಃ ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಬೇಕು.
ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್ ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ.
ಎಲ್ಲಿಯವರೆಗೆ ಕರ್ಮ ಬಂಧನದಿಂದ ಮುಕ್ತಿ ಇಲ್ಲವೋ ಅಲ್ಲಿಯವರೆಗೆ ಈ ಬ್ರಹ್ಮನೊಡನೆ ಒಂದಾಗಲು ಸಾಧ್ಯವಿಲ್ಲ. ಇದನ್ನು ಸದ್ಗುರು ಜ್ಞಾನವೆಂಬ ಕತ್ತರಿಯಿಂದ ತೆಗೆದು ಹಾಕಲು ಸಾಧ್ಯ. ಜ್ಞಾನವನ್ನು ಕೊಡುವವನೇ ಗುರು. ಜ್ಞಾನ ಎಂದರೆ ನಮ್ಮ ಬುದ್ಧಿ. ಮತ್ತೆ ಕೆಲವರು ಕೆಲವು ಶಾಸ್ತ್ರಗಳಲ್ಲಿರುವ ಶಬ್ದವನ್ನು ಜ್ಞಾನ ಎನ್ನುವರು. ಇವುಗಳೆಲ್ಲಾ ನಮ್ಮ ಪಂಚೇಂದ್ರಿಯಗಳ ಮೂಲಕ ಪ್ರಾಪ್ತವಾಗುವ ಜ್ಞಾನ. ಗುರು ಎಂದರೆ ಅಖಂಡ ಜ್ಞಾನ ಜ್ಯೋತಿ ಜಡತ್ವಕ್ಕೆ ಸ್ಪೂರ್ತಿ ತುಂಬಿ ಶಿಷ್ಯ ಚಿತ್ತಾಪಹಾರನಾಗಿ ತಾನು ಬೆಳಗಿ ತನ್ನಂತೆ ಇತರರನ್ನು ಬೆಳಗಿಸುವವನೇ ನಿಜವಾದ ಗುರು. ಗುರು ದೊರಕದಿದ್ದರೂ ಗುರುವಿನ ಮೂರ್ತಿಯನ್ನಿಟ್ಟು ಪೂಜಿಸಿ ಅವನಿಂದ ವಿದ್ಯೆ ಪಡೆದ ಏಕಲವ್ಯ ಬಾಲಕ ಆದರ್ಶ ಶಿಷ್ಯ. ಗುರ್ವಾಜ್ಞೆಯನ್ನು ನಿಷ್ಠೆಯಿಂದ ಪಾಲಿಸಿ ಗುರೂಪದೇಶ ಪಡೆದ ಶ್ರೇಷ್ಠ ಶಿಷ್ಯ ದಾನಶೂರ ಕರ್ಣ. ನಮ್ಮ ದೇಶದ ಪ್ರಥಮ ಉಪರಾಷ್ಟ್ತ್ರಪತಿ ಡಾ.ಎಸ್. ರಾಧಾಕೃಷ್ಣರು ಗುರುವಿಗಾಗಿ ತನ್ನ ಜನ್ಮದಿನವನ್ನೇ ಸಾರಿದರು. ಇವರ ಶಿಷ್ಯರು ಇವರನ್ನು ರೇಲ್ವೆ ಸ್ಟೇಷನ್‌ಗೆ ಚಕ್ಕಡಿಯಲ್ಲಿ ಕುಳ್ಳಿರಿಸಿಕೊಂಡು ತಾವೇ ಹೆಗಲು ಹಚ್ಚಿ ಎಳೆದುಕೊಂಡು ಹೋದರು. ಇದು ಶಿಷ್ಯರು ಗುರುವಿಗೆ ತೋರಿದ ಗುರುಭಕ್ತಿ .
ಒಂದು ಸುವ್ಯವಸ್ಥಿತ, ವೈಭವಶಾಲಿ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆಯಿಂದ ಮತ್ತು ಆ ಚಿಂತನೆಗಳಿಗನುಗುಣವಾದ ಆತನ ಜೀವನ ಪದ್ಧತಿಯಿಂದ. ಹೀಗೆ ಸುಸಂಪನ್ನ ರಾಷ್ಟ್ರದ ನಿರ್ಮಿತಿಗಾಗಿ ಪರಂಪರಾಗತ ಮೌಲ್ಯಗಳ ಅರಿವುಳ್ಳ ಪ್ರತಿವ್ಯಕ್ತಿಯ ಕೊಡುಗೆಯೂ ಮಹತ್ವ ಪೂರ್ಣ.
