Header Ads Widget

ಸರ್ಚ್ ಕೂರ್ಗ್ ಮೀಡಿಯ

ಸ್ವಾತಂತ್ರ್ಯ ದಿನದ ಈ ಸಂಧರ್ಭದಲ್ಲಿ ಮಹಾನ್ ಸ್ವಾತಂತ್ರ್ಯ ಯೋಧರೊಬ್ಬರನ್ನು ನೆನೆಯದೆ ಇದ್ದರೆ ಸ್ವಾತಂತ್ರ್ಯ ದಿನವೇ ಅಪೂರ್ಣ

"ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ" ವರ್ಷವು ದೇಶಕ್ಕೆ ಹೊಸ ಶಕ್ತಿಯನ್ನು ತುಂಬುವ ದೃಷ್ಠಿಯಿಂದ ರಾಷ್ಟ್ರಕ್ಕಾಗಿ ತಮ್ಮನ್ನುಸಮರ್ಪಿಸಿಕೊಂಡ "ರಾಷ್ಟ್ರ ದೃಷ್ಟಾರ" ರ ನೆನಪಿಸಿಕೊಳ್ಳುವ ಲೇಖನ ಮಾಲೆಗಳು.

ಸ್ವಾತಂತ್ರ್ಯ ದಿನದ ಈ ಸಂಧರ್ಭದಲ್ಲಿ ಮಹಾನ್ ಸ್ವಾತಂತ್ರ್ಯ ಯೋಧರೊಬ್ಬರನ್ನು ನೆನೆಯದೆ ಇದ್ದರೆ ಸ್ವಾತಂತ್ರ್ಯ ದಿನವೇ ಅಪೂರ್ಣ


ನೇರನುಡಿಯ, ತೀಕ್ಷ್ಣ ದೃಷ್ಟಿಯ , ವೃದ್ದಾಪ್ಯದಲ್ಲೂ ಹ್ಯಾಂಡ್ಸಮ್ ಆಗಿದ್ದ, ನೀಳಕಾಯದ ನಮ್ಮ ತಾತ. ಕಿರುನಗೆಯಿಂದಲೇ ಮಾತು ಆರಂಭಿಸುವ ನಮ್ಮ ಅಜ್ಜಿಯ ತಮ್ಮ ದಿ|| ಮಲ್ಲೇಂಗಡ ಚಂಗಪ್ಪನವರು.

ಸ್ವಾತಂತ್ರ್ಯ ಚಳುವಳಿಯನ್ನು ಸ್ವತಃ ಸ್ವಾತಂತ್ರ್ಯ ಯೋಧರ ಬಾಯಿಯಿಂದ ಕೇಳುವುದೇ ಒಂದು ಅದೃಷ್ಟ.  

ಅವರ ಜೀವನವೇ ಒಂದು ಸ್ವಾತಂತ್ರ್ಯ ಸಂಗ್ರಾಮ. ಜೀವನದ ಒಂದೊಂದು ಘಟನೆಗಳನ್ನು ವಿವರಿಸುತ್ತಾ ಹೋದರೆ, ತುಟಿಕ್ ಪಿಟಿಕ್ ಅನ್ನದೆ ಕೇಳುತ್ತಿದ್ದೆವು. ಪ್ರತಿಯೊಂದು ಘಟನೆಯೂ ರೋಚಕ ಮತ್ತು ಭಯಾನಕ. ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡರುವುದೇ ಒಂದು ರೋಚಕ ಕಥೆ.

ಅವರು ಶಾಲಾ ಬಾಲಕನಾಗಿದ್ದಾಗ ಗೆಳೆಯರ ಜೊತೆ ಗಾಂಧಿ ಟೋಪಿ ಹಾಕಿ ಶಾಲೆಗೆ ಹೋಗಿದ್ದರಂತೆ. ಶಾಲಾದಿನಗಳಲ್ಲೇ ಸ್ವಾತಂತ್ರ್ಯದ ಗೀಳು ಹಚ್ಚಿಸಿಕೊಂಡಿದ್ದರಂತೆ. ತಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದಾಗಿ ಮಾಸ್ಟರೊಡನೆ ಕೇಳಿಕೊಂಡಿದ್ದರಂತೆ. ಶಾಲೆಯಲ್ಲಿ ಏನೇ ಪಾಠ ನಡೆಯುತ್ತಿದ್ದರೂ ಕಿವಿಗೆ ಕೇಳುತ್ತಲೇ ಇರಲಿಲ್ಲವಂತೆ.  ರಾತ್ರಿ ನಿದ್ದೆಯಲ್ಲೂ ವಂದೇ ಮಾತರಂ, ಇನ್ಕ್ವಿಲಾಬ್ ಜಿಂದಾಬಾದ್ ಎಂಬ ಕೂಗು ಕಿವಿಯಲ್ಲಿ ಗುಂಯ್ ಗುಟ್ಟುತಿತ್ತಂತೆ. ತಾತ ತುಂಬಾ ಧೈರ್ಯಶಾಲಿಯಾಗಿದ್ದರು. 

