ಆಷಾಢವಿದು ಶೂನ್ಯಮಾಸ ಎನ್ನುವ ವರಸೆ ಕೆಲವರದಾದ್ದಾರೆ, ಜನಪದರ ಮಟ್ಟಿಗೆ ಇದುವೆ ಸಂಭ್ರಮದ ಮಾಸ
ಆಷಾಢಮಾಸ ಎಂದರೆ ಶುಭಕಾರ್ಯಗಳಿಗೆ ನಿಷಿದ್ಧ ಕಾಲ ಎಂಬುದು ಭಾರತೀಯರ ನಂಬಿಕೆಗಳಲ್ಲೊಂದು. ಆದರೆ ಈ ಮಾಸದಲ್ಲೇ ಹಲವು ಆಚರಣೆಗಳು, ವ್ರತಗಳು ನಡೆಯುತ್ತವೆ. ಆಷಾಢದಲ್ಲಿ ಮಂಗಳ ಕಾರ್ಯಗಳನ್ನು ಆಚರಿಸಲು ನಿಷೇಧವಿದ್ದರೂ ವೈಯುಕ್ತಿಕ ಜಪ, ಅನುಷ್ಠಾನ, ಸಾಧನೆಗಳಿಗೆ ಪ್ರಶಸ್ತ ಕಾಲವೂ ಹೌದು.
ಆಷಾಢ ಮಾಸದಲ್ಲಿ ಗಾಳಿ ಹೆಚ್ಚು ಜೋರಾಗಿ ಬೀಸುತ್ತಿರುತ್ತದೆ. ಈ ಹಿನ್ನೆಲೆ, ಆ ವೇಳೆ ಬೆಳೆ ಕಟಾವು ಇರುವುದಿಲ್ಲ. ಈ ಹಿನ್ನೆಲೆ ಹಣದ ಕೊರತೆ ಇರುತ್ತದೆ. ಇನ್ನು, ಮೊದಲೆಲ್ಲ ಮದುವೆಗಳನ್ನು ತೆರೆದ ಜಾಗಗಳಲ್ಲಿ ಅಥವಾ ಮೈದಾನಗಳಲ್ಲಿ ಮಾಡಲಾಗುತ್ತಿತ್ತು. ಹೀಗಾಗಿ ಜೋರಾಗಿ ಬೀಸುವ ಗಾಳಿ ಹಾಗೂ ಹಣದ ಕೊರತೆಯಿಂದ ಮದುವೆ ಮುಂತಾದ ಶುಭ ಕಾರ್ಯಗಳನ್ನು ನಡೆಸುವುದು ಸವಾಲಿನಂತೆ ಎಂದು ಭಾವಿಸುತ್ತಾರೆ.
ಈ ವರ್ಷದ ಆಷಾಡ ಮಾಸ ಜುಲೈ 11ರಿಂದ ಭಾನುವಾರದಿಂದ ಆರಂಭವಾಗಿ ಆಗಸ್ಟ್ 8ರ ಭಾನುವಾರದವರೆಗೂ ಇರಲಿದೆ. ಹಿಂದೂ ಕ್ಯಾಲೆಂಡರ್ ಆರಂಭವಾದ ನಾಲ್ಕು ತಿಂಗಳ ನಂತರ ಪವಿತ್ರ ಅವಧಿ ಆಷಾಡ ಮಾಸ ಶಾಯನ ಏಕಾದಶಿಯಂದು ಪ್ರಾರಂಭವಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಆಷಾಢ ಮಾಸದಲ್ಲಿ ಗುರುವಿನ ಆರಾಧನೆಯು ಹೆಚ್ಚು ಫಲಪ್ರದವಾಗಿರುತ್ತದೆ. ಈ ತಿಂಗಳಲ್ಲಿ ಶ್ರೀ ಹರಿ ವಿಷ್ಣುವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಈ ಮಾಸದಲ್ಲಿ ಗಂಗೆ ಪೂಜೆಯು ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇದರಿಂದ ಸಂಪತ್ತಿನ ಹೆಚ್ಚಳವೂ ಆಗಲಿದೆ. ಆಷಾಢ ಮಾಸದಲ್ಲಿ ಸೂರ್ಯನನ್ನು ಪೂಜಿಸಲಾಗುತ್ತದೆ.
