Header Ads Widget

Responsive Advertisement

ಮಡಿಕೇರಿ ನಗರಸಭೆ: ಸ್ವಚ್ಛತಾ ಕಾರ್ಯದ ಕಸ ಸಂಗ್ರಹಣೆಗಾಗಿ ನೂತನ ಟ್ರ್ಯಾಕ್ಟರ್ ಗೆ ಚಾಲನೆ


ಮಡಿಕೇರಿ ನಗರಸಭೆ: ಸ್ವಚ್ಛತಾ ಕಾರ್ಯದ ಕಸ ಸಂಗ್ರಹಣೆಗಾಗಿ ನೂತನ ಟ್ರ್ಯಾಕ್ಟರ್ ಗೆ  ಚಾಲನೆ 

ಮಡಿಕೇರಿ ಮೇ.20(ಕರ್ನಾಟಕ ವಾರ್ತೆ):-ಮಡಿಕೇರಿ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯದ ಕಸ ಸಂಗ್ರಹಣೆಗಾಗಿ ನೂತನವಾಗಿ ಖರೀದಿಸಲಾಗಿರುವ ಎರಡು ಟ್ರ್ಯಾಕ್ಟರ್‍ಗಳಿಗೆ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು.    

      ನಗರದ ನಗರಸಭೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು 12 ಲಕ್ಷ ರೂ. ವೆಚ್ಚದಲ್ಲಿ 2 ಟ್ರ್ಯಾಕ್ಟರ್‍ಗಳನ್ನು ಖರೀದಿಸಲಾಗಿದೆ. ಮಡಿಕೇರಿಯನ್ನು ಪರಿಸರ ಪ್ರೇಮಿ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಕೈಜೋಡಿಸುವಂತಾಗಬೇಕು ಎಂದು ಅವರು ಕೋರಿದರು.    

      ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಟ್ರ್ಯಾಕ್ಟರ್ ಬಂದ ಸಂದರ್ಭದಲ್ಲಿ ಒದಗಿಸಬೇಕು. ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಪರಿಸರ ಶುಚಿತ್ವವಾಗಿದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಆರೋಗ್ಯ ಕಾಪಾಡಲು ಹಾಗೂ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು.  ಮುಂದಿನ ದಿನಗಳಲ್ಲಿ ಟಿಪ್ಪರ್ ಲಾರಿಯನ್ನು ತರಿಸಲಾಗುವುದು ಎಂದು ಶಾಸಕರು ತಿಳಿಸಿದರು. 

      ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿ ಮಡಿಕೇರಿ ನಗರದಲ್ಲಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಬರುತ್ತಿದ್ದು, ಬಂದ ಸಂದರ್ಭದಲ್ಲಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಬೇಕು ಎಂದು ಕೋರಿದರು. 

      ಮಡಿಕೇರಿ ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. 

      ನಗರಸಭೆ ಉಪಾಧ್ಯಕ್ಷರಾದ ಸವಿತಾ ರಾಕೇಶ್, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ನಗರಸಭಾ ಸದಸ್ಯರು, ಎಂಜಿನಿಯರ್‍ಗಳು ಇತರರು ಇದ್ದರು.