Header Ads Widget

ಸರ್ಚ್ ಕೂರ್ಗ್ ಮೀಡಿಯ

ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ

"ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ" ವರ್ಷವು ದೇಶಕ್ಕೆ ಹೊಸ ಶಕ್ತಿಯನ್ನು ತುಂಬುವ ದೃಷ್ಠಿಯಿಂದ ರಾಷ್ಟ್ರಕ್ಕಾಗಿ ತಮ್ಮನ್ನುಸಮರ್ಪಿಸಿಕೊಂಡ "ರಾಷ್ಟ್ರ ದೃಷ್ಟಾರ" ರ ನೆನಪಿಸಿಕೊಳ್ಳುವ ಲೇಖನ ಮಾಲೆಗಳು.

ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ


ಆತನ ಮನೆಯಲ್ಲಿ ಎಲ್ಲವೂ ಇತ್ತು.  ಹಣ, ಸುಖ, ಶಾಂತಿ, ನೆಮ್ಮದಿ. ಆದರೆ ದೇಶದಲ್ಲಿ ಇವ್ಯಾವುದೂ ಇಲ್ಲ ಎಂಬ ಕಾರಣಕ್ಕೆ ಆತ ಕ್ರಾಂತಿಗಿಳಿದ. ಬ್ರಿಟಿಷ್ ಸರ್ಕಾರದ ಕಛೇರಿಯಲ್ಲಿ ಗುಮಾಸ್ತನಾಗಿದ್ದ ಒಬ್ಬ ಸಾಮಾನ್ಯ ಭಾರತೀಯ, ಸೂರ್ಯ ಮುಳುಗದ ಬ್ರಿಟಿಷ್ ಸರ್ಕಾರದ ವಿರುದ್ದವೇ ಬಂಡಾಯ ಹೂಡಿದ್ದ. ದೇಶದ ಎಲ್ಲಾ ಮಹಾರಾಜರೇ ಸೋತು ಇಂಗ್ಲಿಷರಿಗೆ ಶರಣಾಗಿದ್ದಾಗ ಅಂಜದೆ ಸೈನ್ಯ ಕಟ್ಟಿ ಆಂಗ್ಲರಿಗೆ ನಡುಕ ಹುಟ್ಟಿಸಿದ್ದ ಆತ. ತನ್ನನ್ನು ಬಲಿಕೊಟ್ಟು ದೇಶದಲ್ಲಿ ಸಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ ಹೆಸರು ವಾಸುದೇವ ಬಲವಂತ ಫಡಕೆ.

    ಕಾನೂನಿನ ಮೂಲಕ ಬ್ರಿಟಿಷರನ್ನು ಓಡಿಸುವುದು ಅಸಾಧ್ಯವೆಂದು ಭಾವಿಸಿದ ವಾಸುದೇವ, ಸಶಸ್ತ್ರ ಕ್ರಾಂತಿಯೇ ದಾರಿ ಎಂದು ನಂಬಿದ. ಬಡವರೂ ಅನಕ್ಷರಸ್ಥರೂ ಆದ ರಾಮೋಶಿ ಎಂಬ ಗುಡ್ಡಗಾಡು ಜನರನ್ನು ಸಂಘಟಿಸಿ ಕ್ರಾಂತಿಗೆ ಪ್ರೇರೇಪಿಸಿದ. ಸಿಕ್ಕ ಸಿಕ್ಕಲ್ಲಿ ಬ್ರಿಟಿಷರಿಗೆ ಬ್ರಿಟಿಷ್ ಸೈನ್ಯಕ್ಕೆ ಮಾರಣಾಂತಿಕ ಹೊಡೆತ ನೀಡಿದ. ವಾಸುದೇವನ ಬಂಡಾಯದಿಂದ ಬ್ರಿಟಿಷ್ ಸರಕಾರವು ಬೇಸತ್ತು ಹೋಯಿತು. ಸರಕಾರವು ಅವನನ್ನು ಹಿಡಿದು ಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಿತು. ವಾಸುದೇವ ಅದಕ್ಕಿಂತಲೂ ದೊಡ್ಡ ಮೊತ್ತದ ಬಹುಮಾನವನ್ನು ಗವರ್ನರ್ ಮತ್ತು ಜಿಲ್ಲಾಧಿಕಾರಿಗಳ ತಲೆಗೆ ಘೋಷಿಸಿದ. ವಾಸುದೇವ ಬಲವಂತ ಫಡಕೆಯ ಹೆಸರು ಇಂಗ್ಲೀಷ್ ಸಾಮ್ರಾಜ್ಯದ ಮೂಲೆ ಮೂಲೆಗೆ ಹರಡಿತ್ತು. ಹಲವು ವರ್ತಮಾನ ಪತ್ರಿಕೆಗಳಲ್ಲಿ ಈ ಕ್ರಾಂತಿಯ ಕಥೆ ಪ್ರಕಟವಾಯಿತು.

