ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ತಮಾನೋತ್ಸವ ಸಮಾರಂಭ: ಆ.20 ರಂದು ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ
ಮಡಿಕೇರಿಯ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಶತಮಾನೋತ್ಸವ ಅಂಗವಾಗಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಶತಮಾನೋತ್ಸವದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಸಂಸದ ಪ್ರತಾಪ್ ಸಿಂಹ 21 ವಿವಿಧ ಬರಹಗಾರರ 200 ಪುಟಗಳನ್ನೊಳಗೊಂಡ “ಸಹಕಾರ ಸಿರಿ” ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮೊಬೈಲ್ ಬ್ಯಾಂಕಿಂಗ್ ವಾಹನವನ್ನು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಹಿರಿಯ ಸಹಕಾರಿ ಎಂ.ಸಿ. ನಾಣಯ್ಯ, ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ ಬೆಳ್ಳಿಪ್ರಕಾಶ್, ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕರ್ನಾಟಕ ಸಹಕಾರ ಸಂಘಗಳ ನಿಬಂಧಕ ಎಸ್.ಜಿಯಾಹುಲ್ಲಾ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ರಾಜ್ಯ ಅಪೆಕ್ಸ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ದೇವರಾಜ್, ಸಹಕಾರ ಸಂಘಗಳ ಅಪರ ನಿಬಂಧಕ ಎ.ಸಿ. ದಿವಾಕರ್, ಮೈಸೂರು ಪ್ರಾಂತದ ಜಂಟಿ ನಿಬಂಧಕ ಪ್ರಕಾಶ್ ರಾವ್ ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭ ಬ್ಯಾಂಕಿನ ಶತಮಾನೋತ್ಸವ ಅಂಗವಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಂಪ್ಯೂಟರ್‍ಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದ್ದು, ಬ್ಯಾಂಕಿನ ಎಲ್ಲಾ ಸದಸ್ಯ ಸಹಕಾರ ಸಂಘಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಗುತ್ತ್ತಿದೆ ಎಂದು ಮಾಹಿತಿ ನೀಡಿದರು.
28.06.1921 ರಲ್ಲಿ ದಿವಾನ್ ಬಹದ್ದೂರ್ ಕೇಟೋಳಿರ ಚೆಂಗಪ್ಪ ನವರ ಅಧ್ಯಕ್ಷತೆಯಲ್ಲಿ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯ, ಪುಲಿಯಂಡ ತಿಮ್ಮಯ್ಯ, ಕುಪ್ಪಂಡ ಬೆಳ್ಳಿಯಪ್ಪ, ಉದಿಯಂಡ ಮಾಚಯ್ಯ, ಪಟ್ಟಮಾಡ ಪೊನ್ನಪ್ಪ, ಪಂದ್ಯಂಡ ಬೆಳ್ಳಿಯಪ್ಪ, ಎಂ.ಭುಜಂಗರಾವ್, ನಡಿಕೇರಿಯಂಡ ಚಿಣ್ಣಪ್ಪ, ಎ.ಬಿ.ಕಾರ್ಯಪ್ಪ ಮತ್ತು ಸಿ.ಎನ್.ವೆಂಕಪ್ಪಯ್ಯರವರು ಭಾಗವಹಿಸಿದ ಸಮಾಲೋಚನ ಸಭೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಕಾರವೇ ಸನ್ಮಾರ್ಗ ಎಂಬುದನ್ನು ಮನಗಂಡು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಪ್ರಥಮವಾಗಿ 48 ಸಹಕಾರ ಸಂಘಗಳು ಮತ್ತು 16 ವ್ಯಕ್ತಿಗತ ಸದಸ್ಯರನ್ನೊಳಗೊಂಡಂತೆ ರೂ. 4,400/- ಪಾಲು ಬಂಡವಾಳ ಹಾಗೂ ರೂ. 10,000/- ಠೇವಣಾತಿಯೊಂದಿಗೆ “ಕೊಡಗು ಕೇಂದ್ರ ಸಹಕಾರ ಬ್ಯಾಂಕು” ಅಸ್ತಿತ್ವಕ್ಕೆ ಬಂತು.
