Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ 


ಕುಶಾಲನಗರ,ಸೆ.25 :  ಪೌಷ್ಟಿಕತೆಯುಳ್ಳ ಹಣ್ಣು- ಹಂಪಲು, ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ನಿಯಮಿತವಾಗಿ ಬಳಸುವ ಮೂಲಕ ಅಪೌಷ್ಟಿಕತೆಯನ್ನು ತೊಡೆದು ಹಾಕಿ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ  ಶನಿವಾರ ಕರೆ ನೀಡಿದರು.

ಕುಶಾಲನಗರ ತಾಲ್ಲೂಕಿನ‌ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೂಡುಮಂಗಳೂರು ಗ್ರಾ.ಪಂ. ಹಾಗೂ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಎಸ್.ಡಿ.ಎಂ.ಸಿ., ವಿಜ್ಞಾನ ಸಂಘ, ಇಕೋ ಕ್ಲಬ್, ಎನ್.ಎಸ್.ಎಸ್.ಘಟಕ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಶನಿವಾರ ( ಸೆ.25 ರಂದು) ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಏರ್ಪಡಿಸಿದ್ದ  ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳು ಉತ್ತಮ ಆರೋಗ್ಯ ರಕ್ಷಣೆಗೆ ಸಮತೋಲನ ಪೌಷ್ಟಿಕ ಆಹಾರ ಸೇವನೆಗೆ ಸಂಕಲ್ಪ ತೊಡಬೇಕು ಎಂದರು.

ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳು ಮೌಢ್ಯಚಾರಣೆಯಿಂದ ದೂರವಿದ್ದು, ರಕ್ತಹೀನತೆ ಮತ್ತಿತರ ಯಾವುದೇ ಕಾಯಿಲೆಗಳಿಂದ ಮುಕ್ತರಾಗಬೇಕಿದೆ. ಈ ಶಾಲೆಯಲ್ಲಿ ಮಕ್ಕಳಲ್ಲಿ ಆರೋಗ್ಯ ರಕ್ಷಣೆ ಮತ್ತು ಪೌಷ್ಟಿಕತೆ ವೃದ್ಧಿಸಲು ಹಮ್ಮಿಕೊಂಡಿರುವ ಪೋಷಣ ಅಭಿಯಾನ ಮಾದರಿಯಾದುದು ಎಂದು ಲಕ್ಷ್ಮಿ‌ ಹೇಳಿದರು. ಈ ಶಾಲೆಗೆ ಅಮೃತ ಗ್ರಾಮ ಯೋಜನೆಯಡಿ ಗ್ರಾ.ಪಂ.ವತಿಯಿಂದ ಶೌಚಾಲಯ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಲಕ್ಷ್ಮಿ  ಶಾಲಾ ಬೇಡಿಕೆಗೆ ಪ್ರತಿಕ್ರಿಯಿಸಿದರು. 

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಸದಸ್ಯ ಕೆ.ಕೆ.ಭೋಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಜಂಕ್ ಪದಾರ್ಥಗಳನ್ನು ಬಳಸದೇ ಮನೆಯಲ್ಲೇ ತಯಾರಿಸುವ ಪೌಷ್ಟಿಕ ಆಹಾರವನ್ನು ಬಳಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಈ ವರ್ಷ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹೆಚ್ಚು ಜನರನ್ನು ತಲುಪಲು ಮತ್ತು ಈ ಅಭಿಯಾನಕ್ಕೆ ವೇಗ ನೀಡಲು ತಿಂಗಳು ಪೂರ್ತಿ ಸಮಗ್ರ ಪೌಷ್ಟಿಕತೆ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪೋಷಣ್ ಅಭಿಯಾನದ ಮಹತ್ವ ಕುರಿತು ತಿಳಿಸಿದ ವಿಜ್ಞಾನ ಸಂಘದ ಶಿಕ್ಷಕಿ ಬಿ.ಡಿ.ರಮ್ಯ ಮಾತನಾಡಿ, ಈ ಅಭಿಯಾನ ಒಟ್ಟಾರೆ ಮಕ್ಕಳ ತಾಯಂದಿರು, ಹದಿಹರೆಯದ ಬಾಲಕಿಯರು, ಗರ್ಭೀಣಿಯರ ಉತ್ತಮ ಆರೋಗ್ಯ ರಕ್ಷಣೆ ಹಾಗೂ ಪೌಷ್ಟಿಕಾಂಶದ ಅರಿವು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದರು. 

ಗ್ರಾ.ಪಂ.ಸದಸ್ಯರಾದ ಶಶಿಕಲಾ, ಕೆ.ಎಸ್.ಕುಮಾರ್, ಮಾಜಿ ಸದಸ್ಯ ಕೆ.ಎಸ್. ರಾಜಾಚಾರಿ, ಎನ್ನೆಸ್ಸೆಸ್ ಅಧಿಕಾರಿ ಡಿ.ರಮೇಶ್, ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತ  ಸಹಕಾರ ಸಂಘದ ಸಿಇಓ ಸೃಜೇಶ್, ಮೆನೇಜರ್ ರಾಜು, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ರೇಖಾ ಅನ್ಸಿಲಾ, ಎಸ್.ಎಂ.ಗೀತಾ, ಪಿ.ಅನಿತಾಕುಮಾರಿ, ಸಿಬ್ಬಂದಿ ಉಷಾ, ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಇದ್ದರು.

ವಿದ್ಯಾರ್ಥಿನಿ ಸುಸ್ಮಿತಾ ಪೌಷ್ಟಿಕ ಆಹಾರ ಬಳಕೆ ಕುರಿತ ಘೋಷಣೆಗಳನ್ನು ಪ್ರಚುರಪಡಿಸಿದರು. ವಿದ್ಯಾರ್ಥಿನಿ ಸಂಜನಾ ಮತ್ತು ತಂಡದವರು ಧಾನ್ಯಗಳನ್ನು ಬಳಸಿ ರಚಿಸಿದ ಕರ್ನಾಟಕ ಭೂಪಟ ಗಮನ ಸೆಳೆಯಿತು.

ಮಕ್ಕಳಿಂದ ವಿವಿಧ ಹಣ್ಣು-ಹಂಪಲು,ತರಕಾರಿ, ಸೊಪ್ಪು, ಆಹಾರ ಧಾನ್ಯಗಳನ್ನು ಒಪ್ಪೋರೋಣವಾಗಿಟ್ಟು ಪ್ರದರ್ಶಿಸಲಾಯಿತು. ಮಕ್ಕಳು ಒಂದೊಂದು ಕಾಳುಗಳಿಂದ ಒಂದೊಂದು ಜಿಲ್ಲೆಗಳನ್ನೊಳಗೊಂಡಂತೆ ಕರ್ನಾಟಕ ರಾಜ್ಯದ ಭೂಪಟ ರಚಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,