Header Ads Widget

Responsive Advertisement

ಕನ್ನಡ ಸಾಹಿತ್ಯ ಪರಿಷತ್ತಿನ 107 ನೇ ಸಂಸ್ಥಾಪನಾ ದಿನಾಚರಣೆ


ಮಡಿಕೇರಿ ಮೇ.05; ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 107 ನೇ ಸಂಸ್ಥಾಪನಾ ದಿನಾಚರಣೆಯು ಮಡಿಕೇರಿ ತಾಲ್ಲೂಕು ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ನವೀನ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ನಗರದ ಎಸ್‍ಜೆಎಸ್‍ವೈ ಸಭಾಂಗಣದಲ್ಲಿ ಗುರುವಾರ ನಡೆಯಿತು. 

      ಕನ್ನಡ ಸಾಹಿತ್ಯ ಪರಿಷತ್ತಿನ 107 ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ಮೈಸೂರು ರಾಜರಾಗಿದ್ದ  ನಾಲ್ವಡಿ ಕೃಷ್ಣರಾಜ ಒಡೆಯರು ಎಂದರು. 

      ಕನ್ನಡ ಭಾಷೆ, ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ, ಕನ್ನಂಬಾಡಿ ಕಟ್ಟೆ(ಕೆಆರ್‍ಎಸ್), ಭದ್ರಾವತಿಯಲ್ಲಿ ಕಾಗದ ಕಾರ್ಖಾನೆ, ಮೈಸೂರು ಬ್ಯಾಂಕ್, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಹೀಗೆ ಹತ್ತು, ಹಲವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಅವರು ಸ್ಮರಿಸಿದರು.  

       ವಯಸ್ಕರಿಗೆ ಶಿಕ್ಷಣ, ಮೀಸಲಾತಿ ಹೀಗೆ ಹಲವಾರು ಜನಪರ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರಾಗಿದ್ದಾರೆ ಎಂದು ಕೇಶವ ಕಾಮತ್ ಅವರು ಹೇಳಿದರು.  

       ಸಾಹಿತಿ ಬಿ.ಎ.ಷಂಶುದ್ದೀನ್ ಅವರು ಮಾತನಾಡಿ ಕನ್ನಡ ನಾಡು ಹತ್ತು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಮೈಸೂರು ಸಂಪದಭ್ಯುದಯ ಸಮಾಜ’ವು ಕನ್ನಡ ಭಾಷೆ, ಸಂಸ್ಕøತಿ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯವಿದೆ ಎಂದು ಅರಿತು ಮೇ, 05, 1915 ರಲ್ಲಿ ಬೆಂಗಳೂರಿನ ಸರ್ಕಾರಿ ಹೈಸ್ಕೂಲ್‍ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಉದಯವಾಯಿತು ಎಂದು ಅವರು ಸ್ಮರಿಸಿದರು.

      ಕರ್ನಾಟಕ ಸಾಹಿತ್ಯ ಪರಿಷತ್ತು ರೂಪುಗೊಳ್ಳಲು ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಸರದಾರ್ ಎಂ.ಕಾಂತರಾಜೇ ಅರಸ್, ಎಚ್.ವಿ.ನಂಜುಂಡಯ್ಯ, ಎಂ.ಶ್ಯಾಮರಾವ್, ಎಂ.ಎಸ್.ಕುಟ್ಟಣ್ಣ, ಎಂ.ಕೆ.ವೆಂಕಟಕೃಷ್ಣಯ್ಯ, ಎಚ್.ಲಿಂಗರಾಜೇ ಅರಸ್, ಕರ್ಪೂರ ಶ್ರೀನಿವಾಸ ರಾವ್, ಬಿ.ಕೃಷ್ಣಪ್ಪ, ಕವಿ ತಿಲಕಶಾಸ್ತ್ರಿ, ಮುದವೀಡು ಕೃಷ್ಣರಾಯರು, ವಾಸುದೇವಾಚಾರ್, ಆಲೂರು ವೆಂಕಟರಾಯರು ಹೀಗೆ ಹಲವರು ಕಾರಣರಾಗಿದ್ದಾರೆ ಎಂದು ಅವರು ತಿಳಿಸಿದರು. 

