Header Ads Widget

Responsive Advertisement

7ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ-2021

7ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ-2021

ಪುಟ್ಬಾಲ್ ವಿನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕುಂಜಿಲ ಟೈಗರ್ ಬಾಯ್ಸ್ ತಂಡ

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮದೆನಾಡು ಕಾಫಿ ಲಿಂಕ್ಸ್ ತಂಡ ಚಾಂಪಿಯನ್

( ಹಗ್ಗಜಗ್ಗಾಟ ಸ್ಪರ್ಧೆಯ ಫೈನಲ್ಸ್ ಪಂದ್ಯದ ದೃಶ್ಯ )

ಪೊನ್ನಂಪೇಟೆ: 7ನೇ ವರ್ಷದ ನಿಸರ್ಗ ಜೆ.ಸಿ.ಐ. ಕೆಸರುಗದ್ದೆ ಕ್ರೀಡೋತ್ಸವ -2021ರ ಪುಟ್ಬಾಲ್ ಪಂದ್ಯಾವಳಿಯ ವಿನ್ನರ್ಸ್ ಪ್ರಶಸ್ತಿಯನ್ನು ಕುಂಜಿಲ ಟೈಗರ್ ಬಾಯ್ಸ್ ತಂಡ ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಇದರಿಂದ ಪೈನಲ್ಸ್ ಪ್ರವೇಶಿಸಿದ ಕಡಂಗ ಸವೆನ್ ಸ್ಟಾರ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. 

ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಹಾಗು ಮಾಯಮುಡಿಯ ಕಾವೇರಿ ಯುವಕ ಸಂಘದ ಸಹಯೋಗದೊಂದಿಗೆ ವಿವಿಧ ಪ್ರಾಯೋಜಕರ ನೆರವಿನಲ್ಲಿ ಸೋಮವಾರದಂದು ಕೊಳತೋಡಿನಲ್ಲಿ ದಿನವಿಡೀ ನಡೆದ ಕೆಸರುಗದ್ದೆ ಪುಟ್ಬಾಲ್ ಪಂದ್ಯಾವಳಿಯ ಪ್ರಬಲ ಹೋರಾಟದ ಪರಿಣಾಮ ಪೈನಲ್ಸ್ ತಲುಪಿದ ಕುಂಜಿಲ ಟೈಗರ್ ಬಾಯ್ಸ್ ತಂಡ ಅಂತಿಮವಾಗಿ ಎದುರಾಳಿ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ 2-0 ಗೋಲುಗಳಿಂದ ಮಣಿಸಿ ವಿಜಯದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ತೀವ್ರ ಸ್ಪರ್ಧೆಯೊಡ್ಡಿ ವಿನ್ನರ್ಸ್ ಪ್ರಶಸ್ತಿಯ ಕನಸಿನೊಂದಿಗೆ ಪೈನಲ್ಸ್ಗೆ ಬಂದ ಕಡಂಗ ಸವೆನ್ ಸ್ಟಾರ್ ತಂಡ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಲು ಎಷ್ಟೇ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಆರಂಭದಿಂದಲೆ ಸಮಬಲದ ಹೋರಾಟ ನಡೆದ ಪೈನಲ್ಸ್ ಪಂದ್ಯದಲ್ಲಿ ನೀರಿನಲ್ಲಿ ಒದ್ದ ಕಾಲ್ಚೆಂಡು ತಮ್ಮ ನಿಯಂತ್ರಣಕ್ಕೆ ತಕ್ಕಂತೆ ಗುರಿ ಮುಟ್ಟದಿದ್ದರೂ ಪ್ರಯತ್ನಗಳನ್ನು ಮಾತ್ರ ಉಭಯ ತಂಡಗಳು ಮುಂದುವರಿಸುತ್ತಲೇ ಇತ್ತು. ಕೊನೆಗೆ ಪೀಲ್ಡ್ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟ್‌ಔಟ್‌ನಲ್ಲ್ಲಿ ಪಂದ್ಯದ ವಿಜಯ ನಿರ್ಧರಿಸುವುದು ಅನಿವಾರ್ಯವಾಯಿತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಪೈನಲ್ಸ್ನಲ್ಲಿ ಕಡಂಗದ ಸಿಟಿ ಬಾಯ್ಸ್  ತಂಡವನ್ನು ಮಣಿಸಿದ ಕುಂಜಿಲ ಟೈಗರ್ ಬಾಯ್ಸ್ ತಂಡ ಹಾಗೂ 2ನೇ ಸೆಮಿಪೈನಲ್ಸ್ನಲ್ಲಿ ಬೇತ್ರಿಯ ಎಸ್.ಇ.ಸಿ. ತಂಡವನ್ನು ಮಣಿಸಿದ ಕಡಂಗ ಸವೆನ್ ಸ್ಟಾರ್ ತಂಡ ಪೈನಲ್ಸ್ಗೆ ಅರ್ಹತೆ ಪಡೆದಿತ್ತು. ಕೆಸರುಗದ್ದೆ ಪುಟ್ಬಾಲ್ ಪಂದ್ಯಾವಳಿಯಲ್ಲಿ ಬೇತ್ರಿಯ ಸ್ಟನ್ರ‍್ಸ್ ಬಾಯ್ಸ್ ತಂಡದ ಮುಜೀಬ್ ಅತ್ಯುತ್ತಮ ಆಟಗಾರರಾಗಿ ಮೂಡಿಬಂದರು. 