ನಂತರ ಶುರು ಹಚ್ಚಿಕೊಂಡಿರುವುದೇ ಸಾಮಾಜಿಕವಾಗಿ ತಿರಸ್ಕೃತಗೊಂಡಿದ್ದ ಹರಿಜನ ಕೇರಿಗಳಲ್ಲಿ ಸೇವೆ.  

ಒಮ್ಮೆ ತನ್ನ ತರಗತಿಯಲ್ಲಿದ್ದವರಿಗೆಲ್ಲಾ ಗಾಂಧಿ ಟೋಪಿ ಹಾಕಿಸಿ ಕೂರಿಸಿದ್ರಂತೆ. ಗಾಂಧಿ ಟೋಪಿ ತೊಡುವುದು ಅಂದು ಕಾನೂನು ಬಾಹಿರವಾಗಿತ್ತು. ಇದರಿಂದ ಅವರ ಗೋವಿಂದಯ್ಯ ಮಾಸ್ಟರ್ ಪೇಚಿಗೆ ಸಿಲುಕಿದ್ರಂತೆ. ಅಂದು ಯುವ ಉತ್ಸಾಹಿ ಮಲ್ಲೇಂಗಡ ಚಂಗಪ್ಪನವರಲ್ಲಿರುವ ದೇಶಪ್ರೇಮವನ್ನು ಮೊದಲಿಗೆ ಗುರುತಿಸಿದವರೇ ಅವರ ನೆಚ್ಚಿನ‌ ಮಾಸ್ಟರ್ ಗೋವಿಂದಯ್ಯನವರು.

ಅವರು ಚಂಗಪ್ಪರ ಬಳಿ ಗಾಂಧಿ ಟೋಪಿಯನ್ನು ಕಳಚಿಡಲು ಆಗ್ರಹಿಸಿದರೂ ಒಮ್ಮೆ ಹಾಕಿದ ಗಾಂಧಿ ಟೋಪಿಯನ್ನು ಎಂದೂ ತೆಗೆಯಲಾರೆಂದು ಹಠ ಹಿಡಿಯುತ್ತಾರೆ. ಅಂದಿನಿಂದ ಎಂದೂ ಚಂಗಪ್ಪನವರು ಗಾಂಧಿ ಟೋಪಿಯಿಲ್ಲದೆ ಮನೆಯ ಹೊರಗೆ ಕಾಲಿಡಲಿಲ್ಲ. ಮನೆಯಲ್ಲೂ ಅವರು ಬಿಳಿಯ ಖಾದಿಬಟ್ಟೆಯಲ್ಲಿ ಹೊಲಿಸಿದ ಬನಿಯನ್ನನ್ನೇ ಹಾಕುತ್ತಿದ್ದರು ಮತ್ತು ಜೀವನದುದ್ದಕ್ಕೂ ಖಾದಿ ಬಟ್ಟೆಯನ್ನೇ ತೊಡುತ್ತಿದ್ದರು. ಅವರು ಕೂರುತ್ತಿದ್ದ ಕುರ್ಚಿಯ ಬಳಿ ಟೋಪಿ ಇದೆಯೆಂದರೆ ತಾತನವರು ಮನೆಯ ಒಳಗೆ ಇದ್ದಾರೆಂದು ಅರ್ಥ.

ತನ್ನ 18ನೇ ವಯಸ್ಸಿಗೆ 1930ರಲ್ಲಿ ಹುದಿಕೇರಿಯಲ್ಲಿ ಸತ್ಯಾಗ್ರಹ ಶಿಭಿರಕ್ಕೆ ಸೇರಿದರು.

ನಂತರ ಗೋಣಿಕೊಪ್ಪದಲ್ಲಿ ಸುತ್ತುತ್ತಾ ಪಿಕೆಟಿಂಗ್ ಚಳುವಳಿ ಆರಂಭಿಸಿದರು.