ಯೋಗ ಸಾಧನೆಗಳ ಮೂಲಕ ಶೂನ್ಯತೆಯ ಸ್ಥಿತಿಯನ್ನು ಸಾಧಿಸಲು ಈ ತಿಂಗಳು ಅತ್ಯುತ್ತಮವಾಗಿದೆ. ಅದಕ್ಕಾಗಿಯೇ ಇದನ್ನು ಶೂನ್ಯ ಮಾಸ ಎಂದು ಕರೆಯಲಾಗುತ್ತದೆ. ಶೂನ್ಯ ಎಂದರೆ ಏನೂ ಇಲ್ಲ, ಸೊನ್ನೆ, ಮುಕ್ತತೆ ಮತ್ತು ವಿಶಾಲತೆ. ಈ ಸ್ಥಿತಿಯನ್ನು ಸಾಧಿಸಲು, ಯಾವುದೇ ಆಚರಣೆಗಳ ಅಗತ್ಯವಿಲ್ಲ. ಅದಕ್ಕಾಗಿಯೇ ಈ ತಿಂಗಳಲ್ಲಿ ಯಾವುದೇ ಆಚರಣೆಗಳನ್ನು ನಡೆಸಲಾಗುವುದಿಲ್ಲ.
ವರ್ಷ ಪೂರ್ತಿ ನಮ್ಮ ಜೀವನದ ಬಗ್ಗೆ ಸಾಕಷ್ಟು ಕನಸು ಹಾಗೂ ಅದರ ಗುಂಗಿನಲ್ಲಿಯೇ ಇರುತ್ತೇವೆ. ವರ್ಷದ ಒಂದು ಸಮಯವಾದರೂ ನಮ್ಮ ಒಳಿತಿಗಾಗಿ ಇರುವ ದೇವತೆಗಳ ಆರಾಧನೆ ಮಾಡಬೇಕು. ಒಂದು ತಿಂಗಳನ್ನು ದೇವರಿಗಾಗಿ ಮೀಸಲಾಗಿಟ್ಟರೆ, ಎಲ್ಲರೂ ತಮ್ಮ ಸ್ವಾರ್ಥಗಳನ್ನು ತೊರೆದು, ದೇವರ ನಾಮವನ್ನು ಸ್ಮರಿಸುತ್ತಾ ಪೂಜೆ, ವ್ರತ ಹಾಗೂ ಹವನಗಳನ್ನು ಕೈಗೊಳ್ಳುತ್ತಾರೆ. ಇದರಿಂದ ದೇವಾನು ದೇವತೆಗಳು ಸಂತೃಪ್ತರಾಗುತ್ತಾರೆ. ಮನುಕುಲಕ್ಕೂ ಕಲ್ಯಾಣವಾಗುವುದು. ಹೊಸ ಹೊಸ ಬದಲಾವಣೆಗಳಿಂದ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವರು ಎಂದು ಹೇಳಲಾಗುವುದು. ಹಾಗಾಗಿಯೇ ಆಷಾಢ ಮಾಸದಲ್ಲಿ ರಥಯಾತ್ರೆ, ಚತುರ್ಮಾಸ, ವ್ರತ ಆಚರಣೆ, ಜಪ-ತಪ ಹೀಗೆ ಮೊದಲಾದ ದೇವರ ಕೆಲಸವನ್ನು ಮಾಡುವುದರ ಮೂಲಕ ಆಷಾಢವನ್ನು ಭಕ್ತಿಗೆ ಹಾಗೂ ಸಮರ್ಪಣೆಗೆ ಮೀಸಲಿಡಲಾಗಿದೆ.
ಬಿಡದೆ ಸುರಿಯುವ ಮಳೆಗಾಲದಲ್ಲಿ ಹಬ್ಬಗಳ ಗೊಡವೆಯಿಲ್ಲ. ಸ್ವತ: ಪರಿಸರವೇ ನೀರಲ್ಲಿ ತೊಯ್ದು ಶುದ್ದಿಗೊಂಡು ನಳಿನಳಿಸುತ್ತ ಸಂಭ್ರಮೋಲ್ಲಾಸ ಸೂಸುತ್ತ ಇರುತ್ತವೆ. ಇಂತಹ ಹಸಿರಿನ ಪ್ರಕೃತಿಯನ್ನು ನೋಡುವುದೇ ಒಂದು ಹಬ್ಬ ಬಹುಶಃ ಅದಕ್ಕೆ ಏನೋ ಜ್ಯೇಷ್ಠ ಮತ್ತು ಆಷಾಢಗಳಲ್ಲಿ ವ್ರತ-ಕಥೆಗಳದ್ದೇ ಮೇಲುಗೈ ಹೊರತು, ಹಬ್ಬದಾಚರಣೆಗಳಿಲ್ಲ.
