Header Ads Widget

ಸರ್ಚ್ ಕೂರ್ಗ್ ಮೀಡಿಯ

ಶ್ರೀ ಶಂಕರಾಚಾರ್ಯರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮ


ಶ್ರೀ ಶಂಕರಾಚಾರ್ಯರ ತತ್ವ ಮತ್ತು ಆದರ್ಶ ಅಳವಡಿಸಿಕೊಳ್ಳಿ: ಗಣ್ಯರ ಅಭಿಮತ 

ಮಡಿಕೇರಿ ಮೇ.06: ಶ್ರೀ ಆದಿ ಶಂಕರಾಚಾರ್ಯರ ತತ್ವ ಮತ್ತು ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚುರಂಜನ್ ಅವರು ಕರೆ ನೀಡಿದ್ದಾರೆ.  

        ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ವತಿಯಿಂದ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಹಕಾರದಲ್ಲಿ ಶ್ರೀ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಶಂಕರಾಚಾರ್ಯರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

       ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಶ್ರೀ ಶಂಕರಾಚಾರ್ಯರು 7 ನೇ ಶತಮಾನದಲ್ಲಿಯೇ ಹಿಂದು ಧರ್ಮದ ಮಹತ್ವ, ಸಂಸ್ಕøತಿ ಬಗ್ಗೆ ವಿವರಿಸಿದ್ದಾರೆ. ಬದುಕಿದ್ದ 32 ವರ್ಷದಲ್ಲಿಯೇ ಶೃಂಗೇರಿ ಶಾರದ ಪೀಠ ಸೇರಿದಂತೆ ರಾಷ್ಟ್ರದಲ್ಲಿ 7 ಪೀಠಗಳನ್ನು ಸ್ಥಾಪಿಸಿದ್ದಾರೆ ಎಂದರು. 

      ಶ್ರೀ ಶಂಕರಾಚಾರ್ಯರು ಹಿಂದು ಧರ್ಮ ಸರ್ವ ಕಡೆಗಳಲ್ಲಿ ಹರಡುವಂತೆ ಮಾಡಿದ್ದಾರೆ. ಮಾನವ ಕುಲಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ಹಿಂದು ಧರ್ಮವನ್ನು ಇಡೀ ಭರತ ಖಂಡದಲ್ಲಿ ಪಸರಿಸುವಂತೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ  ಶಂಕರಾಚಾರ್ಯರ ಸಂದೇಶಗಳು ಇಂದಿನ ಯುವಜನರಿಗೆ ತಲುಪಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದ್ದಾರೆ. 

      ‘ಶಂಕರಾಚಾರ್ಯರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇವರ ಚಿಂತನೆಗಳು ಎಲ್ಲೆಡೆ ಹರಡಬೇಕು. ಶಂಕರಾಚಾರ್ಯರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಕರೆ ನೀಡಿದರು.’   

ಸರ್ಕಾರ ಈ ವರ್ಷ ಕೊಡಗು ಜಿಲ್ಲಾ ಕೇಂದ್ರದಲ್ಲಿ ಶ್ರೀ ಶಂಕರಾಚಾರ್ಯರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲು ಅವಕಾಶ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

       ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ಶಂಕರಾಚಾರ್ಯರು ಕೇರಳದಲ್ಲಿ ಜನಿಸಿ 7 ನೇ ವರ್ಷದಲ್ಲಿಯೇ ಸನ್ಯಾಸ ದೀಕ್ಷೆ ಪಡೆದು ಹಿಂದು ಧರ್ಮ ಎಲ್ಲೆಡೆ ಹರಡುವಂತೆ ಮಾಡಿದ್ದಾರೆ ಎಂದರು. 

       ‘ಸರ್ವ ಜನರಿಗೂ ಸುಖ, ಶಾಂತಿ, ನೆಮ್ಮದಿಯನ್ನು ಬಯಸುವ ಬ್ರಾಹ್ಮಣ ಸಮಾಜ ಒಟ್ಟುಗೂಡಬೇಕು. ಹಿಂದು ಧರ್ಮ, ಸಂಸ್ಕøತಿ, ಆಚಾರ, ವಿಚಾರ ಬೆಳವಣಿಗೆಗೆ ಶ್ರೀ ಶಂಕರಾಚಾರ್ಯರು ಶ್ರಮಿಸಿದ್ದಾರೆ ಎಂದು ಅಪ್ಪಚ್ಚು ರಂಜನ್ ಅವರು ವರ್ಣಿಸಿದರು.’ 

