Header Ads Widget

ಸರ್ಚ್ ಕೂರ್ಗ್ ಮೀಡಿಯ

ನಮ್ಮ ಮನೆಯ ಸುಂದರಿ; ಬಾಲ್ಯದ ಪ್ರೀತಿಯ ಹುಡುಗಿ?

ನಮ್ಮ ಮನೆಯ ಸುಂದರಿ; ಬಾಲ್ಯದ ಪ್ರೀತಿಯ ಹುಡುಗಿ?


ಇದೊಂದು ಸತ್ಯ ಕತೆ.
ನನ್ನ ಬಾಲ್ಯದ ದಿನಗಳವು. ತಂದೆ ಪಿ.ಡಬ್ಲು.ಡಿ ಇಂಜಿನ್ ಡ್ರ್ಯೆವರ್ ವ್ರತ್ತಿಯಲ್ಲಿದ್ದರು. ಗೋಣಿಕೊಪ್ಪಲಿನಲ್ಲಿದ್ದ ನಮ್ಮ ಪುಟ್ಟ ಜಾಗದಲ್ಲಿ ಬೇಸಿಗೆಯಲ್ಲಿ ನಾನು ಅಕ್ಕಂದಿರು ತಂದೆ ಪೂಜ್ಯ ದಿ. ಲಕ್ಷ್ಮಣ ಅವರೊಂದಿಗೆ ಸೇರಿ ಕಾಡು, ಗಿಡಗಂಟಿಗಳನ್ನು ಕಡಿದು ತರಕಾರಿ ಬೆಳೆಯುವ ಹವ್ಯಾಸ ಬೆಳೆಸಿಕೊಂಡಿದ್ದೆವು.

ಬೀನ್ಸ್, ನಾಟಿ ಸೌತೆ, ಬದನೆ, ಮೆಣಸು, ಬಳ್ಳಿ ಬೀನ್ಸ್, ಟೊಮೆಟೋ, ಸೋರೆ ಕಾಯಿ, ಸಿಹಿ ಹಾಗೂ ಬೂದು ಕುಂಬಳ, ಬದನೆ, ಕೀರೆ ಸೊಪ್ಪು, ಸಂಬಾರ ಸೊಪ್ಪು, ಅಲಸಂಡೆ, ಬೆಂಡೆಕಾಯಿ, ಈರೇ ಕಾಯಿ, ಚೆಪ್ಪರದ ಅವರೆ, ಬಿಳಿ ಅವರೆ, ತೊಗರಿ ಬೇಳೆ, ಮೆಕ್ಕೆ ಜೋಳ, ಮೂಲಂಗಿ, ಕೆಂಪು ಮೂಲಂಗಿ ಇತ್ಯಾದಿಗಳನ್ನು ಮನೆ ಮಟ್ಟದ ಉಪಯೋಗಕ್ಕೆ ಬೆಳೆಯುತ್ತಿದ್ದೆವು. 

