ಪರಿಸರ ಸಮತೋಲನಕ್ಕೆ ಪ್ರತಿಯೊಬ್ಬರೂ ಶ್ರಮಿಸಿ: ರವಿಕುಶಾಲಪ್ಪ
ಮಡಿಕೇರಿ, ಅ.08: ಭೂಮಂಡಲದಲ್ಲಿ ಜೀವಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿಗಳು ಸಮತೋಲದಿಂದ ಬದುಕು ನಡೆಸುವಂತಾಗಲು ಪರಿಸರ, ವನ್ಯ ಸಂಪನ್ಮೂಲ ಹಾಗೂ ಜಲ ಮೂಲಗಳನ್ನು ಸಂರಕ್ಷಿಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಸಲಹೆ ಮಾಡಿದ್ದಾರೆ.
ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ 67ನೇ ವನ್ಯಜೀವಿ ಸಪ್ತಾಹ ಆಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್-19 ಸಂಕಷ್ಟ ಕಾಲದಲ್ಲಿ ಆಮ್ಲಜನಕ ದೊರೆಯದೆ ಇದ್ದಾಗ ಅನುಭವಿಸಿದ ಕಷ್ಟ ಹೇಳತೀರದು, ಆದ್ದರಿಂದ ಪ್ರಾಕೃತಿಕ ವಿಕೋಪಗಳಿಗೆ ಅವಕಾಶ ಮಾಡದೆ, ತಮ್ಮ ತಮ್ಮ ಮಿತಿಯನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬರೂ ಜೀವನ ನಡೆಸಬೇಕು ಎಂದರು.
ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಯ ಕುರಿತು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಕಾರ್ಯಗಾರಗಳು, ಸ್ಪರ್ಧೆಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕೊಡಗು ಜಿಲ್ಲೆಯಲ್ಲಿ ಅರಣ್ಯ, ಪರಿಸರ, ವನ್ಯ ಜೀವಿಗಳು ಸಮತೋಲನದಿಂದ ಕೂಡಿದೆ ಎಂದರು.
ಜಿಲ್ಲೆಯಲ್ಲಿ ವನ್ಯಪ್ರಾಣಿ ಮತ್ತು ಮಾನವನ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇದನ್ನು ತಪ್ಪಿಸಬೇಕು. ಆ ನಿಟ್ಟಿನಲ್ಲಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರವಿಕುಶಾಲಪ್ಪ ಅವರು ಹೇಳಿದರು.
ವನ್ಯಜೀವಿ ಸಂರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಇತರರೂ ಕೈಜೋಡಿಸಬೇಕು. ಆದ್ದರಿಂದ ನಾವೆಲ್ಲರು ಕಾಡು-ನಾಡು ಸಂರಕ್ಷಿಸಲು ಪಣ ತೊಡಬೇಕು ಎಂದು ಕೋರಿದರು.
ಕೊಡಗು ಜಿಲ್ಲೆಯು ಸಮೃದ್ಧಿಯಾದ ಹಸಿರು ಪರಿಸರದ ಮಧ್ಯೆ ಬದುಕುವ ಭಾಗ್ಯ ನಮಗೆ ದೊರೆತಿದ್ದು, ಅದರ ರಕ್ಷಣೆ ಮಾಡುವ ಕರ್ತವ್ಯವು ನಮ್ಮದಾಗಿರುತ್ತದೆ ಎಂದು ರವಿಕುಶಾಲಪ್ಪ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ವನ್ಯಜೀವಿ ಸಪ್ತಾಹ ಆಚರಣೆಯು ನಿರ್ದಿಷ್ಟ ಗುರಿ ಮತ್ತು ಉದ್ದೇಶವನ್ನು ಹೊಂದಿರಬೇಕು. ನಮ್ಮ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ವನ್ಯಜೀವಿ ಸಪ್ತಾಹ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳು ಅರಣ್ಯ ಇಲಾಖೆಯ ಕಡೆಯಿಂದ ಹಮ್ಮಿಕೊಳ್ಳಲಾಗಿದ್ದು, ಕೇವಲ ಈ ದಿನದ ಮಟ್ಟಿಗೆ ಆಚರಿಸಲಾಗುವ ಕಾರ್ಯಕ್ರಮವಾಗಿರದೇ ಪರಿಸರ ಸಂರಕ್ಷಣೆಯ ಕಾರ್ಯದ ಬಗ್ಗೆ ನಾವು ಹೇಳ ಬಯಸುವ ವಿಷಯವನ್ನು ವ್ಯವಸ್ಥಿತವಾಗಿ ಕಾರ್ಯ ರೂಪಕ್ಕೆ ತರುವ ಕೆಲಸ ನಡೆಯಬೇಕಿದೆ. ಸಂರಕ್ಷಣೆಯ ಜವಾಬ್ದಾರಿಯನ್ನು ಜೀವನದಲ್ಲಿಯು ಸಹ ಅಳವಡಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
‘ವನ್ಯ ಜೀವಿ ಸಪ್ತಾಹ ಆಚರಣೆಯ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದಾಗಿದೆ. ಪೃಥ್ವಿ ಕೇವಲ ಮನುಷ್ಯರ ಸ್ವತ್ತಲ್ಲ, ವನ್ಯ ಜೀವಿಗಳಿಗೂ ಸಹ ಭೂಮಿಯ ಮೇಲೆ ಜೀವಿಸುವ ಸ್ವಾತಂತ್ರ್ಯ ಮತ್ತು ಸಮಾನತೆಯಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವಂತೆ ವನ್ಯ ಜೀವಿ ಮತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಅವರು ಕೋರಿದರು.’
ಸಂದೇಶ್ ಕಡೂರು ಅವರ ಕೊಡಗಿನ ಸೌಂದರ್ಯದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಸಂದೇಶ್ ಕಡೂರು, ಕಲಾವಿದ ಇ.ರಾಜು ಹಾಗೂ ಮುಂಚೂಣಿ ಸಿಬ್ಬಂದಿಗಳ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು. ವನ್ಯಜೀವಿ ಸಪ್ತಾಹದಿಂದ ಆನ್‍ಲೈನ್ ರಸಪ್ರಶ್ನೆ, ಛಾಯಚಿತ್ರ ಸ್ಪರ್ಧೆ, ಚಿತ್ರಕಲೆ, ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಇ.ರಾಜು ಮತ್ತು ತಂಡದಿಂದ ಬೀದಿ ನಾಟಕ ನಡೆಯಿತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಾಮಾಜಿಕ ಅರಣ್ಯ ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಪೂರ್ಣಿಮ, ಶಿವರಾಮ್ ಬಾಬು, ದಯಾನಂದ್ ಇತರರು ಇದ್ದರು.
ಉಪ ವಲಯ ಅರಣ್ಯಾಧಿಕಾರಿ ಶ್ರೀಧರ್ ಪ್ರಕಾಶ್ ಜೆ.ಕೆ ನಿರೂಪಿಸಿದರು, ಜೆ.ಸಿ ಕಾಂತಿಮತಿ ಪ್ರಾರ್ಥಿಸಿದರು, ಎಸಿಎಫ್ ಡಿ.ಎಸ್ ದಯಾನಂದ್ ಸ್ವಾಗತಿಸಿದರು, ಆರ್‍ಎಫ್‍ಒ ಮರಿಸ್ವಾಮಿ ವಂದಿಸಿದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network