( ಸೆಪ್ಟೆಂಬರ್ 29 ವಿಶ್ವ ಹೃದಯ ದಿನ; ಈ ನಿಮಿತ್ತ ವಿಶೇಷ ಲೇಖನ )
ನಮ್ಮ ಹೃದಯಕ್ಕೆ ಹತ್ತಿರವಾಗಿರೋಣ……..
ಕೆಲಸದ ಒತ್ತಡ ಸಾಮಾನ್ಯ. ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಹೃದಯಕ್ಕೆ ಪೆಟ್ಟು ಬೀಳುವುದು ಖಚಿತ. ಹೀಗಾಗಿ ಕೆಲಸ ಅಥವಾ ಇತರೆ ವಿಷಯಗಳಲ್ಲಿನ ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಕೋಪ, ಟೆನ್ಶನ್ ಬಿಟ್ಟು ಶಾಂತ ರೀತಿಯಲ್ಲಿ ಇರಿ. ಇದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ಹೃದಯ ಎಲ್ಲಾ ಭಾವನೆಗಳಿಗೂ ಮೂಲ. ಆದ್ದರಿಂದಲೇ ಹೃದಯವಂತರು, ಹೃದಯಹೀನರು ಎಂಬ ಪದಗಳು ಹುಟ್ಟಿಕೊಂಡಿರೋದು. ಇನ್ನು ಹೃದಯಗಳ ಕೊಡು ಕೊಳ್ಳುವಿಕೆಯಂತು ಮತ್ತೊಂದು ಗಾಢ ಸಂಬಂಧ ಬೆಸೆಯಲು ಕಾರಣವಾಗಿವೆ. ಇಂಥ ಅಮೂಲ್ಯ ಹೃದಯವು ಸದಾ ಆರೋಗ್ಯವಾಗಿರಬೇಕು ಎಂದೇ ಎಲ್ಲರು ಬಯಸೋದು. ಇಂಥ ಹೃದಯಕ್ಕೂ ಒಂದು ದಿನವಿದೆ.
ಮಾನವನ ಆರೋಗ್ಯಕ್ಕೆ ಹೃದಯವೇ ಕೇಂದ್ರ. ಇದರ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗಿರುವುದು ಪ್ರತಿಯೊಬ್ಬನಿಗೂ ಅನಿವಾರ್ಯ. ಹೃದಯದ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ವಿಶ್ವ ಹೃದಯ ದಿನವನ್ನು ಆಚರಣೆ ಮಾಡಲಾಗುತ್ತಿದೆ.
1990ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನವನ್ನಾಗಿ ವಿಶ್ವ ಹೃದಯ ಸಂಸ್ಥೆಯು ಆಯೋಜಿಸುತ್ತಾ ಬಂದಿದೆ. ಆದರೆ 2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ 29 ಸೆಪ್ಟೆಂಬರ್ನಂದು ಆಚರಿಸಲಾಗುತ್ತಿದೆ.
ಹೃದ್ರೋಗ ಮತ್ತು ಲಕ್ವಾಗಳು ಜಾಗತಿಕ ಮಟ್ಟದಲ್ಲಿ ನಂಬರ್ 1 ಮಾರಣಾಂತಿಕ ರೋಗಗಳು ಎಂಬ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನಾಚರಣೆಯ ಪರಿಕಲ್ಪನೆಯನ್ನು ಸೃಷ್ಟಿಸಿದೆ. ವಿಶ್ವ ಹೃದಯ ಸಂಸ್ಥೆಯು ಹೃದಯ ಕಾಯಿಲೆಗಳ ತಡೆಗಟ್ಟುವಿಕೆಗಾಗಿ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದ್ದು ಮತ್ತು ಏಷ್ಯಾ ಫೆಸಿಫಿಕ್, ಯುರೋಪ್, ಪೂರ್ವ ಮೆಡಿಟರೇನಿಯನ್, ಅಮೆರಿಕಾ ಮತ್ತು ಆಫ್ರಿಕಾದ ಪ್ರದೇಶಗಳಲ್ಲಿರುವ ಸುಮಾರು 100 ದೇಶಗಳ ಹೃದಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದೆ. ಸ್ವಿಜರ್ಲ್ಯಾಂಡ್ನ ಜಿನೀವಾ ಮೂಲದ ಸರಕಾರೇತರ ಸಂಘಟನೆ ಇದಾಗಿದೆ.