ಮಡಿಕೇರಿ ಶಿಭಿರದಲ್ಲಿ  ಐವರು ಗೆಳೆಯರಾದ ಮಂಡೇಪಂಡ ಕಾರ್ಯಪ್ಪ, ಅಜ್ಜಮಾಡ ಮುದ್ದಪ್ಪ, ಬಿ.ಜಿ.ಗಣಪಯ್ಯ, ತೀತಿರ ಕುಟ್ಟಪ್ಪ ಮತ್ತು ಚಂಗಪ್ಪನವರು ಪಿಕೆಟಿಂಗ್ ನಡೆಸಿ ಬ್ರಿಟಿಷರ ನಿದ್ದೆ ಕೆಡಿಸಿದರು. 

ಇದರ ಮಧ್ಯೆ ಗಾಂಧೀಜಿಯವರು ದೇಶದೆಲ್ಲೆಡೆ ಭಾರತದ ಧ್ವಜವನ್ನು ಹಾರಿಸಬೇಕೆಂದು ಕರೆ ನೀಡುತ್ತಾರೆ.

ಒಂದು ದಿನ  ಚಂಗಪ್ಪನವರು ಮತ್ತು ಗಣಪಯ್ಯನವರು ಮಡಿಕೇರಿ ಕೋಟೆಯ ಮೇಲೆ ಹಾರುತ್ತಿದ್ದ ಬ್ರಿಟಿಷರ ಯೂನಿಯನ್ ಜ್ಯಾಕ್ ಇಳಿಸಿ ಭಾರತದ ತಿರಂಗಾವನ್ನು ಹಾರಿಸೋಣವೆಂದು ಪ್ಲ್ಯಾನ್ ಮಾಡುತ್ತಾರೆ. ಆದರೆ ಅಂದು ಮಡಿಕೇರಿ ಜೈಲಿನಲ್ಲಿ ಸುಭಾಷ್ ಚಂದ್ರ ಬೋಸರ ಅಣ್ಣ ಶರತ್ ಚಂದ್ರ ಬೋಸರನ್ನು ಬಂಧನದಲ್ಲಿಟ್ಟಿರುವುದರಿಂದ ಚಾವಡಿಕಾರರು ಬಿಗಿಯಾಗಿ ಪಹರೆ ಕಾಯುತ್ತಿರುತ್ತಾರೆ. ರಾತ್ರಿಯಿಡೀ ಕಣ್ಮುಚ್ಚದೆ ಹಗ್ಗ ಮತ್ತು ಬಾವುಟವನ್ನು ಸಿದ್ಧಪಡಿಸಿಕೊಂಡು ದೇಶವೇ ಇದುವರೆಗೆ ಮಾಡದಂತಹ ಒಂದು ಕಾರ್ಯವನ್ನು ಮಾಡುತ್ತೇವೆಂದು ಹಠ ಹಿಡಿದು ಕೂತಿದ್ದು, ಬೆಳಗಿನ ಜಾವ ಪಹರೆ ಬದಲು ಮಾಡುವ ಸಮಯವನ್ನೇ ಕಾಯುತ್ತಾ, ಸೂರ್ಯೋದಯದ ಒಳಗೆ ಕೋಟೆಯಲ್ಲಿ ಬಂಧನದಲ್ಲಿರುವ ಶರತ್ ಚಂದ್ರರ ತಲೆಯಮೇಲೆ ರಾಷ್ಟ್ರ ಧ್ವಜ ಹಾರಿಸಬೇಕೆಂದು ನಿರ್ಧಾರ ಮಾಡುತ್ತಾರೆ. ಮುದ್ದಪ್ಪ ಮತ್ತು ಕುಟ್ಟಪ್ಪರನ್ನು  ರಕ್ಷಣೆಗೆ ನಿಲ್ಲಿಸಿ  ಚಂಗಪ್ಪ, ಗಣಪಯ್ಯ  ಮತ್ತು ಕಾರ್ಯಪ್ಪನವರು ಚಾವಾಡಿಕಾರರ ಕಣ್ತಪ್ಪಿಸಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ  17/12/1930 ರಂದು ಮಡಿಕೇರಿ ಕೋಟೆಯ ಮೇಲೆ ಹಾರಾಡುತ್ತಿದ್ದ ಯೂನಿಯನ್ ಜ್ಯಾಕ್ ಇಳಿಸಿ ಭಾರತದ ತಿರಂಗಾ ಧ್ವಜ ಹಾರಿಸಿ , ಕೆಳಗಿಳಿದು ಧ್ವಜವಂದನೆ ಮಾಡಿ ವಂದೇ ಮಾತರಂ ಗೀತೆ ಹಾಡುತ್ತಾರೆ. ಇದನ್ನರಿತ ಚಾವಡಿ ಕಾರರು ಅವರನ್ನು ತಕ್ಷಣ ಬಂಧಿಸಲು ಬಂದರೂ ಕಿಂಚಿತ್ತೂ ಹಿಂಜರಿಯದೆ, ನಮ್ಮ ದೇಶದ ಧ್ವಜವನ್ನು ನಾವು ನಮ್ಮ ದೇಶದಲ್ಲಿ ಹಾರಿಸಿದ್ದೇವೆ. ಏನು ಬೇಕಾದರೂ ಮಾಡಿ, ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದು ಘರ್ಜಿಸುತ್ತಾರೆ. ಅಲ್ಲಿಗೆ ಅವರ ಬಂಧನವೂ ಅಗುತ್ತೆ.

