Header Ads Widget

Responsive Advertisement

ರೆಡ್‍ಕ್ರಾಸ್ ಸಂಸ್ಥೆಯ ನೂತನ ಶತಮಾನೋತ್ಸವ ಭವನ ಉದ್ಘಾಟನೆ


ರೆಡ್‍ಕ್ರಾಸ್ ಸಂಸ್ಥೆಯ ನೂತನ ಶತಮಾನೋತ್ಸವ ಭವನ ಉದ್ಘಾಟನೆ

ಮಡಿಕೇರಿ: ಭಾರತೀಯ ರೆಡ್‍ಕ್ರಾಸ್ ಜಾಗತಿಕ ಸಂಸ್ಥೆಯಾಗಿದ್ದು, ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್-19 ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶ್ಲಾಘಿಸಿದ್ದಾರೆ. 

      ನಗರದ ಸ್ಟೀವರ್ಟ್ ಹಿಲ್ ರಸ್ತೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸೊಸೈಟಿಯ ಕೊಡಗು ಜಿಲ್ಲಾ ಘಟಕದ ನೂತನ ಶತಮಾನೋತ್ಸವ ಭವನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.  

      ಯುದ್ಧ ಹಾಗೂ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂಕಷ್ಟಕ್ಕೆ ತುತ್ತಾದವರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ರೆಡ್‍ಕ್ರಾಸ್ ಸಂಸ್ಥೆಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿಯೂ ರೆಡ್‍ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. 

      ಕೊಡಗು ಜಿಲ್ಲೆಯಲ್ಲಿ 2018, 2019 ಮತ್ತು 2020 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್-19 ಸಂದರ್ಭದಲ್ಲಿ ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದ ಮಾರ್ಗದರ್ಶನ ಮಾಡುವ ಮೂಲಕ ಜನಸಾಮಾನ್ಯರಿಗೆ ಒಳಿತು ಮಾಡುವಲ್ಲಿ ರೆಡ್‍ಕ್ರಾಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಶಾಸಕರಾದ ಎಂ.ಪಿ.ಅಪಚ್ಚುರಂಜನ್ ಅವರು ಹೇಳಿದರು. 

      ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ ಅವರು ಮಾತನಾಡಿ ಸಮಾಜದಲ್ಲಿ ತೊಂದರೆಗೆ ಸಿಲುಕಿದವರಿಗೆ ಸ್ಪಂದಿಸುವಲ್ಲಿ ರೆಡ್‍ಕ್ರಾಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು. 

      ಜಿಲ್ಲೆಯಲ್ಲಿ 600 ಕ್ಕೂ ಹೆಚ್ಚು ರೆಡ್‍ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ಇದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಹೊಂದಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ರೆಡ್‍ಕ್ರಾಸ್ ಸಂಸ್ಥೆ ಬಲಯುತವಾದಲ್ಲಿ ಸಮಾಜದಲ್ಲಿ ಸಂಕಷ್ಟಕ್ಕೆ ತುತ್ತಾದವರಿಗೆ ಆರೋಗ್ಯ ಸೇವೆ ಕಲ್ಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ರವಿಕುಶಾಲಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

      ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ಮಾತನಾಡಿ ರೆಡ್‍ಕ್ರಾಸ್ ಸಂಸ್ಥೆಯು ಸ್ವಿರ್ಜರ್‍ಲ್ಯಾಂಡ್‍ನ ಜಿನೀವಾದಲ್ಲಿ ಸ್ಥಾಪನೆಯಾಗಿದೆ. ಸುಮಾರು 120 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. 

      ದೇಶದಲ್ಲಿ 760 ಕ್ಕೂ ಹೆಚ್ಚು ಸ್ಥಳಗಳಲ್ಲಿ ರೆಡ್‍ಕ್ರಾಸ್ ಶಾಖೆಯನ್ನು ಹೊಂದಿದೆ. ರಾಷ್ಟ್ರದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಇರುವುದು ವಿಶೇಷವಾಗಿದೆ ಎಂದು ಎಂ.ಸಿ.ನಾಣಯ್ಯ ಅವರು ತಿಳಿಸಿದರು.

