Header Ads Widget

ಸರ್ಚ್ ಕೂರ್ಗ್ ಮೀಡಿಯ

ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಗೋಣಿಕೊಪ್ಪಲು ಬೆಡಗಿ; ಸಿನೆಮಾ-ಧಾರಾವಾಹಿಗಳಲ್ಲಿ ಗಮನಾರ್ಹ ನಟನೆ.

ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಗೋಣಿಕೊಪ್ಪಲು ಬೆಡಗಿ; ಸಿನೆಮಾ-ಧಾರಾವಾಹಿಗಳಲ್ಲಿ ಗಮನಾರ್ಹ ನಟನೆ.  



ಕನ್ನಡ ಚಲನಚಿತ್ರ ರಂಗ ಹಾಗೂ ಕಿರುತೆರೆಗೆ ಪುಟ್ಟಜಿಲ್ಲೆ ಕೊಡಗು ತನ್ನದೇ ಆದ ಕೊಡುಗೆ ನೀಡಿದೆ. ಹಿರಿಯ ತಾರೆ ದಿ. ಶಶಿಕಲಾ ನಂತರ ಕನ್ನಡದ ‘ಓಂ’ ಮತ್ತು ‘ನಮ್ಮೂರ ಮಂದಾರ ಹೂವೆ’ ಮೂಲಕ ಗಮನ ಸೆಳೆದವರು ಪ್ರೇಮಾ.

ಸಿನೆಮಾಗಿಂತಲೂ ಕಿರುತೆರೆಯಲ್ಲಿ ಶ್ವೇತಾ ಚಂಗಪ್ಪ ಖ್ಯಾತಿ ಗಳಿಸಿದ್ದರೆ, ರಶ್ಮಿಕಾ ಮಂದಣ್ಣ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಟೀನಾ ಮುಂತಾದವರು ವಿಭಿನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಂತೂ ಕನ್ನಡದಲ್ಲಿ ಮಿಂಚಿ, ತೆಲುಗಿನಲ್ಲಿ ಬೆಳೆದು, ತಮಿಳು ಚಿತ್ರರಂಗದಲ್ಲಿಯೂ ಹೆಜ್ಜೆಗುರುತು ಮೂಡಿಸಿ ಇದೀಗ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಬಹು ಬೇಡಿಕೆಯ ನಟಿಯಾಗಿದ್ದಾರೆ.

