Header Ads Widget

ಸರ್ಚ್ ಕೂರ್ಗ್ ಮೀಡಿಯ

ಭಾಗಮಂಡಲ ತಲಕಾವೇರಿಯಲ್ಲಿ ಸ್ಥಳೀಯ ಮೂಲ ನಿವಾಸಿಗಳಿಗೆ ಪಿಂಡ ಪ್ರಧಾನಕ್ಕೆ ತಡೆ ಸರಿಯಲ್ಲ; ಅಖಿಲ ಕೊಡವ ಸಮಾಜ ಯೂತ್ ವಿಂಗ್

ಭಾಗಮಂಡಲ ತಲಕಾವೇರಿಯಲ್ಲಿ ಸ್ಥಳೀಯ ಮೂಲ ನಿವಾಸಿಗಳಿಗೆ ಪಿಂಡ ಪ್ರಧಾನಕ್ಕೆ ತಡೆ ಸರಿಯಲ್ಲ; ಅಖಿಲ ಕೊಡವ ಸಮಾಜ ಯೂತ್ ವಿಂಗ್


ತಲಕಾವೇರಿ ಭಾಗಮಂಡಲದಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕುವುದು ಬಿಟ್ಟು, ಸ್ಥಳೀಯ ಮೂಲ ನಿವಾಸಿಗಳ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈ ಕೂಡಲೇ ಸ್ಥಳೀಯರಿಗೆ ಪಿಂಡ ಪ್ರಧಾನ ಕಾರ್ಯವನ್ನು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಜಿಲ್ಲಾಡಳಿತ ಹಾಗೂ ಸರಕಾರವನ್ನು ಮನವಿ ಮಾಡಿಕೊಂಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾಗಮಂಡಲ ತಲಕಾವೇರಿ ಕ್ಷೇತ್ರ ಸ್ಥಳೀಯ ಮೂಲನಿವಾಸಿಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು, ಕೊಡವರು ಸೇರಿದಂತೆ ಇಲ್ಲಿನ ಮೂಲ ನಿವಾಸಿಗಳು ಹಾಗೂ ಅನಾದಿಕಾಲದಿಂದಲೂ ಬದುಕು ಕಟ್ಟಿಕೊಂಡ ವಿವಿಧ ಜನಾಂಗಗಳು ಕಾವೇರಿ ಮಾತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕೊರೋನ ನೆಪದಲ್ಲಿ ಸ್ಥಳೀಯ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈಗಾಗಲೇ ತಲಕಾವೇರಿ ಕ್ಷೇತ್ರದಲ್ಲಿ ತೀರ್ಥ ಸ್ನಾನವಿಲ್ಲದೆ ಸ್ಥಳೀಯರ ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳು ಅಪೂರ್ಣವಾಗಿದ್ದು. ಇದೀಗ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನಡೆಸಲಾಗುವ ಪಿಂಡ ಪ್ರಧಾನಕ್ಕೂ ತಡೆಯೊಡ್ಡಿರುವುದು ಸರಿಯಲ್ಲ, ಕೂಡಲೇ ಸ್ಥಳೀಯರ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶ ಮಾಡಿಕೊಡುವುದರೊಂದಿಗೆ ಪಿಂಡ ಪ್ರಧಾನ ಮಾಡಿದವರಿಗೆ ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೂ ಅವಕಾಶ ಮಾಡಿಕೊಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.

