Header Ads Widget

Responsive Advertisement

ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಅಗತ್ಯ; ಕೂಡುಮಂಗಳೂರು ಪ್ರೌಢಶಾಲೆಯಲ್ಲಿ 67 ನೇ ವನ್ಯಜೀವಿ ಸಪ್ತಾಹ

ಅರಣ್ಯ, ವನ್ಯಜೀವಿಗಳ ಸಂರಕ್ಷಣೆ ಅಗತ್ಯ; ಕೂಡುಮಂಗಳೂರು ಪ್ರೌಢಶಾಲೆಯಲ್ಲಿ 67 ನೇ ವನ್ಯಜೀವಿ ಸಪ್ತಾಹ


ಕುಶಾಲನಗರ, ಅ.6:  ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ., ಜೆ.ಸಿ.ಬೋಸ್ ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್.ಘಟಕದ ಆಶ್ರಯದಲ್ಲಿ  ಕೂಡ್ಲೂರು ಗ್ರಾಮದಲ್ಲಿ 'ಅರಣ್ಯ ಮತ್ತು ಜೀವಸಂಕುಲ : ಜನರು ಮತ್ತು ಭೂಮಿಯ ಉಳಿಕೆ & ರಕ್ಷಣೆ' - ಎಂಬ ಶೀರ್ಷಿಕೆಯಡಿ 67ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ: 2021 ದ ಅಂಗವಾಗಿ   ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಜಾಗೃತಿ ಅಭಿಯಾನ ನಡೆಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ-ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಹಯೋಗದಲ್ಲಿ ನಡೆದ ವನ್ಯಜೀವಿಗಳ ಸಂರಕ್ಷಣೆ ಕುರಿತ ಜಾಗೃತಿಯಲ್ಲಿ ಪೊನ್ನಂಪೇಟೆ ಅರಣ್ಯ ಕಾಲೇಜಿನ ಅಂತಿಮ ವರ್ಷದ ಅರಣ್ಯಶಾಸ್ತ್ರದ ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಜನರಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ವನ್ಯಜೀವಿ ಸಪ್ತಾಹ ಆಚರಣೆಯ ಮಹತ್ವ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರೀಯ ಹಸಿರು ಪಡೆಯ ಕೊಡಗು ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಶಾಲೆಯ  ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಪರಿಸರ ಸಮತೋಲನ ಕಾಪಾಡುವ ದಿಸೆಯಲ್ಲಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಜೀವ ವೈವಿಧ್ಯ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಆಗಿದೆ ಎಂದರು. ಅಳಿವಿನ ಅಂಚಿನಲ್ಲಿರುವ ವನ್ಯಜೀವಿ ಸಂರಕ್ಷಣೆ ಬಗ್ಗೆ ನಾವು ಮುಂಜಾಗ್ರತೆ ವಹಿಸದ್ದಿದ್ದಲ್ಲಿ ಭವಿಷ್ಯದಲ್ಲಿ ಜೀವಿ ಸಂಕುಲವೇ ನಾಶವಾಗುವ ಅಪಾಯವಿದೆ ಎಂದರು. ವನ್ಯಜೀವಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಅರಣ್ಯ ಇಲಾಖೆಯು ಜನರ ಸಹಭಾಗಿತ್ವದಲ್ಲಿ ಪ್ರತಿ ವರ್ಷ ವನ್ಯಜೀವಿ ಸಪ್ತಾಹದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ವನ್ಯಜೀವಿ ಸಂರಕ್ಷಣೆಯ ಉದ್ದೇಶದ ಕುರಿತು ಮಾತನಾಡಿ, ವಿದ್ಯಾರ್ಥಿಗಳು ಜನರಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ  ಟಿ.ತರನ ಪೂಣಚ್ಚ, ವನ್ಯಜೀವಿ ಸಪ್ತಾಹದ ಧ್ಯೇಯೋದ್ದೇಶಗಳನ್ನು ತಿಳಿಸಿದರು.

ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಶೋಭಿತ್ ಮೂರ್ತಿ ಮತ್ತು ತಂಡದವರು ಕಾರ್ಯಕ್ರಮದ ಅಂಗವಾಗಿ ವಿವಿಧ ಪರಿಸರಾತ್ಮಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.

ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಡಿ.ರಮೇಶ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ದಯಾನಂದ ಪ್ರಕಾಶ್, ಎಸ್.ಎಂ.ಗೀತಾ, ಪಿ.ಅನಿತಾಕುಮಾರಿ, ಅನ್ಸಿಲಾ ರೇಖಾ ಇದ್ದರು.


ಶಾಲಾ ವಿದ್ಯಾರ್ಥಿಗಳು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ‌ ವಿವಿಧ ಘೋಷಣೆಗಳುಳ್ಳ ಭಿತ್ತಿಫಲಕಗಳನ್ನು ಹಿಡಿದು  ಕಾಡನ್ನು ರಕ್ಷಿಸಿ, ವನ್ಯಜೀವಿಗಳನ್ನು ಸಂರಕ್ಷಿಸಿ, ವನ್ಯಜೀವಿಗಳ ಸುಸ್ಥಿತಿ: ದೇಶದ ಪ್ರಗತಿ , ಕಾಡು ಉಳಿಸಿ, ವನ್ಯಜೀವಿ ಸಂರಕ್ಷಿಸಿ 'ಕಾಡನ್ನು ಬೆಳೆಸಿ ನಾಡನ್ನು ಉಳಿಸಿ' ಎಂಬ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಿದರು.

ವನ್ಯಜೀವಿಗಳ ಸಂರಕ್ಷಣೆ ಕುರಿತು ಶಾಲಾ ವಿದ್ಯಾರ್ಥಿಗಳ ಮೂಲಕ ಕೈಗೊಂಡಿರುವ  ಅಂಚೆ ಕಾರ್ಡ್ ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಗೆ  ವನ್ಯಜೀವಿ ಸಂರಕ್ಷಣೆ ಕುರಿತು ನಡೆಸಿದ ಚಿತ್ರಕಲೆ ಸ್ಪರ್ಧೆ, ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,