      ಎಲ್ಲರೂ ಒಂದಾಗಿ, ಒಟ್ಟಾಗಿ ಸಮತೋಲನದಿಂದ ಹೋದಾಗ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಆ ನಿಟ್ಟಿನಲ್ಲಿ ಶ್ರೀ ಶಂಕರಾಚಾರ್ಯರ ಸಂದೇಶಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ವಿವರಿಸಿದರು.  

      ‘ವಿಶ್ವದಲ್ಲಿ ಹಿಂದು ಧರ್ಮ ಇರುವುದು ಭರತ ಖಂಡದಲ್ಲಿ ಮಾತ್ರ. ಆದ್ದರಿಂದ ಅನಾದಿ ಕಾಲದಿಂದ ಉಳಿಸಿಕೊಂಡು ಬಂದಿರುವ ಹಿಂದು ಸಂಸ್ಕøತಿ, ವಿಚಾರಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಜೊತೆಗೆ ಇತರರನ್ನು ಗೌರವದಿಂದ ಕಾಣಬೇಕು ಎಂದು ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.’

       ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ ಅವರು ಮಾತನಾಡಿ ಹಿಂದು ಧರ್ಮದ ಆಚಾರ ವಿಚಾರಗಳು ಹೇಗಿರಬೇಕು ಎಂಬ ಬಗ್ಗೆ 7 ನೇ ಶತಮಾನದಲ್ಲಿಯೇ ಶಂಕರಾಚಾರ್ಯರು ತಿಳಿಸಿದ್ದಾರೆ. ಅದರಂತೆ ನಡೆದುಕೊಳ್ಳಬೇಕು. ಶಂಕರಾಚಾರ್ಯರು ಹಿಂದು ಧರ್ಮಕ್ಕೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸಬೇಕು. ಕೇರಳದಿಂದ ಉತ್ತರ ಭಾರತದ ಕಾಶ್ಮೀರದವರೆಗೆ ಹಿಂದು ಧರ್ಮ ಸಂರಕ್ಷಿಸುವ ನಿಟ್ಟಿನಲ್ಲಿ ಶಂಕರಾಚಾರ್ಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅವರು ಸ್ಮರಿಸಿದರು. 

        ವಿಧಾನನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ ಶ್ರೀಕೃಷ್ಣನ ತತ್ವ ಸಿದ್ಧಾಂತಗಳು ಎಲ್ಲೆಡೆ ಪಸರಿಸುವಲ್ಲಿ ಶಂಕರಾಚಾರ್ಯರ ಪಾತ್ರ ಮಹತ್ತರವಾಗಿದೆ. ಶೃಂಗೇರಿ ಶಾರದಾಂಬೆ ದೇವಾಲಯ, ಪುರಿಯ ಜಗನ್ನಾಥ ದೇವಾಲಯ, ಕೇದರನಾಥ ದೇವಾಲಯ ಹೀಗೆ ಹಲವು ಹಿಂದು ಧಾರ್ಮಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು. 

      ಪುತ್ತೂರು ಅಂಬಿಕಾ ಪದವಿ ವಿದ್ಯಾಲಯದ  ಪ್ರಾಚಾರ್ಯರಾದ ಡಾ.ವಿನಾಯಕ ಭಟ್ ಗಾಳಿಮನೆ ಅವರು ಮಾತನಾಡಿ ಶಂಕರಾಚಾರ್ಯರ ಚಿಂತನೆಗಳು ಸಾರ್ವಕಾಲೀಕವಾಗಿವೆ ಎಂದು ತಿಳಿಸಿದರು. 

      7 ನೇ ಶತಮಾನದಲ್ಲಿ ಸನಾತನ ಸಂಸ್ಕøತಿ ಹೇಗಿತ್ತು ಎಂಬ ಬಗ್ಗೆ ಚಿಂತಿಸಬೇಕಿದೆ. ಶಂಕರಾಚಾರ್ಯರು ಇಡೀ ಭರತ ಖಂಡ ಒಂದು ಎಂಬುದನ್ನು ತೋರಿಸಿಕೊಟ್ಟರು. ಇಂದಿಗೂ ಸಹ ಭರತ ಖಂಡ ಒಂದಾಗಿರುವುದಕ್ಕೆ ಸನಾತನ ಧರ್ಮ ಎಂದರೆ ತಪ್ಪಾಗಲಾರದು ಎಂದರು. 