ನನಗೂ ತರಕಾರಿ ಬೆಳೆಯುವ ಹವ್ಯಾಸವನ್ನು ಒಂದನೇ ತರಗತಿ ಓದುವಾಗಲೇ 1970 ಇಸವಿಯಲ್ಲಿಯೇ ಬೆಳೆಸಿದ್ದರು. ಕಾಡು ಕಡಿಯುವದು, ಪಾತಿ ಮಾಡುವದು ಇತ್ಯಾದಿ ಮಾಡಿದರೆ ಸಂಜೆ ನನಗೆ ಕಿತ್ತಳೆ ಮಿಠಾಯಿ, ಶುಂಠಿ ಮಿಠಾಯಿ ಇತ್ಯಾದಿ ತೆಗೆದುಕೊಳ್ಳಲು 5 ಪೈಸೆ, 10 ಪೈಸೆ ಕೊಡುತ್ತಿದ್ದರು. ಕಾಕಾ ಅಂಗಡಿಗೆ ಹೋಗಿ ಮಿಠಾಯಿ ತಂದು ತಿನ್ನುತ್ತಿದ್ದೆ. ನಾನು ಕೊನೆಯವನಾದ್ದರಿಂದ ಅಕ್ಕಂದಿರಲ್ಲಿ ಮಿಠಾಯಿ ಖಾಲಿಮಾಡಿ ಅವರ ಖೋಟಾದಲ್ಲಿ ಖರೀದಿಸಿದ ಮಿಠಾಯಿ ಕಬಳಿಸಲು ಹಲ್ಲು ಗಿಂಜುತ್ತಿದ್ದೆ. ತಂದೆ ತಾಯಿ, ಅಕ್ಕಂದಿರ ಪ್ರೀತಿಯ ತಮ್ಮನಾದ್ದರಿಂದ ತಿಂಡಿ, ತಿನಿಸು, ಮೀನು, ಮಾಂಸ, ಕುಂಬಳ ಪಲ್ಯ, ಅಣಬೆ ಸಾರು( mushroom) ಇತ್ಯಾದಿ ಎಲ್ಲದರಲ್ಲಿಯೂ ಒಂದು ಪಾಲು ಜಾಸ್ತಿ. ಅಮ್ಮ ಗೌರಿ ಮತ್ತು ಪಾರ್ವತಿ ಇತ್ಯಾದಿ ಹಸುವನ್ನು ಸಾಕುತ್ತಿದ್ದರು. ಹಸು ಕರು ಹಾಕಿದ ಸಂದರ್ಭ ಹಾಲಿನ ಗಿಣ್ಣಿನ ಪಾಯಸ ಎಂದರೆ ಪಂಚಪ್ರಾಣ. ಪಾಯಸ ಪ್ರಿಯನಿಗೆ ಒಂದಷ್ಟು ಜಾಸ್ತಿನೇ ಗಿಣ್ಣು ಪಾಯಸ ಸಿಗುತ್ತಿತ್ತು. ಈಗಿನ ನಂದಿನಿ ಹಾಲು ಕಾಯಿಸಿ ಕುಡಿದಾಗ ಅದೇನೋ ಸಿಂಡು ವಾಸನೆ. ಅಮ್ಮ ಬೆಳಿಗ್ಗೆ 6.30 ಸುಮಾರಿಗೆ ಹಾಲು ಕರಿಯುವಾಗ ನಾನು ಒಂದು ಲೋಟ ತಗೊಂಡು ಅಮ್ಮನ ಬಳಿಗೆ ಓಡುತ್ತಿದ್ದೆ. ಮೊದಲ ಒಂದು ಲೋಟ ಹಾಲು ಹಸಿ ಹಾಲು ನನ್ನ ಹೊಟ್ಟೆ ಸೇರುತ್ತಿತ್ತು. ಹಾಲು ಕುಡಿದ ನಂತರ ನಾನೂ ಗೌರಿಯ ಕೆಚ್ಚಲು ಸವರಿ, ಅದರ ಹಣೆ ಭಾಗ ಕುತ್ತಿಗೆಯ ಭಾಗವನ್ನು ಸವರಿ ನಂತರವೇ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊರಡಲು ತಯಾರಿ ನಡೆಸುತ್ತಿದ್ದೆ.

ವರ್ಷವಿಡೀ ನಮಗೆ ಯಾವ ಯಾವುದೋ ಋತು ಮಾನದ ತರಕಾರಿಗಳು ಸಿಗುತ್ತಿದ್ದವು. ಇದು ಕೈ ತೋಟದ ಪಾಡಾದರೆ, ಇನ್ನು ಮನೆಯ ಮುಂದೆ, ಹಿತ್ತಲಲ್ಲಿ ಗುಲಾಬಿ, ಡೇಲಿಯಾ, ಚೆಂಡು ಹೂವು, ಸೇವಂತಿಗೆ, ಇತ್ಯಾದಿ ಆರ್ಕಿಡ್ ಜಾತಿಯ ಹೂವುಗಳನ್ನು ಬೆಳೆಯುತ್ತಿದ್ದೆವು. ಇದು ನನ್ನ ಗಿಡ ಇದು ನಿನ್ನ ಗಿಡ ಎಂದು ಅಕ್ಕಂದಿರೊಂದಿಗೆ‌ ಪ್ರೀತಿಯಿಂದ ಜಗಳವಾಡಿದ ದಿನಗಳ ಮಾಯವಾಗಿ ಇದೀಗ ಸುಮಾರು 40 /50 ವರ್ಷ ಕಳೆದಿರಬಹುದು.

