Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡವ ಭಾಷಿಕ ಸಮುದಾಯಗಳ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಜಾಗ ಗುರುತು: ಕೆ.ಜಿ.ಬೋಪಯ್ಯ

ಕೊಡವ ಭಾಷಿಕ ಸಮುದಾಯಗಳ ಸಾಂಸ್ಕೃತಿಕ  ಭವನ ನಿರ್ಮಾಣಕ್ಕೆ ಜಾಗ ಗುರುತು: ಕೆ.ಜಿ.ಬೋಪಯ್ಯ


ಮಡಿಕೇರಿ: ಕೊಡವ ಭಾಷಿಕ ಸಮುದಾಯಗಳ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ತಾಲ್ಲೂಕಿನ ಹೊದ್ದೂರು ಬಳಿ ಜಾಗ ಗುರ್ತಿಸಲಾಗಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.  

       ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜದಲ್ಲಿ ಬುಧವಾರ ನಡೆದ ‘ಕೈಲ್‍ಪೊಳ್ದ್ ಒತ್ತೋರ್ಮೆ ಕೂಟ’ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು.  

       ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಷ್ ನಾಣಯ್ಯ ಅವರ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಮಡಿಕೇರಿ ತಾಲ್ಲೂಕಿನ ಹೊದ್ದೂರಿನಲ್ಲಿ 5 ಎಕರೆ ಜಾಗ ಗುರುತಿಸಲಾಗಿದ್ದು, ಕೊಡವ ಭಾಷಿಕ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಶಾಸಕರು ತಿಳಿಸಿದರು.   

       ಕೊಡವ ಭಾಷಿಕ ಸಮುದಾಯದ ಎಲ್ಲರೂ ಒಟ್ಟುಗೂಡಿ ಕೊಡವ ಸಂಸ್ಕøತಿ, ಸಾಹಿತ್ಯ, ಕಲೆ, ಪರಂಪರೆಗಳನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.  

       ರಾಷ್ಟ್ರವು ಅನೇಕತೆಯಲ್ಲಿ ಏಕತೆಯನ್ನು ಹೊಂದಿದ್ದು, ಎಲ್ಲರೂ ಒಟ್ಟುಗೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಕೊಡವ ಭಾಷಿಕ ಸಮುದಾಯದ ಎಲ್ಲರೂ ಕೊಡಗಿನ ಆಚಾರ ವಿಚಾರ ಪರಂಪರೆಯನ್ನು ಉಳಿಸಿ ಬೆಳಸಬೇಕು ಎಂದರು.  

       ಸಾಮರಸ್ಯದಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಆಚಾರ-ವಿಚಾರ ಪದ್ಧತಿಯನ್ನು ಉಳಿಸಿಕೊಂಡು ಹೋದಲ್ಲಿ ನೆಮ್ಮದಿ ಜೀವನ ನಡೆಸಬಹುದು ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.  

       ಕೃಷಿಕರು ಕೃಷಿ ಚಟುವಟಿಕೆಗೆ ಉಪಯೋಗಿಸುವ ವಸ್ತುಗಳನ್ನು ಪೂಜಿಸುವುದು ಕೈಲ್ ಪೋಳ್ದ್ ಹಬ್ಬದ ಉದ್ದೇಶವಾಗಿದೆ. ಕೊಡಗು ಜಿಲ್ಲೆಯಲ್ಲಿ ಕೈಮೂಹುರ್ತ, ತುಲಾ ಸಂಕ್ರಮಣ, ಹುತ್ತರಿ ಹೀಗೆ ಹಲವು ಹಬ್ಬಗಳಿಗೆ ಸರ್ಕಾರದಿಂದ ರಜೆ ಕೊಡಿಸಲಾಗಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. 

       ಸರ್ಕಾರ ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿಗಳನ್ನು ಸ್ಥಾಪಿಸಿದೆ. ಜಿಲ್ಲೆಯಲ್ಲಿ ಎರಡು ಅಕಾಡೆಮಿಗಳು  ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾಷೆ, ಸಂಸ್ಕøತಿ, ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.  

       ದಿನದಿಂದ ದಿನಕ್ಕೆ ಕೊರೊನಾ ವೈರಸ್ ಕಡಿಮೆಯಾಗುತ್ತಿದ್ದರೂ ಸಹ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. 18 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆಯನ್ನು ಪಡೆಯಬೇಕು ಎಂದು ಕೆ.ಜಿ.ಬೋಪಯ್ಯ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. 

       ಕೊರೊನಾ ಕಡಿಮೆಯಾಗುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಮಕ್ಕಳ ಕಡೆ ಹೆಚ್ಚಿನ ಗಮನಹರಿಸಬೇಕು. ಜೀವ ಇದ್ದರೆ ಜೀವನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. 

       ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡಿ ಕೊಡವ ಭಾಷಿಕ ಎಲ್ಲಾ ಸಮುದಾಯಗಳು ಒಂದೆಡೆ ಸೇರಿ ಕಾರ್ಯಕ್ರಮ ಆಯೋಜಿಸಿರುವುದು ಮೆಚ್ಚುವಂತದ್ದು. ಅಕಾಡೆಮಿಯು ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಸುವಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. 

       ಕೊಡವ ಭಾಷೆ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಇತರರನ್ನು ಗೌರವಿಸಬೇಕಿದೆ ಎಂದರು. ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಗಮನ ಸೆಳೆಯಲಾಗುವುದು ಎಂದರು. 

       ವಿಧಾನ ಪರಿಷತ್ ಅನುದಾನದಡಿ ಹೆಗ್ಗಡೆ ಸಮಾಜದ ಅಭಿವೃದ್ಧಿಗೆ 3 ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.  

       ಕೊಡಗು ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್‍ನಲ್ಲಿ ಗಮನ ಸೆಳೆಯಲಾಗಿದೆ ಎಂದು ವೀಣಾ ಅಚ್ಚಯ್ಯ ಅವರು ಹೇಳಿದರು. 

       ಪಶ್ಚಿಮ ಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಕೊಡವ ಮತ್ತು ಅರೆಭಾಷೆ ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲೆಯಲ್ಲಿ ಸಾಹಿತ್ಯ, ಸಂಸ್ಕøತಿ, ಕಲೆ ಉಳಿಸಿ ಬೆಳೆಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತೀ ಹಳ್ಳಿಗೂ ತೆರಳಿ ಕಲೆ ಸಂಸ್ಕøತಿ, ಭಾಷೆ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದರು. 

       ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ಬದುಕು ಬವಣೆಯನ್ನು ನಿವಾರಿಸುವಲ್ಲಿ ಆದ್ಯತೆ ನೀಡಲಾಗಿದೆ. ಕೊಡವ ಭಾಷೆ, ಆಚಾರ-ವಿಚಾರ ಪದ್ಧತಿ ಪರಂಪರೆಯನ್ನು ಉಳಿಸುವಲ್ಲಿ ಅಕಾಡೆಮಿಗಳು ಕೆಲಸ ಮಾಡುತ್ತವೆ. ಕೊಡಗು ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಸರ್ಕಾರದ ಹಂತದಲ್ಲಿ ಶಾಸಕರು ಬಗೆ ಹರಿಸಲಿದ್ದಾರೆ ಎಂದರು.

       ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಮಾತನಾಡಿ ಕೊಡಗಿನಲ್ಲಿ ವಿಶಿಷ್ಟ ಸಂಸ್ಕøತಿ ಹೊಂದಿರುವ ಕೊಡವ ಭಾಷೆ ಮಾತನಾಡುವ ಮೂಲ ನಿವಾಸಿ 20 ಸಮುದಾಯಗಳು ಹೆಚ್ಚಿನ  ಜನಸಂಖ್ಯೆ ಹೊಂದಿದ್ದು, ಸಂವಿಧಾನ, ಶಾಸನ ಬದ್ಧ ಮೂಲಭೂತ ಹಕ್ಕುಗಳ ಸರ್ವಾಂಗೀಣ ಅಭಿವೃದ್ಧಿ ಕುರಿತು ಕೊಡಗಿನಲ್ಲಿ ಏಕೈಕ ಸುಸಜ್ಜಿತ ಮೂಲ ಸೌಕರ್ಯ ಒಳಗೊಂಡಂತೆ ಸಮುದಾಯ ಕಲ್ಯಾಣ ಭವನ, ಜನಪದ ಸಾಂಸ್ಕøತಿಕ ಪುರಾತನ ತಾಳೆಗರಿ ವಸ್ತು ಸಂಗ್ರಹಾಲಯ, ಗ್ರಂಥ ಭಂಡಾರ, ಕೊಡವ ಸಂಸ್ಕøತಿ, ಕಲೆ ಪ್ರದರ್ಶನ ಸುಸಜ್ಜಿತ ಮೈದಾನ ಅಗತ್ಯವಿದ್ದು, ಇದಕ್ಕಾಗಿ ಸರ್ಕಾರದಿಂದ ಕನಿಷ್ಠ 5 ಎಕರೆ ಜಾಗ ಒದಗಿಸಬೇಕಿದೆ ಎಂದು ಅವರು ಮನವಿ ಮಾಡಿದರು.   