    ಮುಂಬೈ ಬಳಿಯ ಶಿರಡೋಣ ಎಂಬ ಊರಿನಲ್ಲಿ ಬಲವಂತರಾವ್ ಫಡಕೆ ಮತ್ತು ಸರಸ್ವತಿಬಾಯಿ ದಂಪತಿಗಳ ಮಗನಾಗಿ ವಾಸುದೇವ ಬಲವಂತ ಫಡಕೆ 1845 ನವೆಂಬರ್ 4 ರಂದು ಜನಿಸಿದರು. ತಾಯಿಯ ಸ್ವಂತ ಊರು ಕಲ್ಯಾಣದಲ್ಲಿ ವಾಸುದೇವನನ್ನು ಶಾಲೆಗೆ ಕಳುಹಿಸಿದರು. ಶ್ರದ್ದೆಯಿಂದ ಓದಿದ ವಾಸುದೇವ ಗಣಿತ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳನ್ನು ಅಭ್ಯಾಸ ಮಾಡಿದ. ಈ ಹೊತ್ತಿಗೆ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿತ್ತು. ಈ ಸ್ವಾತಂತ್ರ್ಯ ಯುದ್ದದ ಕಥೆಗಳನ್ನು ತಂದೆ ಬಲವಂತರಾವ್ ಫಡಕೆ ವಾಸುದೇವನಿಗೆ ಹೇಳುತ್ತಿದ್ದರು. ಕಥೆಗಳನ್ನು ವಾಸುದೇವ ಉತ್ಸಾಹದಿಂದ ಕೇಳುತಿದ್ದ.

    ಚಿಕ್ಕಂದಿನಿಂದಲೇ ಅಜ್ಜ ಹಾಗೂ ತಂದೆಯಿಂದ ದೇಶಭಕ್ತಿಯ ಕಥೆಗಳನ್ನು ಕೇಳುತ್ತಾ ಬೆಳೆದ ವಾಸುದೇವನಿಗೆ ಹೇಗಾದರೂ ಮಾಡಿ ದೇಶವನ್ನು ದಾಸ್ಯಮುಕ್ತಗೊಳಿಸಬೇಕು ಎಂಬ ಹಂಬಲವಿತ್ತು. 1859 ರಲ್ಲಿ ತನ್ನ ಕಾಲೇಜು ಶಿಕ್ಷಣದ ನಂತರ ಆತ ಪುಣೆಯ ಮಿಲಿಟರಿ ಫೈನಾನ್ಸ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಬ್ರಿಟಿಷ್ ಸರ್ಕಾರದ ಕೆಲಸವಾದರೂ ಒಳಗೊಳಗೇ ಆತನ ಸ್ವಾತಂತ್ರ್ಯದ ಆಸೆ ಬಲಗೊಳ್ಳುತ್ತಲೇ ಇತ್ತು. ಅದೇ ಸಮಯಕ್ಕೆ ವಾಸುದೇವನ ತಾಯಿ ಅನಾರೋಗ್ಯ ಪೀಡಿತರಾದಾಗ ಆತ ಕೆಲಸಕ್ಕೆ ರಜೆ ಕೇಳಿದ, ಬ್ರಿಟೀಷ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಜೆ ದೊರೆಯುವ ವೇಳೆಗೆ ವಾಸುದೇವನ ತಾಯಿ ತೀರಿಕೊಂಡಿದ್ದರು. ತನ್ನ ತಾಯಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡದ ಬ್ರಿಟಿಷರ ವಿರುದ್ಧ ಸಿಡಿದೆದ್ದ ವಾಸುದೇವ ‘ಇವರು ನನ್ನ ತಾಯಷ್ಟೇ ಅಲ್ಲ, ಭಾರತಮಾತೆಯಿಂದಲೂ ನಮ್ಮನ್ನು ದೂರಮಾಡುತ್ತಿದ್ದಾರೆ’ ಎಂಬ ಭಾವದಿಂದ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ. ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತೀಯರ ಎಲ್ಲ ಕಷ್ಟಗಳಿಗೆ, ಸಂಕಟಗಳಿಗೆ ಮೂಲ ಕಾರಣ ಗುಲಾಮಗಿರಿಯ ಜೊತೆಗೆ ಶಿಕ್ಷಣದ ಕೊರತೆ ಎಂಬುದನ್ನು ಗುರುತಿಸಿ “ಪೂಣಾ ನೇಟಿವ್ ಇನಿಸ್ಟಿಟ್ಯೂಷನ್” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದ. ಇದೇ ಮುಂದೆ ‘ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ’ ಎಂಬ ಹೆಸರಿನಿಂದ ಭವ್ಯ ಸ್ವರೂಪ ತಾಳಿತು.

