Ad Code

Responsive Advertisement

ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ಮಡಿಕೇರಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ‘ಉದ್ಯೋಗ ಮೇಳ’


ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಬದುಕು ನಡೆಸಿ: ರವಿಕುಶಾಲಪ್ಪ 

ಮಡಿಕೇರಿ ಏ.29: ಜಿಲ್ಲೆಯ ಯುವ ಜನರು ಉದ್ಯೋಗ ಅರಸಿ ಗುಳೇ ಹೋಗುವುದಕ್ಕಿಂತ ಕೊಡಗಿನಲ್ಲಿಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಸಂತೃಪ್ತಿ ಬದುಕು ನಡೆಸಬಹುದು ಎಂದು ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.        

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ, ಸಂಜೀವಿನಿ, ಎನ್‍ಆರ್‍ಎಲ್‍ಎಂ, ಡಿಡಿಯು-ಜಿಕೆವೈ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ ‘ಉದ್ಯೋಗ ಮೇಳ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಸರ್ಕಾರದಿಂದ ಸಹಾಯಧನ ದೊರೆಯಲಿದೆ. ಕೊಡಗು ಜಿಲ್ಲೆಯಲ್ಲಿ ಒಂದು ಕುಟುಂಬಕ್ಕೆ ಕನಿಷ್ಠ ಎರಡು-ಮೂರು ಎಕರೆ ಭೂಮಿ ಇದ್ದಲ್ಲಿ ಪಶುಪಾಲನೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಹೀಗೆ ಹಲವು ರೀತಿಯ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ಜೀವನ ನಡೆಸಬಹುದು ಎಂದು ರವಿಕುಶಾಲಪ್ಪ ಅವರು ಹೇಳಿದರು.’      

ಯಾವುದೇ ಕ್ಷೇತ್ರದಲ್ಲಿ ಸಿಕ್ಕಿರುವ ಅವಕಾಶವನ್ನು ಆತ್ಮತೃಪ್ತಿಯಿಂದ ನಿರ್ವಹಿಸಿದರೆ ಪರಿಪೂರ್ಣ ಬದುಕು ನಡೆಸಬಹುದು. ಆ ನಿಟ್ಟಿನಲ್ಲಿ ಮನಸ್ಸಿದ್ದಲ್ಲಿ ಮಾರ್ಗ ಎಂಬುದನ್ನು ಮರೆಯಬಾರದು ಎಂದರು. 

 ಜಿ.ಪಂ.ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ ಮಾತನಾಡಿ ಉದ್ಯೋಗವೆಂದರೆ ಸರ್ಕಾರಿ ಕೆಲಸವೊಂದೇ ಅಲ್ಲ. ಖಾಸಗಿ ಕ್ಷೇತ್ರದಲ್ಲಿ ವಿಫುಲ ಅವಕಾಶವಿದ್ದು, ಆ ನಿಟ್ಟಿನಲ್ಲಿ ಉದ್ಯೋಗ ಪಡೆಯಲು ಮುಂದಾಗಬೇಕಿದೆ ಎಂದು ಅವರು ಹೇಳಿದರು. 

 ‘ಕಷ್ಟವನ್ನು ಇಷ್ಟಪಟ್ಟು ಮಾಡಿದಾಗ ಪ್ರತಿಫಲ ದೊರೆಯುತ್ತದೆ. ಇದರಿಂದ ಸ್ವಾವಲಂಬಿ ಬದುಕು ನಡೆಸಲು ಸಾಧ್ಯ. ಆ ದಿಸೆಯಲ್ಲಿ ಪ್ರಯತ್ನ ಇರಬೇಕು ಎಂದರು.’ ಇಂದಿನ ಉದ್ಯೋಗ ಮೇಳದಲ್ಲಿ 15 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿರುವುದು ವಿಶೇಷವಾಗಿದೆ ಎಂದರು. 

ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀಕಂಠಮೂರ್ತಿ ಅವರು ಮಾತನಾಡಿ ಪ್ರಧಾನಮಂತ್ರಿ ಮಹಾತ್ಮಾಕಾಂಕ್ಷೆಯ "ದೀನ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಬಡ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಸರ್ಕಾರ/ ಸರ್ಕಾರೇತರ ಸಂಘ ಸಂಸ್ಥೆ ಉದ್ಯೋಗ ಕಲ್ಪಿಸಲು ಮುಂದಾಗಲಾಗಿದೆ ಎಂದರು.  