ಆಷಾಢ ಮಾಸವನ್ನು ಕೆಲವು ಭಾಗಗಳಲ್ಲಿ ಅಶುಭ ಎಂದು ಪರಿಗಣಿಸುತ್ತಾರೆ. ಬಹುಶಃ ಬಿರುಮಳೆಯ, ಕಾರ್ಮೋಡ ಕವಿಯುವ ಈ ಮಾಸದಲ್ಲಿ ಯಾವ ಶುಭ ಸಮಾರಂಭಗಳನ್ನೂ ನಿರಾಳವಾಗಿ ಆಚರಿಸಲು ಸಾಧ್ಯವಾಗದೆಂದು ಹೀಗೆ ನಿರ್ಧರಿಸದರೇನೋ. ಆಷಾಢ ಅಶುಭವೆನ್ನಲಿಕ್ಕೆ ಯಾವ ಶಾಸ್ತ್ರಾಧಾರವೂ ಇಲ್ಲ. ಶಕ್ತಿಯನ್ನು ಸಂಪೂರ್ಣವಾಗಿ ಆಧ್ಯಾತ್ಮಿಕತೆಗೆ ತಿರುಗಿಸಲು, ನವವಿವಾಹಿತರನ್ನು ಪ್ರತ್ಯೇಕವಾಗಿರಲು ಹೇಳಲಾಗುತ್ತದೆ. ಸಾಮಾನ್ಯವಾಗಿ, ಅತ್ತೆ ಮತ್ತು ಸೊಸೆ ನಡುವೆ ಯಾವುದೇ ಹೊಂದಾಣಿಕೆ ಇರುವುದಿಲ್ಲ. ಅವರು ಜಗಳವಾಡಿದರೆ ಮನೆಯ ಎಲ್ಲರ ಮನಸ್ಸು ಕದಡುತ್ತದೆ. ಅವರು ಆಧ್ಯಾತ್ಮಿಕ ಅಭ್ಯಾಸಗಳತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅತ್ತೆ ಮತ್ತು ಸೊಸೆಗೆ ಈ ತಿಂಗಳು ಒಟ್ಟಿಗೆ ಇರಬಾರದೆಂದು ತಿಳಿಸಲಾಗಿದೆ ಎನ್ನಲಾಗುತ್ತದೆ.
ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಿದ್ದು; ಮಹಾ ಪತಿವ್ರತೆಯಾದ ಅನುಸೂಯಾದೇವಿಯು ನಾಲ್ಕು ಸೋಮವಾರ ಶಿವವ್ರತ ಮಾಡಿದ್ದು; ಮಹರ್ಷಿ ಗೌತಮರಿಂದ ಶಾಪಕ್ಕೊಳಗಾದ ದೇವೇಂದ್ರನು ಅದರ ವಿಮೋಚನೆಗಾಗಿ ನಾಲ್ಕು ಸೋಮವಾರ ವ್ರತವನ್ನು ಆರಂಭಿಸಿದ್ದು; ಬಲಿಚಕ್ರವರ್ತಿಯು ಶಾಂಡಿಲ್ಯ ವ್ರತವನ್ನು ಕೈಗೊಂಡಿದ್ದು ಇದೇ ಅಷಾಢಮಾಸದಲ್ಲಿ. ಈ ಮಾಸದಲ್ಲಿ ನದಿಗಳೆಲ್ಲ ಋತುಮತಿಯರಾಗಿರುತ್ತವೆ ಎಂಬ ನಂಬಿಕೆಯೂ ಇದೆ. ಹಿಂದೆ ವೃತ್ರಾಸುರನನ್ನು ಕೊಂದ ದೇವೇಂದ್ರನಿಗೆ ಅಂಟಿದ ಬ್ರಹ್ಮಹತ್ಯಾದೋಷದಲ್ಲಿ ಒಂದು ಪಾಲನ್ನು ಸ್ವೀಕರಿಸಿದ ನದಿಗಳು ಅಷಾಢಮಾಸದಲ್ಲಿ ಅವುಗಳನ್ನು ಅನುಭವಿಸಲು ಒಪ್ಪಿದವಂತೆ. ಹೀಗಾಗಿ ಈ ಮಾಸದಲ್ಲಿ ನದಿಸ್ನಾನ ಪುಣ್ಯಕರವಲ್ಲ. ಆದರೆ ತಪತೀನದಿ ಮಾತ್ರ ಈ ದೋಷದಿಂದ ಮುಕ್ತವಾಗಿತ್ತು. ಹೀಗಾಗಿ ಆಷಾಢದಲ್ಲಿ ತಪತೀನದಿಯ ಸ್ನಾನ ಮಾತ್ರ ಅತ್ಯಂತ ಪವಿತ್ರವೆಂಬ ನಂಬಿಕೆಯಿದೆ. ಇದು ತಪತೀನದಿಯ ತೀರ್ಥವೆಂದು ಸ್ಮರಿಸಿ ಯಾವುದೇ ನದಿಯ ನೀರನ್ನು ಮಿಂದರೂ ತೀರ್ಥಸ್ನಾನದ ಪುಣ್ಯ ಲಭಿಸುವುದಂತೆ.
