Header Ads Widget

Responsive Advertisement

ಜಾನುವಾರು ರೋಗ ನಿಯಂತ್ರಣ; ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶನ

ಜಾನುವಾರು ರೋಗ ನಿಯಂತ್ರಣ; ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು  ಜಿಲ್ಲಾಧಿಕಾರಿ  ನಿರ್ದೇಶನ 


ಮಡಿಕೇರಿ ಡಿ.17: ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಎರಡನೇ ಸುತ್ತಿನ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ.   

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ’ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.  

ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡಬೇಕು. ಯಾವುದೇ ರಾಸುಗಳು ಬಿಟ್ಟು ಹೋಗದಂತೆ ತಂಡ ರಚಿಸಿಕೊಂಡು ಜಾನುವಾರುಗಳಿಗೆ ಲಸಿಕೆ ನೀಡುವಂತೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸತೀಶ ಅವರು ಹೇಳಿದರು.

      ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಕೊಡಗು ಜಿಲ್ಲೆಯಲ್ಲಿ ಡಿಸೆಂಬರ್ 17 ರಿಂದ ಜನವರಿ 18 ರವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 02 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದನ, ಎಮ್ಮೆ, ಆಡು/ ಕುರಿ ಹಂದಿ, ಸೇರಿದಂತೆ ಎಲ್ಲಾ ಸೀಳುಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.  

     ಕಾಲುಬಾಯಿ ಜ್ವರವು ಒಂದು ವೈರಾಣು ರೋಗವಾಗಿದ್ದು, ನಿರ್ಧಿಷ್ಟ ಚಿಕಿತ್ಸೆ ಅಸಾಧ್ಯವಾಗಿದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಸಹ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು, ಗರ್ಭಪಾತ, ಗರ್ಭಕಟ್ಟುವಲ್ಲಿ  ವಿಳಂಬ, ಎತ್ತು/ ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸಿ, ಇದರಿಂದ ತೀವ್ರ ಆರ್ಥಿಕ ನಷ್ಟವಾಗುತ್ತದೆ. ಆದ್ದರಿಂದ ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿದೆ ಎಂದರು. 

        ‘ಇಪ್ಪತ್ತನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು   ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮ ಸಂಬಂಧ 75 ಲಸಿಕಾ ದಾರರನ್ನೊಳಗೊಂಡ  ಒಟ್ಟು 11 ತಂಡ ರಚಿಸಲಾಗಿದೆ. ಲಸಿಕಾದಾರರು ರೈತರ/ ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ ಎಂದು ಸುರೆಶ್ ಭಟ್ ಅವರು ಮಾಹಿತಿ ನೀಡಿದರು. 

   ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ, 4 ತಿಂಗಳ ಮೇಲ್ಪಟ್ಟ ಎಲ್ಲಾ ದನ/ ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಕೋರಿದರು.  

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ(ವಿರಾಜಪೇಟೆ) ಡಾ.ತಮ್ಮಯ್ಯ ಅವರು ಮಾಹಿತಿ ನೀಡಿ ರೋಗಗ್ರಸ್ತ ಪ್ರಾಣಿಗಳಿಂದ ನೇರ ಸಂಪರ್ಕ, ಜಾನುವಾರುಗಳಿಂದ ನೇರ ಸಂಪರ್ಕ, ವೈರಾಣುಗಳಿಂದ ಕಲುಷಿತಗೊಂಡ ಮೇವು ಮತ್ತು ನೀರು, ಗಾಳಿ ಮುಖಾಂತರ ದನಗಳ ಸಂತೆ ಮತ್ತು ಜಾತ್ರೆಗಳಿಂದ ಕಾಲುಬಾಯಿ ರೋಗ ಹರಡುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.   

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ(ಮಡಿಕೇರಿ) ಡಾ.ಪ್ರಸನ್ನ ಅವರು ರೋಗ ಪೀಡಿತ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಉಪಚರಿಸುವಂತಾಗಬೇಕು. ಶುಚಿತ್ವಕ್ಕೆ ಮಹತ್ವ ನೀಡಬೇಕು. ಕ್ರಿಮಿನಾಶಕ ದ್ರಾವಣ ಬಳಸಿ ದಿನಕ್ಕೆ ಮೂರು ನಾಲ್ಕು ಬಾರಿ ಕೊಟ್ಟಿಗೆ ಮತ್ತು ಆವರಣ ಶುಚಿಗೊಳಿಸುವುದು. ರೋಗ ಪೀಡಿತ ಜಾನುವಾರುಗಳನ್ನು ಉಪಚರಿಸುವವರು ಮುನ್ನೆಚ್ಚರ ವಹಿಸುವುದು, ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ ಎಂದರು. 

ಇದೇ ಸಂದರ್ಭದಲ್ಲಿ ಹಕ್ಕಿಜ್ವರ ನಿಯಂತ್ರಣ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಹರಡದಂತೆ ಮುನ್ನೆಚ್ಚರ ವಹಿಸಬೇಕು. ಚೆಕ್‍ಪೋಸ್ಟ್‍ಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು. 

     ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಜಿಲ್ಲೆಯ ಗಡಿಭಾಗದಲ್ಲಿ ಮುನ್ನೆಚ್ಚರ ವಹಿಸಲಾಗಿದೆ. ಕೇರಳ ಭಾಗದಿಂದ ಬರುವ ಪೌಟ್ರಿ ವಾಹನಗಳನ್ನು ತಪಾಸಣೆ ಮಾಡಿ ರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿ ಜಿಲ್ಲೆಯ ಗಡಿ ಪ್ರವೇಶಕ್ಕೆ ಅವಕಾಶ ಮಾಡಲಾಗುತ್ತದೆ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ನಿರ್ದೇಶಕರಾದ ಡಾ.ತಮ್ಮಯ್ಯ ಅವರು ಹಕ್ಕಿಜ್ವರ ನಿಯಂತ್ರಿಸುವ ನಿಟ್ಟಿನಲ್ಲಿ ರ್ಯಾಂಡಮ್ ಆಗಿ ಸ್ಯಾಂಪಲ್‍ನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು. 

ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದ ಮುಖ್ಯಸ್ಥರಾದ ನಜೀಮಾ ತಬಶೀರ ಅವರು ಹಕ್ಕಿಜ್ವರ ನಿಯಂತ್ರಣ ಸಂಬಂಧಿಸಿದಂತೆ ಮಾಹಿತಿ ನೀಡಿದರು. 

ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಸಂಬಂಧ ಪಶುಪಾಲನೆ ಇಲಾಖೆಯಿಂದ ಹೊರ ತಂದಿರುವ ಬಿತ್ತಿ ಪತ್ರವನ್ನು ಜಿಲ್ಲಾಧಿಕಾರಿ ಅವರು ಬಿಡುಗಡೆ ಮಾಡಿದರು. 

        ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಾದಾಮಿ, ಶಾಂತೇಶ್, ಶ್ರೀಧರ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಪ್ರಸನ್ನ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮುದ್ದಣ್ಣ, ನಗರಸಭೆಯ ಪರಿಸರ ಎಂಜಿನಿಯರ್ ಸೌಮ್ಯ ಇತರರು ಇದ್ದರು.

       ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ ಸಂಬಂಧ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ  ಮಡಿಕೇರಿ 08272 228805, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ  ಸೋಮವಾರಪೇಟೆ 08276 282127, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ವಿರಾಜಪೇಟೆ 08274-257228, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಕುಶಾಲನಗರ 8951404025, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಪೊನ್ನಂಪೇಟೆ 9449081343 ಸಂಪರ್ಕಿಸಬಹುದಾಗಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,