    ಇಂಗ್ಲಿಷ್ ಸೇನಾಧಿಪತಿ ಮೇಜರ್ ಡೇನಿಯಲ್ ವಾಸುದೇವರನ್ನು ಹಿಡಿಯಲು ಬೆನ್ನು ಹತ್ತಿದನು. ವಾಸುದೇವರ ಸೈನ್ಯ ಕೊಂಕಣ ಪ್ರಾಂತ್ಯದಲ್ಲಿ ಲೂಟಿ ಮಾಡಿ ಬರುತ್ತಿದ್ದ ಸಮಯದಲ್ಲಿ ಡೇನಿಯಲ್ ಸೈನ್ಯಕ್ಕೆ ಎದುರಾಯಿತು. ಬ್ರಿಟಿಷರ ಶಸ್ತ್ರಸಜ್ಜಿತ ಸೇನೆಯನ್ನು ಎದುರಿಸಲು ವಾಸುದೇವರ ರಾಮೋಶಿ ಸೇನೆಗೆ ಆಗಲಿಲ್ಲ. ವಾಸುದೇವರ ಸೈನ್ಯಕ್ಕೆ ಭೀಕರ ಸೋಲು ಉಂಟಾಯಿತು. ಈ ಯುದ್ದದಲ್ಲಿ ವಾಸುದೇವರ ಬಲಗೈಯಂತಿದ್ದ ದೌಲತ್ ರಾವ್ ನಾಯಕ್ ಸಾವಿಗೀಡಾದನು. ಸೈನ್ಯ ಚೆಲ್ಲಾಪಿಲ್ಲಿಯಾಯಿತು. ಡೇನಿಯಲ್ ನಿಂದ ತಪ್ಪಿಸಿಕೊಂಡ ವಾಸುದೇವರು ತಲೆ ಮರೆಸಿಕೊಂಡು ಮಿತ್ರನ  ಮನೆಯಲ್ಲಿ ಗುಪ್ತ ಆಶ್ರಯ ಪಡೆದರು. ಆದರೆ ಬ್ರಿಟಿಷರಿಗೆ ವಾಸುದೇವರನ್ನು ಹಿಡಿಯುವವರೆಗೂ ನಿದ್ದೆ ಬರಲಿಲ್ಲ. ಡೇನಿಯಲ್ ಮತ್ತೆ ಬೆನ್ನು ಹತ್ತಿದನು. ಕೆಲವು ವಿಶ್ವಾಸ ದ್ರೋಹಿಗಳು ಹಣದ ಆಸೆಗೆ ವಾಸುದೇವರ ಗುಪ್ತ ಸ್ಥಳದ ಮಾಹಿತಿಯನ್ನು ಡೇನಿಯಲ್ ಗೆ ನೀಡಿದರು. ವಾಸುದೇವರನ್ನು ಡೇನಿಯಲ್ ಸೆರೆ ಹಿಡಿದ. 