ಇನ್ನೂ ಹಲಸಿನ ಮೂರು ಜಾತಿಯ ಹಣ್ಣುಗಳು, ಕಿತ್ತಳೆ ಹಣ್ಣು, ಸೀಬೆ ಹಣ್ಣು ಬೆಳೆಯುತ್ತಿದ್ದೆವು, ಚಕ್ಕೋತ ಇತ್ಯಾದಿ ಹೇರಳವಾಗಿ ತಿನ್ನುತ್ತಿದ್ದೆವು. ಇನ್ನು ಹುಣಸೇ ಮರದಲ್ಲಿಯೂ ವರ್ಷಕ್ಕೆ 40/50 ಕೆ.ಜಿ.ಹುಣಸೇ ಬೆಳೆ ತೆಗೆಯುತ್ತಿದ್ದೆವು. ನಮಗೆ ಸಾಕಷ್ಟು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದೆವು. ಬಕ್ಕೆ ಹಲಸಿನ ಹಣ್ಣನ್ನು ತುಂಡಾಗಿ ಕತ್ತರಿಸಿ ತಲಾ 10 ಪೈಸೆಗೆ ಮಾರಾಟ ಮಾಡಿ ಹಣ ತಂದು ಅಮ್ಮನಿಗೆ ಕೊಟ್ಟು ಕಮಿಷನ್ ಕೇಳಿಕೊಳ್ಳುತ್ತಿದ್ದೆ. ಇನ್ನೊಂದು ಆಸಕ್ತಿಕರ ವಿಚಾರವೆಂದರೆ ನಮ್ಮ ಮನೆಯ ಹಿಂಭಾಗ ದಕ್ಷಿಣ ದಿಕ್ಕಿನಲ್ಲಿ ದೊಡ್ಡ ಕಾಡು ಹುಳಿ ಮಾವಿನ ಮರವಿತ್ತು. ಅದು ಇಡೀ ಗೋಣಿಕೊಪ್ಪಲಿಗೇ ದೊಡ್ಡ ಮರ. ಅದರಲ್ಲಿ 45 ಕ್ಕೂ ಅಧಿಕ ಹೆಜ್ಜೇನು ಗೂಡು ಮಾಡುತ್ತಿದ್ದವು. ವರ್ಷಕ್ಕೆ ಸುಮಾರು 50ಕ್ಕೂ ಅಧಿಕ ಜೇನು ಬಾಟಲ್ ಸಿಗುತ್ತಿದ್ದು ಮಾರಾಟ ಮಾಡುತ್ತಿದ್ದೆವು. ರಾತ್ರಿ 1 ಗಂಟೆ ಸುಮಾರಿಗೆ 3/4 ಜೇನು ಕುರುಬ ಜನಾಂಗದವರು ಬಂದು ಜೇನು ಕುಯ್ಯುತ್ತಿದ್ದರು. ಆರ್.ಜಿ.ತುಪ್ಪದ ಟಿನ್, ಬಕೆಟ್ ಇತ್ಯಾದಿಗಳಲ್ಲಿ ಹಗ್ಗ ಕಟ್ಟಿ ಇಳಿಸುತ್ತಿದ್ದರು. ಜೇನು ಕೊಯ್ಲು ಕೆಳಗೆ ಬರುತ್ತಿದ್ದಂತೆ ಜೇನಿರುವ ಭಾಗವನ್ನು ಕೈಯಲ್ಲಿ ಮುರಿದುಕೊಂಡು ಮನಸೋ ಇಚ್ಛೆ ಮಧ್ಯರಾತ್ರಿಯಲ್ಲಿ ನಾನು ಅಕ್ಕ ಜೇನು ಸವಿಯುತ್ತಿದ್ದೆವು.