ಆಷಾಢ ಮಾಸದಲ್ಲಿ ಮಳೆ ಆರ್ಭಟ ಜೋರಾಗಿರುತ್ತಿದ್ದ ಕಾರಣ ರೈತಾಪಿ ವರ್ಗಕ್ಕೆ ಹೊಲ-ಗದ್ದೆಗಳಲ್ಲಿ ಆಪಾರ ಕೆಲಸವಿರುತ್ತಿತ್ತು. ಅಲ್ಲದೇ ಮಳೆಯ ಕಾರಣ ಜನ ಹೊರ ಬರುವುದು ಕಷ್ಟವಾಗುತ್ತಿತ್ತು. ಹೀಗಾಗಿ ಯಾವುದೇ ವ್ಯವಹಾರ ಅಥವಾ ಶುಭ ಸಮಾರಂಭ ಮಾಡಲು ಕಾಲಾವಕಾಶ ಸಿಗದ ಕಾರಣ, ಆಷಾಢ ಮಾಸದಲ್ಲಿ ಇಂತಹ ಕಾರ್ಯಗಳಿಗೆ ತಿಲಾಂಜಲಿ ಇಡಲಾಯಿತು ಎನ್ನಲಾಗುತ್ತದೆ.
ಆಷಾಢ ಮಾಸದಲ್ಲಿ ಸಾಕಷ್ಟು ದೇವತೆಗಳು ತಮ್ಮ ಒಳಿತನ್ನು ಕಂಡುಕೊಂಡರು ಎನ್ನಲಾಗುವುದು. ಆಷಾಢ ಅತ್ಯಂತ ಪವಿತ್ರ ಹಾಗೂ ಮಹತ್ವವಾದ ಮಾಸ. ಈ ತಿಂಗಳಲ್ಲಿ ಬಹಳಷ್ಟು ಉತ್ತಮ ಸಂಗತಿಗಳು ಸಂಭವಿಸಿದವು ಎಂದು ಪುರಾಣ ಇತಿಹಾಸಗಳು ಸಾರುತ್ತವೆ. ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢ ಮಾಸದಲ್ಲೇ. ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಆಷಾಢಮಾಸದ ಹುಣ್ಣಿಮೆಯು ವೇದವ್ಯಾಸರು ಜನಿಸಿದ ದಿನ ಗುರುಪೂರ್ಣಿಮೆ ಎಂದು ವಿಶೇಷವಾಗಿ ಆಚರಿಸಲ್ಪಡುವ ಈ ದಿನವೇ ಯತಿಗಳ ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ.
ಆಷಾಢವಿದು ಶೂನ್ಯಮಾಸ ಎನ್ನುವ ವರಸೆ ಕೆಲವರದಾದ್ದಾರೆ ಜನಪದರ ಮಟ್ಟಿಗೆ ಇದುವೇ ಸಂಭ್ರಮದ ಮಾಸ. ಆಧ್ಯಾತ್ಮ ಸಾಧಕರಿಗೆ ಅದುವೇ ಸಾಧನೆಯ ಪರ್ವ. ರೈತಾಪಿ ಜನರು ಮುಂದಿನ ನಾಲ್ಕು ತಿಂಗಳ ಕೃಷಿ ಚಟುವಟಿಕೆಗೆ ಸಿದ್ಧತೆಗಳನ್ನು ನಡೆಸಿದರೆ, ಆಧ್ಯಾತ್ಮ ಸಾಧಕರು ಆಂತರಿಕ ಶಕ್ತಿಯ ಸಂವರ್ಧನೆಗೆ ಮುಂದಡಿ ಇಡುತ್ತಾರೆ. ಲೌಕಿಕ, ಆಧ್ಯಾತ್ಮಿಕ ಕಾರ್ಯಗಳಿಗೆ ಅದುವೇ ಮುನ್ನುಡಿಯಾಗುತ್ತದೆ.
ಲೇಖಕರು: ✍️.... ಕಾನತ್ತಿಲ್ ರಾಣಿಅರುಣ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network