      ಕರ್ನಾಟಕ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಎಚ್.ವಿ.ನಂಜುಂಡಯ್ಯ ಅವರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ  ಎಂ.ಶ್ಯಾಮರಾವ್ ಅವರು ಆಯ್ಕೆಯಾಗಿದ್ದರು. ಎಚ್.ವಿ.ನಂಜುಂಡಯ್ಯ ಅವರು 1915 ರಿಂದ 1920 ರವರೆಗೆ ಅಧ್ಯಕ್ಷರಾಗಿದ್ದರು. ಅನಂತರ ಸರ್.ಎಂ.ಕಾಂತರಾಜೇ ಅರಸ್, ಶ್ರೀ ಕಂಠೀರವ ನರಸಿಂಹ ರಾಜ ಒಡೆಯರ್, ಶ್ರೀ ಜಯಚಾಮರಾಜ ಒಡೆಯರ್, ಹೀಗೆ ಹಲವರು ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ, ಸಂಸ್ಕøತಿ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.  

      ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಿಕೊಂಡು ಕನ್ನಡದ ಕೆಲಸ ತಳಹಂತದಲ್ಲಿಯೂ ಗಟ್ಟಿಯಾಗಿ ನಡೆಯುವಂತಾಗಿದೆ ಎಂದು ಶ್ಲಾಘಿಸಿದರು. 

      ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದು, ಕನ್ನಡ ಭಾಷಾ ಸಂಪತ್ತು ಮನೆ ಮನಗಳಲ್ಲೂ ತಲುಪುವಲ್ಲಿ ಸಹಕಾರಿಯಾಗಿದೆ ಎಂದರು. 

      ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನುಡಿ ಮತ್ತು ಪರಿಷತ್ತಿನ ಎಂಬ ಪತ್ರಿಕೆ ಪ್ರಕಟಿಸುವುದರ ಜೊತೆಗೆ ಪ್ರತೀ ವರ್ಷ ನೂರಾರು ಪುಸ್ತಕಗಳನ್ನು ಪ್ರಕಟಿಸುವುದರ ಜೊತೆಗೆ ಮಾರಾಟ ಕೂಡ ಮಾಡುತ್ತಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ಧ ಹಾಗೂ ಮೌಲಿಕವಾದ ಗಣನೀಯ ಸೇವೆ ಸಲ್ಲಿಸುತ್ತಿರುವ ಬರವಣಿಗೆಗಾರರನ್ನು ಗುರುತಿಸಿ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು. 

      ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿ 55 ವರ್ಷಗಳ ಬಳಿಕ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ತಳೆದಿದ್ದು, ಗಮನಾರ್ಹ. 1970 ರಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಮೊದಲ ಅಧ್ಯಕ್ಷರಾಗಿ ಡಿ.ಜೆ.ಪದ್ಮನಾಭ ಅವರು ಕಾರ್ಯನಿರ್ವಹಿಸಿದರು. ನಂತರ ಎಂ.ಎಸ್.ಪೂವಯ್ಯ, ಎಸ್.ಇ.ರಾಜಶೇಖರ್, ಟಿ.ಪಿ.ರಮೇಶ್, ಲೋಕೇಶ್ ಸಾಗರ್, ಅಧ್ಯಕ್ಷರಾದರು. ಈಗ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಬಿ.ಎ.ಷಂಶುದ್ದೀನ್ ಅವರು ವಿವರಿಸಿದರು. 

      ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನಗಳು, ಧತ್ತಿ ಉಪನ್ಯಾಸ, ವಿಚಾರ ಸಂಕಿರಣ, ಕವಿಗೋಷ್ಠಿ, ಕಮ್ಮಟಗಳು ಹೀಗೆ ಹಲವು ಕನ್ನಡ ಸಾಹಿತ್ಯ ಪರ ಚಟುವಟಿಕೆಗಳು ನಡೆಯುತ್ತಿವೆ. ಟಿ.ಪಿ.ರಮೇಶ್ ಅವರ ನೇತೃತ್ವದಲ್ಲಿ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014 ರಲ್ಲಿ ನಡೆದಿದ್ದು ವಿಶೇಷವೇ ಸರಿ ಎಂದು ಅವರು ಸ್ಮರಿಸಿದರು. 

      ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಹಾಗೆಯೇ 50 ದತ್ತಿನಿಧಿ ಪ್ರಶಸ್ತಿಗಳನ್ನು ಹೆಚ್ಚಿಸಬೇಕೆಂಬ ಉದ್ದೇಶಿಸಲಾಗಿದೆ ಎಂದು ತಿಳಿಸಿದರು. 

      ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯರು, ಮಕ್ಕಳು, ಯುವಜನರು ಸೇರಿದಂತೆ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹಲವು ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸುತ್ತಿದೆ. ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುವಂತಾಗಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.

      ಸಾಹಿತಿ ಬಿ.ಆರ್.ಜೋಯಪ್ಪ ಅವರು ಮಾತನಾಡಿ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತಾಗಬೇಕು. ಬರವಣಿಗೆಯಲ್ಲಿ ವಿಮರ್ಶೆಯು ಸಹ ಅಗತ್ಯ ಎಂದು ಹೇಳಿದರು. 

      ಬಾಳೆಯಡ ಕಿಶನ್ ಪೂವಯ್ಯ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚು ನಡೆಯುವಂತಾಗಬೇಕು. ಯುವ ಜನರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು. 

      ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಮಿಲನ ಭರತ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಬೆಳೆಸುವಂತಾಗಬೇಕು ಎಂದು ಕರೆ ನೀಡಿದರು. 

       ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕವು ಹಲವು ಸಾಹಿತ್ಯಪರ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದರು. 

       ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ನವೀನ್ ಅಂಬೆಕಲ್ಲು ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು 107 ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಅಭಿನಯ ಕಲಾ ಮಿಲನ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯಸ್ಥರಾದ ಮಿಲನ ಭರತ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

      ಕನ್ನಡ ಸಾಹಿತ್ಯ ಪರಿಷತ್ತಿನ ರಾಣಿ ಮಾಚಯ್ಯ, ಕಾವೇರಮ್ಮ ಸೋಮಣ್ಣ, ಕಾಲೂರು ನಾಗೇಶ್, ಕುಡೆಕಲ್ ಸಂತೋಷ್, ಮುನೀರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಂಡುವಂಡ ಬಿ. ಜೋಯಪ್ಪ ಇತರರು ಇದ್ದರು. 

       ಕಸಾಪ ತಾಲ್ಲೂಕು ಕಾರ್ಯದರ್ಶಿ ಕೆ.ಯು.ರಂಜಿತ್ ಸ್ವಾಗತಿಸಿದರು. ಪ್ರತಿಮಾ ರೈ ನಿರೂಪಿಸಿದರು. ಸ್ನೇಹ ನಾಡಗೀತೆ ಹಾಡಿದರು. ಗೀತಾ ಗಿರೀಶ್ ವಂದಿಸಿದರು. 

      ಕನ್ನಡ ಸಾಹಿತ್ಯ ಪರಿಷತ್ತಿನ 107 ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಸಾಹಿತ್ಯ ಪರಿಷತ್ತು ಕಚೇರಿ ಆವರಣದಲ್ಲಿ ಕನ್ನಡ ಧ್ವಜಾರೋಹಣವನ್ನು ತಾಲ್ಲೂಕು ಘಟಕದ ಅಧ್ಯಕ್ಷರಾದ ನವೀನ್ ಅಂಬೆಕಲ್ಲು ನೆರವೇರಿಸಿದರು.