ಕೆಸರುಗದ್ದೆ ಕ್ರೀಡೋತ್ಸವದ ಆಕರ್ಷಣೆಯಾಗಿ ಮೂಡಿಬಂದ ಪುರುಷರ ಹಗ್ಗಜಗ್ಗಾಟ ಸ್ಪರ್ದೆ ಗ್ರಾಮೀಣ ಕ್ರೀಡೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿತು. ಹಲವಾರು ಸುತ್ತಿನ ತೀವ್ರ ಹೋರಾಟಗಳನ್ನು ನಡೆಸಿ ಪೈನಲ್ಸ್ ಪ್ರವೇಶಿಸಿದ್ದ ಮದೆನಾಡಿನ ಕಾಫಿ ಲಿಂಕ್ಸ್ ತಂಡ ಬಲಿಷ್ಠ ಕಗ್ಗೋಡ್ಲು ಪ್ರೆಂಡ್ಸ್ ‘ಎ’ ತಂಡವನ್ನು ಮಣಿಸುವುದರ ಮೂಲಕ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡು ಮತ್ತೊಮೆ ಚಾಂಪಿಯನ್ ಆಗಿ ಮೂಡಿ ಬಂತು. ಮಳೆಯ ನಡುವೆಯೂ ಸೇರಿದ್ದ ನೂರಾರು ಪ್ರೇಕ್ಷಕರ ಪ್ರೋತ್ಸಾಹದ ನಡುವೆ ಆರಂಭಗೊಂಡ ಹಗ್ಗಜಗ್ಗಾಟ ಸ್ಪರ್ಧೆಯ ಪೈನಲ್ಸ್‌ನಲ್ಲಿ ಬಲಿಷ್ಠ ಮತ್ತು ಅನುಭವಿ ಸ್ಪರ್ಧಾಳುಗಳನ್ನು ಒಳಗೊಂಡ ಕಗ್ಗೋಡ್ಲು ಪ್ರೆಂಡ್ಸ್ ‘ಎ’ ತಂಡ ಸೋಲೊಪ್ಪಿಕೊಳ್ಳಲು ಸಿದ್ದವಿರಲಿಲ್ಲ. ಆದರೆ, ಮದೆನಾಡಿನ ಕಾಫಿ ಲಿಂಕ್ಸ್ ತಂಡ ಸತತವಾಗಿ 2 ಸುತ್ತಿನಲ್ಲೂ ಎದುರಾಳಿ ತಂಡದ ವಿರುದ್ದ ಪ್ರಾಬಲ್ಯ ಮೆರೆದು ಮೇಲುಗೈ ಸಾಧಿಸಿತ್ತು. ಈ ಪರಿಣಾಮ ಉತ್ತಮ ಪ್ರದರ್ಶನ ನೀಡಿದ ಕಗ್ಗೋಡ್ಲು ಪ್ರೆಂಡ್ಸ್ ‘ಎ’ ತಂಡÀ ಮದೆನಾಡಿನ ಕಾಫಿ ಲಿಂಕ್ಸ್ ತಂಡದೆದುರು ಶರಣಾಗಬೇಕಾಯಿತು. 