ವಿಶ್ವ ಹೃದಯ ದಿನದಂದು ಹೃದ್ರೋಗಗಳು ಮತ್ತು ಅವುಗಳಿಗೆ ಕಾರಣವಾಗುವ ಅಪಾಯಾಂಶಗಳ ಬಗ್ಗೆ ಜನರಿಗೆ ಶಿಕ್ಷಣ ಮತ್ತು ಅರಿವು ಒದಗಿಸುವುದಾಗಿದೆ. ವ್ಯಕ್ತಿಗಳು, ಕುಟುಂಬಗಳು, ಸಂಘಟನೆಗಳು, ಸಮುದಾಯಗಳು ಮತ್ತು ಸರಕಾರಗಳ ಸಕ್ರಿಯ ಭಾಗವಹಿಸುವಿಕೆಯಿಂದ ವಿಶ್ವ ಹೃದಯ ದಿನವು ಒಂದು ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ. ಹೃದಯ ಅಥವಾ ಮಿದುಳಿನಂತಹ ದೇಹದ ವಿವಿಧ ಅಂಗಗಳ ರಕ್ತನಾಳಗಳ ಕಾಯಿಲೆಗಳು ಹೃದ್ರೋಗಗಳಡಿ ಸೇರಿಕೊಳ್ಳುತ್ತವೆ. ಕೊರೊನರಿ ಹಾರ್ಟ್ ಡಿಸೀಸ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುವ ಹೃದಯಾಘಾತ ಮತ್ತು ಸೆರೆಬೊ-ವಾಸ್ಕಾಲಾರ್ ಡಿಸೀಸ್ ಎಂದು ಕರೆಯಲ್ಪಡುವ ಲಕ್ವಾ ಇವುಗಳ ಪೈಕಿ ಅತ್ಯಂತ ಸಾಮಾನ್ಯವಾದುವು. ಇವುಗಳು ಉಂಟಾಗುವ ಅಪಾಯವನ್ನು ಆಹಾರಾಭ್ಯಾಸ ನಿಯಂತ್ರಣ, ವ್ಯಾಯಾಮ, ರಕ್ತದೊತ್ತಡದ ನಿಯಂತ್ರಣ ಮತ್ತು ತಂಬಾಕು ಉತ್ಪನ್ನಗಳ ಬಳಕೆ, ಸೇವನೆಯನ್ನು ತ್ಯಜಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ನಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಸಹ ಮುಖ್ಯವಾಗುತ್ತದೆ. ಪ್ರತಿದಿನ ವ್ಯಾಯಾಮ, ಯೋಗಾಸನ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದಿನನಿತ್ಯ ಕನಿಷ್ಠ 45 ನಿಮಿಷ ದೇಹವನ್ನು ದಂಡಿಸಿ ಅಂದರೆ ವ್ಯಾಯಾಮ ಮಾಡಿ, ವಾಕ್ ಮಾಡಿ. ದಿನಕ್ಕೆ 10 ಸಾವಿರ ಹೆಜ್ಜೆ ಹಾಕಿರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಉತ್ತಮ ಜೀವನ ಶೈಲಿಯ ಮೂಲಕ ಹೃದಯಾಘಾತಗಳನ್ನು ಕನಿಷ್ಠ ಶೇ.80 ರಷ್ಟು ತಪ್ಪಿಸಬಹುದಾಗಿದೆ ಎಂದು ವಿಶ್ವ ಹೃದಯ ಸಂಸ್ಥೆ ಹೇಳುತ್ತದೆ.
ಹೃದಯಾಘಾತಕ್ಕೆ ಎದೆಯ ಎಡ ಭಾಗದಲ್ಲೇ ನೋವು ಕಾಣಿಸಿಕೊಳ್ಳಬೇಕೆಂದಿಲ್ಲ. ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ದವಡೆ, ಭುಜಗಳಲ್ಲೂ ನೋವು ಬರಬಹುದು, ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಬೆವರುವುದು, ಉಸಿರಾಡಲು ಕಷ್ಟ, ತಲೆ ಸುತ್ತುವುದು ಇತ್ಯಾದಿ ಹೃದಯಾಘಾತದ ಲಕ್ಷಣ. ಈ ರೀತಿ ಸಮಸ್ಯೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೆ ಕೂಡಲೇ ವೈದ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.
ಆರೋಗ್ಯಕರ ಹೃದಯವನ್ನು ಹೊಂದುವ ಪ್ರಾಮುಖ್ಯತೆ ಮತ್ತು ಅದನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತರಾಗಿರುವುದು ನಮ್ಮೆಲ್ಲರಿಗೂ, ವಿಶೇಷವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಆರೋಗ್ಯಕರ ದಿನಚರಿಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ಮಹತ್ವದ್ದಾಗಿದೆ.
✍️.... ಕಾನತ್ತಿಲ್ ರಾಣಿಅರುಣ್
(ಪತ್ರಕರ್ತರು)
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network