ಕೋವಿಡ್-೧೯ ಮಹಾಮಾರಿ ಜಗತ್ತನ್ನೆ ತಲ್ಲಣಗೊಳಿಸಿದ ಸಂದರ್ಭ ಇಡೀ ಚಿತ್ರರಂಗವೇ ಸ್ತಬ್ಧವಾಗಬೇಕಾಯಿತು. ಚಿತ್ರಮಂದಿರಗಳು ‘ಲಾಕ್ ಡೌನ್’ಗೆ ಒಳಪಟ್ಟ ಮೇಲಂತೂ ಚಲನಚಿತ್ರ ಹಾಗೂ ಧಾರಾವಾಹಿ  ನಿರ್ಮಾಪಕರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಚಡಪಡಿಸತೊಡಗಿದರು. ಚಿತ್ರ ನಿರ್ಮಾಣ, ಬಿಡುಗಡೆ, ಧಾರಾವಾಹಿ ನಿರ್ಮಾಣ ಕಾರ್ಯಕ್ಕೂ ಅಡ್ಡಿ, ಆತಂಕ ಎದುರಾದವು. ಇಂತಹಾ ಆತಂಕದ ಸನ್ನಿವೇಶದ ಕೊಡಗಿನ ನಟಿಯೊಬ್ಬರು ಚೆನೈನಲ್ಲಿ ಸದ್ದು ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಿಂದಲೂ ಚೆನೈನಲ್ಲಿ ಧಾರಾವಾಹಿಯಲ್ಲಿ ನಟಿಸುತ್ತಾ ‘ಬ್ಯುಸಿ’ಯಾಗಿದ್ದಾರೆ. ಈಕೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸುತ್ತಿರುವ ‘ಕಣ್ಣಾನೆ ಕನ್ನೆ’ ಧಾರಾವಾಹಿ ೨೦೦ ಎಪಿಸೋಡ್ ಮುಗಿಸಿ ಮುಂದುವರಿಯುತ್ತಿರುವದೇ ಇದಕ್ಕೆ ಸಾಕ್ಷಿ. ತಮಿಳು ಸನ್ ಟಿ.ವಿ. ಯಲ್ಲಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೮.೩೦ ಗಂಟೆಗೆ ಪ್ರಸಾರವಾಗುತ್ತಿದೆ. ಅಳುಗು, ಸುಮಂಗಲಿ, ತಾಳಂಪೂ ಧಾರಾವಾಹಿಯಲ್ಲಿಯೂ ಗೋಣಿಕೊಪ್ಪಲು ಚೆಲುವೆ ಅಕ್ಷಿತಾ ಬೋಪಯ್ಯ ನಟಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಶಾಲಾ ಕಾಲೇಜು ದಿನಗಳಲ್ಲಿಯೇ ಕಿರುತೆರೆ, ಚಲನ ಚಿತ್ರದಲ್ಲಿ ನಟಿಸುವ ಕನಸು ಕಾಣುತ್ತಿದ್ದ ಅಕ್ಷಿತಾ ತಮ್ಮ ಬಯಕೆಯನ್ನು ಶೀಘ್ರವಾಗಿ ಈಡೇರಿಸಿಕೊಂಡವರಲ್ಲಿ ಒಬ್ಬರು. ಆಶ್ಚರ್ಯಕರ ವಿಚಾರವೆಂದರೆ ರಶ್ಮಿಕಾ ಮಂದಣ್ಣ, ಪಾಯಲ್ ರಾಧಾಕೃಷ್ಣ ಹಾಗೂ ಗೋಣಿಕೊಪ್ಪಲು ಬೆಡಗಿ ಅಕ್ಷಿತಾ ಬೋಪಯ್ಯ ಮೂವರು ಮೊದಲ ಬಾರಿಗೆ ಬಿಡದಿಯಲ್ಲಿ ಅದೃಷ್ಟ ಪರೀಕ್ಷಿಸಲು ಮೊದಲ ‘ಆಡಿಸನ್’ ನಲ್ಲಿ ಪಾಲ್ಗೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಸಿನೆಮಾಗೆ ಆಯ್ಕೆಯಾದರೆ, ಅಕ್ಷಿತಾ ಅವರು ನಾಯಕ ನಟ ಸಾಯಿಕುಮಾರ್ ಅವರ ನಾಯಕಿಯಾಗಿ ‘ರಿಯಲ್ ಪೊಲೀಸ್’ಚಿತ್ರಕ್ಕೆ ಆಯ್ಕೆಯಾಗುತ್ತಾರೆ.

ಗೋಣಿಕೊಪ್ಪಲಿನ ಲಯನ್ಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವಾಗಲೇ ಭರತನಾಟ್ಯ ಕಲಿಕೆ ಆರಂಭಿಸಿ, ಮುಂದೆ ಮೈಸೂರುವಿನ ವಿದ್ಯಾಶ್ರಮ ಕಾಲೇಜಿನಲ್ಲಿ ಓದು ಮುಂದುವರಿದಾಗಲೂ ಸುಮಾರು ೮ ವರ್ಷ ಭರತ ನಾಟ್ಯ ಕಲಿತು ಸಿನೆಮಾ ರಂಗಕ್ಕೆ ಧುಮುಕಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಗೋಣಿಕೊಪ್ಪಲಿನ ಉದ್ಯಮಿ ಬಲ್ಲಚಂಡ ಬೋಪಯ್ಯ- ಪ್ರೇಮಾ ದಂಪತಿ ತಮ್ಮ ಮಗಳ ನಟನೆಯ ಇಚ್ಛೆಗೆ ಪೂರಕ ಸಹಕಾರ ನೀಡುವದರಿಂದಾಗಿ ಅಕ್ಷಿತಾಗೆ ಬಹುಬೇಗನೆ ಸಿನೆಮಾ ರಂಗ ಪ್ರವೇಶ ಸಾಧ್ಯವಾಗುತ್ತದೆ.

