ಪ್ರತಿಯೊಬ್ಬರಲ್ಲಿಯೂ ಸಾಮಾಜಿಕ ಕಳಕಳಿ ಇರಲಿ: ಗಣ್ಯರ ಅಭಿಮತ
ಮಡಿಕೇರಿ ಮೇ.07: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಪದವಿ ಪ್ರದಾನ ಸಮಾರಂಭವು’ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆಯಿತು.
ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು 1994 ರಲ್ಲಿ ಪ್ರಥಮ ಬಾರಿಗೆ ಎಂಎಲ್‍ಎ ಆದ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ತಾವು 35 ನೇ ವರ್ಷಕ್ಕೆ ವಿಧಾನಸಭೆಗೆ ಪ್ರವೇಶ ಮಾಡುತ್ತಿದ್ದೀರ, ಕ್ಷೇತ್ರದ ಅಭಿವೃದ್ಧಿಯ ಕನಸು ಬಗ್ಗೆ ವಿವರಿಸಿ ಎಂಬ ಪ್ರಶ್ನೆ ಕೇಳಿದ್ದರು...
ಆ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ್ದೆ, ಅದರಂತೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿಯಲ್ಲಿ ಆಗಲು ಶ್ರಮಿಸಿದ್ದೇನೆ. ಜೊತೆಗೆ ಕುಶಾಲನಗರದಲ್ಲಿ ಎಂಜಿನಿಯರಿಂಗ್ ಕಾಲೇಜು, ಚಿಕ್ಕಳುವಾರದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ, ಪ್ರಸ್ತುತ ಬಜೆಟ್‍ನಲ್ಲಿ ಸರ್ಕಾರ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾಗಿದೆ. ಹೀಗೆ ಕಳೆದ ಮೂರು ದಶಕದಲ್ಲಿ ಜನಪ್ರತಿನಿಧಿ ಆಗಿ ಶೈಕ್ಷಣಿಕ, ಆರೋಗ್ಯ ಮತ್ತು ಮೂಲ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಿ ನುಡಿದಂತೆ ನಡೆದಿದ್ದೇನೆ ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ವಿ.ಪ್ರಸಾದ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎನ್.ಶಿವಶಂಕರ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಜಾಗ ಕಾಯ್ದಿರಿಸಿದರು, ಆ ಸಂದರ್ಭದಲ್ಲಿ ಸರ್ಕಾರ 160 ಕೋಟಿ ರೂ. ಮಂಜೂರು ಮಾಡಿತ್ತು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 400 ಹಾಸಿಗೆ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ಇದಕ್ಕಾಗಿ ಸರ್ಕಾರ 100 ಕೋಟಿ ರೂ.ಬಿಡುಗಡೆ ಮಾಡಿದೆ ಎಂದು ಶಾಸಕರಾದ ಎಂ.ಪಿ.ಅಪಚ್ಪುರಂಜನ್ ಅವರು ನುಡಿದರು.
‘ಕೋವಿಡ್ ಸಂದರ್ಭದಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಇಲ್ಲದಿದ್ದರೆ ಹೇಗೆ ಎಂಬುದನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂದರು.’
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು, ವೈದ್ಯಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಬೇಕು. ಸಮಾಜಕ್ಕೆ ಒಳಿತು ಮಾಡಬೇಕು ಎಂದು ಶಾಸಕರು ಕರೆ ನೀಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ಮೊದಲ ಬ್ಯಾಚ್ ತೇರ್ಗಡೆಯಾಗಿ ವೈದ್ಯಕೀಯ ವೃತ್ತಿ ಜೀವನಕ್ಕೆ ಕಾಲಿರಿಸುತ್ತಿರುವುದು ಸಂತಸದ ವಿಷಯ ಎಂದರು.
ವಿಶ್ವವ್ಯಾಪಿ ಕೋವಿಡ್ ಸುರುವಾದಾಗ, ಅದರಲ್ಲೂ ಎರಡನೇ ಅಲೆ ಸಂದರ್ಭದಲ್ಲಿ ತಮ್ಮ ವೈದ್ಯಕೀಯ ಸೇವೆಯನ್ನು ಕೊಡಗಿನ ಜನತೆ ಮರೆತಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
‘ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಪದವಿ ಪಡೆದು ವೈದ್ಯಕೀಯ ವೃತ್ತಿ ಜೀವನ ಆರಂಭಿಸುತ್ತಿರುವ ವೈದ್ಯರು ಜನ ಸಾಮಾನ್ಯರಿಗೆ ಸ್ಪಂದಿಸಬೇಕು. ವೃತ್ತಿಯ ಘನತೆ ಮರೆಯಬಾರದು ಎಂದು ಕೆ.ಜಿ.ಬೋಪಯ್ಯ ಅವರು ಕಿವಿಮಾತು ಹೇಳಿದರು.’
ಕಾಲೇಜು ಆರಂಭ ಸಂದರ್ಭದಲ್ಲಿ ನಿರ್ದೇಶಕರಾಗಿದ್ದ ಮಹೇಂದ್ರ ಅವರ ಪಾತ್ರ ದೊಡ್ಡದು. ಇಲ್ಲಿನ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ಜನಪ್ರಿಯ ವೈದ್ಯರಾಗಿ ಹೆಸರು ಗಳಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿವಿಯ ನಿರ್ದೇಶಕರಾದ ಡಾ.ಮಹೇಂದ್ರ ಅವರು ಮಾತನಾಡಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭದಲ್ಲಿ ಹಲವು ಎಡರು ತೊಡರುಗಳ ನಡುವೆ ಈ ಹಂತಕ್ಕೆ ಬರಲಾಗಿದೆ. ಜಾಗ ಗುರುತಿಸುವುದು ಮತ್ತು ಕಾಲೇಜಿನ ಅಭಿವೃದ್ಧಿಗೆ ಇಲ್ಲಿನ ಶಾಸಕದ್ವಯರು ತುಂಬಾ ಶ್ರಮಿಸಿದ್ದಾರೆ ಎಂದರು.