ಕೊಡವರು ತಮ್ಮ ಮನೆಯಲ್ಲಿ ಒಂದು ಮಗು ಜನಿಸಿದ್ದರೆ ಆ ಮಗುವಿನ ಮೊದಲ ತಲೆ ಕೂದಲನ್ನು ಭಾಗಮಂಡಲದಲ್ಲಿ ತಲೆಮುಡಿ ಹರಕೆ ನೀಡುವ ಮೂಲಕ ಕಾವೇರಿ ಮಾತೆಗೆ ಗೌರವ ಹಾಗೂ ಭಕ್ತಿ ಸೂಚಿಸುತ್ತಾರೆ. ಹಾಗೆ ಆ ಮಗು ಬೆಳೆದು ದೊಡ್ಡವರಾಗಿ, ವಯಸ್ಸಾಗಿ ಅಥವಾ ಯಾವುದಾದರೂ ರೀತಿಯಲ್ಲಿ ಮೃತರಾದ ನಂತರ ಅವರ ಹೆಸರಿನಲ್ಲಿ ಕಿರಿಯರು ತಲೆಮುಡಿ ಹರಕೆ ನೀಡಿ ಪಿಂಡ ಪ್ರಧಾನ ಮಾಡುವ ಮೂಲಕ ಹುಟ್ಟು ಸಾವಿನಲ್ಲೂ ಕೂಡ ಕಾವೇರಿ ತಾಯಿಯನ್ನೇ ಆರಾಧಿಸುತ್ತಾರೆ ಪೂಜಿಸುತ್ತಾರೆ ಹಾಗೂ ತಮ್ಮ ಕುಲ ಮಾತೆಯೆಂದು ಮನೆ ಮನದಲ್ಲಿ ತುಂಬಿಕೊಂಡಿದ್ದಾರೆ. ಗಂಡ ಸತ್ತರೆ ಹೆಂಡತಿ ಬರೋಬ್ಬರಿ ಒಂದೂವರೆ ತಿಂಗಳು ವ್ರತವಿದ್ದು ಪತಿಯ ಹೆಸರಿನಲ್ಲಿ ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡಿದ ನಂತರ ಹೊರಗಡೆ ನಿತ್ಯ ಕೆಲಸಕ್ಕೆ ಓಡಾಡುತ್ತಾರೆ ಹೊರತು ಅಲ್ಲಿಯತನಕ ನಾಲ್ಕು ಗೋಡೆಗಳ ನಡುವೆ ಪತಿಯ ನೆನಪಿನಲ್ಲಿ ದಿನ ಕಳೆಯುತ್ತಾರೆ, ಇದು ಆಚರಣೆ ಕೂಡ. ಹಾಗೇ ಪೋಷಕರು ಸತ್ತರೆ ಅವರ ಮಕ್ಕಳು ಕೂಡ ಪೋಷಕರ ಹೆಸರಿನಲ್ಲಿ ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡದೆ ತಲೆ ಹಾಗೂ ಮುಖದ ಮೇಲಿನ ಕೂದಲನ್ನು ಕೂಡ ತೆಗೆಯುವುದಿಲ್ಲ. ಹಾಗೇ ತೀರ್ಥೋದ್ಬವದಂದು ಹೋಗಲು ಸಾದ್ಯವಾಗದವರು ಸತ್ತವರ ಹೆಸರಿನಲ್ಲಿ ವರ್ಷಂಪ್ರತಿ ಪಿಂಡ ಪ್ರಧಾನ ಮಾಡುವ ಮೂಲಕ ಮೃತರಾದವ ಆತ್ಮಗಳಿಗೆ ಶಾಂತಿಯನ್ನು ಕೋರುತ್ತಾರೆ. ಹೀಗಿರುವಾಗ ಕೊರೋನ ನೆಪದಲ್ಲಿ ಪಿಂಡ ಪ್ರಧಾನ ನಿಲ್ಲಿಸಿರುವುದು ಎಷ್ಟು ಸರಿ? ಇದರಿಂದ ಈ ಆಚರಣೆಯನ್ನು ಚಾಚೂತಪ್ಪದೆ ಪಾಲಿಸುತ್ತಿರುವ ಮೂಲ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ ಹಾಗೂ ಗೊಂದಲದಲ್ಲಿದ್ದಾರೆ.

ಕೊರೋನ ಸಮಯವಾಗಿರುವ ಕಾರಣ ಪ್ರವಾಸಿಗರನ್ನು ಒಂದಷ್ಟು ಸಮಯ ಕ್ಷೇತ್ರದಿಂದ ಹೊರಗಿಟ್ಟು ಸ್ಥಳೀಯರ ಧಾರ್ಮಿಕ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕಿದೆ. ಹಾಗೇ ಕಳೆದೆರಡು ವರ್ಷದಿಂದ ತಲಕಾವೇರಿಯಲ್ಲಿ ತೀರ್ಥ ಸ್ನಾನಕ್ಕೂ ಅವಕಾಶವಿಲ್ಲದೆ ಮೂಲನಿವಾಸಿಗಳ ಧಾರ್ಮಿಕ ಆಚರಣೆಯ ಕಟ್ಟುಪಾಡುಗಳು ಅಪೂರ್ಣವಾಗಿದೆ. ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡಿದ ನಂತರ ತಲಕಾವೇರಿಯಲ್ಲಿ ತೀರ್ಥಸ್ನಾನ ಮಾಡಿದ್ದರೆ ಮಾತ್ರ ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಜನರ ಮನಸ್ಸಿನಲ್ಲಿದ್ದು, ಇಲ್ಲಿನ ನಿವಾಸಿಗಳ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ಕೊರೋನ ಸಮಯವಾಗಿರುವ ಕಾರಣ ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡಿದವರಿಗೆ ಮಾತ್ರ ತಲಕಾವೇರಿಯ ತೀರ್ಥ ಕುಂಡಿಕೆಯ ಸಮೀಪದ ಕೊಳದಲ್ಲಿ ತೀರ್ಥಸ್ನಾನಕ್ಕೂ ಅವಕಾಶ ಮಾಡಿಕೊಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,