ಅದೇ ಮರದ ಬುಡದಲ್ಲಿ ಗುಳಿಗ ಮತ್ತು ಚಾಮುಂಡಿಗೆ ವರ್ಷಪ್ರತಿ ಪೂಜೆ ಸಲ್ಲಿಸುತ್ತಿದ್ದೆವು. ಜೇನು ಕೊಯ್ಲು ಸಂದರ್ಭ ಹೊಗೆ ಸೊಪ್ಪು ಇತ್ಯಾದಿ ಕೋಲಿನ ಪರಕೆಯಂತೆ ಮಾಡಿಕೊಂಡು ಬೆಂಕಿಯ ದೊಂದಿಯನ್ನು ಹೆಜ್ಜೇನು ಗೂಡಿಗೆ ಸವರಿ ಜೇನು ಹುಳಗಳನ್ನು ಓಡಿಸಲಾಗುತ್ತಿತ್ತು.

ಆದರೆ, ಮಧ್ಯರಾತ್ರಿಯಾದ್ದರಿಂದ ಜೇನು ಕೊಯ್ಲು ಸಂದರ್ಭ ಮರದ ಮೇಲಿನಿಂದ ಬೆಂಕಿಯ ಮಳೆ ಸುರಿದಂತೆ ದೂರದ ಅರುವತ್ತೊಕ್ಕಲು ಇತ್ಯಾದಿ ನಿವಾಸಿಗಳಿಗೆ ಕಾಣುತ್ತಿದ್ದವು. ಸೆಕೆಂಡ್ ಶೋ ಸಿನೆಮಾ ಮುಗಿಸಿ ಹೋಗುವವರು ಆ ಮರದಲ್ಲಿ ಕೊಳ್ಳಿದೆವ್ವ ಇದೆ. ವರ್ಷಕ್ಕೊಮ್ಮೆ ಬೆಂಕಿ ಮಳೆ ಸುರಿಸುತ್ತೆ ಎಂದು ಬೆದರಿಕೆಯಿಂದ ಮಾತನಾಡುವದು‌ ಆಮೇಲೆ ತಿಳಿದು ಬರುತ್ತಿತ್ತು. ಆದರೆ, ವಾಸ್ತವ ನಮಗೆ ಮಾತ್ರಾ ಗೊತ್ತಿತ್ತು.. ಕೋಲು ಜೇನು, ಮೂಲಿ ಜೇನು ಎಲ್ಲ ಸವಿದ ದಿನ ಇದೀಗ ಸವಿ ನೆನಪಾಗಿ ಉಳಿದಿದೆ. 

