Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಪ್ರಭು ಬಿ.ಚವ್ಹಾಣ್ ಭೇಟಿ


ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಪ್ರಭು ಬಿ.ಚವ್ಹಾಣ್ ಭೇಟಿ

ಮಡಿಕೇರಿ ಜೂ.28: ಕುಶಾಲನಗರ ತಾಲ್ಲೂಕಿನ ಕೂಡಿಗೆಯಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಮಂಗಳವಾರ ಭೇಟಿ ನೀಡಿ ವೀಕ್ಷಿಸಿದರು. 

ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಜಾನುವಾರು, ಹಂದಿ ಹಾಗೂ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

 ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಜಾನುವಾರು ಸಂವರ್ಧನಾ ಕೇಂದ್ರ ಮತ್ತು ತರಬೇತಿ ಕೇಂದ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. 

ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವು ಉತ್ತಮ ಸ್ಥಳದಲ್ಲಿದ್ದು, ಜಾನುವಾರು ಸಂವರ್ಧನೆಗೆ ಹೇಳಿ ಮಾಡಿಸಿದ ಜಾಗವಾಗಿದೆ. ಆ ನಿಟ್ಟಿನಲ್ಲಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಕೋಳಿ, ಹಂದಿ ಸಾಕಾಣಿಕೆ, ಜಾನುವಾರು ಸಂವರ್ಧನೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.   

ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು. ಸದ್ಯ ಈಗ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಜಾನುವಾರು ಸಂವರ್ಧನೆಗೆ ಇನ್ನಷ್ಟು ಕಾಳಜಿ ವಹಿಸಬೇಕಿದೆ ಎಂದು ಸಚಿವರು ಹೇಳಿದರು.  

ಅಮೃತ ಸಿರಿ ಹಾಗೂ ಅಮೃತ ಧಾರೆ ಯೋಜನೆ ರೈತರಿಗೆ ಸಮರ್ಪಕವಾಗಿ ತಲುಪಿಸುವುದು, ಕೋಳಿ ಹಾಗೂ ಹಂದಿ ಮರಿಗಳ ವಿತರಣೆ, ಜಾನುವಾರು ಸಂರಕ್ಷಣೆ ಹೀಗೆ ಹಲವು ಕಾರ್ಯಚಟುವಟಿಕೆಗಳನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಸರ್ಕಾರ ಜಾನುವಾರುಗಳ ಸಂವರ್ಧನೆಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಬೇಕು. ಕೃಷಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಕೈಗೊಳ್ಳುವಂತೆ ಸಚಿವರು ವಿವರಿಸಿದರು. 

ಕೊಡಗು ಜಿಲ್ಲೆಗೆ ಎರಡನೇ ಬಾರಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲಾಖೆಗೆ ಬೇಕಿರುವ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಎಲ್ಲಾ ರೀತಿಯ ಕ್ರಮವಹಿಸಲಾಗುವುದು ಎಂದರು. 

ಕೂಡಿಗೆಯಲ್ಲಿ ಪಶುಪಾಲನಾ ಇಲಾಖೆ ವ್ಯಾಪ್ತಿಯ 136 ಎಕರೆ ಭೂಮಿ ಇದ್ದು, ಪಶು ಸಂಗೋಪನೆ ಇಲಾಖೆ ವ್ಯಾಪ್ತಿಯಲ್ಲಿ ಜಾನುವಾರು ಸಂವರ್ಧನೆಗೆ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದರು. 

ಪಶು ಸಂಗೋಪನಾ ಇಲಾಖೆಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಇಲಾಖೆಯ ಅಭಿವೃದ್ಧಿ ಹಾಗೂ ಕೃಷಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಅವರು ಹೇಳಿದರು. 

ಕೂಡಿಗೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾದ ಡಾ.ಶಶಿಧರ, ಅವರು ಮಾಹಿತಿ ನೀಡಿ 1959ರಲ್ಲಿ ಸರ್ಕಾರಿ ಡೈರಿಯಾಗಿ ಸ್ಥಾಪನೆಯಾಗಿ 1972 ರಲ್ಲಿ ಇಂಡೋ-ಡೇನಿಸ್ ಪ್ರೋಜೆಕ್ಟ್ ಆಗಿ ಅಲ್ಲಿಂದ ರೆಡ್ ಡೇನ್ ಯೋಜನೆಯಾಗಿ ಮಾರ್ಪಾಡು ಆಗಿ ಹಾಲಿ 136 ಎಕರೆ ಪ್ರದೇಶದಲ್ಲಿ ಜರ್ಸಿ ತಳಿ ಸಂವರ್ಧನಾ ಕ್ಷೇತ್ರ ಕೆಲಸ ನಿರ್ವಹಿಸುತ್ತಿದೆ ಎಂದರು. 

ಜಾನುವಾರು ಸಂವರ್ಧನಾ ಕ್ಷೇತ್ರದಲ್ಲಿ ಒಟ್ಟು 51 ರಾಸುಗಳು ಇವೆ. ಹಾಗೆಯೇ ಹಂದಿ ಮತ್ತು ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ ಎಂದರು.  

ಪಶುಪಾಲನಾ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಶಿವರುದ್ರಪ್ಪ, ಜಂಟಿ ನಿರ್ದೇಶಕರಾದ ವೀರಭದ್ರಯ್ಯ, ಡಾ.ಸುರೇಶ್ ಭಟ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಭಾಸ್ಕರ್ ನಾಯಕ್, ಡಾ.ಜಯಪ್ರಕಾಶ್, ಡಾ.ಬಾದಾಮಿ, ಡಾ.ಶೈಲಜಾ, ಡಾ.ಚಿದಾನಂದ, ಡಾ.ಶ್ರೀದೇವು, ಡಾ.ಸಂಜೀವ್ ಕುಮಾರ್ ಶಿಂಧೆ, ಪಶು ವೈದ್ಯ ಪರೀಕ್ಷಕರಾದ ಡಾ. ಸುಗುಣಾನಂದ ಇತರರು ಇದ್ದರು.