       ಕೊಡವ ತಕ್ಕ್ ಜನಾಂಗಕಾರಂಗಡ ಒಕ್ಕೂಟದ ಅಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪ ಅವರು ವಿಚಾರ ಮಂಡಿಸಿ ಮಾತನಾಡಿ ಕೊಡವ, ಅಮ್ಮ ಕೊಡವ, ಹೆಗ್ಗಡೆ, ಐರಿ, ಕೊಯವ, ಕೆಂಬಟ್ಟಿ, ಕುಡಿಯ, ಪಣಿಕ, ನಾಯಿಂದ, ನಾಯರ್, ಕೋಲೆಯ, ಗೊಲ್ಲ, ಮಡಿವಾಳ, ಮಲಿಯ, ಕಣಿಯ, ಮೇದ, ಬಣ್ಣ, ಕಾಪಾಳ, ಬೂಣೆಪಟ್ಟಮ, ಬಾಣಿಯ, ಮತ್ತು ಮಾರಂಗಿ ಹೀಗೆ ಈ ಕೊಡವ ಭಾಷೆ ಮಾತನಾಡುವ 20 ಸಮುದಾಯಗಳಿವೆ ಎಂದರು.  

       ಕೊಡವ ಭಾಷೆ ಮಾತನಾಡುವ ಜನಾಂಗವು ಒಂದು ರೀತಿ ಆಲದ ಮರವಿದ್ದಂತೆ ಎಂದ ಅವರು ಕೈಲ್ ಮೂಹೂರ್ತ, ತುಲಾ ಸಂಕ್ರಮಣ, ಹುತ್ತರಿ ಪ್ರಮುಖ ಹಬ್ಬಗಳಾಗಿವೆ. ಇಲ್ಲಿನ ಕಲೆ, ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕಿದೆ. ಕೊಡವ ಭಾಷೆ ಮಾತನಾಡುವ ಕೆಂಬಟ್ಟಿ ಜನಾಂಗವು ತುಂಬಾ ಕಷ್ಟದಲ್ಲಿದೆ. ಈ ಸಮಾಜವನ್ನು ಮೇಲೆತ್ತಲು ಎಲ್ಲರೂ ಕೈಜೋಡಿಸಬೇಕಿದೆ ಎಂದರು.  

    ಕಾಫಿ ರಾಷ್ಟ್ರೀಯ ಪಾನಿಯ ಸಮಿತಿ ಸಂಚಾಲಕರಾದ ಮಾಚಿಮಾಡ ರವೀಂದ್ರ ಅವರು ಮಾತನಾಡಿ ಕೊಡವ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು, ಕೊಡವ ಭಾಷೆ ಸಂಸ್ಕøತಿ ಉಳಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಕೊಡವ ಭಾಷೆ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.  

    ಕಾಫಿ ಬೆಳೆಗೆ ತನ್ನದೇ ಆದ ಸ್ಥಾನವಿದೆ, ಕೊಡಗಿನ ಕಾಫಿಗೆ ವಿದೇಶದಲ್ಲಿಯೂ ಬೇಡಿಕೆ ಇದ್ದು, ಕಾಫಿಯನ್ನು ಅಂತರರಾಷ್ಟ್ರೀಯ ಪಾನೀಯವೆಂದು ಘೋಷಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು. 

     ಕೊಡಗು ಜಿಲ್ಲೆ ವಿಶಿಷ್ಟ ಸಂಸ್ಕøತಿಯನ್ನು ಹೊಂದಿದ್ದು, ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್‍ನಲ್ಲಿ ಐದು ಮಂದಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

     ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಳೆದ ಒಂದೂವರೆ ವರ್ಷದಲ್ಲಿ ಜನ ಮೆಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಡವ ಭಾಷೆ ಮಾತನಾಡುವ ಎಲ್ಲಾ ಸಮುದಾಯಗಳು ಒಟ್ಟುಗೂಡಿ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ ಎಂದರು. 

     ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಅಣ್ಣಳಪಂಡ ಧರ್ಮಶೀಲ ಅಜಿತ್ ಅವರು ಅವರು ಮಾತನಾಡಿ ಕೊಡಗಿನ ಆಚಾರ-ವಿಚಾರ, ಉಡುಗೆ-ತೊಡುಗೆ ಬೇರೆ ಬೇರೆ ಇದೆ. ಇಲ್ಲಿನ ಆಚಾರ-ವಿಚಾರವನ್ನು ಇತರೆಡೆ ಪರಿಚಯಿಸಬೇಕು ಎಂದರು.  

     ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರಾದ ಮಂಡೇಕುಟ್ಟಡ ಪವಿತ್ರ, ಕುಡಿಯರ ಮುತ್ತಪ್ಪ, ಬಿಟ್ಟಂಗಾಲ ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಿ.ಜಿ.ಅಯ್ಯಪ್ಪ ಅವರು ಮಾತನಾಡಿದರು. 

      ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ, ಪಿ.ಪ್ರಭು ಕುಮಾರ್, ಅಜ್ಜಿಕುಟ್ಟಿರ ಗಿರೀಶ್ ಇತರರು ಇದ್ದರು. 

        ಅಕಾಡೆಮಿ ಸದಸ್ಯರಾದ ಬಬ್ಬೀರ ಸರಸ್ವತಿ ಸ್ವಾಗತಿಸಿದರು. ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ಕೂಡಂಡ ಸಾಬಾ ಸುಬ್ರಮಣಿ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,