ಸುಮಾರು ನೂರಾರು ವರ್ಷದ ಬ್ರಹತ್ ಮರ 90 ರ ದಶಕದಲ್ಲಿ ಭಾರೀ ಮಳೆಗೆ ಬಿದ್ದುಹೋಗುತ್ತದೆ. ಒಂದು ವರ್ಷ ನಮ್ಮ ಮನೆಗೆ ಉರುವಲನ್ನು ಆ ಮರ ಪೂರೈಸುತ್ತದೆ. ಆದರೆ, ಈಗ ನೆನಪು ಮಾತ್ರಾ. ಇದೇ ಸಂದರ್ಭ ನಮ್ಮ ಹಲಸಿನ ಮರ, ಹೊನ್ನೆ ಮರದಲ್ಲಿ ಸೀತೆ ಹೂವು ಬಿಡುತ್ತಿತ್ತು. ಒಂದೋ ಎರಡೋ ಬಿಡುತ್ತಿದ್ದವು. ಮಳೆಗಾಲದ ಸುಂದರಿಯನ್ನು ದೂರದಿಂದಲೇ ನೋಡಿ ಆನಂದಿಸುತ್ತಿದ್ದೆವು. ಮುಂದೊಮ್ಮೆ ಅಂತಹಾ ಮನೆಯ ಹತ್ತಿರವಿರುವ ಮರಗಳನ್ನು ಕಡಿಯುವ ಸಂದರ್ಭ ಮಳೆಗಾಲದ ಸುಂದರಿಯ ಕುಡಿಗಳೂ ನೆಲಕಚ್ಚುತ್ತಿದ್ದವು. ಇದೇ ಸಂದರ್ಭ ನಾನು ಅಂತಹಾ ಆರ್ಕಿಡ್ ಜಾತಿಯ ಗಿಡಗಳನ್ನು ಬಿಡಿಸಿ ಉಳಿದಿರುವ ಸಣ್ಣ ಪುಟ್ಟ ಮರಗಳಿಗೆ ಸಿಕ್ಕಿಸಿ ದಾರದಿಂದ ಕಟ್ಟುತ್ತಿದ್ದೆ. ಹಾಗೇ ನಮ್ಮ ಮನೆಯ ಹಿಂಭಾಗದ ಹುಣಸೇ ಮರದ ರೆಂಬೆಗೆ ಒಂದು ಗಿಡವನ್ನು ಸಿಕ್ಕಿಸಿದ್ದೆ. ಸುಮಾರು 30 ವರ್ಷಗಳಿಗೂ ಅಧಿಕ ವಯಸ್ಸಾಗಿರಬಹುದು. ಅದಕ್ಕೆ ಯಾವ ಗೊಬ್ಬರವೂ, ಯಾವ ಭದ್ರತೆಯೂ ಇಲ್ಲ. ಸ್ಬಚ್ಚಂದವಾಗಿ ವರ್ಷಕ್ಕೆ ಎರಡೂ ಮೂರು ಹೂವು ಬಿಡುತ್ತಾ ಬೆಳೆಯತೊಡಗಿತು.

ನಾನೂ ಕಾಲೇಜು, ಉದ್ಯೋಗ ಅದೂ ಇದೂ ಎಂದು ಬೆಳೆಯತೊಡಗಿದೆ.ಇತ್ತೀಚೆಗೆ ವರ್ಷಕ್ಕೆ 30 ರಿಂದ 35ಕ್ಕೂ ಅಧಿಕ ಹೂವು ಬಿಡತೊಡಗಿದ ಮೇಲೆ ನಾನು face book, watts app ಎಂದೆಲ್ಲಾ post ಮಾಡಿ like ಗಿಟ್ಟಿಸಿಕೊಂಡು ಸಂಭ್ರಮಿಸುತ್ತಿದ್ದೆ. ಇತ್ತೀಚೆಗೆ ಮಳೆಗಾಲದಲ್ಲಿ ಆ ಹುಣಸೇ ಮರದ ತುಂಬಾ ಕೊಕ್ಕರೆಗಳು. ಬೆಳ್ಳಕ್ಕಿಗಳು ಗೂಡು ಮಾಡಿ, ಮರಿ ಮಾಡುತ್ತಿರುವ ಹಿನ್ನೆಲೆ, ಮತ್ತು ಹಕ್ಕಿ ಜ್ವರದ ಭಯದಿಂದ ಇದಕ್ಕೂ ಹೆಚ್ಚಾಗಿ ಫಸಲು ಕುಂಠಿತವಾದ ಹಿನ್ನೆಲೆ ಈ ಬಾರಿ ಬೇಸಿಗೆಯಲ್ಲಿ ಹುಣಸೇ ಮರ ರೆಂಬೆಗಳನ್ನು ಕತ್ತರಿಸಬೇಕಾಯಿತು. ಸೀತೆ ಹೂವಿರುವ ರೆಂಬೆ ಕತ್ತರಿಸಬೇಡಿರೆಂದು ಹೇಳಿದ್ದೆ. ಆದರೆ, ದುರಾದ್ರಷ್ಟಶಾತ್ ದೊಡ್ಡ ರೆಂಬೆ ಬಿದ್ದ ಪರಿಣಾಮ ಸೀತೆ ಹೂವು ಗಿಡವಿದ್ದ ರೆಂಬೆಯೂ ಮುರಿದು ಬಿದ್ದು. ಮನಸ್ಸು ಅಯ್ಯೋ ದೇವರೆ ಎಂದು ಚುರುಕ್ ಎಂದಿತು. ಆದರೂ ಸಾವರಿಸಿಕೊಂಡು ಆ ದೊಡ್ಡದಾದ ರೆಂಬೆಯನ್ನು ಮನೆಯ ಮುಂಭಾಗ ಹೊತ್ತು ತಂದು ಮುಂಭಾಗದ ಕಟಾವು ಮಾಡಿದ್ದ ಹಲಸಿನ ಮರದ ಮೇಲೆ ಹೇಗೋ ಸಿಕ್ಕಿಸಿದ್ದೆ.

