ಪರಿಶಿಷ್ಟ ಪಂಗಡದ ಮೂಲನಿವಾಸಿ ಸಮುದಾಯಗಳಾದ ಜೇನು ಕುರುಬ ಮತ್ತು ಕೊರಗ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ 437.38 ಲಕ್ಷ ರೂ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ಅನುಮೋದನೆ
ಮಡಿಕೇರಿ ಡಿ.18: ಪರಿಶಿಷ್ಟ ಪಂಗಡದ ಮೂಲನಿವಾಸಿ ಸಮುದಾಯಗಳಾದ ಜೇನು ಕುರುಬ ಮತ್ತು ಕೊರಗ ಸಮುದಾಯದವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ 2021-22 ನೇ ಸಾಲಿನಲ್ಲಿ ನಿಗಧಿಯಾಗಿರುವ 437.38 ಲಕ್ಷ ರೂ ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಅನುಮೋದನೆ ನೀಡಿದ್ದಾರೆ.
ನಗರದ ಜಿ.ಪಂ.ನ ಯೋಜನಾ ಸಮನ್ವಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂಲನಿವಾಸಿ ಜೇನು ಕುರುಬ ಜನಾಂಗದವರ ಅಭಿವೃದ್ಧಿ ಯೋಜನೆ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜೇನು ಕುರುಬರು ವಾಸಿಸುವ ಹಾಡಿಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಸಂಪರ್ಕ ಸೇತುವೆ ಮತ್ತಿತರ ಕಾಮಗಾರಿಗೆ 250.88 ಲಕ್ಷ ರೂ, ಕೃಷಿ ಕಾರ್ಯಗಳಿಗೆ ಸಂಬಂಧಿಸಿದಂತೆ ಡೀಸೆಲ್ ಮೋಟಾರ್ ಹಾಗೂ ಪೈಪ್‍ಗಳ ಖರೀದಿಗೆ 30 ಲಕ್ಷ ರೂ.(20 ಜನ ಫಲಾನುಭವಿಗಳಿಗೆ ತಲಾ 1.50 ಲಕ್ಷರೂ ನಂತೆ). ಜಮೀನಿಗೆ ತಂತಿ ಬೇಲಿ ಅಳವಡಿಕೆಗೆ 12.50 ಲಕ್ಷ ರೂ (50 ಜನ ಫಲಾನುಭವಿಗಳಿಗೆ ತಲಾ 25 ಸಾವಿರ ರೂ) ಸಹಾಯಧನ.
ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ಅಂಗಡಿ ವ್ಯಾಪಾರಕ್ಕೆ 12 ಲಕ್ಷ ರೂ (6 ಜನ ಫಲಾನುಭವಿಗಳಿಗೆ ತಲಾ 2 ಲಕ್ಷ ರೂ) ಸಹಾಯಧನ. ಸರಕು ಸಾಕಾಣಿಕೆ ವಾಹನ ಖರೀದಿಗೆ 50 ಲಕ್ಷ ರೂ.(10 ಜನ ಫಲನುಭವಿಗಳಿಗೆ ತಲಾ 5 ಲಕ್ಷ ರೂ) ಸಹಾಯಧನ. ರ್ಯಾಫ್ಟಿಂಗ್ ಬೋಟ್ ಮತ್ತು ಸಲಕರಣೆಗಳ ಖರೀದಿಗೆ 20 ಲಕ್ಷ ರೂ.(10 ಜನ ಫಲಾನುಭವಿಗಳಿಗೆ ತಲಾ 2 ಲಕ್ಷ ರೂ) ಸಹಾಯಧನ.
ಹಂದಿ ಸಾಕಾಣಿಕೆ 20 ಲಕ್ಷ ರೂ.(40 ಜನ ಫಲಾನುಭವಿಗಳಿಗೆ ತಲಾ 50 ಸಾವಿರ ರೂ), ಹಸು ಸಾಕಾಣಿಕೆಗೆ 24 ಲಕ್ಷ ರೂ. (20 ಜನ ಫಲಾನುಭವಿಗಳಿಗೆ ತಲಾ 1.20 ಲಕ್ಷ ರೂ.), ಆಡು/ಕುರಿ ಸಾಕಾಣಿಕೆಗೆ 18 ಲಕ್ಷ ರೂ.(30 ಜನ ಫಲಾನುಭವಿಗಳಿಗೆ ತಲಾ 60 ಸಾವಿರ ರೂ) ಸಹಾಯಧನದ ಅನುದಾನ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಅವರು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಮೂಲ ನಿವಾಸಿ ಜೇನುಕುರುಬ ಮತ್ತು ಕೊರಗ ಜನಾಂಗದವರ ಅಭಿವೃದ್ಧಿ ಯೋಜನೆಯಡಿ ವೈಯಕ್ತಿಕ ನೀರಾವರಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಕೇಂದ್ರ ಐಟಿಡಿಪಿ ಇಲಾಖಾ ಕಚೇರಿಗೆ ಕಳುಹಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್ ಅವರು ಹುಣಸೆ ಪಾರೆ, ಸೂಳೆಬಾವಿ, ಸಜ್ಜಳ್ಳಿ, ಮಾವಿನಹಳ್ಳ, ಕಟ್ಟೆಹಾಡಿ, ಚೊಟ್ಟೆಪಾರೆ, ದಿಡ್ಡಳ್ಳಿ ಹಾಡಿಗಳಲ್ಲಿನ ಫಲಾನುಭವಿಗಳಿಗೆ ನೀರಾವರಿ ಯೋಜನೆ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.