     ರೆಡ್‍ಕ್ರಾಸ್ ಸಂಸ್ಥೆಯು ಸಂಕಷ್ಟಕ್ಕೆ ತುತ್ತಾದವರಿಗೆ ತಕ್ಷಣವೇ ರಕ್ತ ಒದಗಿಸುವುದು ಪ್ರಮುಖ ಕಾರ್ಯವಾಗಿದೆ. ವಿಶ್ವದಲ್ಲಿ 1919 ಹಾಗೂ 1939 ರಲ್ಲಿ ಮಹಾಯುದ್ಧವಾಗಿದೆ. ಈಗ ಉಕ್ರೇನ್‍ನಲ್ಲಿ ಯುದ್ಧ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆ ಆರೋಗ್ಯ ಸೇವೆ ಕಲ್ಪಿಸುತ್ತಿದೆ. ಕೋವಿಡ್ 19 ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಎಂ.ಸಿ.ನಾಣಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

      ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ಮತ್ತು ಗಾಂಧಿ ಮೈದಾನ ಹೊರತುಪಡಿಸಿ ಆಟದ ಮೈದಾನ ಇಲ್ಲ. ಆದ್ದರಿಂದ ಗಾಂಧಿ ಮೈದಾನವನ್ನು ಖಾಸಗಿಯವರಿಗೆ ಹಾಗೂ ಕಾರ್ ನಿಲುಗಡೆಗೆ ನೀಡುತ್ತಿರುವುದು ಸರಿಯಲ್ಲ ಎಂದು ಎಂ.ಸಿ.ನಾಣಯ್ಯ ಅವರು ಬೇಸರ ವ್ಯಕ್ತಪಡಿಸಿದರು. 

       ಮುಂದಿನ ದಿನಗಳಲ್ಲಿ ಗಾಂಧಿ ಮೈದಾನವನ್ನು ಸರ್ಕಾರಿ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕ್ರಮ ಹೊರತುಪಡಿಸಿ ಬೇರೆ ಕಾರ್ಯಗಳಿಗೆ ನೀಡಬಾರದು ಎಂದು ಎಂ.ಸಿ.ನಾಣಯ್ಯ ಅವರು ಸಲಹೆ ಮಾಡಿದರು.

       ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ರೆಡ್‍ಕ್ರಾಸ್ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಿದೆ. ಆ ನಿಟ್ಟಿನಲ್ಲಿ ರೆಡ್‍ಕ್ರಾಸ್ ಸಂಸ್ಥೆಯು ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.   

     ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರ್.ವೆಂಕಟೇಶ್, ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ, ರೆಡ್ ಕ್ರಾಸ್ ಸೊಸೈಟಿಯ ಉಪ ಸಭಾಪತಿ ಎಂ.ಸುರೇಶ್ ಚಂಗಪ್ಪ, ಅನಿಲ್ ಎಚ್.ಟಿ., ಪ್ರಧಾನ ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ಕೋಶಾಧಿಕಾರಿ ಶ್ಯಾಂ ಜೊಸೇಫ್, ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳಾದ ಡಾ.ಯಶೋಧ, ಎಂ.ಧನಂಜಯ್, ಮಹಮ್ಮದ್ ಹನೀಫ್, ಮಧುಕರ, ಪ್ರಕಾಶ್, ಕೆ.ಡಿ.ದಯಾನಂದ, ಬಿ.ಜಿ.ಅನಂತಶಯನ, ಅಂಬೆಕಲ್ಲು ನವೀನ್, ಕುಶಾಲಪ್ಪ, ರತನ್ ತಮ್ಮಯ್ಯ, ದರ್ಶನ್ ಬೋಪಯ್ಯ, ಸತೀಶ್ ರೈ, ಶರತ್ ಶೆಟ್ಟಿ, ಸತೀಶ್ ಸೋಮಣ್ಣ, ವಿಜಯ ಶೆಟ್ಟಿ, ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕರಾದ ಸಚಿನ್ ಇದ್ದರು. 

      ಕೋವಿಡ್-19 ಸಂದರ್ಭದಲ್ಲಿ ಮೃತಪಟ್ಟ ಕುಟುಂಬದವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಆರ್.ಮುರಳೀಧರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

     ಎಚ್.ಆರ್.ಮುರಳೀಧರ ಅವರು ರೆಡ್‍ಕ್ರಾಸ್ ಸಂಸ್ಥೆಯ ವರದಿ ಓದಿದರು. ಸಭಾಪತಿ ಬಿ.ಕೆ.ರವೀಂದ್ರ ರೈ ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ಸ್ನೇಹ ಪ್ರಾರ್ಥಿಸಿದರು. ರೆಡ್‍ಕ್ರಾಸ್ ಸೊಸೈಟಿಯ ಉಪ ಸಭಾಪತಿ ಅನಿಲ್ ಅಚ್.ಟಿ.ವಂದಿಸಿದರು.