       ಸಮಾಜಕ್ಕೆ ಶಂಕರಾಚಾರ್ಯರ ಕೊಡುಗೆ ತಿಳಿಸುವಲ್ಲಿ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ಶಂಕರಾಚಾರ್ಯರ ಜಯಂತಿಯನ್ನು ಇಡೀ ರಾಷ್ಟ್ರದಲ್ಲಿಯೇ ಆಚರಿಸುವಂತಾಗಬೇಕು. ಶಂಕರಾಚಾರ್ಯರು ಭರತ ಖಂಡಕ್ಕೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸಬೇಕು ಎಂದರು.

       ವಿಶ್ವದೆಲ್ಲೆಡೆ ಭಗವದ್ಗೀತೆಯ ಮಹತ್ವವನ್ನು ಸಾರುವಲ್ಲಿ ಶಂಕರಾಚಾರ್ಯರು ಕಾರಣರಾಗಿದ್ದಾರೆ. ಶಂಕರಾಚಾರ್ಯರು ಭರತ ಖಂಡದ ಮಹಾನ್ ತತ್ವಜ್ಞಾನಿಯಾಗಿದ್ದು, ಇವರ ಸಾಧನೆ ಎಲ್ಲರಿಗೂ ಪ್ರೇರಕದಾಯಕ ಎಂದರು. 

        ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷರಾದ ಗೋಪಾಲಕೃಷ್ಣ ಅವರು ಮಾತನಾಡಿದರು. 

        ಶಂಕರಾಚಾರ್ಯ ಜಯಂತಿ ಪ್ರಯುಕ್ತ ‘ಕೀ ಬಂಚ್’ ಗಣ್ಯರು ಬಿಡುಗಡೆ ಮಾಡಿದರು. ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಪತ್ರಕರ್ತರಾದ ಜಿ.ರಾಜೇಂದ್ರ, ಬಿ.ಜಿ.ಅನಂತಶಯನ, ಪ್ರಮುಖರಾದ ಕೆ.ಎಸ್.ದೇವಯ್ಯ, ಜಿ.ಟಿ.ರಾಘವೇಂದ್ರ, ಸಂಪತ್ ಕುಮಾರ್, ಅನಿಲ್ ಎಚ್.ಟಿ. ಇತರರು ಇದ್ದರು.

      ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ ಸ್ವಾಗತಿಸಿದರು. ಕುಮಾರ ನಿರೂಪಿಸಿದರು. ರಾಘವೇಂದ್ರ ಪ್ರಸಾದ್ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು. 

ನಗರದ ಗಾಂಧಿ ಮೈದಾನದಲ್ಲಿ ಸ್ತಬ್ದಚಿತ್ರ ಒಳಗೊಂಡ ಶ್ರೀ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿದರು. 

ಮೆರವಣಿಗೆಯು ಗಾಂಧಿ ಮೈದಾನದಿಂದ ಪ್ರಾರಂಭವಾಗಿ ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಗುಡ್ಡೆಮನೆ ಅಪ್ಪಯ್ಯಗೌಡ ರಸ್ತೆ, ಓಂಕಾರೇಶ್ವರ ದೇವಾಲಯದ ಮಾರ್ಗವಾಗಿ ಶ್ರೀ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪಕ್ಕೆ ತಲುಪಿತು. ವೀರಗಾಸೆ, ಗೊರವರ ಹಾಗೂ ಡೊಳ್ಳು ಕುಣಿತ, ನಾದಸ್ವರ ಹೀಗೆ ವಿವಿಧ ಜಾನಪದ ಕಲಾ ತಂಡದ ಕಲಾವಿದರು ಮೆರವಣಿಗೆಯಲ್ಲಿ ಗಮನ ಸೆಳೆದರು. 

ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಗೋಪಾಲಕೃಷ್ಣ, ಜಿ.ರಾಜೇಂದ್ರ, ಅನಂತಶಯನ, ಸಂಪತ್ ಕುಮಾರ್, ಅಮೂಲ್ಯ ವೆಂಕಟೇಶ್ ಅವರು ಹಲವು ಇಲಾಖೆ ಅಧಿಕಾರಿಗಳು ಇದ್ದರು.