ಇದಕ್ಕೂ ಮೊದಲು ನಡೆದ ಮೊದಲ ಸೆಮಿಪೈನಲ್ಸ್ನಲ್ಲಿ ಕಗ್ಗೋಡ್ಲು ಪ್ರೆಂಡ್ಸ್ ‘ಬಿ’ ತಂಡವನ್ನು ಸೋಲಿಸಿದ ಮದೆನಾಡಿನ ಕಾಫಿ ಲಿಂಕ್ಸ್ ತಂಡ ಹಾಗೂ 2ನೇ ಸೆಮಿಪೈನಲ್‌ನಲ್ಲಿ ಗೋಣಿಕೊಪ್ಪಲಿನ ಬಿ.ಎನ್.ಎಸ್. ತಂಡವನ್ನು ಸೋಲಿಸಿದ ಕಗ್ಗೋಡ್ಲು ಪ್ರೆಂಡ್ಸ್ ‘ಎ’ ತಂಡ ಅಂತಿಮ ಹಣಾಹಣಿಗೆ ಹಾದಿ ಸುಗಮಗೊಳಿಸಿಕೊಂಡಿತ್ತು. ಬೆಳಿಗ್ಗೆ ನಡೆದ ಕೆಸರುಗದ್ದೆ ಓಟದ ಸ್ಪರ್ಧೆಯ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಶಮ್ಮಾಝ್ (ಪ್ರಥಮ) ಆಶೀರ್(ದ್ವಿತೀಯ), ಪ್ರೌಡಶಾಲಾ ಬಾಲಕರ ವಿಭಾಗದಲ್ಲಿ ಭವೀಶ್(ಪ್ರಥಮ) ಧನುಷ್ (ದ್ವಿತೀಯ) ಸ್ಥಾನ ಪಡೆದರೆ,  ಪುರುಷರ ಮುಕ್ತ ವಿಭಾಗದಲ್ಲಿ ನೌಫಲ್ (ಪ್ರಥಮ)  ಪೂವಣ್ಣ(ದ್ವಿತೀಯ)  ಮತ್ತು ಜಂಶೀರ್ (ತೃತೀಯ) ಬಹುಮಾನ ಪಡೆದುಕೊಂಡರು.

ಸಂಜೆ ನಡೆದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷರಾದ ಎಂ.ಎನ್. ವನಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಡಿ.ಸಿ.ಸಿ. ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಸಮಾಜದಲ್ಲಿ ವಿವಿದತೆಯಲ್ಲಿ ಏಕತೆಯನ್ನು ಮೂಡಿಸಲು ಕ್ರೀಡಾಕೂಟಗಳು ಮಹತ್ತರ ಪಾತ್ರ ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ರೀಡಾಕೂಟ ಆಧುನಿಕ ತಂತ್ರಜ್ಞಾನಾಧರಿತ ಸಮಾಜದಲ್ಲಿ ಬಿಡುವಿಲ್ಲದೆ ಕಾರ್ಯನಿರ್ವಹಿಸುವ ನಾಕರಿಕರಿಗೆ ಹೊಸ ಅನುಭವವನ್ನು ನೀಡುತ್ತದೆ. ಆದ್ದರಿಂದ ಕ್ರೀಡಾಕೂಟಗಳು ನಿರಂತವಾಗಿ ನಡೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

( ಪುಟ್ಬಾಲ್ ವಿನ್ನರ್ಸ್ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ಕುಂಜಿಲ ಟೈಗರ್ ಬಾಯ್ಸ್ ತಂಡ )

