Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಜ್ಯದಲ್ಲಿ ಪ್ರಥಮ ಬಾರಿಗೆ ಇತರೆ ಪಾರಂಪರಿಕರ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ವಿತರಣೆ

ರಾಜ್ಯದಲ್ಲಿ ಪ್ರಥಮ ಬಾರಿಗೆ ಇತರೆ ಪಾರಂಪರಿಕರ ಅರಣ್ಯ ವಾಸಿಗಳಿಗೆ ಹಕ್ಕುಪತ್ರ ವಿತರಣೆ 

ಬಜೆಗುಂಡಿಯ 290 ಕುಟುಂಬಗಳಿಗೆ ಶಾಸಕರು ಮತ್ತು ಸಂಸದರಿಂದ ಹಕ್ಕುಪತ್ರ ವಿತರಣೆ


ಮಡಿಕೇರಿ ಜ.10: ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆಯಡಿ ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಗ್ರಾ.ಪಂ.ವ್ಯಾಪ್ತಿಯ ಬಜೆಗುಂಡಿಯ ಸುಮಾರು 290 ಕುಟುಂಬಗಳಿಗೆ  ಹಕ್ಕುಪತ್ರವನ್ನು ಶಾಸಕರ ಎಂ.ಪಿ.ಅಪ್ಪಚ್ಚುರಂಜನ್ ಮತ್ತು ಸಂಸದರಾದ ಪ್ರತಾಪ್ ಸಿಂಹ ಅವರು ಸೋಮವಾರ ವಿತರಿಸಿದರು.   

ಸೋಮವಾರಪೇಟೆ ತಾಲ್ಲೂಕಿನ ಬೇಳೂರು ಗ್ರಾ.ಪಂ.ಮತ್ತು ಬಜೆಗುಂಡಿ ಅರಣ್ಯ ಹಕ್ಕು ಸಮಿತಿ ವತಿಯಿಂದ ಬೇಳೂರು ಶಾಲಾ ಆವರಣದಲ್ಲಿ ಸೋಮವಾರ ಹಕ್ಕುಪತ್ರ ವಿತರಿಸಲಾಯಿತು.  

 ಹಕ್ಕುಪತ್ರ ವಿತರಣೆಗೂ ಮೊದಲು ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅನುಸೂಚಿತ ಬುಡಕಟ್ಟು ಹಾಗೂ ಇತರೆ ಪಾರಂಪರಿಕರ ಅರಣ್ಯ ವಾಸಿಗಳ ಕಾಯ್ದೆಯಡಿ ಒಟ್ಟು 290 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿರುವುದು ದಾಖಲೆಯೇ ಸರಿ ಎಂದು ಅವರು ತಿಳಿಸಿದರು.    

‘ಊರುಡುವೆ ಅಥವಾ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಇದುವರೆಗೆ ಹಕ್ಕುಪತ್ರ ಸಿಗಿದಿದ್ದಲ್ಲಿ ಮಾರ್ಚ್ 31 ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, 94ಸಿ ಮತ್ತು 94ಸಿಸಿ ರಡಿ ಹಕ್ಕುಪತ್ರ ಪಡೆಯಲು ಅವಕಾಶವಿದೆ. ಆ ನಿಟ್ಟಿನಲ್ಲಿ ಅರ್ಜಿ ಸಲ್ಲಿಸುವಂತಾಗಬೇಕು ಎಂದು ಶಾಸಕರು ಕೋರಿದರು.’    

ಹಿಂದಿನ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾ ಅಧ್ಯಕ್ಷರು ಹಾಗೂ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಹಲವು ದಶಕಗಳಿಂದ ವಾಸ ಮಾಡುತ್ತಿರುವ ಬಡವರಿಗೆ ಹಕ್ಕುಪತ್ರ ವಿತರಿಸುವಂತಾಗಬೇಕು ಎಂದು ಸದನದಲ್ಲಿ ಗಮನ ಸೆಳೆಯಲಾಗಿತ್ತು. ಆ ನಿಟ್ಟಿನಲ್ಲಿ ಬಡ ಜನರು ವಾಸಿಸುವ ಜಾಗದಲ್ಲಿ ಹಕ್ಕುಪತ್ರ ನೀಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದು ಶಾಸಕರು ಹೇಳಿದರು.   

‘ಪ್ರತೀ ಗ್ರಾ.ಪಂ.ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಸಮಿತಿ ರಚನೆಯಾಗಬೇಕು. ಹಲವು ದಶಕಗಳಿಂದ ವಾಸ ಮಾಡುತ್ತಿರುವ ಬಡ ಜನರಿಗೆ ಹಕ್ಕುಪತ್ರ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಬಡಜನರಿಗೆ ಉಪಕಾರ ಮಾಡಬೇಕು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ನುಡಿದರು.’  