ನಂತರ ಪುನಃ 1932ರಲ್ಲಿ ಹುದಿಕೇರಿಯಲ್ಲಿ ಕರಪತ್ರ ಹಂಚುತ್ತಿದ್ದಾಗ ಬಂಧನಗೊಂಡು ಶಿಕ್ಷೆಗೆ ಒಳಪಟ್ಟು ಕಣ್ಣಾನೂರು ಸೆರೆಮನೆಗೆ ಸೇರುತ್ತಾರೆ. 

09/11/1933 ರಂದು ವಿರಾಜಪೇಟೆ ನ್ಯಾಯಾಲಯದಲ್ಲಿ ದೇಶಧ್ರೋಹ ಕೆಲಸದಲ್ಲಿ ನಿರತರಾದ ಆರೋಪ ಇದೆ, ಇದಕ್ಕೆ ಏನು ಹೇಳುತ್ತೀಯೆಂದು ಕೇಳಿ, ತಪ್ಪನ್ನು ಒಪ್ಪಿಕೊಂಡರೆ ಶಿಕ್ಷೆ ಕಡಿಮೆ ಯಾಗುತ್ತದೆಯೆಂದು ಹೇಳುತ್ತಾರೆ. ಆದರೆ ಚಂಗಪ್ಪನವರು ಬ್ರಿಟಿಷ್ ಸರ್ಕಾರದ ಹಿಡಿತದಲ್ಲಿರುವ ಮ್ಯಾಜಿಸ್ಟ್ರೇಟರಿಗೆ ಭಾರತೀಯರ ಮೇಲೆ ತಮಗೆ ತೋರಿದ ಶಿಕ್ಷೆಯನ್ನು ಕೊಡುವ ಹಕ್ಕಿಲ್ಲವೆಂದು, ಬ್ರಿಟಿಷರ ಮೇಲೆ ನನಗೆ ನಂಬಿಕೆಯಿಲ್ಲವೆಂದು ಯಾವುದೇ  ಹೇಳಿಕೆ ಕೊಡಲು ನಿರಾಕರಿಸುತ್ತಾರೆ.

ನ್ಯಾಯಾಲಯವು ಚಂಗಪ್ಪನವರಿಗೆ ಆರು ತಿಂಗಳ  ಸಜೆ  ಮತ್ತು 150 ರೂಪಾಯಿ ದಂಡ ವಿಧಿಸಿ ಕಣ್ಣೂರು ಜೈಲಿಗೆ ರವಾನೆ ಮಾಡಲು ಆದೇಶಿಸುತ್ತಾರೆ.

ಮಧ್ಯಾಹ್ನದ ನಂತರ ನ್ಯಾಯಾಧೀಶರು ಬರುವುದನ್ನೇ ಕಾಯುತ್ತಿದ್ದ ಚಂಗಪ್ಪನವರು ನ್ಯಾಯಾಧೀಶರು ಪೀಠ ಏರುವ ಮೊದಲೇ ನ್ಯಾಯಾಧೀಶರ ಪೀಠದಲ್ಲಿ ಕುಳಿತು ಸ್ವಾತಂತ್ರ್ಯ ಹೋರಾಟಗಾರ ಭಾರತೀಯರಿಗೆ ಅವಮಾನಿಸಿದ ಈ ನ್ಯಾಯಾಲಯದ ದೇಶದ್ರೋಹಿ ನ್ಯಾಯಾಧೀಶರಿಗೆ  ಆರು ವರ್ಷಗಳ ಕಠಿಣ ಶಿಕ್ಷೆ ಮತ್ತು ಆರು‌ನೂರು ರೂಪಾಯಿಗಳ ದಂಡ ವಿಧಿಸಿದ್ದೇನೆಂದು ಚಂಗಪ್ಪನವರು ಆರ್ಡರ್ ಮಾಡುತ್ತಾರೆ.