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಮಾಜಿ ನಿರ್ದೇಶಕರಾದ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ಗೋಣಿಕೊಪ್ಪಲು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಕೆ.ಟಿ. ಟಿಪ್ಪು ಬಿದ್ದಪ್ಪ, ವಿ. ಬಾಡಗದ ಕಾಫಿ ಬೆಳೆಗಾರರಾದ ಕಂಜಿತಂಡ ಗಿಣಿ ಮೊಣ್ಣಪ್ಪ, ಯುವಕಪಾಡಿಯ ಕಾಫಿ ಬೆಳೆಗಾರರಾದ ಅಂಜಪರವಂಡ ಕುಶಾಲಪ್ಪ, ಜೇಸಿಸ್‌ನ ವಲಯ ಸಂಯೋಜಕರಾದ ಕೆ.ಎಂ. ಶಿವ ನಾಚಪ್ಪ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಎಸ್.ಎಸ್. ಸುರೇಶ್, ಗದ್ದೆ ಮಾಲೀಕರಾದ ಮುರುವಂಡ ಸಾವನ್ ಸೋಮಣ್ಣ, ಕಾಮೆಯಂಡ ಸುಬ್ರಮಣಿ ಮೊದಲಾದವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ವಲಯ ನಿರ್ದೇಶಕ ಮತ್ತು ಪೊನ್ನಂಪೇಟೆ ನಿಸರ್ಗ ಜೇಸಿಸ್‌ನ ಸ್ಥಾಪಕಾಧ್ಯಕ್ಷರಾದ ರಫೀಕ್ ತೂಚಮಕೇರಿ, ನಿಕಟ ಪೂರ್ವ ಅಧ್ಯಕ್ಷರಾದ ಟಾಟು ಮೊಣ್ಣಪ್ಪ, ಕಾರ್ಯದರ್ಶಿ ಎ.ಪಿ. ದಿನೇಶ್ ಕುಮಾರ್, ಯೋಜನಾ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ, ಘಟಕದ ಪೂರ್ವಾಧ್ಯಕ್ಷರಾದ ಮುಕ್ಕಾಟೀರ ಸಂದೀಪ್, ಬಿ.ಈ. ಕಿರಣ್ ಸೇರಿದಂತೆ ಘಟಕಾಡಳಿತ ಮಂಡಳಿ ಪಧಾದಿಕಾರಿಗಳು ಮತ್ತು ಸದಸ್ಯರು ಸಕ್ರೀಯವಾಗಿ ಪಾಲ್ಗೊಂಡಿದ್ದರು. ಕ್ರೀಡೋತ್ಸವದಲ್ಲಿ ತೀರ್ಪುಗಾರರಾಗಿ ವಿವಿಧ ಶಾಲೆಯ ದೈಹಿಕ ಶಿಕ್ಷಕರಾದ ಅರುಣ್ ಅಮ್ಮತ್ತಿ, ಪ್ರಕಾಶ್, ಅಶ್ವಥ್ ಮತ್ತು ಅಶ್ವಿನ್ ಅವರು ಕಾರ್ಯನಿರ್ವಹಿಸಿದ್ದರು. ನಿಸರ್ಗ ಜೇಸಿಸ್ ತಂಡದ ಪಧಾದಿಕಾರಿಗಳಾದ ಎಂ.ಜಿ.ಮಹೇಶ್, ಎಂ.ಎಸ್. ಶರ್ಪುದ್ದೀನ್, ಶಿವಕುಮಾರ್, ಹೆಚ್.ಆರ್. ಸತೀಶ್, ಸುರೇಶ್, ಸ್ವಾಮಿ, ಶರತ್ ಸೋಮಣ್ಣ, ಮೆಹರೂಫ್ ಮೊದಲಾದವರು ಪಂದ್ಯಾವಳಿಯ ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು. 

✍️....ರಫೀಕ್ ತೂಚಮಕೇರಿ

( ರಫೀಕ್ ತೂಚಮಕೇರಿ )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,