ಹಲವು ಸಾಮಾಜಿಕ ಕಾರ್ಯಗಳಲ್ಲಿ ಹಕ್ಕುಪತ್ರ ನೀಡುವ ಕಾರ್ಯವು ತೃಪ್ತಿದಾಯಕವಾಗಿದೆ. ಕೂಲಿ ಕಾರ್ಮಿಕರು, ಬಡವರಿಗೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ ಅಧಿಕಾರಿಗಳು ಬಡವರ, ನಿರ್ಗತಿಕರ ಕೆಲಸವನ್ನು ಪ್ರಥಮ ಆದ್ಯತೆ ಮೇಲೆ ನಿರ್ವಹಿಸಬೇಕಿದೆ ಎಂದು ಶಾಸಕರು ಹೇಳಿದರು. 

ಬಜೆಗುಂಡಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕೆಲಸಗಳಿಗೆ 25 ಕೋಟಿ ರೂ.ಗೂ ಹೆಚ್ಚು ಹಣ ಒದಗಿಸಲಾಗಿದೆ. ಕಾಂಕ್ರೀಟ್ ರಸ್ತೆ  ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಸ ವಿಲೇವಾರಿ ಮತ್ತು ಸ್ಮಶಾನಕ್ಕೆ ಭೂಮಿಯನ್ನು ಶೀಘ್ರ ಒದಗಿಸಲಾಗುವುದು ಎಂದರು. 

ಹಕ್ಕುಪತ್ರವನ್ನು ಯಾರೂ ಸಹ ಮಾರಿಕೊಳ್ಳಬಾರದು. ಮನೆ ನಿರ್ಮಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.  

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡಜನರ ಶ್ರೇಯೋಭಿವೃದ್ಧಿಗೆ ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಪ್ರಮುಖವಾಗಿ ಕೋವಿಡ್-19 ತಡೆಯುವಲ್ಲಿ ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಇಂದಿನಿಂದ 60 ವರ್ಷ ಮೇಲ್ಪಟ್ಟ ಮತ್ತು ಎರಡನೇ ಡೋಸ್ ಪಡೆದು 9 ತಿಂಗಳಾದವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದ್ದು, ಲಸಿಕೆಯನ್ನು ಅರ್ಹರು ಪಡೆದುಕೊಳ್ಳುವಂತಾಗಬೇಕು ಎಂದು ಸಾಸಕರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.  

ರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಮತ್ತು ಕೋವಿಡ್ ಪರೀಕ್ಷೆ ಉಚಿತವಾಗಿ ನೀಡಲಾಗುತ್ತಿದೆ. ಈ ಸೌಲಭ್ಯ ಅಮೇರಿಕಾ ರಾಷ್ಟ್ರದಲ್ಲಿಯೂ ಇಲ್ಲ ಎಂದು ಅವರು ತಿಳಿಸಿದರು.  

ಗ್ರಾಮಗಳ ಅಭಿವೃದ್ಧಿ ಸಂಬಂಧಿಸಿದಂತೆ ಗ್ರಾ.ಪಂ.ಮಟ್ಟದಲ್ಲೂ ಸಹ ಕಂದಾಯ ಪಾವತಿಸುವಂತಾಗಬೇಕು ಎಂದು ಶಾಸಕರು ಹೇಳಿದರು.  

ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ ತಲೆ ತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವರಿಗೆ ಶಾಸಕರ ವಿಶೇಷ ಕಾಳಜಿ ಹಾಗೂ ಪ್ರಯತ್ನದಿಂದ 290 ಕುಟುಂಬದವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಬಡ ಜನರಲ್ಲಿ ಇದ್ದ ಆತಂಕ ನಿವಾರಣೆಯಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸ್ವಾಮಿತ್ವ’ ಕಾರ್ಯಕ್ರಮ ಜಾರಿಗೊಳಿಸಿದ್ದು, ಇದನ್ನು ಪೈಲಟ್ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. 

‘ಮಡಿಕೇರಿ ವೈದ್ಯಕೀಯ ಕಾಲೇಜು, ಕುಶಾಲನಗರದಲ್ಲಿ ಎಂಜಿನಿಯರಿಂಗ್ ಕಾಲೇಜು, ಚಿಕ್ಕ ಅಳುವಾರದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಶಾಸಕರ ಪ್ರಯತ್ನದಿಂದ ಆಗಿದೆ ಎಂಬುದನ್ನು ಯಾರೂ ಸಹ ಮರೆಯುವಂತಿಲ್ಲ. ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜು ಇಲ್ಲದಿದ್ದರೆ ಊಹಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ ಎಂದು ಸಂಸದರು ಶ್ಲಾಘಿಸಿದರು.’ 

ಶಾಸಕರು ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಬಡ ಜನರಿಗೂ ಹಕ್ಕುಪತ್ರ ನೀಡಬೇಕು ಎಂಬುದು ಶಾಸಕರ ಆಶಯವಾಗಿದೆ ಎಂದು ಪ್ರತಾಪ್ ಸಿಂಹ ಅವರು ನುಡಿದರು.  

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಮಾತನಾಡಿ ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆಯಡಿ 290 ಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತಿರುವುದು ಇಡೀ ರಾಜ್ಯದಲ್ಲಿ ಪ್ರಥಮ ಎಂದರೆ ಅತಿಶಯೋಕ್ತಿಯಲ್ಲ ಎಂದು ಹೇಳಿದರು.  

