Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಾಲ್ದಾರೆಯಲ್ಲಿ ಕೊಳವೆ ಬಾವಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ: ಕೆ.ಜಿ.ಬೋಪಯ್ಯ


ಮಾಲ್ದಾರೆಯಲ್ಲಿ ಕೊಳವೆ ಬಾವಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ: ಕೆ.ಜಿ.ಬೋಪಯ್ಯ

ಮಡಿಕೇರಿ ಜೂ.16: ಕೊಡಗು ಜಿಲ್ಲೆಯ ಮಾಲ್ದಾರೆ ವ್ಯಾಪ್ತಿಯ ಹಲವು ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಳೆದ ಏಳೆಂಟು ವರ್ಷದಿಂದ ಬಾಕಿ ಇದ್ದು, ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೂಚಿಸಿದ್ದಾರೆ. 

      ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.   

      ಮಾಲ್ದಾರೆ ವ್ಯಾಪ್ತಿಯಲ್ಲಿ ಅನಾದಿ ಕಾಲದಿಂದಲೂ ವಾಸ ಮಾಡಿಕೊಂಡು ಬರುತ್ತಿರುವ ಕುಟುಂಬಗಳ ಕೊಳವೆ ಬಾವಿಗೆ ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಅನುಮತಿ ನೀಡಿರುವಾಗ ವಿದ್ಯುತ್ ಮಾರ್ಗಕ್ಕೆ ತೊಂದರೆ ನೀಡುತ್ತಿರುವುದು ಏಕೆ ಎಂದು ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು. 

      ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ಆದರೂ ಜಿಲ್ಲೆಯ ತಿತಿಮತಿ, ಬಾಳೆಲೆ ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ಮಾಡುತ್ತಿಲ್ಲ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಅರಣ್ಯವೂ ಉಳಿಯಬೇಕು. ಜೊತೆಗೆ ಅಲ್ಲಿ ಬದುಕುತ್ತಿರುವ ಮೂಲ ನಿವಾಸಿಗಳಿಗೆ ಮೂಲ ಸೌಲಭ್ಯವನ್ನು   ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕಾನೂನಿನ ಇತಿಮಿತಿಯಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಅವಕಾಶ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು.        

       ಸರ್ಕಾರದ ಆದೇಶದಂತೆ ಗಂಗಾ ಕಲ್ಯಾಣ ಯೋಜನಾ ಕಾರ್ಯಕ್ರಮವನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಮುಂದಾಗಬೇಕು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. 

       ಸೆಸ್ಕ್ ಇಇ ಅಶೋಕ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಬೆಳಕು ಯೋಜನೆಯಡಿ 1354 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇರುವ 124 ಕುಟುಂಬಗಳಲ್ಲಿ 35 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. 67 ಕುಟುಂಬಗಳು ಅರಣ್ಯ ಪ್ರದೇಶದಲ್ಲಿದ್ದು, ಅರಣ್ಯ ಹಕ್ಕುಪತ್ರ ಇಲ್ಲದಿರುವುದರಿಂದ  ಈ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಹಾಗೆಯೇ ಮಾಲ್ದಾರೆ ವ್ಯಾಪ್ತಿಯಲ್ಲಿ 22 ಕುಟುಂಬಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ ಎಂದು ಮಾಹಿತಿ ನೀಡಿದರು. 

      ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಸಭೆಯ ಆರಂಭದಲ್ಲಿ ಮಾತನಾಡಿ ಕಾವೇರಿ ನದಿ ಪಾತ್ರವನ್ನು ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಬೇಕಿದೆ ಎಂದು ತಿಳಿಸಿದರು. 

      ತಲಕಾವೇರಿಯಿಂದ ಕುಶಾಲನಗರದವರೆಗೆ ಕಾವೇರಿ ನದಿ ಪಾತ್ರದಲ್ಲಿ ಭೂ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಬೇಕು. ಜೊತೆಗೆ ನದಿ ಪಾತ್ರದಲ್ಲಿ ಗಿಡ-ಮರ ಬೆಳೆಸುವಲ್ಲಿ ಕ್ರಮವಹಿಸುವಂತೆ ಕಾವೇರಿ ನೀರಾವರಿ ಇಲಾಖೆ ಎಂಜಿನಿಯರ್‍ಗೆ ನಿರ್ದೇಶನ ನೀಡಿದರು.  

       ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಕಾರಿ ಡಾ.ಬಿ.ಸಿ.ಸತೀಶ ಅವರು ಕಾವೇರಿ ನದಿ ದಡದಲ್ಲಿ ಒತ್ತುವರಿ ಮಾಡಿಕೊಂಡಿದ್ದಲ್ಲಿ ಪರಿಶೀಲಿಸಬೇಕಿದೆ. ಮನೆ ಕಟ್ಟಿದ್ದಲ್ಲಿ ಗ್ರಾ.ಪಂ.ವತಿಯಿಂದ ಪರಿಶೀಲಿಸಿ ಕ್ರಮವಹಿಸಬೇಕಿದೆ ಎಂದರು. 

       ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಯಾವುದೇ ವಾಸದ ಮನೆ ನಿರ್ಮಾಣ ಮಾಡುವಾಗ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯಬೇಕಿದೆ. ಅನುಮತಿ ಪಡೆದಿರುವವರಿಗೆ ಮಾತ್ರ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಕಲ್ಪಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಾವೇರಿ ನದಿ ಪಾತ್ರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಿಯಮಾನುಸಾರ ಕ್ರಮವಹಿಸಬೇಕಿದೆ ಎಂದರು. 

        ಕೂಟಿಯಾಲ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ 301 ಲಕ್ಷ ರೂ. ಬಿಡುಗಡೆಯಾಗಿದೆ. ಚೆಟ್ಟಿಮಾನಿ, ಚೆಂಬು, ದಬ್ಬಡ್ಕ, ಗಾಳಿಬೀಡು-ಸುಬ್ರಹ್ಮಣ್ಯ-ಕಡಮಕಲ್ಲು ರಸ್ತೆ ನಿರ್ಮಾಣ ಸಂಬಂಧ ಪರ್ಯಾಯವಾಗಿ ಹೆಚ್ಚುವರಿ ಭೂಮಿ ನೀಡಲಾಗಿದೆ. ಆ ನಿಟ್ಟಿನಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡಲು ಮುಂದಾಗಬೇಕು. ಬಿಸಿಲೆ-ಬಾಣವಾರ, ತೊಡಿಕಾನ ಮತ್ತಿತರ ಕಡೆಗಳಲ್ಲಿ ರಸ್ತೆ ನಿರ್ಮಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.  

      ಅರಣ್ಯ ಇಲಾಖೆ ಅಧಿಕಾರಿಗಳು ಸಮಾಜಮುಖಿಯಾಗಿ, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಗ್ರಾಮಾಂತರ ಪ್ರದೇಶದ ಬಡ ಜನರಿಗೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ತಲುಪಿಸಬೇಕು. ಸಮಾಜದ ಕಟ್ಟಕಡೆಯ ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ರವಿಕುಶಾಲಪ್ಪ ಅವರು ಹೇಳಿದರು.

       ‘ಹಸಿರೇ ಉಸಿರು ಎಂಬುದನ್ನು ಮರೆಯಬಾರದು. ವಾತಾವರಣದಲ್ಲಿ ವ್ಯತ್ಯಾಸವಾದರೆ ಬದುಕುವುದು ಕಷ್ಟಸಾಧ್ಯ. ಆದ್ದರಿಂದ ಪರಿಸರ, ಅರಣ್ಯ, ವನ್ಯಪ್ರಾಣಿ, ಹಾಗೆಯೇ ನದಿ ಮೂಲ ಉಳಿಯಬೇಕು. ಜೊತೆಗೆ ಜನರು ಸಹ ಬದುಕಬೇಕು. ಇದರಿಂದ ಸಮತೋಲನ ಬದುಕು ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆಗಬೇಕಿರುವ ಕೆಲಸಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ರವಿಕುಶಾಲಪ್ಪ ಅವರು ಒತ್ತಿ ಹೇಳಿದರು.

     ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳಿಗೆ ಇನ್ನಷ್ಟು ವೇಗ ನೀಡಬೇಕು ಎಂದು ರವಿಕುಶಾಲಪ್ಪ ಅವರು ಹೇಳಿದರು.    

       ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ಅವರು ಜಿಲ್ಲೆಯಲ್ಲಿ 2.30 ಲಕ್ಷ ಗಿಡ ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಐಟಿಡಿಪಿ ಇಲಾಖಾ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.      

        ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ಪೂವಯ್ಯ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಗಿರೀಶ್ ಗಣಪತಿ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ತಹಶೀಲ್ದಾರ್ ಪಿ.ಎಸ್.ಮಹೇಶ್, ಗೋವಿಂದರಾಜು, ಯೋಗಾನಂದ, ಮಹೇಶ್, ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಇತರರು ಇದ್ದರು. 

      ಅರಣ್ಯ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಶಶಿ ಪಿ.ಟಿ., ಸುನಿಲ್ ಅಹ್ಮದ್, ಮಲ್ಲನಗೌಡ, ಶಿವಕುಮಾರ್, ಸುಬ್ರಾಯ, ಬಾಬು ರಾಠೋಡ ಅವರನ್ನು ಇದೇ ಸಂದರ್ಭದಲ್ಲಿ ಶಾಲೂ, ಹಾರ, ಪ್ರಮಾಣಪತ್ರ  ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.