Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಧಿಕೃತ ಅಥವಾ ಅನಧಿಕೃತ ಹೋಂಸ್ಟೇ ರೆಸಾರ್ಟ್'ಗಳು ಯಾವುದೇ ಇರಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯ

ಅಧಿಕೃತ ಅಥವಾ ಅನಧಿಕೃತ ಹೋಂಸ್ಟೇ ರೆಸಾರ್ಟ್'ಗಳು ಯಾವುದೇ ಇರಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯ

( ಸಾಂದರ್ಭಿಕ ಚಿತ್ರ )

ಮೊನ್ನೆ ಮಡಿಕೇರಿಯ ಹೋಂಸ್ಟೇಯೊಂದರಲ್ಲಿ ನಡೆದ ದುರ್ಘಟನೆ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪುಚುಕ್ಕೆಯಾಗಿದ್ದು ಇದು ಕೊಡಗಿಗೆ ಕೆಟ್ಟ ಹೆಸರು.  ಇನ್ನಾದರೂ ಕೊಡಗಿನ ಹೋಂಸ್ಟೇ ಹಾಗೂ ರೆಸಾರ್ಟ್'ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಡಿಕೇರಿಯಲ್ಲಿ ಹೋಂಸ್ಟೇನಲ್ಲಿ ಮೊನ್ನೆ ನಡೆದ ದುರ್ಘಟನೆಯನ್ನು ಖಂಡಿಸಿದರಲ್ಲದೇ ಈ ಸಾವಿಗೆ ನೇರ ಹೊಣೆಗಾರರಾಗಿ ಹೋಂಸ್ಟೇ ಮಾಲಿಕರನ್ನು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಅದಿಕೃತವಾಗಿ 952 ಹೋಂಸ್ಟೇಗಳು ನೋಂದಾಯಿಸಿಕೊಂಡಿದ್ದು, ಇದರ ಮೂರುಪಟ್ಟು ಅಧಿಕ ಅನಧಿಕೃತ ಹೋಂಸ್ಟೇಗಳು ಜಿಲ್ಲೆಯಲ್ಲಿವೆ ಎಂದರೆ ತಪ್ಪಲ್ಲ. ಇನ್ನು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ 19 ರೆಸಾರ್ಟ್ ನೊಂದಾಯಿಸಿಕೊಂಡಿದ್ದರೆ ಅನದಿಕೃತ ರೆಸಾರ್ಟ್ ಎಷ್ಟಿದೆ ಎಂದು ಸಂಬಂಧಪಟ್ಟವರಿಗೆ ಗೊತ್ತು. ಈ ಅಧಿಕೃತ ಹಾಗೂ ಅನಧಿಕೃತ ಹೋಂಸ್ಟೇಗಳ ನಡುವಿನ ಪೈಪೋಟಿಯಲ್ಲಿ ಕೂಸು ಬಡವಾಯಿತು ಎಂಬಂತೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕೆಸರು ಅಂಟಿಕೊಂಡಿದೆ. ಇದೀಗ ಇಂತಹ ಅಹಿತಕರ ಘಟನೆಗಳು ನಡೆದಾಗ ಮಾತ್ರ ಅದು ಅಧಿಕೃತ ಇದು ಅನಧಿಕೃತ ಎಂಬ ಉತ್ತರ ಬರುತ್ತಿದ್ದು. ಹೋಂಸ್ಟೇಗಳ ವಿರುದ್ಧ ದ್ವನಿ ಎತ್ತಿದ್ದರೆ ಸಾಕು ಎಲ್ಲಾರು ಒಂದೆ ಎಂಬಂತೆ ಹಾರಾಡುತ್ತಾರೆ. 

