Header Ads Widget

ಸರ್ಚ್ ಕೂರ್ಗ್ ಮೀಡಿಯ

ಹೊದ್ದೂರು ಗ್ರಾ.ಪಂ.ಕಚೇರಿಯ ನೂತನ ಸಭಾಂಗಣ ಉದ್ಘಾಟನೆ


ಹೊದ್ದೂರು ಗ್ರಾ.ಪಂ.ಕಚೇರಿಯ ನೂತನ ಸಭಾಂಗಣ ಉದ್ಘಾಟನೆ

ಮಡಿಕೇರಿ ಜೂ.17: ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು. ಇದರಿಂದ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕರೆ ನೀಡಿದ್ದಾರೆ. 

      ತಾಲ್ಲೂಕಿನ ಹೊದ್ದೂರು ಗ್ರಾ.ಪಂ.ಕಚೇರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಸ್ವರಾಜ್ ಸೌಧ’ ಸಭಾಂಗಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. 

      ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಾಗ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಇಲ್ಲಿ ನಿರ್ಮಾಣವಾಗಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಕೋರಿದರು.  

      ಹಿಂದೆ ಕ್ಲಬ್ ಮಹೀಂದ್ರ ರೆಸಾರ್ಟ್ ನಿರ್ಮಾಣ ಸಂದರ್ಭದಲ್ಲಿ ನಾವು ಸಹ ವಿರೋಧ ವ್ಯಕ್ತಪಡಿಸಿದ್ದೆವು. ತದ ನಂತರ ತಾಜ್ ವಿವಾಂತ, ತಾಮರ, ಆರೇಂಜ್ ಕೌಂಟಿ, ಇಬ್ಬನಿ ಹೀಗೆ ಹಲವು ರೆಸಾರ್ಟ್‍ಗಳು ಆರಂಭವಾದವು. ಕ್ಲಬ್ ಮಹೇಂದ್ರದಲ್ಲಿಯೇ 150 ಮಂದಿ ಸ್ಥಳೀಯರಿಗೆ ಉದ್ಯೋಗ ದೊರೆತಿದೆ. ಹೀಗೆ ಕೃಷಿ ಜೊತೆಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಾಗ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.   

      ಪ್ರತೀ ವಾರ 25 ಸಾವಿರಕ್ಕೂ ಹೆಚ್ಚು ಜನರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಾರೆ. ಇದರಿಂದ ವ್ಯಾಪಾರ ವಹಿವಾಟು ಟ್ಯಾಕ್ಸಿ, ಹೋಟೆಲ್, ಹೀಗೆ ಆರ್ಥಿಕ ಚಟುವಟಿಕೆಗೆ ಅನುಕೂಲವಾಗಲಿದೆ. ಕೊಡಗು ಜಿಲ್ಲೆಯಲ್ಲಿ ಭೂಮಿಯ ಬೆಲೆಯು ಹೆಚ್ಚಳವಾಗಿದೆ ಎಂದು ಅಪ್ಪಚ್ಚುರಂಜನ್ ಅವರು ತಿಳಿಸಿದರು. 

      ಕೊಡಗು ಪ್ರವಾಸೋದ್ಯಮ ತನ್ನದೇ ಆದ ಸ್ಥಾನ ಪಡೆಯುತ್ತಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆದಲ್ಲಿ, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಲಿವೆ. ಆದ್ದರಿಂದ ಎಲ್ಲರೂ ಕ್ರೀಡಾಂಗಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕರು ಹೇಳಿದರು. 

      ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆಗಿದೆ. ಜೊತೆಗೆ 25 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯ ‘ಕ್ರಿಟಿಕಲ್ ಕೇರ್ ಸೆಂಟರ್’ ನಿರ್ಮಾಣ ಆಗಲಿದೆ. ಈಗಾಗಲೇ ಮಂಗಳೂರು ರಸ್ತೆಯ ಪ್ರವಾಸಿ ಮಂದಿರದ ಕಟ್ಟಡವನ್ನು ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು. 

    ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಚೆನ್ನರಾಯಪಟ್ಟಣದಿಂದ ವಿರಾಜಪೇಟೆ ಮಾರ್ಗ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಆ ನಿಟ್ಟಿನಲ್ಲಿ ಭೂ ಸಾರಿಗೆ ಸಚಿವರು ಅನುಮತಿ ನೀಡಿದ್ದಾರೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.  

       ಕೊಡಗು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್, ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಆಗಿವೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಪ್ಪಚ್ಚುರಂಜನ್ ಅವರು ಹೇಳಿದರು. 

     ಜಿಲ್ಲೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಸಹ ನಿರ್ಮಾಣ ಆಗಲಿದೆ. ಮುಂದಿನ ಎರಡು ವರ್ಷದಲ್ಲಿ ಎಲ್ಲಾ ಆರೋಗ್ಯ ಸೇವೆಗಳು ಕೊಡಗು ಜಿಲ್ಲೆಯಲ್ಲಿಯೇ ದೊರೆಯಲಿದೆ ಎಂದರು. 

      ಹೊದ್ದೂರು ಗ್ರಾ.ಪಂ.ಕಚೇರಿ ನವೀಕರಣ ಮತ್ತು ಸಭಾಂಗಣ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗಿದೆ. ಹಾಗೆಯೇ ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ 70 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕರು ಹೇಳಿದರು.   

      ಕೊರೊನಾ ಸಂದರ್ಭದಲ್ಲಿ ಹೊದ್ದೂರು ಗ್ರಾ.ಪಂ.ಗೆ ಎರಡು ಬಾರಿ ಭೇಟಿ ನೀಡಿ ಅಗತ್ಯ ಸಹಕಾರ ನೀಡಲಾಗಿದೆ ಎಂದರು. ಒಳ್ಳೆಯ ಕೆಲಸ ಮಾಡುವವರಿಗೆ ಯಾವುದೇ ಜಾತಿ, ಧರ್ಮ, ಪಂಥವನ್ನು ನೋಡದೆ ಬೆನ್ನು ತಟ್ಟುವ ಕೆಲಸ ಮಾಡಲಾಗುವುದು ಎಂದರು. 

      ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜನರಿಗೂ ದೊರೆಯುತ್ತಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದರು.  

      ಸರ್ಕಾರ ಗ್ರಾ.ಪಂ.ಮಟ್ಟದಲ್ಲಿ ಗ್ರಾಮ ಒನ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಎಲ್ಲಾ ರೀತಿಯ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದು ಶಾಸಕರು ಹೇಳಿದರು. 

     ‘ಹೊದ್ದೂರು ಗ್ರಾ.ಪಂ.ಗೆ ಜಾಗ ನೀಡಿರುವ ಜವಾಹರ್ ಕೋರನ ಮತ್ತು ಪದ್ಮ ದಂಪತಿ ಅವರಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಸಭಾಂಗಣಕ್ಕೆ ಅವರ ಕುಟುಂಬದವರ ಹೆಸರು ಬರೆಸುವಂತೆ ಶಾಸಕರು ಸಲಹೆ ಮಾಡಿದರು.’ 

      ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಹೊದ್ದೂರು ಗ್ರಾ.ಪಂ.ಅಭಿವೃದ್ಧಿಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅವರು ಶ್ರಮಿಸುತ್ತಿದ್ದಾರೆ ಎಂದರು. 

     ಇಲ್ಲಿ ನಿರ್ಮಾಣವಾಗುವ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಅವಕಾಶ ಮಾಡಬೇಕು.  ಯಾವುದೇ ಸಮಸ್ಯೆಗಳು ಇದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ರವಿ ಕುಶಾಲಪ್ಪ ಅವರು ಸಲಹೆ ಮಾಡಿದರು. 