ವಸತಿ, ಕಸವಿಲೇವಾರಿಗೆ ಜಾಗ, ಸ್ಮಶಾನಕ್ಕೆ ಭೂಮಿ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಅಗತ್ಯವಾಗಿ ಬೇಕಿರುವ ಗ್ರಾಮಗಳಿಗೆ ಮೂಲ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಅವರು ಹೇಳಿದರು. 

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರ ಅವರ ವಿಶೇಷ ಕಾಳಜಿ ಮತ್ತು ಪ್ರಯತ್ಮ ಹಾಗೂ ಹಿಂದಿನ ಜಿಲ್ಲಾಧಿಕಾರಿಯವರು ಮತ್ತು ಐಟಿಡಿಪಿ ಇಲಾಖೆ ಅಧಿಕಾರಿಯವರು ಅರಣ್ಯ ಹಕ್ಕುಪತ್ರ ನೀಡಲು ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದು ಶೇಖರ್ ಅವರು ತಿಳಿಸಿದರು. . 

ಹಕ್ಕುಪತ್ರ ವಂಚಿತರಾಗಿರುವವರು ಗ್ರಾಮದಲ್ಲಿ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. 

ತಹಶೀಲ್ದಾರ್ ಗೋವಿಂದರಾಜು ಅವರು ಮಾತನಾಡಿ ಕೊಡ್ಲಿಪೇಟೆ, ಶನಿವಾರಸಂತೆ ಮತ್ತಿತರ ಕಡೆಗಳಲ್ಲಿ ವಸತಿ, ನಿವೇಶನ, ಸ್ಮಶಾನ ಭೂಮಿ, ಕಸ ವಿಲೇವಾರಿಗೆ ಜಾಗ ಒದಗಿಸಲು ಶಾಸಕರು ಶ್ರಮಿಸಿದ್ದಾರೆ. ಶಾಸಕಾಂಗ, ಕಾರ್ಯಾಂಗಗಳು ಒಟ್ಟು ಗೂಡಿದರೆ ಜನಪರ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಅವರು ಹೇಳಿದರು. 

ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾದ ತಿಮ್ಮಪ್ಪ ನಾಯಕ್ ಅವರು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಶಾಸಕರ ಪ್ರಯತ್ನದ ಫಲವಾಗಿ ಇತರೆ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಪತ್ರ ವಿತರಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಸ್ಮಶಾನಕ್ಕೆ ಮತ್ತು ಕಸವಿಲೇವಾರಿಗೆ ಈ ಭಾಗದಲ್ಲಿ ಜಾಗ ಒದಗಿಸುವಂತಾಗಬೇಕು ಎಂದು ಮನವಿ ಮಾಡಿದರು.   

ಪ್ರಮುಖರಾದ ಅಭಿಮನ್ಯು ಕುಮಾರ್ ಅವರು ಮಾತನಾಡಿ ಶಾಸಕರ ಅವಿರತ ಶ್ರಮದಿಂದ ಬಡಜನರಿಗೆ ಅರಣ್ಯ ಹಕ್ಕುಪತ್ರ ದೊರೆಯುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಬಡಜನರಿಗೆ ತಲುಪಿಸುವಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸದಾ ಕಾಳಜಿ ವಹಿಸಿದ್ದಾರೆ ಎಂದು ಅವರು ನುಡಿದರು. 

ಗ್ರಾ.ಪಂ. ಅಧ್ಯಕ್ಷರಾದ ಬಿ.ಎಂ.ಪ್ರಶಾಂತ್ ಅವರು ಮಾತನಾಡಿ ಹಲವು ದಶಕಗಳಿಂದ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಅರಣ್ಯ ಹಕ್ಕು ಸಮಿತಿಯ ಸದಸ್ಯರಾದ ಪ್ರಶಾಂತ್ ಅವರು ಮಾತನಾಡಿ ಹಕ್ಕುಪತ್ರ ನೀಡುವಂತಾಗಬೇಕು ಎಂದು ಇಲ್ಲಿನ ಜನರ ಹಲವು ದಶಕಗಳ ಬೇಡಿಕೆಯಾಗಿತ್ತು. ಆ ನಿಟ್ಟಿನಲ್ಲಿ 290 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 

ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ತಾ.ಪಂ.ಅಧ್ಯಕ್ಷರಾದ ಜಯಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಪಿಡಿಒ ಅಂಜನಾದೇವಿ, ಭಾಗ್ಯಲಕ್ಷ್ಮಿ, ಪಿ.ಕೆ.ಚಂದ್ರು, ಯಾಕೂಬ್ ಇತರರು ಇದ್ದರು. ಸೋಮೇಶ ಅವರು ಸ್ವಾಗತಿಸಿ, ನಿರೂಪಿಸಿದರು.  

ಕಾರ್ಯಕ್ರಮಕ್ಕೂ ಮೊದಲು ಬಜೆಗುಂಡಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭ ಸ್ವಾಗತದೊಂದಿಗೆ ಬೇಳೂರು ಶಾಲೆ ವರೆಗೆ ತೆರಳಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,