ಆದರೆ ಮನುಷ್ಯನು ಯಾವಾಗಲೂ ಭಿನ್ನ ಭಿನ್ನ ಪರಿಸ್ಥಿತಿಗಳಿಂದ ಸುತ್ತುವರಿಯಲಪಟ್ಟಿರುತ್ತಾನೆ. ಸುಖ-ದುಖಃಗಳ ಅನೇಕ ಪ್ರಸಂಗಗಳನ್ನು ಆತ ಎದುರಿಸಬೇಕಾಗುತ್ತಿರುತ್ತದೆ. ಇಂತಹ ವಿಷಮ ಸಂಧರ್ಭಗಳಲ್ಲಿ ಧೀರತೆಯಿಂದ ಅಪಾಯಗಳನ್ನು ನಿವಾರಿಸಿಕೊಳ್ಳುತ್ತಾ ತನ್ನ ಜೀವನವನ್ನು ಉನ್ನತ ಉದ್ದೇಶಗಳಿಗಾಗಿಯೇ ಮೀಸಲಿಸಿರಿಕೊಳ್ಳುವ ಯೋಗ್ಯತೆ ಆತನಲ್ಲಿರುವುದಿಲ್ಲ. ತನ್ನಲ್ಲಿಯೇ ಅಂತಹ ಯೋಗ್ಯತೆ ಇದೆಯೆಂದು ಯಾವನು ಭಾವಿಸುತ್ತಾನೋ ಆತನ ಅಧಃಪತನ ನಿಶ್ಚಿತವೆಂದು ತಿಳಿಯಬಹುದು. ಪ್ರತಿ ವ್ಯಕ್ತಿಯ, ತನ್ಮೂಲಕ ಇಡೀ ಸಮಾಜದ ಪತನವನ್ನು ತಡೆದು ಪರಿಪೂರ್ಣ ವಿಕಾಸದೆಡೆಗೆ ಸಾಗಲು ಬೇಕಾದ ಬಲವಾದ ಶ್ರದ್ಧಾ ಕೇಂದ್ರವೇ ’ಗುರು’.
"ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:" "ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:" ಎಂದು ಗುರುವಿನೆಡೆಗೆ ನಮ್ಮ ಪೂರ್ವಿಕರು ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಇದೊಂದು ಗುರು-ಶಿಷ್ಯರ ಪರಂಪರೆಯನ್ನು ಭಧ್ರಪಡಿಸಿ ಜಗತ್ತಿಗೆ ಸಾರುವ ಹಬ್ಬವೆಂತಲೂ ಹೇಳಬಹುದು. "ನಚೋರ ಹಾರ್ಯಂ ನಚರಾಜ ಹಾರ್ಯಂ. ನಭಾತ್ರಬಾಜ್ಯಂ ನಚ ಭಾರಕಾರಿ. ವ್ಯಯೇಕ್ರತೆ ವರ್ದತಿ ಏವ ನಿತ್ಯಂ. ವಿದ್ಯಾಧನಂ ಸರ್ವ ಧನಃ ಪ್ರಧಾನಂ." ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸಮಾಡಿ ಕದ್ದೊಯ್ಯಲು ಸಾಧ್ಯವಿಲ್ಲ , ಯಾವ ರಾಜನೂ ಕೂಡ ತನ್ನ ಸಾಮರ್ಥ್ಯ ಮತ್ತು ಧರ್ಪದಿಂದ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ. ಹೇಗೆ ಖರ್ಚು ಮಾಡುತ್ತೇವೋ ಹಾಗೆ ವರ್ಧಿಸುವಂತಹ, ಎಲ್ಲ ಸಂಪತ್ತಿಗಿಂತಲೂ ಶ್ರೇಷ್ಟವಾದುದು ಎಂದರ್ಥ. ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಗುರುವ್ರಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸುವ.
ಲೇಖಕರು: ✍️.... ಕಾನತ್ತಿಲ್ ರಾಣಿಅರುಣ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network