ಈ ಯೋಜನೆಯಲ್ಲಿ ವಸತಿ ಸಹಿತ ಮತ್ತು ವಸತಿ ರಹಿತ ಕೌಶಲ್ಯ ತರಬೇತಿಗಳು ಲಭ್ಯವಿರುತ್ತದೆ ಯೋಜನೆಯಲ್ಲಿ 3-6-9-12 ತಿಂಗಳುಗಳ ತರಬೇತಿ ನೀಡಲಾಗುತ್ತದೆ. ತರಬೇತಿಯ ನಂತರ ತರಬೇತಿ ಪಡೆದವರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ. ವಸತಿ ರಹಿತ ತರಬೇತಿ ಅವಧಿಯಲ್ಲಿ ಪ್ರತೀ ಅಭ್ಯರ್ಥಿಗೆ ದೈನಂದಿನ ಭತ್ಯೆ ರೂ.125 ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ 18 ರಿಂದ 35 ವರ್ಷ ವಯೋಮಿತಿ ಒಳಗಿನ ಯುವಕ, ಯುವತಿಯರನ್ನು ಒಗ್ಗೂಡಿಸುವುದು ಹಾಗೂ ಅವರ ಇಚ್ಚೆಯನುಸಾರ ವಿವಿಧ ರೀತಿಯ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಿ ಅವರ ಜೀವನ ಮಟ್ಟ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಅಭಿವೃದ್ಧಿ ಪಡಿಸುವುದಾಗಿದೆ. ಈ ಕಾರ್ಯಕ್ರಮದ ಮೂಲಕ ಉದ್ಯಮದಾರರು ಕಾರ್ಯಕ್ರಮ ಅನುμÁ್ಠನ ಸಂಸ್ಥೆಗಳು ಹಾಗೂ ಗ್ರಾಮೀಣ ಯುವಜನರು ಒಂದೆಡೆಯಲ್ಲಿ ಸೇರಲು ಉದ್ಯೋಗ ಮೇಳ ಒಂದು ವೇದಿಕೆಯಾಗಿದೆ ಎಂದರು.

ರಾಜ್ಯ ಸಂಜೀವಿನಿ ವಿಭಾಗದ ಅಧಿಕಾರಿ ಶಂಕರ ಹೊಸ್ಕೇರಿ ಅವರು ಮಾತನಾಡಿ ಗ್ರಾಮೀಣ ಬಡತನ ನಿರ್ಮೂಲನೆಗೆ ಸರ್ಕಾರ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು. 

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಮಾತನಾಡಿ ಯಾವುದೇ ಕ್ಷೇತ್ರಗಳಲ್ಲಿ ಪ್ರಬುದ್ಧತೆ ಬೆಳೆಸಿಕೊಳ್ಳಬೇಕು ಎಂದರು.

ಕೊರೊನಾ ಜೊತೆ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ಉದ್ಯೋಗಾಕಾಂಕ್ಷಿಗಳ ಬದುಕು ಹಸನಾಗಬೇಕು. ಕತ್ತಲಿನಿಂದ ಬೆಳಕಿನೆಡೆಗೆ ಜೀವನವನ್ನು ಕೊಂಡೊಯ್ಯಬೇಕು ಎಂದರು. 

     ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ಜಿಲ್ಲಾ ಕೌಶಾಲ್ಯಭಿವೃದ್ಧಿ ಅಧಿಕಾರಿ ಉಮಾ, ತಾ.ಪಂ.ಇಒ ಶೇಖರ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಪಂಡಿತಾರಾಧ್ಯ, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಜಿಲ್ಲಾ ಯೋಜನಾ ಶಾಖೆಯ ರವೀಂದ್ರ ಕುಮಾರ್, ಇತರರು ಇದ್ದರು. ಭವ್ಯ, ಶ್ವೇತಾ, ಪವಿತ್ರ ಪ್ರಾರ್ಥಿಸಿದರು, ಕುಮಾರ್ ವಂದಿಸಿದರು.