Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿ ತೋಟಗಳಲ್ಲಿ ಕೊಳೆ ರೋಗದ ನಿರ್ವಹಣೆಗೆ ಸಲಹೆ


ಕಾಫಿ ತೋಟಗಳಲ್ಲಿ ಕೊಳೆ ರೋಗದ ನಿರ್ವಹಣೆಗೆ ಸಲಹೆ

ಮಡಿಕೇರಿ: ಕೊಳೆ ರೋಗವು ಹೆಚ್ಚಿನ ಮಳೆ ಮತ್ತು ದಟ್ಟವಾದ ಪ್ರದೇಶ ಹಾಗೂ ಕಣಿವೆಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಎಲೆಗಳು, ಬೆಳೆಯುತ್ತಿರುವ ಕಾಯಿ ಮತ್ತು ಎಲೆಯ ಚಿಗುರುಗಳಿಗೆ ಸೋಂಕು ತಗುಲಿ, ಕಪ್ಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ಎಲೆಗಳು ಉದುರುತ್ತವೆ. 

        ಹಿಂದಿನ ವರ್ಷ ಕಪ್ಪು ಕೊಳೆ ರೋಗದ ಪ್ರಮಾಣ ಹೆಚ್ಚು ಕಂಡುಬಂದಿದ್ದ ತೋಟಗಳಲ್ಲಿ ಶೇ.1 ಬೋರ್ಡೆಕ್ಸ್ ಮಿಶ್ರಣವನ್ನು ಮುಂಜಾಗ್ರತಾ ಕ್ರಮವಾಗಿ ಹೆಚ್ಚು ರೋಗ ಕಂಡುಬಂದ ಜಾಗಗಳಲ್ಲಿ ಸ್ಥಾನಿಕವಾಗಿ ಸಿಂಪಡಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ. ಶೇ.1 ಬೋರ್ಡೆಕ್ಸ್ ಮಿಶ್ರಣದ ಸಿಂಪಡಣೆಯನ್ನು ಯಾವಾಗಲೂ ಹೊಸತಾಗಿ ತಯಾರಿಸಿ ಎಲೆಗಳ ಭಾಗವನ್ನು ಗುರಿಪಡಿಸಿ ಸಿಂಪಡಿಸಬೇಕು. 

     ಮುಂಗಾರು ಪ್ರಾರಂಭವಾಗುವ ಮೊದಲು ಕ್ರಿಸ್‍ಕ್ರಾಸ್ ಆಗಿ ಬೆಳೆದಿರುವ ಹಾಗೂ ಒಣಗಿದ ರೆಂಬೆಗಳನ್ನು ತೆಗೆದು ಹಾಕಬೇಕು. ಕಾಫಿ ಗಿಡಗಳ ಮೇಲೆ ಬಿದ್ದ ನೆರಳಿನ ಮರದ ಎಲೆಗಳನ್ನು, ವಿಶೇಷವಾಗಿ ಸಿಲ್ವರ್ ಓಕ್ ಎಲೆಗಳನ್ನು ತೆಗೆಯುವ ಮೂಲಕ ಫೈಟೊಸಾನಿಟರಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಕಾರ್ಯಾಚರಣೆಯನ್ನು ಮಳೆಗಾಲದ ಮೊದಲು ಮಾಡಬೇಕು. ಕಪ್ಪು ಕೊಳೆ ರೋಗದ ಪ್ರಮಾಣ ಹೆಚ್ಚಿರುವ ಭಾಗಗಳಲ್ಲಿ, ಮುಂಗಾರಿನ ಸಮಯದಲ್ಲಿ ಪ್ರತಿ ವರ್ಷ ಕೆಳ ಭಾಗದ ನೆರಳನ್ನು ತೆಗೆಯುವುದು ಅತ್ಯಗತ್ಯ ಎಂದು ಕಾಫಿ ಮಂಡಳಿ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ ಅವರು ತಿಳಿಸಿದ್ದಾರೆ.