Header Ads Widget

ಸರ್ಚ್ ಕೂರ್ಗ್ ಮೀಡಿಯ

ವನ ಧನ ವಿಕಾಸ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯನಿರ್ವಹಣೆ ಕುರಿತು ರಾಜ್ಯ ಮಟ್ಟದ ಕಾರ್ಯಗಾರ

ವನ ಧನ ವಿಕಾಸ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯನಿರ್ವಹಣೆ ಕುರಿತು ರಾಜ್ಯ ಮಟ್ಟದ ಕಾರ್ಯಗಾರ 

ಆದಿವಾಸಿಗಳ ಆರ್ಥಿಕ ಬಲವರ್ಧನೆಗೆ ಶ್ರಮಿಸಿ: ಭಂವರ್ ಸಿಂಗ್ ಮೀನಾ  


ಮಡಿಕೇರಿ ಮಾ.03: ವನ ಧನ ವಿಕಾಸ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.  

ಜಿಲ್ಲಾ ಪಂಚಾಯತ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕೂಡಿಗೆಯ ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ವನ ಧನ ವಿಕಾಸ ಕೇಂದ್ರಗಳ ಸ್ಥಾಪನೆಯಿಂದ ಬುಡಕಟ್ಟು ಆದಿವಾಸಿಗಳಿಗೆ ಅರಣ್ಯದಲ್ಲಿ ಲಭ್ಯವಿರುವ ಕಿರು ಉತ್ಪನ್ನಗಳ ಸಂಗ್ರಹ, ಜೊತೆಗೆ ಮಾರುಕಟ್ಟೆಗೆ ಸಹಕಾರಿಯಾಗಲಿದೆ ಎಂದು ಜಿ.ಪಂ.ಸಿಇಒ ಹೇಳಿದರು.   

ಆದಿವಾಸಿ ಕುಟುಂಬಗಳು ಇಂದಿಗೂ ಸಹ ಕಾಡಿನಲ್ಲಿ ವಾಸ ಮಾಡುತ್ತಿದ್ದು, ಆದಿವಾಸಿ ಕುಟುಂಬಗಳು ಅರಣ್ಯದಲ್ಲಿ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ, ಮಾರುಕಟ್ಟೆಗೆ ಒದಗಿಸಿ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವಲ್ಲಿ ಮುಂದಾಗಬೇಕಿದೆ ಎಂದು ಭಂವರ್ ಸಿಂಗ್ ಮೀನಾ ಅವರು ಹೇಳಿದರು.  

ಪ್ರಧಾನಮಂತ್ರಿ ವನ ಧನ ವಿಕಾಸ ಕೇಂದ್ರ ರಚನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಜೋಡಣೆ ಸಂಬಂಧಿಸಿದಂತೆ ಕ್ಷೇತ್ರ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನ ಬಗ್ಗೆ ರಾಜ್ಯ ಮಟ್ಟದ ತರಬೇತಿ ಕಾರ್ಯಗಾರ ಆಯೋಜಿಸಲಾಗಿದೆ ಎಂದರು.  

ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ ಅವರು ಮಾತನಾಡಿ ಆದಿವಾಸಿಗಳು ಅರಣ್ಯದಲ್ಲಿ ದೊರೆಯುವ ಕಿರು ಉತ್ಪನ್ನಗಳ ಮಹತ್ವ ಮತ್ತು ಸಿಬಿರಾರ್ಥಿಗಳು ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ರಾಷ್ಟ್ರೀಯ ಸಂಜೀವಿನಿ ಜೀವನೋಪಾಯ ಬಲವರ್ಧನೆ(ಎನ್‍ಆರ್‍ಎಲ್‍ಎಂ) ಯೋಜನೆಯಡಿ ರಾಜ್ಯದ 31 ಜಿಲ್ಲೆಗಳಿಂದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಆಗಮಿಸಿದ್ದು, ಇವರಿಗೆ ವನ ಧನ ಕಾರ್ಯಕ್ರಮ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ 3 ದಿನಗಳ ಕಾಲ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕಂಠ ಮೂರ್ತಿ ಅವರು ತಿಳಿಸಿದರು.  

ಐಟಿಡಿಪಿ ಇಲಾಖೆಯ ಯೋಜನಾ ನಿರ್ದೇಶಕರಾದ ಹೊನ್ನೇಗೌಡ ಅವರು ಮಾತನಾಡಿ ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯಿಂದ ಆದಿವಾಸಿಗಳಿಗೆ ಹಲವು ರೀತಿಯ ಸೌಲಭ್ಯಗಳಿದ್ದು, ಇವುಗಳನ್ನು ಬಳಸಿಕೊಳ್ಳುವಂತಾಗಬೇಕು. ಆ ದಿಸೆಯಲ್ಲಿ ಮಾಹಿತಿ ನೀಡುವಂತಾಗಬೇಕು ಎಂದರು. 

ಜಿಲ್ಲೆಯಲ್ಲಿ ಸಮಗ್ರ ಗಿರಿಜನ ಯೋಜನೆ ಮೂಲಕ ಆದಿವಾಸಿ ಬುಡಕಟ್ಟು ಜನರಿಗೆ ವನ ಧನ ಯೋಜನೆಯಡಿ ಸ್ವಯಂ ಸೇವಾ ಸಂಘಗಳನ್ನು ರಚಿಸಿಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೂರು ವನ ಧನ ಸಂಸ್ಥೆಗಳಿದ್ದು, 79 ಸ್ವಯಂ ಸೇವಾ ಸಂಸ್ಥೆಗಳನ್ನು ಒಳಗೊಂಡಿದೆ. ಇದರಲ್ಲಿ 892 ಸದಸ್ಯರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಒಂದು ವನ ಧನ ಸಂಸ್ಥೆಗೆ 15 ಲಕ್ಷ ರೂ. ಸಹಾಯಧನ ಕಲ್ಪಿಸಲಾಗುತ್ತಿದೆ. ಅರಣ್ಯದಲ್ಲಿ ದೊರೆಯುವ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಬ್ರಾಂಡ್ ಮೂಲಕ ಮಾರಾಟ ಮಾಡಲು ಆರ್ಥಿಕ ಉತ್ತೇಜನ ನೀಡಲಾಗುತ್ತದೆ ಎಂದು ಹೊನ್ನೇಗೌಡ ಅವರು ತಿಳಿಸಿದರು. 

ಮೌಲ್ಯ ವರ್ಧಿತ ಹಾಗೂ ವನ ಧನ ವಿಕಾಸ ಯೋಜನೆಯಡಿ ಆದಿವಾಸಿ ಗಿರಿಜನರು ಈ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು. 

ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ರಾಜೇಶ್ವರಿ ಅವರು ಮಾತನಾಡಿ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳು ಹಾಗೂ ಇಲಾಖೆಯಿಂದ ದೊರೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 

ಯೂನಿಯನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾದ ಪ್ರಕಾಶ್ ಕುಮಾರ್ ಅವರು ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,