ಬೆಂಗಳೂರು ಪರಿಚಿತರ ಸಹಕಾರದೊಂದಿಗೆ ತಮಿಳು ಕಿರುತೆರೆಗೂ ಅಕ್ಷಿತಾ ಎಂಟ್ರಿ ಪಡೆಯುತ್ತಾರೆ. ೨೦೧೭ ರಿಂದಲೇ ಸಿನೆಮಾ ಹಾಗೂ ಕಿರುತೆರೆಯತ್ತ ಮುಖಮಾಡಿದ ಗೋಣಿಕೊಪ್ಪಲಿನ ನಟಿ ಮತ್ತೆ ಹಿಂತಿರುಗಿ ನೋಡುವದೇ ಇಲ್ಲ. ಸದಾ ಸಾಧನೆಯ ಬೆನ್ನು ಹತ್ತಿ, ಶ್ರದ್ಧೆಯೊಂದಿಗೆ ತನ್ನ ಕೆಲಸದಲ್ಲಿ ಮಗ್ನರಾಗಿರುವದು ಈಕೆಯ ಹೆಗ್ಗಳಿಕೆ.

ನಾಯಕನಟ ಸಾಯಿಕುಮಾರ್ ಅವರೊಂದಿಗೆ ‘ರಿಯಲ್ ಪೊಲೀಸ್’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ನಂತರ ಅಂಬರೀಷ್ ಅವರ ‘ಅಂಬಿ ನಿನಗೆ ವಯಸ್ಸಾಯ್ತು’, ಉಪೇಂದ್ರ ಅವರ ‘ಐ ಲವ್ ಯು’, ಬೃಹ್ಮಾಚಾರಿಯಲ್ಲಿ ಆದಿತಿ ಪ್ರಭುದೇವ್ ಅವರೊಂದಿಗೆ, ಸತೀಶ್ ನೀನಾಸಂ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿ, ಚೆಡ್ಡಿದೋಸ್ತ್ ದಲ್ಲಿ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿರುವ ಅಕ್ಷಿತಾ ಅವರು ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ‘ತ್ರಿ ವಿಕ್ರಮ’ ಸಿನೆಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಪಿ-೫ ಎಂಬ ನಾಯಕಿ ಪ್ರಧಾನ ಕನ್ನಡ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದ್ದು, ಅದ್ರಷ್ಟ ಪರೀಕ್ಷೆಯಲ್ಲಿದ್ದಾರೆ. 

ಕನ್ನಡದ ಸ್ಟಾರ್ ಸುವರ್ಣದಲ್ಲಿ ‘ವರಲಕ್ಷ್ಮಿ ಸ್ಟೋರ್ಸ್’ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿ ‘ಸೈ’ ಎನಿಸಿಕೊಂಡಿರುವ ಅಕ್ಷಿತಾಗೆ ಪಂಚಭಾಷಾ ತಾರೆಯಾಗುವ ಕನಸಿದೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ದಿನವೂ ಕಲಿಯುವದಿದೆ. ಕನ್ನಡ ಚಿತ್ರರಂಗದಲ್ಲಿ ಹಾಗೂ ತಮಿಳು ಚಿತ್ರರಂಗದಲ್ಲಿ ಮತ್ತಷ್ಟು ಸಾಧನೆ ಮಾಡುವ ಪ್ರಯತ್ನದಲ್ಲಿದ್ದೇನೆ. ಸಧ್ಯಕ್ಕೆ ತಮಿಳಿನ ‘ಕಣ್ಣಾನೆ ಕನ್ನೆ’ ಧಾರಾವಾಹಿಯಲ್ಲಿ ‘ಲಾಕ್ ಡೌನ್’ ದಿನಗಳಲ್ಲಿಯೂ ಎಡೆಬಿಡದೆ ತೊಡಗಿಸಿಕೊಂಡಿದ್ದೇನೆ, ಭವಿಷ್ಯದಲ್ಲಿ ಸಿನೆಮಾ ಕ್ಷೇತ್ರ ಹಾಗೂ ಕಿರುತೆರೆಯಲ್ಲಿ ಸಾಧನೆ ಮಾಡಬೇಕೆಂದು ತಮ್ಮ ಅದಮ್ಯ ಉತ್ಸಾಹವನ್ನು ಹೊರಹಾಕಿದ್ದಾರೆ ಗೋಣಿಕೊಪ್ಪಲಿನ ಬೆಡಗಿ ಅಕ್ಷಿತಾ.


                                                                                                                   ✍️....ಟಿ.ಎಲ್.‌ ಶ್ರೀನಿವಾಸ್‌

         ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.


( ಟಿ.ಎಲ್.‌ ಶ್ರೀನಿವಾಸ್‌ )

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,