Header Ads Widget

ಸರ್ಚ್ ಕೂರ್ಗ್ ಮೀಡಿಯ

ಭಕ್ತಿ ಹಾಗೂ ಭಾವೈಕ್ಯತೆಯ ಪ್ರತೀಕ ಗಣೇಶ ಚತುರ್ಥಿ

ಭಕ್ತಿ ಹಾಗೂ ಭಾವೈಕ್ಯತೆಯ ಪ್ರತೀಕ ಗಣೇಶ ಚತುರ್ಥಿ


ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ  ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು.

“ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್” ಎಂದು ವಿಘ್ನ ನಿವಾರಕ ಗಣೇಶನನ್ನು ಅಹ್ವಾನಿಸಿ ಪೂಜೆ ಸಲ್ಲಿಸುವ ಶುಭ ದಿನವೇ ಭಾದ್ರಪದ ಮಾಸದ ಚತುರ್ಥಿಯ ದಿನ. ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಗಣಪತಿ ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಅಧಿದೇವತೆಯೂ ಹೌದು. ಮಾತ್ರವಲ್ಲ, ಎಲ್ಲ ಭಜಕ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಪ್ರಿಯನಾದ ದೇವಾಧಿದೇವನೂ ಹೌದು. ಇಂತಹ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ ದೇವ, ಮೋದಕ-ಗರಿಕೆ ಪ್ರಿಯ, ವಿಘ್ನಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ ಉತ್ಸವದ ಸಡಗರದಲ್ಲಿ ನಾಡಿಗೆ ನಾಡೇ ಮಿಂದೇಳುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ  ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುವ ಸಾಧನವಾಗಿ ಬಳಸಿಕೊಂಡರು. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ  ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ  ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ  ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.

ಗಣೇಶ ಚತುರ್ಥಿಯ ಆರಂಭವು ಮರಾಠರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿದ್ದಾಗ ಪ್ರಚಾರಕ್ಕೆ ತಂದರು. ಅದರಲ್ಲಿಯೂ ಮರಾಠರ ಶ್ರೇಷ್ಠ ರಾಜ ಛತ್ರಪತಿ ಶಿವಾಜಿಯು ಇದನ್ನು ಆಚರಿಸಲು ಆರಂಭಿಸಿದನೆಂದು ಇತಿಹಾಸ ಸಾರುತ್ತದೆ. ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ದಂತ ಕತೆಗಳ ಹಿನ್ನಲೆಯಿದೆ. ಶಿವ-ಪಾರ್ವತಿಯರ ಮಗನಾದ ಗಣೇಶನ ಹುಟ್ಟಿನ ಕುರಿತು ಹಲವಾರು ಕತೆಗಳು ಚಾಲ್ತಿಯಲ್ಲಿವೆ. 

ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.

ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

ಗಣೇಶ ಚತುರ್ಥಿಯ ಸಿದ್ಧತೆಗಳು ಒಂದು ತಿಂಗಳ ಮೊದಲಿನಿಂದಲೆ ಆರಂಭಗೊಳ್ಳುತ್ತವೆ. ಈ ಹಬ್ಬವು ಸುಮಾರು ಹತ್ತು ದಿನಗಳ ಕಾಲ ನಡೆಯುತ್ತದೆ (ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ). ಮೊದಲನೆ ದಿನ ಮನೆಗಳಲ್ಲಿ ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುತ್ತದೆ. ಮನೆಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಗಳು, ಭಜನೆಗಳು ನಿರಂತರವಾಗಿ ನಡೆಯುತ್ತವೆ.

ಜೊತೆಗೆ ಹಬ್ಬದ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಒಂದಾಗಿ ಸೇರುತ್ತಾರೆ. ಸ್ಥಳೀಯ ಸಂಘ ಸಂಸ್ಥೆಗಳು ಪೆಂಡಾಲ್‌ಗಳನ್ನು ಹಾಕಿ ಬೃಹತ್ ಗಣಪತಿಯ ವಿಗ್ರಹಗಳನ್ನು ಇರಿಸುತ್ತಾರೆ. ಈ ಪೆಂಡಾಲ್‌ಗಳಲ್ಲಿ ಗಣಪತಿಯ ಉತ್ಸವವದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಕೊನೆಯ ದಿನದಂದು ಗಣಪತಿಯ ಮೂರ್ತಿಯನ್ನು ಆ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಜನರು ಸಹ ಉತ್ಸಾಹದಿಂದ ಅದರಲ್ಲಿ ಕುಣಿಯುತ್ತಾ ಮತ್ತು ಹಾಡುತ್ತ ಪಾಲ್ಗೊಳ್ಳುತ್ತಾರೆ. ಕೊನೆಗೆ ಗಣಪತಿಯನ್ನು ಹತ್ತಿರದ ಕೆರೆ, ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ಈ ದಿನ ಭಕ್ತಾಧಿಗಳು ತಮ್ಮ ಸಂತೋಷ ಮತ್ತು ಪ್ರಾರ್ಥನೆಗಳನ್ನು ಗಣಪತಿಗೆ ಅರ್ಪಿಸುತ್ತಾರೆ.

ಈ ಹಬ್ಬದ ಸಂದರ್ಭದಲ್ಲಿ ಹಲವಾರು ಅಡುಗೆಗಳನ್ನು ಮತ್ತು ಖಾದ್ಯಗಳನ್ನು ಮಾಡಲಾಗುತ್ತದೆ. ಆದರೂ ಗಣಪತಿಯ ಪ್ರಿಯ ಪದಾರ್ಥವಾದ ಮೋದಕಕ್ಕೆ ಈ ಹಬ್ಬದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇದು ಗಣಪತಿಯ ನೆಚ್ಚಿನ ತಿಂಡಿ. ಆದ್ದರಿಂದ ಇದನ್ನು ತಪ್ಪದೆ ಮಾಡಲಾಗುತ್ತದೆ. ಜೊತೆಗೆ ಖರ್ಜಿ ಕಾಯಿ, ಲಾಡು, ಬರ್ಫಿ ಮತ್ತು ಪೇಡಾಗಳನ್ನು ಸಹ ಮಾಡಲಾಗುತ್ತದೆ.

ಎಲ್ಲಾ ಹಬ್ಬಗಳ ಆಚರಣೆ ಹೆಚ್ಚೆಂದರೆ ಮೂರ್ನಾಲ್ಕು ದಿನಗಳಿದ್ದರೆ ಈ ಗಣೇಶ ಹಬ್ಬವು ಕೆಲವೆಡೆ  ಬರೋಬ್ಬರಿ ಒಂದು ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ. ಮಣ್ಣಿನ ಗಣಪನಿಗೆ ಅಲಂಕಾರ ಮಾಡಿ ಅದರ ಮುಂದೆ ನಮ್ಮೆಲ್ಲರ ತಾಪತ್ರಯಗಳನ್ನು ತಿಳಿಸಿ ಮನಸ್ಸು ಹಗುರಾಗಿಸಿ ಕೊನೆಗೆ  ಆತನನ್ನು ನೀರಲ್ಲಿ ಲೀನಗೊಳಿಸುವುದು ಗಣೇಶ ಹಬ್ಬದ ವೈಶಿಷ್ಟ್ಯ.

✍️.... ಕಾನತ್ತಿಲ್‌ ರಾಣಿಅರುಣ್

                     (ಪತ್ರಕರ್ತರು)

Search Coorg Media

Coorg's Largest Online Media Network

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,