ಪರಿಶಿಷ್ಟ ಪಂಗಡ ಮೂಲ ನಿವಾಸಿ ಜನಾಂಗದವರು ಭತ್ತ ಕೃಷಿ ಮಾಡಲು ಕೋರಿ ಹೊಂದಿರುವ ಅರ್ಜಿಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸುಮಾರು 35 ಫಲಾನುಭವಿಗಳಿಂದ ಭತ್ತ ಕೃಷಿ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ಭತ್ತ ಕೃಷಿಗೆ ಉತ್ತೇಜನ ನೀಡಲು ಅವಕಾಶ ಮಾಡಲು ಮುಂದಾಗಲಾಗಿದೆ ಎಂದು ಐಟಿಡಿಪಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಜೇನುಕುರುಬ ಜನಾಂಗದವರ ಅಭಿವೃದ್ಧಿ ಯೋಜನೆಯಡಿ ಸುಮಾರು 278 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಮನೆಗಳಲ್ಲಿ 103 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗವಾಗಬೇಕಿದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್ ಅವರು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಈಗಾಗಲೇ ಮಂಜೂರಾಗಿರುವ ಮನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಮೂಲನಿವಾಸಿ ಜೇನುಕುರುಬ ಮತ್ತು ಕೊರಗ ಜನಾಂಗದವರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನೆ ನಿರ್ಮಾಣ, ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಹೀಗೆ ಹಲವು ಮೂಲ ಸೌಲಭ್ಯಗಳನ್ನು ಯಾವ ಹಾಡಿಗಳಲ್ಲಿ ಇಲ,್ಲ ಅಂತಹ ಕಡೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಆದಿವಾಸಿ ಮೂಲನಿವಾಸಿ ಜೇನುಕುರುಬರು ಸ್ವ ಉದ್ಯೋಗ ಪಡೆಯುವಂತಾಗಲು ಅಣಬೆ ಬೇಸಾಯ, ಜೇನುಕೃಷಿ ಮತ್ತು ತರಕಾರಿ ಬೆಳೆ ನರ್ಸರಿಗೆ ಹೆಚ್ಚಿನ ಉತ್ತೇಜನ ನೀಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಅಣಬೆ ಬೇಸಾಯಕ್ಕೆ ವಿಫುಲ ಅವಕಾಶಗಳಿದ್ದು, ತೋಟಗಾರಿಕೆ ಇಲಾಖೆಯ ಸಮನ್ವಯತೆಯಿಂದ ಅಣಬೆ ಹಾಗೂ ನರ್ಸರಿ ಉತ್ತೇಜನಕ್ಕೆ ಕ್ರಮವಹಿಸುವಂತೆ ಐಟಿಡಿಪಿ ಇಲಾಖಾ ಅಧಿಕಾರಿಗೆ ಸೂಚಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಶ್ರೀನಿವಾಸ ಅವರು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದವರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಎಲೆಕ್ಟ್ರೀಷಿಯನ್, ಪ್ಯಾಷನ್ ಡಿಸೈನ್, ಪ್ಯಾಬ್ರಿಕೇಷನ್, ಪ್ಲಂಬರಿಂಗ್, ಟೈಲ್ಸ್ ಅಳವಡಿಸುವುದು, ಮರಗೆಲಸ ಹಾಗೂ ವಾಹನ ಚಾಲನಾ ತರಬೇತಿ ಹೀಗೆ ಹಲವು ತರಬೇತಿಗೆ 9.50 ಲಕ್ಷ ರೂ. ಅನುದಾನ ನಿಗಧಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆರೋಗ್ಯ ಕಾರ್ಯಕ್ರಮದಡಿ ಬಡ ಜೇನುಕುರುಬ ಕುಟುಂಬಗಳಿಗೆ ತುರ್ತು ವೈದ್ಯಕೀಯ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಶ್ರೀನಿವಾಸ್ ಅವರು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವೈದ್ಯಕೀಯ ವೆಚ್ಚ ಮರುಪಾವತಿ ಸಂಬಂಧಿಸಿದಂತೆ ಸಂಬಂಧಪಟ್ಟ ವೈದ್ಯರಿಂದ ದೃಢೀಕರಿಸಿ ಹಣ ಬಿಡುಗಡೆಗೆ ಸೂಚಿಸಿದರು.
ಜೇನುಕುರುಬ ಜನಾಂಗದ ಪ್ರಮುಖರಾದ ಆರ್.ಕೆ.ಚಂದ್ರ ಅವರು ಮೂಲನಿವಾಸಿ ಜೇನುಕುರುಬ ಜನಾಂಗದ ಅಭಿವೃದ್ಧಿಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ. ವೈದ್ಯಕೀಯ ವೆಚ್ಚ ಮರುಪಾವತಿ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಸಮಿತಿ ಸದಸ್ಯರಾದ ಕೀರ್ತನ, ಮನು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್, ಜಿ.ಪಂ.ಎಂಜಿನಿಯರ್ ಮಹದೇವು, ಜವರೇಗೌಡ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್, ಪೊನ್ನಂಪೇಟೆ ತಾ. ಐಟಿಡಿಪಿ ಇಲಾಖಾ ಅಧಿಕಾರಿ ಗುರುಶಾಂತಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಚಂದ್ರಶೇಖರ್, ಬಾಲಕೃಷ್ಣ ರೈ, ಚಂದ್ರಪ್ಪ, ಐಟಿಡಿಪಿ ಇಲಾಖೆಯ ವ್ಯವಸ್ಥಾಪಕರಾದ ದೇವರಾಜು, ನವೀನ್, ರಂಗನಾಥ್, ಇತರರು ಇದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network