ಕಳೆದ ಒಂದು ದಶಕಗಳಿಂದ ಈಚೇ ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಹೋಂಸ್ಟೇಗಳು ಸುಸಂಸ್ಕೃತರ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಬುಡಮೇಲು ಮಾಡಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಒಂದೆಡೆ ಕೆಲವೊಂದು ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಕಲ್ಪಿಸಿರಬಹುದು, ಮತ್ತೊಂದೆಡೆ ಕೆಲವರಿಗೆ ಬದುಕು ಕಟ್ಟಿಕೊಟ್ಟಿರಬಹುದು. ಆದರೆ ಇದರ ಜೊತೆಗೆ ಕೆಲವರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅಂಟಿರುವ ಕಳಂಕವನ್ನು ಹಾಗೂ ಆರೋಪವನ್ನು ದೂರತಳ್ಳಲು ಸಾದ್ಯವಿಲ್ಲ. ಜಿಲ್ಲೆಯಲ್ಲಿ ಅನಧಿಕೃತವಿರಲಿ ಅಥವಾ ಅಧಿಕೃತವಿರಲಿ ಯಾವುದೇ ಇರಲಿ ಇದರ ಬಗ್ಗೆ ನಿಗಾವಹಿಸಬೆಕಾದ ಪ್ರವಾಸೋದ್ಯಮ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದು, ಜಾಣ ಮೌನಕ್ಕೆ ಶರಣಾಗಿದೆ. ಕೂಡಲೆ ದುರ್ಘಟನೆ ನಡೆದ ಹೋಂಸ್ಟೇ ಮಾಲಿಕ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಿರುದ್ಧ ಕೊಲೆ ಕೇಸು ದಾಖಲಿಸಿ ಒಳಗೆ ತಳ್ಳಬೇಕಿದೆ ಎಂದು ಒಕ್ಕೂಟ ಒತ್ತಾಯಿಸಿದೆ.

ಒಂದು ದಶಕಗಳ ಹಿಂದೀಚೆ ಆರಂಭವಾದ ಹೋಂಸ್ಟೇ ಸಂಸ್ಕೃತಿ ಇದೀಗ ಜಿಲ್ಲೆಯಲ್ಲಿ ಹೆಣ್ಣುಗಳು ಬೇಕಾ ಎಂಬ ಹಂತಕ್ಕೆ ತಲುಪಿರುವುದು ಕಳವಳಕಾರಿ ವಿಷಯ, ಇತ್ತೀಚೆಗೆ ಪತ್ರಿಕೆಗಳಲ್ಲಿ ಈ ವಿಷಯಗಳು ಕೂಡ ವರದಿಯಾಗಿದ್ದು, ವೀರ ಶೂರರ ನಾಡು, ಪ್ರಕೃತಿ ಸೌಂದರ್ಯದ ನೆಲೆಬೀಡು ಎಂಬ ಸುಸಂಸ್ಕೃತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಾವು ತಲೆತಗ್ಗಿಸುವಂತಾಗಿದೆ. 

ಮಡಿಕೇರಿ ಸೇರಿದಂತೆ ಇತರ ಪಟ್ಟಣಗಳಲ್ಲಿ ಬ್ರೋಕರ್'ಗಳು ರಾತ್ರಿ ಹೊತ್ತು ಪ್ರವಾಸಿಗರ ವಾಹನಗಳನ್ನು ನಿಲ್ಲಿಸಿ ನಿಮಗೆ ಹೋಂಸ್ಟೇಗಳು ಬೇಕಾ ಯಾವ ರೀತಿಯದು ಬೇಕು, ಜೊತೆಗೆ ಬೇರೆ ಏನಾದರೂ ವ್ಯವಸ್ಥೆ ಬೇಕಾ ಎಂದು ಕೇಳುವ ಹಂತಕ್ಕೆ ತಲುಪಿರುವುದು ಕೊಡಗಿನ ಪ್ರವಾಸೋದ್ಯಮಕ್ಕೆ ಮಾತ್ರವಲ್ಲ ಕೊಡಗು ಜಿಲ್ಲೆ ತಲೆ ತಗ್ಗಿಸುವಂತಾಗಿದೆ. 