ಕೊಡಗಿನ ಹಿರಿಯ ಸಹಕಾರಿಗಳಾದ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯನವರು ಪ್ರಥಮ ಅಧ್ಯಕ್ಷರಾಗಿ, ದಿನಾಂಕ 1.02.1922 ರಂದು ಮಡಿಕೇರಿ ಕೋಟೆಯಲ್ಲಿದ್ದ ತಾಲೂಕು ಕಛೇರಿಯಲ್ಲಿ ಕಾರ್ಯಾರಂಬಿಸಿ, 1946ರಲ್ಲಿ ಕೊಡಗು ಪ್ರಾಂತೀಯ ಸಹಕಾರ ಬ್ಯಾಂಕು ನಿಯಮಿತವಾಗಿ, 1948ರಲ್ಲಿ ಕೊಡಗು ರಾಜ್ಯ ಸಹಕಾರ ಬ್ಯಾಂಕು ನಿಯಮಿತವಾಗಿ, ಅಂತಿಮವಾಗಿ 1956ರಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿಯಮಿತವಾಗಿ ಪರಿವರ್ತನೆಗೊಂಡಿತು.
ಬ್ಯಾಂಕಿನ ಸರ್ವತೋಮುಖ ಪ್ರಗತಿಗನುಗುಣವಾಗಿ 1995ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಬ್ಯಾಂಕಿಂಗ್ ಲೈಸನ್ಸ್ ಪಡೆದಿದ್ದು, ಬ್ಯಾಂಕಿಂಗ್ ಲೈಸನ್ಸ್ ಪಡೆದ ರಾಜ್ಯದ ಎರಡನೇ ಜಿಲ್ಲಾ ಸಹಕಾರ ಬ್ಯಾಂಕು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಗಿರುತ್ತದೆ ಎಂದರು.
ಪ್ರಸ್ತುತ 73 ವ್ಯವಸಾಯ ಸೇವಾ ಸಹಕಾರ ಸಂಘಗಳು, 79 ಸಹಕಾರ ದವಸ ಭಂಡಾರಗಳು, 12 ಸಹಕಾರ ಮಹಿಳಾ ಸಮಾಜಗಳು, 3 ಪಿಎಲ್‍ಡಿ ಬ್ಯಾಂಕುಗಳು, 3 ಲ್ಯಾಂಪ್ಸ್ ಸಹಕಾರ ಸಂಘಗಳು, 11 ಮಾರಾಟ ಸಹಕಾರ ಸಂಘಗಳು, 4 ಪಟ್ಟಣ ಸಹಕಾರ ಬ್ಯಾಂಕುಗಳು, 8 ಉದ್ಯೋಗಸ್ಥರ ಸಹಕಾರ ಸಂಘಗಳು, 4 ಹಾಲು ಉತ್ಪಾಧಕರ ಸಹಕಾರ ಸಂಘಗಳು ಮತ್ತು 91 ಇತರೆ ಸಹಕಾರ ಸಂಘಗಳು ಸೇರಿ ಒಟ್ಟು 288 ಸಹಕಾರ ಸಂಘಗಳ ಸದಸ್ಯತ್ವ ಹೊಂದಿದೆ.
ಬ್ಯಾಂಕು ಪ್ರಸ್ತುತ 9 ಎಟಿಎಂ ಗಳ ಸಹಿತ 21 ಶಾಖೆಗಳನ್ನು ಹೊಂದಿದ್ದು, 39846 ರೈತ ಗ್ರಾಹಕರಿಗೆ ರೂಪೇ ಕೆಸಿಸಿ ಎಟಿಎಂ ಕಾರ್ಡುಗಳ ವಿತರಣೆಯನ್ನು ಮಾಡಿರುವುದಲ್ಲದೆ, 9442 ಉಳುವರಿ ಖಾತೆದಾರರಿಗೆ ರೂಪೇ ಡೆಬಿಟ್ ಎಟಿಎಂ ಕಾರ್ಡುಗಳ ವಿತರಣೆಯನ್ನು ಮಾಡಿದ್ದು, ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್ ಸೇವೆಗಳಾದ RTGS / NEFT / Mobile Banking / IMPS / PoS / Micro ATM ಸೇವೆಯೊಂದಿಗೆ ಶತಮಾನೋತ್ಸವ ಸಂಭ್ರಮದಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಎಂಬಂತೆ ಸಂಚಾರಿ ಬ್ಯಾಂಕಿಂಗ್ ಸೇವೆಯನ್ನು ನೀಡುವುದರೊಂದಿಗೆ, ಕೊಡಗು ಜಿಲ್ಲೆಯ ಪ್ರಾಕೃತಿಕ ವಿಕೋಪ, ನೆರೆ ಹಾವಳಿ, ಕೋವಿಡ್-19 ರ ಈ ಸಂದರ್ಭದಲ್ಲಿಯೂ ಹಿಂಜರಿಯದೆ ನಿತ್ಯ ನಿರಂತರ ವ್ಯವಹಾರಗಳನ್ನು ಎಡೆಬಿಡದೆ ನಿರ್ವಹಿಸಿಕೊಂಡು ಬಂದಿರುವ ಈ ಬ್ಯಾಂಕ್ 100 ಯಶಸ್ವಿ ಸಂವತ್ಸರಗಳನ್ನು ಪೂರೈಸಿದೆ.