ಈ ಬಾರಿ ಗಿಡಕ್ಕೆ ನೋವಾಗಿರುವದರಿಂದ ಸೀತೆ ರಾಜಕುಮಾರಿ ಅರಳುತ್ತಾಳೋ, ಮುದುಡುತ್ತಾಳೋ ಎಂಬ ಕೌತುಕ ಇದ್ದೇ‌ ಇತ್ತು. ಆದರೆ, ನನ್ನ ದೂರದ ಬಯಕೆ, ನಿರೀಕ್ಷೆಯನ್ನು ನನ್ನ ಪ್ರೀತಿಯ ಹುಡುಗಿ ಹುಸಿ ಮಾಡಲಿಲ್ಲ. ಕಳೆದ ಬಾರಿಗಿಂತಲೂ ಒಂದು ಹತ್ತು ಹೂವುಗಳು ಕಡಿಮೆಯಾಗಿರಬಹುದು. ಸುಮಾರು 25ಕ್ಕೂ ಅಧಿಕ ಸೀತೆ ಹೂವು ಈ ಬಾರಿ ಬಿಟ್ಟಿರುವ ಸಾಧ್ಯತೆ. ಇನ್ನೂ ಕೆಲವು ಮೊಗ್ಗು ಕಾಣಿಸಿಕೊಂಡಿದೆ. ದಿನವೂ ಮನೆಯಿಂದ ಹೊರಡುವಾಗ ಈ ಚೆಲುವೆಯತ್ತ ಕಣ್ಣು ಹಾಯಿಸದಿದ್ದಲ್ಲಿ ಮನಸ್ಸಿಗೆ ಸಮಾಧಾನವಿಲ್ಲ. ಎಲ್ಲರೂ ಪುಟ್ಟ ಕತೆ ಬರೆಯುವಾಗ ನಾನ್ಯಾಕೆ ನಮ್ಮ ಮನೆಯ ಮಳೆಗಾಲದ ಸುಂದರಿಯ ಕತೆ ಬರೆಯಬಾರದು ಅನ್ನಿಸಿತು. ಮನಸ್ಸನ್ನು ಮುದಗೊಳಿಸುವ ಸ್ನಿಗ್ಧ ಸೌಂದರ್ಯ ರಾಣಿಯ ಬಗ್ಗೆ ಮನೆಗೆ ಬಂದ ಅತಿಥಿಗಳಿಗೂ ತೋರಿಸಿ ಹೆಮ್ಮೆ ಪಟ್ಟುಕೊಳ್ಳುವದಕ್ಕೆ ಏನೂ ಕಡಿಮೆ ಇಲ್ಲ.

                                                                                                                   ✍️....ಟಿ.ಎಲ್.‌ ಶ್ರೀನಿವಾಸ್‌

         ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.

( ಟಿ.ಎಲ್.‌ ಶ್ರೀನಿವಾಸ್‌ )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,