      ಕೊಡಗು ಜಿಲ್ಲೆ ಶೇ.47 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಕಾಫಿ ತೋಟವೂ ಸೇರಿದರೆ ಶೇ.70 ಕ್ಕೂ ಹೆಚ್ಚು ಅರಣ್ಯ ಕಾಣಬಹುದು. ಆ ನಿಟ್ಟಿನಲ್ಲಿ ಹಸಿರೇ ಉಸಿರು ಎಂಬುದನ್ನು ಅರ್ಥಮಾಡಿಕೊಂಡು ನದಿ ಮೂಲ ಸಂರಕ್ಷಿಸಬೇಕಿದೆ ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. 

      ಜಲಜೀವನ್ ಮಿಷನ್ ಯೋಜನೆಯಡಿ ಕೊಡಗು ಜಿಲ್ಲೆಗೆ 300 ಕೋಟಿ ರೂ. ಬಿಡುಗಡೆ ಆಗಿದೆ. ಆ ನಿಟ್ಟಿನಲ್ಲಿ ಹಾಡಿಗಳು ಸೇರಿದಂತೆ ಎಲ್ಲಾ ಬಡ ಜನರಿಗೂ ಮೂಲ ಸೌಲಭ್ಯಗಳು ತಲುಪಬೇಕು. ಅರಣ್ಯ ಪರಿಸರ ಉಳಿಯಬೇಕು ಎಂದರು. 

      ರಾಜ್ಯದ ಪಶ್ಚಿಮ ಘಟ್ಟದ 13 ಜಿಲ್ಲಾ ವ್ಯಾಪ್ತಿಯಲ್ಲಿ ಕೊಡಗು ಜಿಲ್ಲೆಯಲ್ಲಿಯೇ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚು ಎಂಬುದು ಕಾಣುತ್ತದೆ. ಆ ನಿಟ್ಟಿನಲ್ಲಿ ಮಾನವ ಮತ್ತು ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಇನ್ನೂ ಪ್ರಯತ್ನಗಳು ಆಗಬೇಕಿದೆ ಎಂದರು. 

      ಕೂಟಿಯಾಲ, ಕಡಮಕಲ್ಲು, ಪುಷ್ಪಗಿರಿ ಹೀಗೆ ಹಲವು ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು. 

      ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಗ್ರಾ.ಪಂ.ಕಚೇರಿ ಕಟ್ಟಡದಲ್ಲಿ ಗ್ರಾಮ ಲೆಕ್ಕಿಗರಿಗೆ ಕೊಠಡಿ ಅವಕಾಶ ಮಾಡಿರುವುದು ಶ್ಲಾಘನೀಯ. ಹೊದ್ದೂರು ಪಾಲೆಮಾರು ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಆಗಲಿದ್ದು, ಇದಕ್ಕಾಗಿ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು. 

      ತಾ.ಪಂ.ಮಾಜಿ ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್ ಅವರು ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 

      ಹೊದವಾಡ ಪ್ರೌಢಶಾಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದಿದ್ದು, ಈ ಹಿನ್ನೆಲೆ ಹೊದವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರಿಗೆ ಶಾಲೂ, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 

       ಹೊದ್ದೂರು ಗ್ರಾ.ಪಂ.ಅಧ್ಯಕ್ಷರಾದ ಪಿ.ಎ.ಕುಸುಮಾವತಿ, ಉಪಾಧ್ಯಕ್ಷರಾದ ಸರಸು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಮೊಣ್ಣಪ್ಪ, ತಹಶೀಲ್ದಾರ್ ಪಿ.ಎಸ್.ಮಹೇಶ್, ಗ್ರಾ.ಪಂ.ಸದಸ್ಯರು, ಇತರರು ಇದ್ದರು. ವಾಟೆಕಾಡು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕರಾದ ಸೌಮ್ಯ ನಿರೂಪಿಸಿದರು. ಗ್ರಾ.ಪಂ.ಪಿಡಿಒ ಅಬ್ದುಲ್ಲಾ ಸ್ವಾಗತಿಸಿ, ವಂದಿಸಿದರು.