ಬ್ಯಾಂಕಿನ ಕೇಂದ್ರ ಕಛೇರಿ ಮತ್ತು 11 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಆಡಳಿತ ಮಂಡಳಿಯ ಅವಧಿಯಲ್ಲಿ 3 ಶಾಖೆಗಳಿಗೆ ಸ್ವಂತ ಕಟ್ಟಡವನ್ನು ಹೊಂದಿದ್ದು, 4 ನೂತನ ಶಾಖೆಗಳನ್ನು ತೆರೆಯಲಾಗಿದೆ. 1921ನೇ ಇಸವಿಯಲ್ಲಿ ಬ್ಯಾಂಕು ಪ್ರಾರಂಭವಾದ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ ಶಾಖೆಯನ್ನು ಸ್ವಂತ ಕಟ್ಟಡದೊಂದಿಗೆ ಶತಮಾನೋತ್ಸವ ನೆನಪಿನ 21ನೇ ಶಾಖೆಯಾಗಿ ಪ್ರಾರಂಭಿಸಲಾಗಿರುತ್ತದೆ.
ಬ್ಯಾಂಕಿನ ಸೇವೆಗಳನ್ನು ಗ್ರಾಮೀಣ ಜನತೆಗೆ ವಿಸ್ತರಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕಿನ ಸಂಪಾಜೆ ಹಾಗೂ ಭಾಗಮಂಡಲದಲ್ಲಿ ಮತ್ತು ಸೋಮವಾರಪೇಟೆ ತಾಲೂಕಿನ ಮಾದಾಪುರದಲ್ಲಿ ಒಟ್ಟು 3 ನೂತನ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿರುತ್ತದೆ.
ಶತಮಾನೋತ್ಸವದ ಈ ಸಂದರ್ಭದಲ್ಲಿ ಬ್ಯಾಂಕು ರೂ.1081.76 ಕೋಟಿ ಠೇವಣಾತಿ ಸಂಗ್ರಹಿಸಿದ್ದು, ರೂ.100 ಕೋಟಿ ಸ್ವಂತ ಬಂಡವಾಳ, ರೂ.1524.67 ಕೋಟಿ ದುಡಿಯುವ ಬಂಡವಾಳ ಮತ್ತು ರೂ.1979.77 ಕೋಟಿ ಮೊತ್ತದ ವ್ಯವಹಾರವನ್ನು ಹೊಂದಿರುತ್ತದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 9 ಕೋಟಿ 8 ಲಕ್ಷ ರೂಪಾಯಿ ಲಾಭಾಂಶವನ್ನು ಗಳಿಸಿರುತ್ತದೆ.
ಶತಮಾನೋತ್ಸವ ಪ್ರಯುಕ್ತ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ಸಾಪ್ಟ್‍ವೇರ್ ಅಳವಡಿಸಿಕೊಡಿಸಿ ಕೊಡುವುದರೊಂದಿಗೆ ಸಂಪೂರ್ಣ ಗಣಕೀಕರಣಗೊಳಿಸಲು ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದು, ಬ್ಯಾಂಕಿನ ಗ್ರಾಹಕರಿಗೆ ಇಂಟರ್‌ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಿಕೊಡುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಕೋವಿಡ್-19ರ ಸಂದರ್ಭ ಕೊಡಗು ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ, ಮಡಿಕೇರಿಯಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬ್ಯಾಂಕಿನ ಪರವಾಗಿ ವೆಂಟಿಲೇಟರ್ ನೀಡಲಾಗಿದೆ ಎಂದು ಬಾಂಡ್ ಗಣಪತಿ ಮಾಹಿತಿ ನೀಡಿದರು.
ಶತಮಾನೋತ್ಸವದ ಸಮಾರಂಭದಲ್ಲಿ ಸರ್ಕಾರದ ಸೂಚನೆಯನ್ವಯ ಕೋವಿಡ್ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸರ್ವರಿಗೂ ಮಾಸ್ಕ್ ನೀಡಲಾಗುತ್ತಿದೆ ಹಾಗೆಯೇ ದೇಹ ತಾಪಮಾನ ಪರೀಕ್ಷೆಯೊಂದಿಗೆ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಕೆಟೋಳೀರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಬಿ.ಕೆ.ಚಿಣ್ಣಪ್ಪ, ಪಟ್ರಪಂಡ ಬಿ. ರಘುನಾಣಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಸಲೀಂ ಉಪಸ್ಥಿತರಿದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network