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಡಿ 952 ಹೋಂಸ್ಟೇ ಹಾಗೂ 19 ರೆಸಾರ್ಟ್ ನೋಂದಾವಣೆಗೊಂಡಿದ್ದು ಉಳಿದವು ಅನಧಿಕೃತ ಎಂಬ ಹೇಳಿಕೆಯನ್ನು ನೀಡುವ ಅಧಿಕಾರಿಗಳು ಈ ಅನಧಿಕೃತಗಳ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ ಹಾಗೂ ಅಧಿಕೃತವಾಗಿ ಇರುವ ಹೋಂಸ್ಟೇ ರೆಸಾರ್ಟ್'ಗಳ ನಿರ್ವಹಣೆ ಹಾಗೂ ಪರಿಕಲ್ಪನೆ ಹೇಗಿದೆ ಎಂದು ಕನಿಷ್ಟ ವರ್ಷಕ್ಕೊಮ್ಮೆಯಾದರು ನೋಡುವ ಕೆಲಸ ಮಾಡಿದ್ದಾರೆಯೇ. ನೊಂದಾಯಿಸಿಕೊಂಡ ಹೋಂಸ್ಟೇಗಳ ಪೈಕಿ ಎಷ್ಟು ಹೋಂಸ್ಟೇಗಳಿಗೆ ಬೇಟಿ ನೀಡಿ ಪರಿಶೀಲಿಸಿ ದಂಡ ಹಾಕುವ ಕೆಲಸ ಮಾಡಿದ್ದಾರೆ ಎಂಬ ಶ್ವೇತಾ ಪತ್ರ ಹೊರಡಿಸಲಿ. ಹಾಗೇ ಇದೀಗ ದುರ್ಘಟನೆಗಳು ನಡೆದಾಗ ಅದು ಅನಧಿಕೃತ ಹೋಂಸ್ಟೇ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಅಧಿಕೃತ ಹೋಂಸ್ಟೇಗಳ ಮಾಲಿಕರು ಅಥವಾ ಇವರ ಸಂಘದವರು ಹೇಳುತ್ತಾರೆ ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸುವಂತೆ ನಾವು ಸಂಬಂಧಪಟ್ಟವರಿಗೆ ಹಲವಾರು ಬಾರಿ ಮನವಿ ಕೊಟ್ಟಿದ್ದೇವೆ ಎಂದು. ಲಾಕ್ ಡೌನ್ ಸಮಯದಲ್ಲಿ ನಮಗೆ ತೊಂದರೆಯಾಗಿದೆ ತೆರೆಯಲು ಅವಕಾಶ ಕೊಡಿ ಎಂದು ಬೀದಿಗಿಳಿದು ಪ್ರತಿಭಟನೆ ಮಾಡಿದವರು ಏಕೆ ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸಿ ಎಂದು ಪ್ರತಿಭಟಿಸಲಿಲ್ಲ.? ಅಂದು ಲಾಕ್ ಡೌನ್ ಸಂದರ್ಭದಲ್ಲಿ ನಡೆದ ಇವರ ಪ್ರತಿಭಟನೆಯಲ್ಲಿ ಕೇವಲ ಅಧಿಕೃತದವರು ಮಾತ್ರ ಇದ್ದರೆ, ಇತರ ಅನಧಿಕೃತ ಹಾಗೂ ಇತರರು ಇರಲಿಲ್ಲವೇ ಎಂದು ಚಿಂತಿಸಬೇಕಿದೆ. 

ಕಳೆದೊಂದು ದಶಕಗಳಿಂದೀಚೆ ಆರಂಭವಾದ ಹೋಂಸ್ಟೇ ಪರಿಕಲ್ಪನೆ ಜಿಲ್ಲೆಯಲ್ಲಿ ಮನೆಯ ವಾತಾವರಣವನ್ನು ಮೂಡಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೋಂಸ್ಟೇ ನಡೆಸುತ್ತಿರುವ ಮಾಲಿಕರು ಯಾರು, ಆ ಹೋಂಸ್ಟೇ ಇರುವ ಜಾಗದ ಮಾಲಿಕ ಯಾರದು ಎಂದು ಗೊತ್ತಾಗುತ್ತಿಲ್ಲ. ಇನ್ನು ಹೋಂಸ್ಟೇಗಳಿಗೆ ಇಂತಿಷ್ಟೇ ರೂಮುಗಳಿರಬೇಕು ಎಂಬ ನಿಯಮವಿದೆ‌. ಹಾಗೇ ಹೋಂಸ್ಟೇ ಮಾಲಿಕರು ಕೂಡ ಸ್ಥಳದಲ್ಲಿಯೇ ಇರಬೇಕು ಎಂಬ ನಿಯಮಗಳು ಇದೆ. ಆದರೆ ಇತ್ತೀಚಿನ ದಿನಗಳನ್ನು ತೆಗೆದುಕೊಂಡರೆ ಯಾರದೋ ಮಗುವಿಗೆ ಮತ್ಯಾರೋ ಅಪ್ಪ ಎಂಬಂತೆ ಹೋಂಸ್ಟೇ ನಡೆಸುವವರು ಯಾರೋ, ಅದರ ಮಾಲಿಕ ಮತ್ಯಾರೋ, ಇನ್ನೂ ಜಾಗದ ಮಾಲಿಕ ಮತ್ತೊಬ್ಬ ಎಂಬಂತಾಗಿರುವುದು ಹೋಂಸ್ಟೇ ಎಂಬ ಪರಿಕಲ್ಪನೆಯನ್ನು ಗಾಳಿಗೆ ತೂರಿ ಇದು ದಂದೆಯಾಗಿ ಪರಿವರ್ತನೆಯಾಗಿರುವುದು ವಿಷಾದನೀಯ.  

