Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ: ಅನಿತಾ ಪೂವಯ್ಯ

ಮಡಿಕೇರಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ: ಅನಿತಾ ಪೂವಯ್ಯ 


ಮಡಿಕೇರಿ ಮಾ.03: ಈಗಾಗಲೇ ಬೇಸಿಗೆ ಕಾಲ ಆರಂಭವಾಗುತ್ತಿರುವ ಹಿನ್ನೆಲೆ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ತಿಳಿಸಿದ್ದಾರೆ. 

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸುವ ನಿಟ್ಟಿನಲ್ಲಿ ಈಗಾಗಲೇ ಕುಂಡಾಮೇಸ್ತ್ರಿ ಕೂಟುಹೊಳೆ ಮತ್ತು ನಗರದ ನೀರು ಶೇಖರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಅನಿತಾ ಪೂವಯ್ಯ ಅವರು ಹೇಳಿದ್ದಾರೆ. 

ಬೇಸಿಗೆ ಅವಧಿಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ನಗರದ ವಿವಿಧ ವಾರ್ಡ್‍ಗಳಲ್ಲಿ ನೀರಿನ ಸಂಪನ್ಮೂಲವಿದ್ದು, ತಾಂತ್ರಿಕ ದೋಷವಿದ್ದ ಬೋರ್‍ವೆಲ್‍ಗಳಿಗೆ ಮೋಟಾರು ಅಳವಡಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷರು ತಿಳಿಸಿದ್ದಾರೆ. 

ಕಳೆದ ಮೂರು ದಿನದ ಹಿಂದೆ ತಾಂತ್ರಿಕ ತೊಂದರೆಯಿಂದ ನೀರು ಪೂರೈಕೆಯಲ್ಲಿ ಅಡೆತಡೆ ಉಂಟಾಗಿತ್ತು. ಆ ದಿಸೆಯಲ್ಲಿ ನಗರಕ್ಕೆ ನೀರು ಪೂರೈಸುತ್ತಿರುವ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆ ದಿಸೆಯಲ್ಲಿ ಮಡಿಕೇರಿ ನಗರದ ಜನತೆಯು ಸಹ ಕುಡಿಯುವ ನೀರು ಪೋಲಾಗದಂತೆ ಎಚ್ಚರವಹಿಸಬೇಕು ಎಂದು ನಗರಸಭೆ ಅಧ್ಯಕ್ಷರು ಕೋರಿದ್ದಾರೆ. 

 ಕಟ್ಟಡಗಳ ನಿರ್ಮಾಣ ಸಂಬಂಧಿಸಿದಂತೆ ಮಾಹಿತಿ ನೀಡಿ ನಗರಸಭೆ ಅಧ್ಯಕ್ಷತೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕಾನೂನು ಮೀರಿ ಕಟ್ಟಡಗಳಿಗೆ ಅನುಮತಿ ನೀಡಿಲ್ಲ. ಈ ಹಿಂದೆ ಕೆಲವು ಅಕ್ರಮ ಕಟ್ಟಡಗಳು ತಲೆ ಎತ್ತಿದ್ದು, ಅಂತಹ ಕಟ್ಟಡಗಳ ಮಾಲೀಕರು ನೇರವಾಗಿ ಕಚೇರಿಯಲ್ಲಿ ಭೇಟಿ ಮಾಡಿ ಕಾನೂನಿನ ಅವಕಾಶ ವಿದ್ದರೆ ಮಾಲೀಕರಿಗೆ ನಗರಸಭೆಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟಡ ಪೂರ್ಣಗೊಳಿಸಲು ಅನುಮತಿ ನೀಡಲಿದೆ. ಆದರೆ ಯಾವುದೇ ಅನುಮತಿ ಇಲ್ಲದೆ, ನಕ್ಷೆಗೆ ವಿರುದ್ಧವಾಗಿ ಕಾನೂನು ಮೀರಿ ಕಟ್ಟಡ ನಿರ್ಮಿಸಿದ್ದಲ್ಲಿ ಅಂತಹ ಕಟ್ಟಡಗಳಿಗೆ ನಗರಸಭೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. 

ನಗರಸಭೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಿಸುವವರು ಕಾನೂನಿನ ರೀತಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಯಿಂದ ಅನುಮತಿ ಪಡೆದು ನಕ್ಷೆ ಪ್ರಕಾರವೇ ಕಟ್ಟಡ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ನಗರಸಭೆ ಕಾನೂನು ರೀತಿ ಕೈಗೊಳ್ಳಲಿದೆ ಎಂದು ಅಧ್ಯಕ್ಷರು ಎಚ್ಚರಿಸಿದ್ದಾರೆ. 

ಟ್ರೇಡ್ ಪರವಾನಗಿ: ನಗರದ ಒಳ ಭಾಗದಲ್ಲಿ ನಗರಸಭೆ ಸಂಬಂಧಿಸಿದ ಜಾಗದಲ್ಲಿ ವ್ಯಾಪಾರ ಉದ್ಯಮ ಮಾಡುತ್ತಿರುವವರು ಸೂಕ್ತ ದಾಖಲೆಗಳನ್ನು ನಗರಸಭೆಗೆ ನೀಡಿ ಪರವಾನಗಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. 

ಇದುವರೆಗೆ ಪರವಾನಗಿ ಪಡೆಯದೆ ಇರುವ ವ್ಯಾಪಾರಸ್ಥರು ಪರವಾನಗಿ ಪಡೆಯದಿದ್ದಲ್ಲಿ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷರು ಎಚ್ಚರಿಸಿದ್ದಾರೆ. 

ಮನೆ ಬಾಗಿಲಿಗೆ ನಗರಸಭೆ: ನಗರಸಭೆ ಅಧ್ಯಕ್ಷೆಯಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸದ್ಯದಲ್ಲೇ ನಗರಸಭೆ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಅಧಿಕಾರಿಗಳ ಜೊತೆ ನಗರ ಸಂಚಾರ ಏರ್ಪಡಿಸಿ ವಾರ್ಡ್‍ಗಳ ಕುಂದುಕೊರತೆ ಆಲಿಸಿ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,