ನಿಫಾ ವೈರಸ್ ಮುನ್ನೆಚ್ಚರ ವಹಿಸಲು ಜಿಲ್ಲಾಡಳಿತ ಮನವಿ
ಮಡಿಕೇರಿ: ಕೋವಿಡ್-19 ರೋಗದ ನಡುವೆಯೇ ಇದೀಗ ನಿಫಾ ವೈರಸ್ ಕೇರಳ ರಾಜ್ಯದಲ್ಲಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲೂ ಕೂಡ ಕಟ್ಟೆಚ್ಚರ ವಹಿಸುವಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
‘ನಿಫಾ’(Nipah) ವೈರಸ್ ಖಾಯಿಲೆಯು 1998 ಮತ್ತು 1999 ನೇ ಇಸವಿಯಲ್ಲಿ, ಮಲೇಷಿಯಾ ಮತ್ತು ಸಿಂಗಪೂರ್ ದೇಶಗಳಲ್ಲಿನ ಮನೆಯಲ್ಲಿ ಸಾಕಿರುವ ಹಂದಿಗಳಲ್ಲಿ ಪತ್ತೆಯಾಗಿದೆ. ಮಲೇಷಿಯಾ ದೇಶದ ನಿಫಾ ಗ್ರಾಮದಲ್ಲಿ ಈ ವೈರಸ್ ಪ್ರಭೇದವನ್ನು ಪ್ರಥಮವಾಗಿ ಕಂಡು ಹಿಡಿಯಲಾಗಿದೆ. ಮನೆಯಲ್ಲಿ ಸಾಕುವ ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು ಸಹ ಸೋಂಕಿಗೆ ತುತ್ತಾಗುವ ಸಂಭವವಿರುತ್ತದೆ.
ಈ ಕಾಯಿಲೆಯು 2001 ರಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಗ್ರಾಮದಲ್ಲಿ ಈ ಮೊದಲು ಕಾಣಿಸಿಕೊಂಡಿತ್ತು ಅಲ್ಲದೆ ನೆರೆಯ ಬಾಂಗ್ಲಾ ದೇಶದಲ್ಲಿ 2003, 2004, 2005, 2007 ಹಾಗೂ 2008 ರಲ್ಲಿ ಕಾಣಿಸಿಕೊಂಡಿರುತ್ತದೆ. ಒಟ್ಟಾರೆ ಮಲೇಷಿಯಾ, ಸಿಂಗಪೂರ್ ಬಾಂಗ್ಲಾದೇಶ ಮತ್ತು ಭಾರತದಲ್ಲಿ ಈವರೆಗೆ 477 ಖಚಿತ ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 248 ಸಾವುಗಳು ಸಂಭವಿಸಿರುತ್ತವೆ. 2018 ರಲ್ಲಿ ಕೇರಳದಲ್ಲಿ 14 ಖಚಿತ ನಿಫಾ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 11 ಸಾವುಗಳು ಸಂಭವಿಸಿರುತ್ತವೆ. 2021 ಕೇರಳ ರಾಜ್ಯದಲ್ಲಿ ಒಂದು ನಿಫಾ ವೈರಸ್ ರೋಗದ ಪ್ರಕರಣ ವರದಿಯಾಗಿದೆ.
ನಿಫಾ ವೈರಸ್‍ಜ್ವರದ ರೋಗ ಲಕ್ಷಣಗಳು:
ಜ್ವರ, ತಲೆ ನೋವು,ವಾಂತಿ, ತಲೆ ಸುತ್ತುವಿಕೆ ಬರುವುದು. ಪ್ರಜ್ಞಾಹೀನತೆಗೆ ಒಳಗಾಗುವುದು. ಅತೀಯಾದ ಜ್ವರ ಮೆದುಳಿಗೆ ವ್ಯಾಪಿಸುವುದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು. ಸೊಂಕಿತ ದಿನದಿಂದ 4 ರಿಂದ 18 ದಿನಗಳಲ್ಲಿ ನಿಪಾ ವೈರಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ನಿಪಾ ವೈರಸ್ ಜ್ವರ ಹರಡುವ ವಿಧಾನ: ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಹಾಗೂ ಬಾವಲಿಗಳು ಬಿಸಾಡಿದ ಹಣ್ಣು ಹಂಪಲುಗಳನ್ನು ಸೇವಿಸುವುದರ ಮೂಲಕ ಇತರ ಪ್ರಾಣಿಗಳಿಗೆ ಹರಡುತ್ತದೆ. ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿತ ಬಾವಲಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ ಆರೋಗ್ಯವಂತ ಮನುಷ್ಯರಿಗೆ ಹರಡುತ್ತದೆ.