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಈ ಕೂಡಲೇ ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇಗಳಿಗೆ ಅಧಿಕೃತವಾಗಿ ನೋಂದಾಯಿಸಿಕೊಳ್ಳಲು ಸಮಯಾವಕಾಶವನ್ನು ನೀಡಿ ಎಲ್ಲಾವನ್ನು ನೊಂದಾಯಿಸಿಕೊಳ್ಳುವಂತೆ ಮಾಡಿ. ಹಾಗೇ ಅಧಿಕೃವಾಗಿರುವ ಹೋಂಸ್ಟೇಗಳನ್ನು ಕೂಡ ಮರುಪರಿಶೀಲನೆ ಮಾಡಬೇಕು. ಈ ಹಿಂದೆ ನೋಂದಾಯಿಸಿಕೊಳ್ಳುವ ಸಮಯದಲ್ಲಿ ನೀಡಲಾದ ನಿಯಮಗಳನ್ನು ಅವರು ಮುರಿದಿದ್ದರೆ ಅಂತಹ ಹೋಂಸ್ಟೇಗಳ ಪರವಾನಗಿಯನ್ನು ಯಾವುದೇ ಮುಲಾಜು ಇಲ್ಲದೆ ರದ್ದು ಮಾಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. 

ಹಾಗೇ ದೂರದ ಪ್ರದೇಶದಿಂದ ಜಿಲ್ಲೆಗೆ ಬಂದು ಬಾಡಿಗೆಗೆ ಮನೆಗಳನ್ನು ಪಡೆದು ಹೋಂಸ್ಟೇ ನಡೆಸುತ್ತಿರುವವರಿಗೆ ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಮತ್ತು ಹೋಂಸ್ಟೇ ಮಾಲಿಕರು ಹೊರ ಜಿಲ್ಲೆಯಲ್ಲಿದ್ದರೆ ಅಂತಹವರಿಗೆ ಅವಕಾಶ ಕೊಡಬಾರದು. ಜಿಲ್ಲೆಯವರಿಗೆ ಹೊರತುಪಡಿಸಿ ಹೊರಜಿಲ್ಲೆಯವರು ಇಲ್ಲಿ ಬಂದು ಹೋಂಸ್ಟೇ ನಡೆಸಲು ಅವಕಾಶ ನೀಡಲೇಬಾರದು ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಆಗ್ರಹಿಸಿದಲ್ಲದೆ,  ಹೋಂಸ್ಟೇ ರೇಸಾರ್ಟ್'ಗಳಿಗೆ ರಾತ್ರಿವೇಳೆ ಸಮಯವನ್ನು ನಿಗದಿಪಡಿಸಬೇಕು. ಊರಿನೊಳಗಿರುವ ಕೆಲವೊಂದು ಹೋಂಸ್ಟೇಗಳಿಂದ ಸುತ್ತಾಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗಿದ್ದು, ರಾತ್ರಿವೇಳೆ ವಾಹನಗಳ ಓಡಾಟದಿಂದ ಕಿರಿಕಿರಿಯಾಗಿದೆ, ಕೂಡಲೆ ಇವರಿಗೊಂದು ಸಮಯವನ್ನು ನಿಗದಿಪಡಿಸಬೇಕು. ಹಾಗೇ ಹೋಂಸ್ಟೇ ಹಾಗೂ ರೆಸಾರ್ಟ್'ಗಳಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ ಅಥವಾ ಪಲಕಗಳನ್ನು ಹಾಕಲು ನಿರ್ದೇಶನ ನೀಡಬೇಕಾಗಿದ್ದು, ದಾರ್ಮಿಕ ಕ್ಷೇತ್ರಗಳಿಗೆ ಹೋಗುವಾಗ ಯಾವ್ಯಾವ ಕಟ್ಟುನಿಟ್ಟಿನ ಕ್ರಮವನ್ನು ಪಾಲಿಸಬೇಕು ಎಂಬ ಬಗ್ಗೆ ಪ್ರವಾಸಿಗರಿಗೆ ಆಯಾಯ ಹೋಂಸ್ಟೇ ರೆಸಾರ್ಟ್'ಗಳಲ್ಲಿ ತಿಳಿಸಬೇಕು. ಕೊಡಗು ಸುಸಂಸ್ಕೃತರ ಜಿಲ್ಲೆಯಾಗಿದ್ದು ಇಲ್ಲಿನ ಜನರೊಂದಿಗೆ ಯಾವ ರೀತಿ ಇರಬೇಕು ಹಾಗೂ ಹೊರಗಡೆ ಯಾವ ರೀತಿ ವರ್ತಿಸಬೇಕು ಎಂಬ ಬಗ್ಗೆ ಮಾಹಿತಿಯನ್ನು ಪ್ರವಾಸಿಗರಿಗೆ ನೀಡುವುದು ಉತ್ತಮ. 