‘ಸರ್ಕಾರ ವೈದ್ಯಕೀಯ ಕ್ಷೇತ್ರಕ್ಕೆ ಇಷ್ಟೆಲ್ಲಾ ಹೆಚ್ಚಿನ ಅವಕಾಶ ನೀಡಿದೆ. ಆ ನಿಟ್ಟಿನಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳು ವ್ಯಾಪಾರ ಮನೋಭಾವ ಹೊಂದದೆ, ಸಾಮಾಜಿಕ ಕಳಕಳಿಯಿಂದ ವೈದ್ಯಕೀಯ ವೃತ್ತಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಾ.ಮಹೇಂದ್ರ ಅವರು ಸಲಹೆ ಮಾಡಿದರು.’
ವೈದ್ಯಕೀಯ ವೃತ್ತಿ ಪ್ರತೀ ದಿನವು ಸವಾಲಿನಿಂದ ಕೂಡಿರುತ್ತದೆ. ನಿರಂತರ ಅಧ್ಯಯನದ ಜೊತೆಗೆ ಸಮಾಜದ ಕಟ್ಟಕಡೆಯ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಮಹೇಂದ್ರ ಅವರು ಹೇಳಿದರು.
ಬೆಂಗಳೂರಿನ ಫೊರ್ಟಿಸ್ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಡಾ.ವಿವೇಕ್ ಜವಳಿ ಅವರು ಮಾತನಾಡಿ ವೈದ್ಯಕೀಯ ಕ್ಷೇತ್ರವು ತನ್ನದೇ ಆದ ಮಹತ್ವ ಹೊಂದಿದ್ದು, ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಒಳ್ಳೆಯ ಹೆಸರು ಪಡೆಯಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಡಾ.ಮಂಜುನಾಥ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಜಯಲಕ್ಷ್ಮೀ ಪಾಟ್ಕರ್, ಎಂ.ಎ.ನಿರಂಜನ ಇತರರು ಇದ್ದರು.
ಇನ್ನಷ್ಟು ಮಾಹಿತಿ: ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಆರು ಹೊಸ ವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ಒಂದಾದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 2013-14ನೇ ಸಾಲಿನಲ್ಲಿ ಸ್ಥಾಪಿಸಲಾಯಿತು.
2016-17ನೇ ಸಾಲಿನಲ್ಲಿ ಕಾಲೇಜು ಪ್ರಾರಂಭಗೊಂಡಿದ್ದು ಎಂ.ಸಿ.ಐ. ನಿಯಮದ ಪ್ರಕಾರ ಎಲ್ಲಾ ಅಗತ್ಯ ಕ್ರಮಕೈಗೊಂಡು ಸಂಸ್ಥೆಯು ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. 2016-17 ನೇ ಸಾಲಿನಿಂದ ಇಲ್ಲಿಯವರೆಗೆ ಸಂಸ್ಥೆಯ ಉನ್ನತ ಬೆಳವಣಿಗೆಗೆ ಹಲವು ಯೋಜನೆ, ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ 2016 ರಿಂದ 150 ಎಂಬಿಬಿಎಸ್ ಸೀಟುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿಯ ಅನುಮತಿ ಪಡೆದು ಕಾಯಾರಂಭ ಮಾಡಲಾಗಿದೆ. ಹಾಲಿ ಸಂಸ್ಥೆಯಲ್ಲಿ 750 ಎಂಬಿಬಿಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದು, ಮೇ 2022 ಕ್ಕೆ 147 ಮೊದಲ ತಂಡದ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದು ನಿರ್ಗಮಿಸಿದ್ದಾರೆ.
ಪ್ರತಿ ವರ್ಷ ಎಂಬಿಬಿಎಸ್ ಕೋರ್ಸ್ (150 ಸೀಟು), ವೈದ್ಯಕೀಯ ಸ್ನಾತಕೋತ್ತರ ಸೀಟು(25 ಸೀಟು), (ಅರೇ ವೈದ್ಯಕೀಯ ಕೋರ್ಸ್ (120 ಸೀಟು), ಬಿಎಸ್ಸಿ ನಸಿರ್ಂಗ್ ಕೊರ್ಸ್ (100 ಸೀಟು), ಸಿಪಿಎಸ್ ವೈದ್ಯಕೀಯ ಕೊಸ್ (7 ಸೀಟು), ಅಲೈಡ್ ಸೈನ್ಸಸ್ ಕೋರ್ಸ್ (110 ಸೀಟು), ಇಗ್ನೊ ಸ್ಟಡಿ ಸೆಂಟರ್ (IಉಓಔW) 2021-22 ರ ಶೈಕ್ಷಣಿಕ ವರ್ಷದಲ್ಲಿ 4 ಬ್ಯಾಚ್‍ಗಳಲ್ಲಿ 190 ಸಂಖ್ಯೆ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network