ರೋಗ ನಿರ್ಧಾರ ಮಾಡುವ ವಿಧಾನ: ಸೊಂಕಿತ ವ್ಯಕ್ತಿಯ ಗಂಟಲಿನ ದ್ರವಗಳ ಮಾದರಿಯನ್ನು ಪಡೆದು, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ದೃಢಪಡಿಸಬಹುದು. ಪ್ರಸ್ತುತ ಈ ಪರೀಕ್ಷೆಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆ (NIV) ಪುಣೆ ಇಲ್ಲಿ ನಡೆಸಲಾಗುವುದು.
ಮುಂಜಾಗ್ರತಾ ಕ್ರಮಗಳು: ಯಾವುದೇ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೇ ಹಾಗೂ ನಿಪಾ ವೈರಸ್ ಲಕ್ಷಗಳಿರುವ ಜ್ವರಕಂಡು ಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು. ರೋಗಿಗಳ ಜೊತೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಕವಚ ಧರಿಸುವುದು ಮುಂತಾದ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ಕೊಡುವುದು. ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು. ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲುಗಳನ್ನು ಸೇವಿಸಬಾರದು. ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಹಾಗೂ ಸರಿಯಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು. ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು. ಕಚ್ಚಾ ಖರ್ಜೂರಗಳನ್ನು ಸೇವಿಸದಿರುವುದು. ಸಂಸ್ಕರಿಸಿಲ್ಲದೇ ಯಾವುದೇ ‘ಡ್ರೈ ಪ್ರೂಟ್’ ಗಳನ್ನು ಉಪಯೋಗಿಸದಿರುವುದು. ಸಂಸ್ಕರಿಸಿಲ್ಲದ ‘Fresh palm dates fruit juice' ಗಳನ್ನುಉಪಯೋಗಿಸದಿರುವುದು. ಹಂದಿ ಸಾಕಾಣಿಕಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೇ ರೀತಿಯ ಗಾಯ ಅಥವಾ ಸೊಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವುದು.
ಸೋಂಕಿತ ಮತ್ತು ಕಾಯಿಲೆಯ ಹಂದಿಗಳನ್ನು ನೇರ ಸಂಪರ್ಕಿಸದಿರುವುದು. ಬಾವಲಿಗಳ ಹೆಚ್ಚಿರುವ ಪ್ರದೇಶಗಳಲ್ಲಿ ಸಂಗ್ರಹಣೆ ಮಾಡುವ ಶೇಂದಿ ಮತ್ತು ಪಾನೀಯಗಳನ್ನು ಸೇವಿಸದಿರುವುದು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ತೆರೆದ ಬಾವಿಯ ನೀರನ್ನು ಶುದ್ದೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವುದು.
ಕೊಡಗು ಜಿಲ್ಲೆಯ ನೆರೆರಾಜ್ಯ ಕೇರಳಕ್ಕೆ ಹೊಂದಿಕೊಂಡಿರುವುದರಿಂದ ಜಿಲ್ಲೆಯಲ್ಲಿ ತೀವ್ರ ನಿಗಾವಣೆ ಮತ್ತು ಸಕ್ರಿಯ ಸಮೀಕ್ಷೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಈ ವೈರಸ್‍ಜ್ವರವು ನೇರ ಸಂಪರ್ಕದಿಂದ ಹರಡುವುದರಿಂದ ಸೊಂಕಿತ ವ್ಯಕ್ತಿ ಮತ್ತು ಪ್ರಾಣಿಗಳಿಂದ (ನಾಯಿ, ಬೆಕ್ಕು, ಮೇಕೆ, ಕುದುರೆ ಮತ್ತು ಕೆಲವು ಸಂದರ್ಭದಲ್ಲಿ ಕುರಿಗಳು) ದೂರವಿರುವುದು ಸೂಕ್ತವಾಗಿರುತ್ತದೆ ಅಲ್ಲದೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ.
ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಅಥವಾ 08272-225443 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅವರು ತಿಳಿಸಿದ್ದಾರೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network