ಕೂಡಲೇ ಜಿಲ್ಲೆಯಲ್ಲಿರುವ ಅಧಿಕೃತ ಹಾಗೂ ಅನಧಿಕೃತ ಹೋಂಸ್ಟೇಗಳ ಮೇಲೆ ಅಧಿಕಾರಿಗಳು ದಿಢೀರ್ ಬೇಟಿ ನೀಡಿ ನಿಯಮ ಪಾಲನೆ ಆಗುತ್ತಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಿದೆ ಹಾಗೂ ಅಧಿಕೃತವಾಗಿ ನೋಂದಾಯಿಸಿಕೊಂಡು ಅನಧಿಕೃತವಾಗಿ ವ್ಯವಹಾರ ನಡೆಯುತ್ತಿದ್ದರೆ ಅಥವಾ ಈ ಹಿಂದಿನ ಹೋಂಸ್ಟೇ ಪರಿಕಲ್ಪನೆ ಮೀರಿದ್ದರೆ ಅವರ ನೋಂದಾವಣೆಯನ್ನು ಕೂಡಲೆ ರದ್ದು ಮಾಡಬೇಕಿದೆ. ಹಾಗೇ ಹೋಂಸ್ಟೇ ರೆಸಾರ್ಟ್'ಗಳಲ್ಲಿ ಸಿಸಿಟಿವಿ ಜೊತೆಗೆ ತಂಗುವವರ ಸಂಪೂರ್ಣ ಮಾಹಿತಿಯ ವಿವರವನ್ನು ನೊಂದಾಯಿಸಿಕೊಳ್ಳಬೇಕಿದೆ, ಇದನ್ನು ಇಲಾಖೆ ದಿಢೀರ್ ಪರಿಶೀಲನೆ ಮಾಡುವ ಮೂಲಕ ಕೆಲವೆಡೆ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬಹದೆ. ಇದರ ಜೊತೆ ಹಲವಾರು ಹೋಂಸ್ಟೇ ರೆಸಾರ್ಟ್'ಗಳು ಅರಣ್ಯ ಪ್ರದೇಶಗಳನ್ನು ಹಾಗೂ ನದಿತೊರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು ಇವರ ಮೇಲೆ ಕಾನೂನಿನ ಕ್ರಮ ಕೈಗೊಂಡು ದಂಡ ಹಾಕುವ ಕೆಲಸವಾಗಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,