ಜಿಲ್ಲಾಡಳಿತದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಮಡಿಕೇರಿ ಮೇ.23: ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 622 ಅಂಕ ಪಡೆದಿರುವ ಸಿಂಚನಾ ಕೆ.ಆರ್, ಸಿಂಚನಾ ಪಿ.ಬಿ, ಎಸ್. ಪೂರ್ವಿ ಜಗದೀಶ್, ಸೋನಿಕಾ ಕೆ.ಎ, ಹಾಗೂ 621 ಅಂಕ ಪಡೆದಿರುವ ಲಕ್ಷ್ಯ ಎಂ.ಎನ್, ಕೀರ್ತನಾ ಸಿ.ವಿ, ಗಾಯತ್ರಿ ಕೆ. ಅವರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಶಾಲು, ಹಾರ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿದ್ಯಾಭ್ಯಾಸದ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಒಂದು ರೀತಿ ವಿದ್ಯಾರ್ಥಿಗಳಿಗೆ ನಿರ್ಣಾಯಕ ಘಟ್ಟವಾಗಿದೆ ಎಂದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಂದೆ ತಾಯಂದಿರು, ಶಾಲೆ, ಊರಿನವರಿಗೆ ಒಳ್ಳೆಯ ಹೆಸರು ತಂದಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
‘ಸಮಾಜದಲ್ಲಿ ತಮ್ಮ ಬಗ್ಗೆ ನಿರೀಕ್ಷೆ ಹೆಚ್ಚು ಇರುತ್ತದೆ. ಅದನ್ನು ಉಳಿಸಿಕೊಳ್ಳಬೇಕು. ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕು. ಆದರ್ಶವಾಗಿ ಬದುಕಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕರೆ ನೀಡಿದರು.’
ವಿದ್ಯಾರ್ಥಿನೀಯರು ಮಾತನಾಡಿ ವೈದ್ಯಕೀಯ, ಎಂಜಿನಿಯರಿಂಗ್, ನಾಗರಿಕ ಸೇವೆ ಹಾಗೂ ವಿಜ್ಞಾನಿಯಾಗುವ ಗುರಿ ಇದೆ ಎಂದು ಹೇಳಿದರು.
ವಿದ್ಯಾಭ್ಯಾಸದ ಜೊತೆಗೆ ವಿಜ್ಞಾನ, ಕ್ರೀಡೆ, ಸಾಹಿತ್ಯ, ಸಂಗೀತ, ಭರತನಾಟ್ಯ ಮತ್ತಿತರವನ್ನು ಬಿಡುವು ಸಂದರ್ಭದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ ಎಂದು ಆಸಕ್ತಿ ಇರುವ ಕ್ಷೇತ್ರಗಳ ಬಗ್ಗೆ ವಿದ್ಯಾರ್ಥಿನಿಯರು ಹಂಚಿಕೊಂಡರು.
ಪೋಷಕರ ಪರವಾಗಿ ಮಾತನಾಡಿದ ಪೂರ್ವಿ ಜಗದೀಶ್ ಅವರ ತಂದೆ ಜಗದೀಶ್ ಅವರು ಮಾತನಾಡಿ ಜಿಲ್ಲಾಡಳಿತ ವತಿಯಿಂದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ವಿದ್ಯಾರ್ಥಿಗಳಿಗೆ ನೈತಿಕ ಧೈರ್ಯ ತುಂಬಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಇದೊಂದು ಸ್ಫೂರ್ತಿ ತರುತ್ತದೆ ಎಂದು ಅವರು ಹೇಳಿದರು.
ಪೂರ್ವಿ ಜಗದೀಶ್ ಅವರಿಗೆ ನೀಡಲಾಗಿದ್ದ ನಗದು ಬಹುಮಾನವನ್ನು ಸೈನಿಕ ಕಲ್ಯಾಣ ಮಂಡಳಿಗೆ ಹಸ್ತಾಂತರಿಸಿದರು.
ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ವಿಜೇತರಾದ ವಿದ್ಯಾರ್ಥಿನಿ ಗಾಯತ್ರಿ ಕೆ. ಅವರು ಮಾತನಾಡಿ ಪಾರ್ಥೇನೀಯಂ ಗಿಡದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಶೋಧನೆ ಕೈಗೊಳ್ಳಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ಅವರು ಸ್ವಾಗತಿಸಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಕೃಷ್ಣಪ್ಪ, ಪೋಷಕರು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network