ನಂತರ 1934 ರಲ್ಲಿ ಅತ್ತೂರಿನಲ್ಲಿ ಹರಿಜನರಿಗಾಗಿ ದೀನ‌ಸೇವಾಶ್ರಮ ಸ್ಥಾಪನೆ ಮಾಡುತ್ತಾರೆ.

1935 ರಲ್ಲಿ ಮನೆಯಪಂಡ ತಿಮ್ಮಯ್ಯ, ಅಜ್ಜಿಕುಟ್ಟೀರ ಚಿಣ್ಣಪ್ಪ, ಕುಪ್ಪಂಡ ಮುದ್ದಪ್ಪರೊಂದಿಗೆ ಸೇರಿ ರಾಮಮಂದಿರಗಳ ಸ್ಥಾಪನೆ ಮಾಡಿದರು.

1942 ರಲ್ಲಿ ಭೂಗತ ಚಳುವಳಿ ಆರಂಭಿಸಿದರು. ಮುನ್ಸಿಪಲ್ ಕೋರ್ಟಿಗೆ ಬೆಂಕಿ ಇಟ್ಟರು. ಪಾಲಿಬೆಟ್ಟದಲ್ಲಿ ಟೆಲಿಗ್ರಾಫ್ ತಂತಿಯನ್ನು ಕತ್ತರಿಸಿಹಾಕಿದರು.

ಹೀಗೇ ಅವರ ಜೀವನದ ಒಂದೊಂದು ಘಟನೆಯೂ ರೋಚಕವಾಗಿತ್ತು.

1997ರ ಮೈಸೂರು ದಸರಾದಲ್ಲಿ ಮೊಟ್ಟ ಮೊದಲ ಬಾರಿಗೆ ಜೀವಂತ ವ್ಯಕ್ತಿಯೊಬ್ಬರ ಸ್ಥಬ್ಧ  ಚಿತ್ರವನ್ನು  ಸ್ವಾತಂತ್ರ್ಯ ಯೋಧ ಮಲ್ಲೇಂಗಡ ಚಂಗಪ್ಪನವರ ಹೆಸರಿನಲ್ಲಿ ಸರಕಾರದ ವತಿಯಿಂದ ಮಾಡಲಾಯಿತು. ಅಡ್ಡಂಡ ಕಾರ್ಯಪ್ಪನವರು ಸ್ವಾತಂತ್ರ್ಯ ಯೋಧ ಮಲ್ಲೇಂಗಡ ಚಂಗಪ್ಪನವರ ನಾಟಕವನ್ನು ರಚಿಸಿ, ಅದೆಷ್ಟೋ ಪ್ರದರ್ಶನವನ್ನು ನೀಡಿದರು. ದುರಾದೃಷ್ಟವಶಾತ್ 2006 ಸೆಪ್ಟೆಂಬರ್' 25 ರಂದು ನಮ್ಮನ್ನಗಲಿದ ಸ್ವಾತಂತ್ರ್ಯ ಯೋಧ ಮಲ್ಲೇಂಗಡ ಚಂಗಪ್ಪನವರ ರೋಚಕ ಬದುಕಿನ ಕಥೆ ಅವರೊಡನೇ ಮರೆಯಾಯಿತು.

ಇಂತಹ ಮಹಾನ್ ಸ್ವಾತಂತ್ರ್ಯ ಯೋಧರ ಪ್ರತಿಮೆ ಮಡಿಕೇರಿ ಕೋಟೆಯಲ್ಲಿದ್ದರೆ ಕೊಡಗಿಗೇ ಒಂದು ಹಿರಿಮೆಯಲ್ಲವೇ?

✍️....ಜೋಯಪ್ಪ ಪಾಲಂದಿರ

(ಜೋಯಪ್ಪ ಪಾಲಂದಿರ)

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,