    ವಾಸುದೇವರನ್ನು ಪೂನಾಗೆ ಕರೆತಂದರು. ಬ್ರಿಟಿಷರ ವಿರುದ್ದ  ಯುದ್ದ ಸಾರಿದ ಮಹಾನ್ ಪುರುಷರನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು. ಈ ಕ್ರಾಂತಿಕಾರಿ ವೀರನ ಮೇಲೆ ಹಲವು ಮೊಕದ್ದಮೆಗಳನ್ನು ಹಾಕಿ ಭಯಂಕರ ಆರೋಪಗಳನ್ನು ಅವರ ಮೇಲೆ ಹೊರಿಸಲಾಯಿತು. ನಮ್ಮ ಭಾರತೀಯರೆ ಅವರ ವಿರುದ್ದ ಸಾಕ್ಷಿ ಹೇಳಿದರು. ವಿಚಾರಣೆ ಮುಗಿದು ನ್ಯಾಯಾಲಯ ವಾಸುದೇವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ನಂತರ ವಾಸುದೇವರನ್ನು ಏಡನ್ ಗೆ ಕಳುಹಿಸಿದರು. ಜೈಲಿನಲ್ಲಿ ಬ್ರಿಟಿಷರು ಅವರಿಗೆ ಮತ್ತಷ್ಟು ಚಿತ್ರ ಹಿಂಸೆ ನೀಡಿದರು. ಕಾಲಕ್ರಮೇಣ ವಾಸುದೇವರ ಶರೀರ ಜರ್ಜರವಾಯಿತು. ಕಾಯಿಲೆಗೆ ತುತ್ತಾದ ಅವರ ದೇಹ ಅಸ್ಥಿಪಂಜರವಾಯಿತು. ದಿನದಿನವೂ ಸ್ವಾತಂತ್ರ್ಯ ದಾಹದಿಂದ ಕೊರಗುತ್ತಾ 1883 ಫೆಬ್ರವರಿ 17 ರಂದು ವಾಸುದೇವ ಬಲವಂತ ಫಡಕೆ ಅಸುನೀಗಿದರು. 

    ಆಗಿನ ಅಮೃತ ಬಜಾರ್ ಪತ್ರಿಕೆಯು ಈತನನ್ನು ‘ಹಿಮಾಲಯದಷ್ಟು ಉತ್ತುಂಗ ಪುರುಷ’ ಎಂದು ಗೌರವಿಸಿತು. ಇಂಗ್ಲೆಂಡಿನಲ್ಲಿ ಬಹು ಪ್ರಸಿದ್ಧವಾದ ವೃತ್ತಪತ್ರಿಕೆ ಲಂಡನ್ ಟೈಮ್ಸ್­ನಲ್ಲಿಯೂ ಫಡಕೆಯ ಪ್ರತಾಪದ ವರ್ಣನೆಯಾಯಿತು. ಇಂಗ್ಲೀಷ್ ಪಾರ್ಲಿಮೆಂಟಿನಲ್ಲಿ ಈತನ ಚಟುವಟಿಕೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ರಾಮೋಶೀ ಜನರ ತಂಡ ಕಟ್ಟಿಕೊಂಡು ಫಡ್ಕೆ ಬ್ರಿಟಿಷರ ನಿದ್ದೆಗೆಡಿಸಿದ ರೀತಿ ಮೈನವಿರೇಳಿಸುತ್ತದೆ. ಭಾರತೀಯ ಸ್ವಾತಂತ್ರ್ಯ ಕ್ರಾಂತಿಕಾರಿ ಹೋರಾಟಗಾರ ಪೈಕಿ ಭಾರತೀಯ ಮೊದಲ ಕ್ರಾಂತಿಕಾರಿ ಹಾಗೂ ಸಶಸ್ತ್ರ ಕ್ರಾಂತಿಯ ಪಿತಾಮಹ ವಾಸುದೇವ ಬಲವಂತ ಫಡ್ಕೆ ಹೆಸರು ಅಜರಾಮರ.  

ಲೇಖಕರು: ✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,